ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ಉಪ ನಾಯಕಿ ಸ್ಮೃತಿ ಮಂದಾನ ಅಮೋಘ ಬ್ಯಾಟಿಂಗ್ ಮಾಡಿ, ಮಾಜಿ ಕ್ರಿಕೆಟರ್ ಮಿಥಾಲಿ ರಾಜ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿಯೂ ಸ್ಮೃತಿ ಮಂದಾನ ಶತಕ ಬಾರಿಸಿದ್ದಾರೆ.
ಮಿಥಾಲಿ ರಾಜ್ 232 ಪಂದ್ಯಗಳ 211 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ ಒಟ್ಟು 7 ಬಾರಿ ಶತಕವನ್ನು ಸಿಡಿಸಿದ್ದಾರೆ. ಸ್ಮೃತಿ ಮಂದಾನ 84 ಪಂದ್ಯಗಳಲ್ಲಿ 7 ಶತಕಗಳನ್ನು ಗಳಿಸಿದ್ದು ಮಿಥಾಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇಂತಹ ಅಪರೂಪದ ಆಟಗಾರ್ತಿ ಸ್ಮೃತಿ ಮಂದಾನ ಅವರ ವೃತ್ತಿಜೀವನ, ಆದಾಯ, ಜಾಹೀರಾತು, ಪ್ರಚಾರ, ಮಹಿಳಾ ಕ್ರಿಕೆಟ್, ಜನರು-ಮಾಧ್ಯಮಗಳು, ದಾಖಲೆಗಳತ್ತ ಒಂದು ನೋಟ…
ಸ್ಮೃತಿ ಮಂದಾನ ಬಾಲ್ಯ ಜೀವನ
1996ರ ಜುಲೈ18ರಂದು ಮುಂಬೈಯಲ್ಲಿ ಸ್ಮಿತಾ ಹಾಗೂ ಶ್ರೀನಿವಾಸ ದಂಪತಿಗೆ ಜನಿಸಿದ ಸ್ಮೃತಿ, ಬಾಲ್ಯದ ಜೀವನವನ್ನು ಸಾಂಗಲಿಯಲ್ಲಿ ಕಳೆದರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದರು. ಇವರ ತಂದೆ ಶ್ರೀನಿವಾಸ ಹಾಗೂ ಸಹೋದರ ಶ್ರವಣ್ ಇಬ್ಬರೂ ಸಾಂಗಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಆಟಗಾರರು.
ಸ್ಮೃತಿ ಸಹೋದರ ಶ್ರವಣ್ ಮಹಾರಾಷ್ಟ್ರದ 16ನೇ ವಯೋಮಿತಿ ತಂಡಕ್ಕೆ ಆಯ್ಕೆಯಾಗಿದ್ದರು. ಆತನ ಆಟ ಸ್ಮೃತಿಗೆ ಪ್ರೇರಣೆಯಾಗಿದ್ದು, ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಮಹಾರಾಷ್ಟ್ರದ 15ರ ವಯೋಮಿತಿ ತಂಡಕ್ಕೆ ಆಯ್ಕೆಯಾದರು. ಮುಂದೆ ತಮ್ಮ 11ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ 19ರ ವಯೋಮಿತಿ ತಂಡಕ್ಕೂ ಸೇರ್ಪಡೆಯಾದರು. ಆಟವನ್ನು ಆದ್ಯತೆಯನ್ನಾಗಿ ಸ್ವೀಕರಿಸಲು ಅವರು ಬೆಳೆದುಬಂದ ಕೌಟುಂಬಿಕ ಪರಿಸರ ಮತ್ತು ಪೋಷಕರು ಕಾರಣ ಎನ್ನುವುದನ್ನು ಅವರು ಯಾವಾಗಲೂ ಸ್ಮರಿಸುತ್ತಾರೆ.
ಸ್ಮೃತಿ ಮಂದಾನ ವೃತ್ತಿ ಜೀವನ
ಅಕ್ಟೋಬರ್ 2013ರಲ್ಲಿ ಮಂದಾನ ಮಹಾರಾಷ್ಟ್ರ ತಂಡದ ಪರವಾಗಿ ಗುಜರಾತ್ ವಿರುದ್ದ ನಡೆದ ಏಕದಿನ ಪಂದ್ಯವೊಂದರಲ್ಲಿ ದ್ವಿಶತಕವನ್ನು ಬಾರಿಸಿದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆಯನ್ನು ಬರೆದರು. ವಿಶ್ವಾದ್ಯಂತ ಪ್ರಸಿದ್ಧ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರಾದ ಸ್ಮೃತಿ ಮಂದಾನ 2013ರಲ್ಲಿ ಬಾಂಗ್ಲಾದೇಶದ ವಿರುದ್ಧದ ತಮ್ಮ ಚೊಚ್ಚಲ ಟಿ20 ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದರು. 2018 ಮತ್ತು 2021ರಲ್ಲಿ ಎರಡು ಬಾರಿ ಐಸಿಸಿ ಮಹಿಳಾ ಕ್ರಿಕೆಟಿಗ ಪ್ರಶಸ್ತಿಯನ್ನು ಸ್ಮೃತಿ ಪಡೆದಿದ್ದಾರೆ. ಭಾರತ ತಂಡದಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಸ್ಮೃತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.
ಇದನ್ನು ಓದಿದ್ದೀರಾ? ಮೊದಲ ಏಕದಿನ ಪಂದ್ಯ: ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಮಹಿಳಾ ತಂಡಕ್ಕೆ ಭರ್ಜರಿ ಜಯ
ಸ್ಮೃತಿ ಮಂದಾನ ಆದಾಯ
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಸ್ಮೃತಿ ಮಂದಾನ ಜಾಗತಿಕವಾಗಿ ನಾಲ್ಕನೇ ಅತೀ ಶ್ರೀಮಂತ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಮೈದಾನದಲ್ಲಿ ಶತಕಗಳನ್ನು ಬಾರಿಸುತ್ತಾ ಮಹಿಳಾ ಕ್ರಿಕೆಟ್ ತಂಡದ ಗೆಲುವಿಗೆ ಕೊಡುಗೆ ನೀಡುತ್ತಿರುವ ಸ್ಮೃತಿ ಆದಾಯವೂ ಕೂಡಾ ಗಮನಾರ್ಹ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಸ್ಮೃತಿ ಮಂದಾನ ನಿವ್ವಳ ಮೌಲ್ಯ ಸುಮಾರು 33 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮಂದಾನ ಬಿಸಿಸಿಐ ಒಪ್ಪಂದದ ಪ್ರಕಾರ ವಾರ್ಷಿಕವಾಗಿ 50 ಲಕ್ಷ ರೂಪಾಯಿ ಗಳಿಸುತ್ತಾರೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ 4 ಲಕ್ಷ, ಏಕದಿನ ಪಂದ್ಯಗಳಿಗೆ 2 ಲಕ್ಷ, ಟಿ20 ಪಂದ್ಯಕ್ಕೆ 2.5 ಲಕ್ಷ ರೂಪಾಯಿ ಪಡೆಯುತ್ತಾರೆ. ಡಬ್ಲ್ಯೂಬಿಬಿಎಲ್‌ನಲ್ಲಿ ಸ್ಮೃತಿ ಆದಾಯ 3 ಲಕ್ಷ ರೂಪಾಯಿ ಆಗಿದ್ದು, ಡಬ್ಲ್ಯೂಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡಿದ ಸ್ಮೃತಿ 3.3 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿ ಹೇಳುತ್ತದೆ. ಜೊತೆಗೆ ವಿವಿಧ ಬ್ರ್ಯಾಂಡ್‌ಗಳ ರಾಯಭಾರಿಯಾಗಿ ಕೂಡ ಮಂದಾನ ಹಣ ಗಳಿಕೆಯಲ್ಲಿ ಮುಂದಿದ್ದಾರೆ. ಹೀರೋ, ಬಾಟಾ ಮತ್ತು ಬೂಸ್ಟ್‌ಗಳ ಅಂಬಾಸಿಡರ್ ಆಗಿದ್ದಾರೆ.
ಪುರುಷ ತಂಡಕ್ಕಿಂತ ಅತೀ ಕಡಿಮೆ ಆದಾಯ
ಸ್ಮೃತಿ ಮಂದಾನ ಜಾಗತಿಕವಾಗಿ ನಾಲ್ಕನೇ ಅತೀ ಶ್ರೀಮಂತ ಮಹಿಳಾ ಕ್ರಿಕೆಟಿಗರಾದರೂ ಕೂಡಾ ಪುರುಷ ಕ್ರಿಕೆಟಿಗರ ಆದಾಯಕ್ಕೆ ಹೋಲಿಸಿದರೆ ಅತೀ ಕಡಿಮೆ ಆದಾಯವನ್ನು ಹೊಂದಿದ್ದಾರೆ. ಇನ್ನು ಜಾಹೀರಾತು ಲೋಕದಲ್ಲಿ ಪುರುಷ ಕ್ರಿಕೆಟಿಗರಿಗೆ ಇರುವ ಬೇಡಿಕೆ, ಸಂಭಾವನೆ ಮಹಿಳಾ ಆಟಗಾರರಿಗಿಲ್ಲ. ಕೆಲವು ವರ್ಷಗಳ ಹಿಂದೆ ಮಹಿಳಾ ಕ್ರಿಕೆಟ್ ತಂಡಕ್ಕೆ ದೊರಕುತ್ತಿದ್ದ ಪ್ರಚಾರಕ್ಕಿಂತ ಕೊಂಚ ಅಧಿಕ ಪ್ರಚಾರ ಪ್ರಸ್ತುತ ಸಂದರ್ಭದಲ್ಲಿ ಇದೆಯಾದರೂ ಪುರುಷ ತಂಡದೊಂದಿಗೆ ಮಾಡುವ ಹೋಲಿಕೆ ನಿಂತಿಲ್ಲ.
We’ve seen this before, it’s a classic!
Smriti Mandhana’s Virat Kohli-like bowling action takes the internet by storm. #ViratKohli #SmritiMandhana #Viral #ViralVideo https://t.co/Xfft92bLDD
— Mashable India (@MashableIndia) June 20, 2024
ಜನರು ಮತ್ತು ಮಾಧ್ಯಮಗಳ ಅವಕೃಪೆ!
ಯಾವುದೇ ಕ್ರಿಕೆಟಿಗರು ದಾಖಲೆಗಳನ್ನು ಸೃಷ್ಟಿಸಿದಾಗ ಅವರ ದಾಖಲೆಯು ಎಕ್ಸ್‌ನಲ್ಲಿ (ಟ್ವಿಟ್ಟರ್) ಟ್ರೆಂಡ್ ಆಗುವುದು ಸಾಮಾನ್ಯ. ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸೇರಿದಂತೆ ಹಲವಾರು ಕ್ರಿಕೆಟಿಗರ ಸಾಧನೆಯನ್ನು ನೆಟ್ಟಿಗರು ಹಾಡಿಹೊಗಳಿರುವುದನ್ನು ನಾವು ನೋಡಿದ್ದೇವೆ. ಆದರೆ ಸ್ಮೃತಿ ಮಂದಾನ ದಾಖಲೆ ಮಾತ್ರ ನೆಟ್ಟಿಗರ ಪಾಲಿಗೆ ಸಾಧನೆಯಾಗಿ ಕಂಡಿಲ್ಲ ಎಂಬುವುದು ವಿಷಾದನೀಯ.
ಪ್ರಸ್ತುತ ನೆಟ್ಟಿಗರು ಸ್ಮೃತಿ ಮಂದಾನ ಬೌಲಿಂಗ್ ಶೈಲಿಯನ್ನು ವಿರಾಟ್ ಕೊಹ್ಲಿ ಬೌಲಿಂಗ್ ಜೊತೆ ಹೋಲಿಕೆ ಮಾಡುತ್ತಿದ್ದಾರೆ. ಆದರೆ ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿದ ಸ್ಮೃತಿ ಮಂದಾನ ಬ್ಯಾಟಿಂಗ್ ಭರಾಟೆಗೆ ಮಾಧ್ಯಮಗಳಿಂದಲೂ ಹೆಚ್ಚಿನ ಪ್ರಚಾರವಿಲ್ಲ, ನೆಟ್ಟಿಗರಿಂದಲೂ ಪ್ರೋತ್ಸಾಹವಿಲ್ಲ. ಕ್ರಿಕೆಟ್ ಎಂದರೆ ಬರೀ ಪುರುಷರ ಸಾಧನೆಗೆ ಸೀಮಿತವೇ, ಮಹಿಳೆಯರ ಸಾಧನೆಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಇಲ್ಲಿ ಹುಟ್ಟುತ್ತದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.
ಹೆಣ್ಣಿನ ಮತ್ತು ಅವಳ ಸಾಧನೆ ಬಗ್ಗೆ ಅನಾದಿ ಕಾಲದಿಂದಲೂ ಸಮಾಜ ಮತ್ತು ಜನಗಳಿಗಿರುವ ತಾತ್ಸಾರ ಭಾವವಿದು. ಜಾಹಿರಾತು ಕಂಪನಿಗಳು ಕಣ್ಣು ಮತ್ತು ಮನಸ್ಸುನ್ನು ತೆರೆದು, ಕ್ರಿಕೇಟ್ ಸಾಧಕಿಯರನ್ನ ಪ್ರಪಂಚಕ್ಕೆ ಪರಿಚಯಿಸಲಿ , ಅ. ಮೂಲಕ ಹೆಣ್ಣು ಮಕ್ಕಳ ಕ್ರಿಕೆಟ್ ಗೆ ಪ್ರೋತ್ಸಾಹಿಸಿ ಹೆಣ್ಣು ಪ್ರತಿಭಾಶೂನ್ಯಳಲ್ಲ ಎನ್ನುವುದನ್ನು ಜಗತ್ತಿಗೆ ಹೇಳಲಿ