ಮತ್ತೊಂದು ಕೋಮಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಕೊಂದಿದ್ದ ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತು ಇತರ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಜಯಪುರ ಜಿಲ್ಲಾ ಸೆಷನ್ಸ್ ಕೋರ್ಟ್ ಅದೇಶ ಹೊರಡಿಸಿದೆ. ಅಪರಾಧಿಗಳಿಗೆ ದಂಡವನ್ನೂ ವಿಧಿಸಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಾಳಾಗುಂಡಕನಾಳ ಗ್ರಾಮದ ಬಾನು ಬೇಗಂ ಅತ್ತಾರ್ ಮತ್ತು ಅದೇ ಗ್ರಾಮದ ಸಾಯಬಣ್ಣ ಕೊಣ್ಣೂರ ಪರಸ್ಪರ ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಬಾನು ಅವರ ಕುಟುಂಬ ಒಪ್ಪಿರಲಿಲ್ಲ. 2017ರಲ್ಲಿ ಅವರು ಊರು ತೊರೆದು ಹೋಗಿ, ವಿವಾಹವಾಗಿದ್ದರು. ದೂರದ ಊರಿನಲ್ಲಿ ವಾಸವಾಗಿದ್ದರು.
ಕೆಲ ತಿಂಗಳಗಳ ಬಳಿಕ ಗರ್ಭಿಣಿಯಾಗಿದ್ದ ಬಾನು ಹೆರಿಗೆಗಾಗಿ ಸಾಯಬಣ್ಣ ಅವರ ಮನೆಗೆ ಬಂದಿದ್ದರು. ಆಗ, ದಂಪತಿಗಳನ್ನು ಹತ್ಯೆ ಮಾಡಲು ಬಾನು ಕುಟುಂಬ ಮುಂದಾಗಿತ್ತು. ಸಾಯಬಣ್ಣ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು. ಸಾಯಬಣ್ಣ ಅವರು ಹಲ್ಲೆಯಿಂದ ತಪ್ಪಿಇಕೊಂಡಿದ್ದರು. ಆದರೆ, ಬಾನು ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಆಕೆಯ ಮೇಲೆ ಹಲ್ಲೆ ಮಾಡಲಾಗಿತ್ತು. ಹಲ್ಲೆಯಿಂದ ಬಾನು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಮೂರ್ಛೆಹೋಗಿದ್ದ ಆಕೆಯ ಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಆಕೆಯ ಕುಟುಂಬಸ್ಥರೇ ಆಕೆಯನ್ನು ಕೊಂದಿದ್ದರು.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ, ಅಪರಾಧಿ ಇಬ್ರಾಹಿಂಸಾಬ್ ಅತ್ತಾರ ಮತ್ತು ಅಕ್ಬರಸಾಬ್ ಅತ್ತಾರಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ರಂಜಾನಬಿ ಅತ್ತಾರ, ದಾವಲಬಿ ಜಮಾದಾರ್, ಅಜ್ಮಾ ದಖನಿ, ಜಿಲಾನಿ ದಖನಿ, ಅಬ್ದುಲ್ ಖಾದರ್ ದಖನಿ, ದಾವಲಭಿ ಧನ್ನೂರಗೆ ಜೀವಾವಧಿ ಶಿಕ್ಷೆ ಮತ್ತು 4.19 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.