ನೀಟ್ ಅವ್ಯವಹಾರ ನಡೆದ ಬೆನ್ನಲ್ಲೇ, ನೆಟ್ ಅವ್ಯವಹಾರವೂ ನಡೆದಿದೆ ಎಂಬ ಆರೋಪಗಳಿವೆ. ಹೀಗಾಗಿಯೇ, ನೆಟ್ ಪರೀಕ್ಷೆ ಬಡೆದ ಮರುದಿನವೇ ಆ ಪರೀಕ್ಷೆಯನ್ನು ಎನ್‌ಟಿಎ ರದ್ದುಗೊಳಿಸಿದೆ. ಆದರೆ, ಈ ಅವ್ಯವಹಾರಗಳನ್ನು ಚಿಕ್ಕದೆಂದು ಬಿಂಬಿಸಲು ಶಿಕ್ಷಣ ಸಚಿವಾಲಯ ಮತ್ತು ಎನ್‌ಟಿಎ ಪ್ರಯತ್ನಿಸುತ್ತಿವೆ ಎಂದು ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕಾ ಪ್ರಕಟಣೆ ಹೊರಡಿಸಿರುವ ಶಿಲ್ಪಾ, “ಮೊನ್ನೆ ನೀಟ್, ಇಂದು ನೆಟ್ ಪರೀಕ್ಷೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಕೇಳಿ ಬಂದಿದೆ. ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಟ್ಟಲೆ ತಯಾರಿ ನಡೆಸಿ ಪರೀಕ್ಷೆ ಬರೆದಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಆದರೂ, ಗಂಭೀರ ಪ್ರಮಾಣದ ಅವ್ಯವಹಾರವನ್ನು ಚಿಕ್ಕದೆಂದು ಬಿಂಬಿಸಲು ಶಿಕ್ಷಣ ಸಚಿವಾಲಯ ಮತ್ತು ಎನ್‌ಟಿಎ ಪ್ರಯತ್ನಿಸುತ್ತಲೇ ಇವೆ. ನೆಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರಗಳು ಈ ಪ್ರಕರಣದ ತೀವ್ರತೆಯನ್ನು ಪ್ರತಿಬಿಂಬಿಸುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಪವಿತ್ರತೆಯನ್ನು ಕಾಪಾಡಲು ಪರೀಕ್ಷೆ ನಡೆದ ಮರುದಿನವೇ ಅದನ್ನು ರದ್ದು ಪಡಿಸಿ, ತನಿಖೆ ನಡೆಸಲು ಸಿಬಿಐಗೆ ಒಪ್ಪಿಸಲಾಗಿದೆ. ಈ ನಡೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಪರೀಕ್ಷಾ ಕೇಂದ್ರಗಳಿಗೆ ತಲುಪಲು ದೂರದ ಪ್ರಯಾಣ, ವಸತಿ, ಅಧಿಕ ಪ್ರಮಾಣದ ಪರೀಕ್ಷಾ ಶುಲ್ಕ ಸೇರಿದಂತೆ ಹಲವಾರು ಸಂಕಷ್ಟಗಳನ್ನು ಎದುರಿಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ. ವಿದ್ಯಾರ್ಥಿಗಳ ಭವಿಷ್ಯವನ್ನು ಎನ್‌ಟಿಎ ಅತಂತ್ರಕ್ಕೆ ದೂಡಿದೆ” ಎಂದಿದ್ದಾರೆ.
“ವ್ಯಾಪಾರೀಕರಣ, ಅನಾರೋಗ್ಯ ಪೀಡಿತ ಸ್ಪರ್ಧೆ ಮತ್ತು ವ್ಯಾಪಕ ಭ್ರಷ್ಟಾಚಾರ ಜಾರಿಯಲ್ಲಿರುವಾಗ, ಒಂದು ಕೇಂದ್ರೀಕೃತ ಪರೀಕ್ಷೆಯು ಭ್ರಷ್ಟಾಚಾರದ ಏಕಸ್ವಾಮ್ಯಾಧಿಕಾರವನ್ನುಂಟು ಮಾಡಬಲ್ಲದೆ ಹೊರತು, ಈ ಯಾವ ಸಮಸ್ಯೆಯನ್ನೂ ಪರಿಹರಿಸುವುದಿಲ್ಲ. ಹೀಗಾಗಿ, ನೀಟ್ ಮತ್ತು ನೆಟ್ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮದ ಕುರಿತು ಸಮರೋಪಾದಿಯಲ್ಲಿ ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರಕರಣವು ತಾರ್ಕಿಕ ಅಂತ್ಯ ತಲುಪುವವರೆಗೂ ನೀಟ್ ಕೌನ್ಸಿಲಿಂಗ್ಅನ್ನು ತಡೆಹಿಡಿಯಬೇಕು. ನೆಟ್ ಮರುಪರೀಕ್ಷೆಯ ದಿನಾಂಕವನ್ನು ಕೂಡಲೇ ಪ್ರಕಟಿಸಿ, ನೇರವಾಗಿ ಯುಜಿಸಿಯೇ ಪರೀಕ್ಷೆಯನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.