ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದ ವಿಚಾರಣಾ ನ್ಯಾಯಾಲಯ ಸರಿಯಾಗಿ ಗಮನಕೊಟ್ಟಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಹಾಗೆಯೇ ಕೇಜ್ರಿವಾಲ್‌ಗೆ ಜಾಮೀನು ನೀಡಿದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಅಂಗೀಕರಿಸಿದೆ. ಈ ಹಿಂದೆ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆಯೊಡ್ಡಿತ್ತು.
“ಅರ್ಜಿಯನ್ನು ಅಂಗೀಕರಿಸಲಾಗಿದೆ ಮತ್ತು ವಿಚಾರಣಾ ನ್ಯಾಯಾಲಯದ ಆದೇಶವನ್ನು ತಡೆಹಿಡಿಯಲಾಗಿದೆ” ಎಂದು ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರ ರಜಾಕಾಲದ ಪೀಠ ಹೇಳಿದೆ. ಹಾಗೆಯೇ ಇಡಿ ಪ್ರಸ್ತುತಪಡಿಸಿದ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ ಎಂಬ ವಿಚಾರಣಾ ನ್ಯಾಯಾಲಯದ ಅಭಿಪ್ರಾಯವನ್ನು ಹೈಕೋರ್ಟ್ ಟೀಕಿಸಿದೆ. “ಈ ತಾರ್ಕಿಕತೆಯನ್ನು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲ” ಎಂದು ಹೇಳಿದೆ.
“ವಿಚಾರಣಾ ನ್ಯಾಯಾಲಯದ ಅವಲೋಕನವು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲ. ವಿಚಾರಣಾ ನ್ಯಾಯಾಲಯವು ಈ ಪ್ರಕರಣದಲ್ಲಿ ಸಂಪೂರ್ಣವಾಗಿ ಗಮನಕೊಟ್ಟಿಲ್ಲ” ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.
ಇದನ್ನು ಓದಿದ್ದೀರಾ? ಕೇಜ್ರಿವಾಲ್ ಜಾಮೀನಿಗೆ ದೆಹಲಿ ಹೈಕೋರ್ಟ್‌ನ ತಡೆಯಾಜ್ಞೆಯನ್ನು ‘ಅಸಹಜʼ ಎಂದ ಸುಪ್ರೀಂ
“ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 45ರ ಅವಳಿ ಷರತ್ತುಗಳನ್ನು ರಜೆಯ ನ್ಯಾಯಾಧೀಶರು ಸಾಕಷ್ಟು ಚರ್ಚಿಸಿಲ್ಲ. ಆದರೆ ಈ ನ್ಯಾಯಾಲಯದ ಸಮನ್ವಯ ಪೀಠವು ಇಡಿ ಕಡೆಯಿಂದ ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿದೆ. ವಿಚಾರಣಾ ನ್ಯಾಯಾಲಯವು ವ್ಯತಿರಿಕ್ತವಾದ ತೀರ್ಮಾನವನ್ನು ಮಾಡಬಾರದು” ಎಂದು ನ್ಯಾಯಮೂರ್ತಿ ಜೈನ್ ಹೇಳಿದರು.
ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಜಾಮೀನಿನ ಮೇಲೆ ದೆಹಲಿ ಹೈಕೋರ್ಟ್ ವಿಧಿಸಿದ ಮಧ್ಯಂತರ ತಡೆಯಾಜ್ಞೆಯ ವಿರುದ್ಧ ಸಲ್ಲಿಸಿದ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠವು ಸೋಮವಾರ ಇದು ‘ಅಸಹಜ’ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಹೈಕೋರ್ಟ್‌ನಿಂದ ಜಾಮೀನಿಗೆ ತಡೆ: ಸುಪ್ರೀಂ ಮೊರೆ ಹೋದ ಕೇಜ್ರಿವಾಲ್
ಜಾರಿ ನಿರ್ದೇಶನಾಲಯದ ಅರ್ಜಿಯ ತೀರ್ಪು ಪ್ರಕಟಿಸುವವರೆಗೆ ಅರವಿಂದ್ ಕೇಜ್ರಿವಾಲ್ ಅವರ ಬಿಡುಗಡೆಗೆ ಹೈಕೋರ್ಟ್ ತಡೆ ನೀಡಿದ ನಂತರ ಅರವಿಂದ್ ಕೇಜ್ರಿವಾಲ್ ಭಾನುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಆದರೆ ಈ ಹಂತದಲ್ಲಿ ಯಾವುದೇ ಆದೇಶವನ್ನು ಪ್ರಕಟಿಸುವುದು ಸಮಸ್ಯೆಗೆ ಪೂರ್ವಾಗ್ರಹ ಪಡಿಸಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ತಿಳಿಸಿತ್ತು.
#WATCH | ASG SV Raju, representing the Enforcement Directorate, says, “The High Court has appreciated our arguments and has stayed the order of bail in favour of Mr Kejriwal…” https://t.co/GtQcuYlZUx pic.twitter.com/ySwrvQ8r0K
— ANI (@ANI) June 25, 2024