ಕೊಲೆ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಲನಚಿತ್ರ ನಟ ದರ್ಶನ್ ತೂಗುದೀಪ ಅವರ ಅಭಿಮಾನಿಗಳು ಕೊಲೆ ಕೃತ್ಯವನ್ನು ಸಮರ್ಥಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ದುರದೃಷ್ಟಕರ. ತನ್ನ ನೆಚ್ಚಿನ ನಟರು ಯಾವುದೇ ಅಪರಾಧ ಮಾಡಿದ್ದರೂ ಸರಿ ಎಂಬ ಮನಸ್ಥಿತಿಯೇ ಅಪಾಯಕಾರಿ
ಕನ್ನಡ ಸಿನಿಮಾ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿ ದಶಕಗಳಿಂದ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಾ ಬಂದಿರುವ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ತನ್ನ ರೌಡಿ ಬಳಗದ ಸಹಾಯದಿಂದ ಕೊಲೆ ಮಾಡಿ ಬಿಸಾಕಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ದರ್ಶನ್ ಮತ್ತು ಇನ್ನಿತರ 12 ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು 17 ಆರೋಪಿಗಳ ಪೈಕಿ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಶೋಧಕಾರ್ಯವನ್ನು ಮುಂದುವರೆಸಿದ್ದಾರೆ. ಆರೋಪಿಗಳು ಪೊಲೀಸರ ತನಿಖೆಯ ವೇಳೆ ಬಾಯಿ ಬಿಟ್ಟಿರುವ ಪ್ರಕಾರ ದರ್ಶನ್ ಅವರಿಗೆ ಕೊಲೆ ನಡೆದ ಬಗ್ಗೆ ಮಾಹಿತಿ ಇತ್ತಂತೆ. ಕೊಲೆಯ ವಿಷಯ ಗೊತ್ತಿದ್ದರೂ ಏನೂ ತಿಳಿಯದವರಂತೆ ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣದ ಪ್ರಯುಕ್ತ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರಂತೆ. ಇದು, ಅವರೊಬ್ಬ ಕಾನೂನಿನ ಭಯವಿಲ್ಲದ, ಅಹಂಕಾರಪೂರಿತ, ಅನೈತಿಕ ಪೊಲೀಸ್ ಗಿರಿ ಮಾಡುವ, ನಾಗರಿಕ ಸಮಾಜಕ್ಕೆ ಚಾಲೆಂಜ್ ಹಾಕುವ “ಖಳನಾಯಕ”ನೆಂದು ಹೇಳುತ್ತದೆಯಲ್ಲವೇ?
ಅಸಂಖ್ಯಾತ ಜನರ ಪ್ರೀತಿ ವಿಶ್ವಾಸ ಅಭಿಮಾನಿ ಬಳಗವನ್ನು ಸಂಪಾದಿಸಿದ ಒಬ್ಬ ನಟ ಎಷ್ಟು ವಿನಯಶೀಲರಾಗಿ ಸಮಾಜಕ್ಕೆ ಸಿನಿಮಾ ರಂಗಕ್ಕೆ, ರಾಜ್ಯಕ್ಕೆ, ರಾಷ್ಟ್ರಕ್ಕೆ ಸಾಂಸ್ಕೃತಿಕ ನಾಯಕರಾಗುವ ಅವಕಾಶವಿರುತ್ತದೆ ಎಂಬುದನ್ನು ಡಾ ರಾಜಕುಮಾರ್, ವಿಷ್ಣುವರ್ಧನ್ ಅಂಬರೀಶ್, ಶಂಕರ್ ನಾಗ್, ಪುನೀತ್ ರಾಜಕುಮಾರ್ ಮುಂತಾದ ಕಲಾವಿದರು ವೃತ್ತಿಜೀವನ ಮತ್ತು ನಿಜಜೀವನದಲ್ಲಿ ಸಾಬೀತುಪಡಿಸಿದ್ದಾರೆ. ಸಿನಿಮಾಗಳಲ್ಲಿ ನಟ-ನಟಿಯರು ಕೊಡುವ ಸಂದೇಶ ಅಭಿಮಾನಿಗಳ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ. ಹಾಗೆ ಚಲನಚಿತ್ರ ನಟರು ನಿಜ ಜೀವನದಲ್ಲಿ ಅನುಸರಿಸುವ ಮೌಲ್ಯಗಳು, ಅವರ ಗುಣ-ಸ್ವಭಾವ-ನಡವಳಿಕೆ ಎಲ್ಲವನ್ನು ಅಭಿಮಾನಿಗಳು ಗಮನಿಸುತ್ತಿರುತ್ತಾರೆ ಮತ್ತು ಅದುವೇ ಆದರ್ಶವೆಂಬಂತೆ ಸ್ವೀಕರಿಸಿ ಅನುಸರಿಸುತ್ತಾರೆ ಕೂಡ.
ಸಿನಿಮಾ ನಟರ ಒಂದು ಬಗೆಯ ಅಭಿಮಾನಿಗಳು ನಟನ ಕಲೆಯನ್ನು ಮೆಚ್ಚಿ, ಹೊಗಳಿ, ಸದಾಶಯಗಳನ್ನು ಅಳವಡಿಸಿಕೊಂಡು, ನಕರಾತ್ಮಕ ವಿಷಯಗಳನ್ನು ನಿರ್ಲಕ್ಷಿಸುತ್ತಾರೆ. ಅವರು “ದೇವರು” ಎಂದೇ ಮನಸ್ಸಿನಲ್ಲಿ ನಟನನ್ನು ಪೂಜಿಸುತ್ತಾರೆ. ನಟನೇನಾದರೂ ಸಾರ್ವಜನಿಕವಾಗಿ ಕೆಟ್ಟ ನಡವಳಿಕೆಯನ್ನು ಪ್ರದರ್ಶಿಸಿದರೆ ಅದನ್ನು ಖಂಡತುಂಡವಾಗಿ ಖಂಡಿಸುತ್ತಾರೆ. ಈ ವರ್ಗದವರನ್ನ ವಿವೇಕಯುತ ಅಭಿಮಾನಿಗಳ ಬಳಗ ಎಂದು ಕರೆಯಬಹುದು.
ಆದರೆ, ಮತ್ತೊಂದು ಬಗೆಯ ಅಭಿಮಾನಿ ಬಳಗ ತಾವು ಇಷ್ಟಪಡುವ ನಟನನ್ನು ಅಟ್ಟದ ಮೇಲೆ ಕೂರಿಸಿ, ಪರ ನಟರನ್ನ ಹೀಗಳೆಯಲಿಕ್ಕಾಗಿಯೇ 24 ಗಂಟೆ ಸಾಮಾಜಿಕ ಮಾಧ್ಯಮಗಳ ಮುಂದೆ ಕೂತಿರುತ್ತದೆ. ಇಂಥವರಿಗೆ ಕಲೆಯ ಮಹತ್ವ ಆಗಲಿ, ಅದರ ಗಂಧ ಗಾಳಿಯಾಗಲಿ ಗೊತ್ತಿರುವುದಿಲ್ಲ. ತಮ್ಮ ನಟ ಅತ್ಯಾಚಾರ ಮಾಡಿರಲಿ, ಕೊಲೆ ಮಾಡಿರಲಿ, ಭ್ರಷ್ಟಾಚಾರ ಎಸಗಿರಲಿ, ಇಲ್ಲವೇ ಯಾವುದೇ ಬಗೆಯ ಅಪರಾಧ ಮಾಡಿರಲಿ ಅವುಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ನಟ ಏನೇ ಮಾಡಿದರು ಅದು ಸರಿ ಎಂದು ತಮ್ಮ ‘ಬುದ್ಧಿ’ಯನ್ನು ಪ್ರದರ್ಶಿಸುತ್ತಾರೆ.
ರಾಜಕಾರಣಿಗಳೇನೋ ತಮ್ಮ ಚೇಲಾಗಳಿಗೆ ಹಣದ ಆಮಿಷ ತೋರಿಸಿ ತಮ್ಮ ಪರ ಪ್ರಚಾರ ಮಾಡಲು, ತಾವೇನೇ ತಪ್ಪು ಮಾಡಿದರೂ ಅದನ್ನು ಸಮರ್ಥಿಸಲು, ಜೈಕಾರ ಹಾಕಲು ಹೇಳುತ್ತಾರೆ. ಆದರೆ ಸಿನಿಮಾ ನಟರ ಬಹುತೇಕ ಹಿಂಬಾಲಕರಿಗೆ ಇಂತಹ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಆದರೂ ಏಕೆ ಇಂತಹ ಅವಿವೇಕಿ ನಡೆಯನ್ನ ಅನುಸರಿಸುತ್ತಾರೆ ಎಂಬ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರ ಕೊಡಬಹುದಾದರೆ ಅದುವೇ ಅಂದಾಭಿಮಾನ.

ದೇಶ, ಭಾಷೆ, ನಾಡು, ಸಿನಿಮಾ, ಸಿನಿಮಾ ನಟರು, ಕಲಾವಿದರು, ರಾಜಕಾರಣಿಗಳು ಯಾರ ಮೇಲಾಗಲಿ ಯಾವುದರ ಬಗೆಯಾಗಲಿ ಅಭಿಮಾನ ಇರುವುದು ತಪ್ಪಲ್ಲ. ಆದರೆ ಅಂದಾಭಿಮಾನ ಇರುವುದು ವ್ಯಕ್ತಿಗಳನ್ನ ಮೂರ್ಖರನ್ನಾಗಿ ಪರಿವರ್ತಿಸುತ್ತದೆ. ದ್ವೇಷವನ್ನು ಹರಡಿಸುತ್ತದೆ. ನೈತಿಕ ಮೌಲ್ಯಗಳನ್ನೆಲ್ಲ ಕಸದ ಬುಟ್ಟಿಗೆ ಎಸೆಯುವಂತೆ ಮಾಡಿಸುತ್ತದೆ. ಅಷ್ಟ್ಯಾಕೆ ಅದು ನೆಲದ ಕಾನೂನಿನ ವಿರುದ್ಧ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಮಾನವೀಯತೆಯ ತಳಹದಿಯಲ್ಲಿ ಚಿಂತಿಸುವುದನ್ನು ಅದು ಕೊಂದು ಹಾಕುತ್ತದೆ. ಇದಕ್ಕೆ ಸೂಕ್ತ ಉದಾಹರಣೆಯಂತೆ ಚಾಲೆಂಜಿಂಗ್ ಸ್ಟಾರ್ ಅವರ ಅಭಿಮಾನಿ ಬಳಗ ನಿಂತಿದೆ.
ನಟ ದರ್ಶನ್ ಅವರನ್ನ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ, ಠಾಣೆಗೆ ಕರೆತರುವಾಗಲೂ ಮತ್ತು ಮಹಜರು ಪ್ರಕ್ರಿಯೆಗೆ ಕೊಲೆ ನಡೆದ ಸ್ಥಳಗಳಿಗೆ ಆರೋಪಿಗಳನ್ನು ಠಾಣೆಯಿಂದ ಕರೆದುಕೊಂಡು ಹೋಗುವಾಗಲೂ, ಹಿಂದಿರುಗಿ ಬರುವಾಗಲೂ ನೂರಾರು ಸಂಖ್ಯೆಯಲ್ಲಿ ದರ್ಶನ್ ಅಭಿಮಾನಿಗಳು ರಸ್ತೆಯ ಉದ್ದಗಲ ಜಮಾಯಿಸಿ, ದರ್ಶನ್ ಚಿತ್ರ ಇರುವ ಬಾವುಟಗಳನ್ನು ಹಿಡಿದು “ಜೈ ಡಿ ಬಾಸ್”, “ಬಾಸ್ ಬಾಸ್ ಡಿ ಬಾಸ್” ಅಂತ ಘೋಷಣೆಗಳನ್ನ ಕೂಗುತ್ತಿದ್ದಾರೆ.
ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ “ನಮ್ಮ ಡಿ ಬಾಸ್ ಕೊಲೆ ಮಾಡಿಸಿದರೂ ಯಾವುದೋ ಸರಿಯಾದ ಕಾರಣಕ್ಕೆ ಮಾಡಿಸಿದ್ದಾರೆ” ಅಂತ ಕೊಲೆಯನ್ನ ಸಮರ್ಥಿಸಿಕೊಳ್ಳುತ್ತಿದ್ದಾರೆ. ಯಾರಾದರೂ ರೇಣುಕಾಸ್ವಾಮಿಯ ಪರ ನ್ಯಾಯಕ್ಕಾಗಿ ಧ್ವನಿ ಎತ್ತಿದರೆ ಅಥವಾ ಕೊಲೆಯನ್ನ ಖಂಡಿಸುವ ಬರಹವನ್ನೋ, ವಿಡಿಯೋವನ್ನೋ ಪ್ರಕಟಿಸಿದರೆ, ಕಮೆಂಟ್ ಬಾಕ್ಸ್ ನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಕೊಲೆಗೀಡಾದ ರೇಣುಕಾಸ್ವಾಮಿಯ, ತಂದೆ ತಾಯಿ ಮತ್ತು ಐದು ತಿಂಗಳ ಗರ್ಭಿಣಿಯಾದ ಹೆಂಡತಿ ಅಳುತ್ತ ಗೋಳಾಡುತ್ತಿದ್ದರೆ ಜೈ ಡಿ ಬಾಸ್ ಎಂದೋ ಅಥವಾ ಕೊಲೆ ಸಮರ್ಥನೆಯ ವಿಕೃತ ಭಾಷೆಯನ್ನು ಬಳಸಿ ಕಮೆಂಟ್ ಮಾಡುತ್ತಾರೆ.
ಇದೇ ವ್ಯಕ್ತಿಗಳ ಕುಟುಂಬದವರಲ್ಲಿ ಯಾರಿಗಾದರೂ ರೇಣುಕಾಸ್ವಾಮಿಯ ಸ್ಥಿತಿ ಬಂದಿದ್ದರೆ ಹೀಗೆ ವರ್ತಿಸುತ್ತಿದ್ದರೆ? ಈ ಪ್ರಶ್ನೆಗೆ ಉತ್ತರ ದೊರಕದು. ರೇಣುಕಾ ಸ್ವಾಮಿ ಎಂಬ ವ್ಯಕ್ತಿ ಪವಿತ್ರ ಗೌಡ ಎಂಬ ದರ್ಶನ್ ಅವರ ಸ್ನೇಹಿತೆಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ದರ್ಶನ್ ಮತ್ತು ಅವರ ಸಂಗಡಿಗರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಯಿಸಿಕೊಂಡು ಜಯಣ್ಣ ಎಂಬುವರ ಶೆಡ್‌ನಲ್ಲಿ ಕೂಡಿಹಾಕಿ, ದೊಣ್ಣೆಗಳಿಂದ ಹೊಡೆದು ಸಾಯಿಸಿ, ಹೊರ ರಾಜ್ಯಕ್ಕೆ ಹೆಣ ಸಾಗಿಸಲಾಗದೆ ಕಾಲುವೆಯಲ್ಲಿ ಬಿಸಾಕಿ ಹೋಗಿದ್ದರು. ದರ್ಶನ್ ಅವರ ಹೆಸರು ಎಲ್ಲೂ ಹೊರಬರಬಾರದೆಂದು 30 ಲಕ್ಷ ರೂ. ಸುಪಾರಿಯನ್ನು ಬಂಧಿತರ ಪೈಕಿ ಐವರಿಗೆ ನೀಡಲಾಗಿತ್ತು ಎಂದು ಆರೋಪಿಗಳು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪವಿತ್ರ ಗೌಡ ಎ1 ಮತ್ತು ದರ್ಶನ್ ಎ2 ಆರೋಪಿ.

ದಿನನಿತ್ಯ ಠಾಣೆಯ ಸುತ್ತಮುತ್ತ ದರ್ಶನ್ ಅಭಿಮಾನಿಗಳು ಜಮಾಯಿಸಿ ದರ್ಶನ್ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದರಿಂದ ಠಾಣೆಗೆ ಬರುವ ಇತರೆ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಮುಂಜಾಗ್ರತೆಯ ಕ್ರಮವಾಗಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸುತ್ತಮುತ್ತ ಸೆಕ್ಷನ್ 144 ನಿಷೇಧಾಜ್ಞೆಯನ್ನು ಜೂನ್ 13 ರಿಂದ ಜೂನ್ 17ರವರೆಗೆ ಐದು ದಿನಗಳ ಕಾಲ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ನಟ ದರ್ಶನ್ ಈ ಪ್ರಕರಣದಲ್ಲಿ ಅಪರಾಧಿಯೆಂದು ನಿರೂಪಿತವಾಗಿ ಜೈಲುವಾಸ ಅನುಭವಿಸಿ ಕೊನೆಗೆ ಹೇಗೋ ಜಾಮೀನಿನ ಮೇಲೆ ಹೊರ ಬಂದರೂ ಅವರನ್ನ ಸ್ವಾಗತಿಸಲು, ಹಾರ ಹಾಕಲು, ಮೆರವಣಿಗೆ ಮಾಡಲು, ಕುಣಿದು ಕುಪ್ಪಳಿಸಲು, ಅಭಿಮಾನಿಗಳ ಬಳಗ ಕಾದು ನಿಂತಿರುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಬೇಡ.
ಕಾನೂನು ಎಲ್ಲರಿಗೂ ಒಂದೇ. ಅದು ಪ್ರಧಾನಿಯಾಗಿರಲಿ ನಟರಾಗಿರಲಿ ಅಥವಾ ಸಾಮಾನ್ಯ ನಾಗರಿಕರಾಗಿರಲಿ. ತಪ್ಪು ಮಾಡಿದ ಮೇಲೆ ಶಿಕ್ಷೆ ಸಿಗಬೇಕು ಅನ್ನುವ ವಾದದ ಜೊತೆಗೆ ಒಬ್ಬ ವ್ಯಕ್ತಿಯ ಕೊಲೆಗೆ ನ್ಯಾಯ ಸಿಗಲೇಬೇಕು ಎಂಬುದು ನಮ್ಮೆಲ್ಲರ ದನಿಯಾಗಬೇಕು.
ಈ ಪ್ರಕರಣವು ಪ್ರಭಾವಿಗಳ ಅನೈತಿಕ ಪೊಲೀಸ್ ಗಿರಿಯನ್ನ ತೋರಿಸಿಕೊಡುತ್ತದೆ. ಹಾಗೆ ಪ್ರಭಾವಿಗಳು ಏನೇ ಅನಾಚಾರ ಮಾಡಿದರು ಅದರ ಪರ ವಕಾಲತ್ತು ವಹಿಸಲು ದೊಡ್ಡ ಬಳಗವೊಂದು ನಾಚಿಕೆ-ಮಾನ-ಮರ್ಯಾದೆ, ಮನುಷ್ಯತ್ವ ಬಿಟ್ಟು ನಿಂತಿರುತ್ತದೆ ಎಂದು ಕೂಡ ತೋರಿಸಿಕೊಡುತ್ತದೆ. ಆದರೆ ನಾಗರಿಕ ಸಮಾಜವು ಯಾವಾಗಲೂ ಅನ್ಯಾಯಕ್ಕೊಳಗಾದವರ ಪರ ಮತ್ತು ಕೊಲೆ ದೌರ್ಜನ್ಯದ ವಿರುದ್ಧ ನಿಲ್ಲಬೇಕು. ಆಗ ಮಾತ್ರ ನಾವು ನಾಗರಿಕರು ಎನಿಸಿಕೊಳ್ಳುತ್ತೇವೆ.

ಚರಣ್ ಗೌಡ ಬಿ ಕೆ
ಬಿ ಎ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ನೀತಿ, ಎರಡನೆ ವರ್ಷ, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಬೆಂಗಳೂರು