ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿ ಕುದಾಪುರದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ಅಭಿವೃದ್ಧಿಪಡಿಸಿದ್ದು, ಪ್ರಯೋಗಗಳಲ್ಲಿ ಸತತ ಯಶಸ್ಸು ಮುಡಿಗೇರಿಸಿಕೊಂಡಿದೆ.
ʼಪುಷ್ಪಕ್’ ಹೆಸರಿನಲ್ಲಿ ಅಭಿವೃದ್ಧಿಪಡಿಸಿರುವ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ) ಲ್ಯಾಂಡಿಂಗ್ ಪ್ರಯೋಗದಲ್ಲಿ ಸತತ ಮೂರನೇ ಬಾರಿಗೆ ಯಶಸ್ವಿಯಾಗಿದೆ.
ಜೂನ್ 23ರ ಬೆಳಿಗ್ಗೆ 7.10ಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಕುದಾಪುರ ಬಳಿಯಿರುವ ವಾಯು ನೆಲೆ (ಏರೋನಾಟಿಕಲ್ ಟೆಸ್ಟ್ ರೇಂಜ್–ATR)ಯಲ್ಲಿ ಈ ಪರೀಕ್ಷೆ ನಡೆದಿದೆ ಎಂದು ಇಸ್ರೋ ಎಕ್ಸ್ (X) ಖಾತೆಯಲ್ಲಿ ಪ್ರಕಟಿಸಿದೆ.
LEX-03 ಸರಣಿಯ ಮೂರನೇ ಮತ್ತು ಅಂತಿಮ ಪರೀಕ್ಷೆ ಇದಾಗಿದೆ. RLV LEX-01 ಮತ್ತು LEX-02 ಕಾರ್ಯಾಚರಣೆಗಳ ಯಶಸ್ಸಿನ ನಂತರ, RLV LEX-03 ಹೆಚ್ಚು ಸವಾಲಿನ ಪರೀಕ್ಷೆಯಾಗಿತ್ತು.
ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‍ನಲ್ಲಿ ಭಾನುವಾರ ಬೆಳಿಗ್ಗೆ ಸರ್ವ ಸನ್ನದ್ಧರಾಗಿದ್ದ ಇಸ್ರೋ ವಿಜ್ಞಾನಿಗಳ ತಂಡ, ‘ಚಿನೂಕ್’ ಹೆಲಿಕಾಫ್ಟರ್ ಮೂಲಕ ‘ಪುಷ್ಪಕ್’ ಲ್ಯಾಂಡಿಂಗ್ ವಾಹನವನ್ನು ರನ್-ವೇಯಿಂದ 4.5 ಕಿಮೀ ಎತ್ತರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಬಿಡುಗಡೆ ಮಾಡಿತು.
ಸಾಕಷ್ಟು ಗಾಳಿ, ಒತ್ತಡದ ಪರಿಸ್ಥಿತಿಯಲ್ಲೂ ರೆಕ್ಕೆಗಳಿಲ್ಲದ ಪುಷ್ಪಕ್ ತನ್ನಲ್ಲಿರುವ ತಂತ್ರಜ್ಞಾನದ ಬಲದಿಂದ ರನ್‍ವೇ ಸಮೀಪಿಸಿತು. ರನ್‍ವೇ ಸೆಂಟರ್‌ಲೈನ್‌ನಲ್ಲಿ ನಿಖರವಾದ ಸಮತಲ ಲ್ಯಾಂಡಿಂಗ್ ಮಾಡಲಾಯಿತು.
ಲ್ಯಾಂಡಿಂಗ್ ವೇಗವು ಪ್ರತಿ ಗಂಟೆಗೆ 320 ಕಿಮೀ ಮೀರಿತ್ತು. ಈ ವೇಗ ವಾಣಿಜ್ಯ ವಿಮಾನಗಳಲ್ಲಿ ಪ್ರತಿ ಗಂಟೆಗೆ 260 ಕಿಮೀ ಮತ್ತು ಸಾಮಾನ್ಯ ಯುದ್ಧ ವಿಮಾನಕ್ಕೆ ಹೋಲಿಸಿದರೆ ಪ್ರತಿ ಗಂಟೆಗೆ 280 ಕಿಮೀ ಇರುತ್ತದೆಂದು ಅಂದಾಜಿಸಲಾಗಿದೆ.
ಪುಷ್ಪಕ್ ಭೂಮಿಗೆ ಲ್ಯಾಂಡ್ ಆದ ಕೂಡಲೇ ವೇಗ ಕಡಿಮೆ ಮಾಡಲು ಬ್ರೇಕ್ ಪ್ಯಾರಾಚೂಟ್ ಬಳಸಿದ್ದು, ಈ ವೇಳೆ ಸುಮಾರು 100 ಕಿಮೀ ವೇಗ ತಗ್ಗಿತು. ಆನಂತರ ಲ್ಯಾಂಡಿಂಗ್ ಗೇರ್ ಬ್ರೇಕ್‍ಗಳನ್ನು ಬಳಸಿ ಮತ್ತಷ್ಟು ನಿಧಾನಗೊಳಿಸಲಾಯಿತು. ರನ್‍ವೇ ಉದ್ದಕ್ಕೂ ಸ್ಥಿರ ಮತ್ತು ನಿಖರವಾಗಿ ನೋಸ್ ವೀಲ್ ಸೇರಿಂಗ್ ಮೂಲಕ ಸಾಗಿತು.
ಅತ್ಯಂತ ನಿರ್ಣಾಯಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಈ ಕಾರ್ಯಾಚರಣೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ ಎಂದು ಎಕ್ಸ್ ಖಾತೆಯಲ್ಲಿ ವಿವರಿಸಿದೆ.
ಈ ಕಾರ್ಯಾಚರಣೆಯಲ್ಲಿ VSSC ನೇತೃತ್ವದ ಮಿಷನ್, ಭಾರತೀಯ ವಾಯುಪಡೆ (IAF), ಏರೋನಾಟಿಕಲ್ ಡೆವಲಪ್‍ಮೆಂಟ್ ಎಸ್ಟಾಬ್ಲಿಷ್‌ಮೆಂಟ್(ADE), ವೈಮಾನಿಕ ವಿತರಣಾ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ(ADRDE) ಬೆಂಬಲದೊಂದಿಗೆ ISRO ಕೇಂದ್ರಗಳಾದ SAC, ISTRAC, SDSC-SHAR ಒಳಗೊಂಡ ಸಹಕಾರ ಪಡೆಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಹಳೆ ಪಿಂಚಣಿ ಯೋಜನೆಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಹೋರಾಟ: ಭೋಜೇಗೌಡ ಎಚ್ಚರಿಕೆ
ಮರುಬಳಕೆಯ ರಾಕೆಟ್ ಪುಷ್ಪಕ್ ಯಶಸ್ವಿ ಲ್ಯಾಂಡಿಂಗ್ ಆಗಿದ್ದು, ಇದೊಂದು ಸರಣಿ ಯಶಸ್ಸಿನ ಕಾರ್ಯಾಚರಣೆ. ಇದರಲ್ಲಿ ಭಾಗಿಯಾಗಿರುವ ಎಲ್ಲ ವಿಜ್ಞಾನಿಗಳ ತಂಡಕ್ಕೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅಭಿನಂದಿಸಿದ್ದಾರೆ.
VSSC ನಿರ್ದೇಶಕ ಡಾ ಎಸ್ ಉನ್ನಿಕೃಷ್ಣನ್ ನಾಯರ್, “ಈ ಸ್ಥಿರ ಯಶಸ್ಸು ಭವಿಷ್ಯದ ಕಕ್ಷೆಯ ಮರುಪ್ರವೇಶ ಕಾರ್ಯಾಚರಣೆಗಳಿಗೆ ಅಗತ್ಯವಾದ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಇಸ್ರೋ ಸಂಸ್ಥೆಯ ವಿಶ್ವಾಸವನ್ನು ಹೆಚ್ಚಿಸುತ್ತದೆ” ಎಂದು ಹೇಳಿದ್ದಾರೆ.
