ಹರಿಯಾಣದ ಹಿಸಾರ್ ಜಿಲ್ಲೆಯ ಹನ್ಸಿ ಪಟ್ಟಣದಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಸೋಮವಾರ ಹಾಡಹಗಲಲ್ಲೇ ನವ ವಿವಾಹಿತ ದಂಪತಿಯನ್ನು ಗುಂಡಿಕ್ಕಿ ಕೊಂದಿದ್ದು ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿದೆ.
ಮೃತರನ್ನು ನಾರ್ನಾಂಡ್‌ನ ಬಡಾಲಾ ಗ್ರಾಮದ ನಿವಾಸಿ ತೇಜ್‌ವೀರ್ ಸಿಂಗ್ (ಪತಿ) ಮತ್ತು ಹಂಸಿಯ ಸುಲ್ತಾನ್‌ಪುರ ಗ್ರಾಮದ ಮೀನಾ (ಪತ್ನಿ) ಎಂದು ಪೊಲೀಸರು ಗುರುತಿಸಿದ್ದಾರೆ. ಎರಡು ತಿಂಗಳ ಹಿಂದೆ ಇವರಿಬ್ಬರು ವಿವಾಹವಾಗಿದ್ದರು.
ದಂಪತಿಗಳು ಬೆಳಿಗ್ಗೆ ಲಾಲಾ ಹುಕಂಚಂದ್ ಜೈನ್ ಪಾರ್ಕ್‌ಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಉದ್ಯಾನವನಕ್ಕೆ ಬಂದಿದ್ದು, ಇಬ್ಬರ ಮೇಲೆ ಮನಬಂದಂತೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಸದ್ದು ಕೇಳಿ ಪಾರ್ಕ್‌ನಲ್ಲಿದ್ದ ಜನರು ಭಯಭೀತರಾಗಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಇದನ್ನು ಓದಿದ್ದೀರಾ? ವಿಜಯಪುರ | ಮರ್ಯಾದೆಗೇಡು ಹತ್ಯೆ: ಗರ್ಭಿಣಿಯನ್ನು ಕೊಂದಿದ್ದ ಅಪರಾಧಿಗಳಿಗೆ ಗಲ್ಲು ಶಿಕ್ಷೆ
ಮೂಲಗಳ ಪ್ರಕಾರ, ಇವರಿಬ್ಬರು ಜಾಟ್ ಸಮುದಾಯಕ್ಕೆ ಸೇರಿದವರಾಗಿದ್ದು, ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು. ಎರಡು ತಿಂಗಳ ಹಿಂದೆ ಮನೆ ಬಿಟ್ಟು ಬಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವಿವಾಹವಾಗಿದ್ದರು. ತೇಜ್‌ವೀರ್ ಸಿಂಗ್ ನೋಯ್ಡಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ತೇಜ್‌ವೀರ್ ಸಿಂಗ್ ದೂರದ ಸಂಬಂಧಿಕ ಆಗಿದ್ದರಿಂದ ಮೀನಾ ಮನೆಯವರು ಈ ಸಂಬಂಧಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆಕೆ ತನ್ನ ಪತಿಯ ಮಾವನ ಸೋದರ ಮಾವನ ಮಗಳು ಎಂದು ವರದಿಯಾಗಿದ್ದು, ಇಬ್ಬರೂ ಪ್ರತ್ಯೇಕ ಗ್ರಾಮಗಳಿಗೆ ಸೇರಿದವರು.
ಇದನ್ನು ಓದಿದ್ದೀರಾ? ಮರ್ಯಾದೆಗೇಡು ಹತ್ಯೆ | ತಂಗಿಯನ್ನೇ ಕೆರೆಗೆ ತಳ್ಳಿ ಹತ್ಯೆಗೈದ ಕೋಮುವಾದಿ ಸಹೋದರ
ವಧುವಿನ ತಂದೆ, ಚಿಕ್ಕಪ್ಪ ಮತ್ತು ಸಹೋದರ ಸೇರಿದಂತೆ ವಧುವಿನ ಕುಟುಂಬದ 11 ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಖಾಲಿ ಗಾಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹನ್ಸಿ ಮಕ್ಸೂದ್ ಅಹ್ಮದ್ ತಿಳಿಸಿದ್ದಾರೆ. ಹತ್ಯೆಯ ನಿಜವಾದ ಕಾರಣವನ್ನು ತಿಳಿಯಲು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‌ಪಿ ಹೇಳಿದ್ದಾರೆ.
ಸ್ಥಳದಲ್ಲಿಯೇ ದ್ವಿಚಕ್ರವಾಹನದ ಕೀಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅದರ ಮಾಲೀಕರ ಶೋಧ ಕಾರ್ಯಾಚರಣೆ ಆರಂಭವಾಗಿದೆ.