ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಹುರಿಯಾಳು ಯಾರು? ಅತ್ತ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ? ಎಂಬುದರ ಸುತ್ತ ನಾನಾ ಚರ್ಚೆಗಳು ಪ್ರಾರಂಭವಾಗಿವೆ.
ಚನ್ನಪಟ್ಟಣದ ಉಪ ಚುನಾವಣೆಯ ಕಣ ಸದ್ಯದ ಪರಿಸ್ಥಿತಿಯಲ್ಲಿ ಎಚ್ ಡಿ ಕುಮಾರಸ್ವಾಮಿ ಹಾಗೂ ಡಿ ಕೆ ಶಿವಕುಮಾರ್ ನಡುವಿನ ಫೈಟ್ ಆಗಿದೆ. ಅಭ್ಯರ್ಥಿಗಳು ಬೇರೆಯವರಾಗಿದ್ದರೂ ಕೂಡ ಇಬ್ಬರಿಗೂ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ.
ಆಡಳಿತದಲ್ಲಿರುವ ಡಿ ಕೆ ಶಿವಕುಮಾರ್ ಶತಾಯ ಗತಾಯ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕು ಎಂದು ಪಣತೊಟ್ಟಿದ್ದರೆ, ತಮ್ಮ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಎಚ್‌ಡಿ ಕುಮಾರಸ್ವಾಮಿ ಪ್ರತಿತಂತ್ರ ಹೆಣೆಯುತ್ತಿದ್ದಾರೆ.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು, “ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲ್ಲ. ಎರಡು ಚುನಾವಣೆಯಲ್ಲಿ ಸೋತಿರುವ ಅವನ ನೋವು ನನಗಷ್ಟೇ ಗೊತ್ತು” ಎಂದು ಬಹಿರಂಗವಾಗಿಯೇ ಹೇಳಿದ್ದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿರುವ ಕಾಂಗ್ರೆಸ್ ನಾಯಕ ಡಿ ಕೆ ಸುರೇಶ್ ಅವರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಆರಂಭದಲ್ಲಿ ಕೇಳಿಬಂದವು. ಅದಕ್ಕೆ ಸ್ಪಷ್ಟನೆ ನೀಡಿದ ಡಿ ಕೆ ಸುರೇಶ್, ನಮ್ಮ ಪಕ್ಷದಿಂದ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಈ ಬೆಳವಣಿಗೆ ನಡುವೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅನಿವಾರ್ಯ ಬಿದ್ದರೆ ಚನ್ನಪಟ್ಟಣದಿಂದ ತಾವೇ ಸ್ಪರ್ಧಿಸುವ ಇಂಗಿತ ಈಗಾಗಲೇ ವ್ಯಕ್ತಪಡಿಸಿದ್ದಾರೆ. ಡಿ ಕೆ ಸುರೇಶ್ ಪ್ರಕಾರ ಆ ಅಚ್ಚರಿ ಅಭ್ಯರ್ಥಿ ಡಿ ಕೆ ಶಿವಕುಮಾರ್ ಆಗಿದ್ದಾರಾ ಎಂಬುದು ಸಹಜವಾಗಿ ಅನುಮಾನ ಮೂಡಿಸಿದೆ.
ಡಿ ಕೆ ಸುರೇಶ್ ಮತ್ತು ಡಿ ಕೆ ಶಿವಕುಮಾರ್ ಹೇಳಿಕೆ ಎದುರಾಳಿಗಳ ತಂತ್ರವನ್ನು ಅರಿಯುವ ಪ್ರಯತ್ನವಾಗಿಯೂ ನೋಡಬಹುದು. ಅಷ್ಟು ಸರಳವಾಗಿ ಚನ್ನಪಟ್ಟಣವನ್ನು ಡಿ ಕೆ ಶಿವಕುಮಾರ್ ಬಿಟ್ಟು ಕೊಡಲಾರರು ಅನ್ನಿಸುತ್ತೆ. ಕಾರಣ ಸಹೋದರನ ಸೋಲಿಗೆ ಇಲ್ಲಿ ಮುಯ್ಯಿ ತೀರಿಸಿಕೊಳ್ಳಲು ನಾನಾ ತಂತ್ರಗಳನ್ನು ಡಿ ಕೆ ಶಿವಕುಮಾರ್ ಹೂಡಿಯೇ ಇರ್ತಾರೆ. ಒಂದೊಂದಾಗಿ ಆ ತಂತ್ರಗಳನ್ನು ಹೊರಹಾಕುವ ಮೂಲಕ ಎದುರಾಳಿಗಳ ಮನಸಲ್ಲಿ ಏನಿದೆ ಎನ್ನುವುದನ್ನು ಲೆಕ್ಕಾಚಾರ ಹಾಕುತ್ತಿರುತ್ತಾರೆ.
ಡಿ ಕೆ ಶಿವಕುಮಾರ್ ಮಾತಿಗೆ ಹೆದರಿದ್ರಾ ಕುಮಾರಸ್ವಾಮಿ?
ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ಕುಮಾರಸ್ವಾಮಿ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲುವ ಮೂಲಕ ಕೇಂದ್ರ ಸಚಿವರಾಗಿಯೂ ಆಯ್ಕೆಯಾಗಿದ್ದಾರೆ. ಅವರ ಮನಸಲ್ಲಿ ಮಗನ ರಾಜಕೀಯ ಭವಿಷ್ಯ ಪ್ರಶ್ನೆಯಾಗಿಯೇ ಉಳಿದಿದೆ. ಹೇಗಾದ್ರೂ ಮಾಡಿ ಚನ್ನಪಟ್ಟಣದಲ್ಲಿ ಮಗನ ರಾಜಕೀಯ ಭವಿಷ್ಯವನ್ನು ಸ್ಥಾಪಿಸಬೇಕು ಎನ್ನುವ ಆಲೋಚನೆ ಕುಮಾರಸ್ವಾಮಿ ಮನಸಲ್ಲಿ ಇದ್ದೆ ಇರುತ್ತೆ. ಈಗಾಗಲೇ ನಿಖಿಲ್ ಒಂದು ಬಾರಿ ಲೋಕಸಭೆ ಮತ್ತು ಒಂದು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದು, ಕುಮಾರಸ್ವಾಮಿಗೆ ಮತ್ತಷ್ಟು ಆತಂಕ ಸೃಷ್ಟಿಸಿರುತ್ತೆ. ಇದಕ್ಕೆ ಪರಿಹಾರ ಹುಡುಕಲು ಅವರು ಅವಿರತ ಶ್ರಮ ಪಟ್ಟೇ ಪಟ್ಟಿರುತ್ತಾರೆ.
ಮೋದಿ ಸಂಪುಟದಲ್ಲಿ ಕುಮಾರಸ್ವಾಮಿಗೆ ಸಚಿವ ಸ್ಥಾನ ಸಿಕ್ಕಿದ್ದು, ಬಿಜೆಪಿ ಕೂಡ ಅಷ್ಟು ಸರಳವಾಗಿ ಎಲ್ಲ ಅವಕಾಶವನ್ನು ಕುಮಾರಸ್ವಾಮಿಗೆ ಬಿಟ್ಟುಕೊಡುವುದಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿ ಪಿ ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸರ್ವಪ್ರಯತ್ನ ಮಾಡಿಯೇ ತಿರುತ್ತೆ. ಜೊತೆಗೆ ಸಿ ಪಿ ಯೋಗೇಶ್ವರ್ ಕೂಡ ಅಷ್ಟು ಸುಲಭವಾಗಿ ಹಿಂದೆ ಸರಿಯಲ್ಲ.
ಚಿನ್ಹೆ ವಿನಿಮಯ
ಕುಮಾರಸ್ವಾಮಿ ಮಾತುಗಳನ್ನು ರಾಜಕೀಯದಲ್ಲಿ ಯಾವತ್ತೂ ನಂಬಲು ಆಗುವುದಿಲ್ಲ. ಮಂಡ್ಯದಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದಿದ್ದ ಇವರು ಕೊನೆಗೆ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿದರು. ಇಲ್ಲೂ ಕೂಡ ಆ ತಂತ್ರವನ್ನು ಅವರು ಮುಂದುವರಿಸಬಹುದು. ನಿಖಿಲ್‌ಗೆ ಟಿಕೆಟ್ ಬೇಕು ಅಂತಲೇ ಹಠ ಹಿಡಿಯಬಹುದು. ಕೊನೆಗೆ ಬಿಜೆಪಿ ಚಿನ್ಹೆಯಡಿಯಾದ್ರೂ ಮಗನಿಗೆ ಟಿಕೆಟ್ ಕೇಳಬಹುದು.
ಕುಮಾರಸ್ವಾಮಿ ತಂತ್ರಕ್ಕೆ ಬಿಜೆಪಿ ಕೂಡ ಹಠ ಹಿಡಿದರೆ ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ಚಿಹ್ನೆ ವಿನಿಮಯ ಪದ್ಧತಿ ಕೂಡ ಚನ್ನಪಟ್ಟಣದಲ್ಲಿ ನಡೆಯಬಹುದು. ಸಿ ಪಿ ಯೋಗೇಶ್ವರ್‌ಗೆ ಬಿಜೆಪಿ ಚಿನ್ಹೆಯಡಿ ಟಿಕೆಟ್ ಕೊಡಲ್ಲ ಎಂದ್ರೆ ಜೆಡಿಎಸ್ ಚಿನ್ಹೆಯಡಿಯಾದ್ರೂ ಟಿಕೆಟ್ ಬೇಕು ಅಂತ ಬಿಜೆಪಿ ಹಠ ಹಿಡಿಯಬಹುದು.
ಇದೆಲ್ಲವೂ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ನಡುವಿನ ಲೆಕ್ಕಾಚಾರ ಅಷ್ಟೇ. ಅಂತಿಮವಾಗಿ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಡಿ ಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ನಡುವಿನ ಯುದ್ದಕ್ಕಂತೂ ಚನ್ನಪಟ್ಟಣ ಉಪಚುನಾವಣೆ ಮತ್ತೆ ಸಾಕ್ಷಿಯಾಗಲಿದೆ!

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.