ಹುಟ್ಟುವ ಮೊದಲು ಎಲ್ಲಿದ್ದೆ ನೀನು
ಯಾರಿಗೂ ಗೊತ್ತಿಲ್ಲ
ಸತ್ತ ಮೇಲೆ ಎತ್ತ ಹೋದೆ
ಯಾರಿಗೂ ಗೊತ್ತಿಲ್ಲ
ಹುಟ್ಟಿನಿಂದ ಚಟ್ಟದವರೆಗೂ
ಇರುವುದೊಂದೇ ಜೀವ
ಇರುವುದೊಂದೇ ಬದುಕು
ಅದ ಸಾರ್ಥಕ ಮಾಡಿಕೊ ಕಮಲಾಪ್ರಿಯ
…ಎಂದು ಬರೆದ ಹಿರಿಯ ಲೇಖಕಿ, ಅಸಾಧಾರಣ ಸಾಧಕಿ, ನೇರ ದಿಟ್ಟ ನಿಲುವಿನ ಕಮಲಾ ಹಂಪನಾ ಅವರು 22-06-2024ರಂದು ತಮ್ಮ 88ನೇ ವಯಸ್ಸಿನಲ್ಲಿ ಚಿರನಿದ್ರೆಗೆ ಸಂದಿದ್ದಾರೆ. ಸಾವಿನಲ್ಲೂ ಅವರು ನಂಬಿದ್ದ ತತ್ವ ಸಿದ್ಧಾಂತಗಳಿಗೆ ಧಕ್ಕೆಯಾಗದಂತೆ ಅವರು ಪ್ರೀತಿಸಿ ಮದುವೆಯಾದ ಪತಿ ಹಂ.ಪ.ನಾಗರಾಜಯ್ಯ, ಮಕ್ಕಳು ಎಚ್ ಎನ್ ಆರತಿ, ರಾಜಶ್ರೀ ಹಾಗೂ ಕುಟುಂಬವರ್ಗದವರು ರಾಮಯ್ಯ ಆಸ್ಪತ್ರೆಗೆ ಕಮಲಾ ಅವರ ದೇಹದಾನ ಮಾಡಿದ್ದಾರೆ.
ಸಂಶೋಧನಾ ಕ್ಷೇತ್ರಕ್ಕೆ ಅದರಲ್ಲಿಯೂ ಜೈನಧರ್ಮ ಜೈನ ಸಾಹಿತ್ಯ, ಜೈನ ಮಹಿಳಾ ಪರಂಪರೆ ಮೊದಲಾದವುಗಳನ್ನು ಕುರಿತ ಅಧ್ಯಯನಗಳಿಗೆ ಕಮಲಾ ಹಂಪನಾ ಅವರ ಕೊಡುಗೆ ಬಹಳ ಮಹತ್ವದ್ದು. ಇದಲ್ಲದೆ ಹಳಗನ್ನಡ ಸಾಹಿತ್ಯ, ಜೈನಧರ್ಮ ಮತ್ತು ಪ್ರಾಕೃತ ಸಾಹಿತ್ಯ ಮೊದಲಾದವುಗಳ ಬಗ್ಗೆ ಅಧಿಕೃತ ಮಾಹಿತಿ ನೀಡಬಲ್ಲ ಅಗ್ರಗಣ್ಯ ಮಹಿಳಾ ಸಂಶೋಧಕರಾಗಿ ಕಮಲಾ ಹಂಪನಾ ಅವರ ಹೆಸರು ನೆಲೆಯೂರಿದೆ.
ಈ ಸಮಾಜ, ಸಾಹಿತ್ಯ, ಸಂಸ್ಕೃತಿಗಳಿಗೆ ಸ್ತ್ರೀಯರು ನೀಡಿದ ಕೊಡುಗೆಗಳ ಬಗ್ಗೆ ತಾರತಮ್ಯ ನೀತಿ ಹಾಗೂ ಅನ್ಯಾಯಗಳು ನಡೆದಾಗ ಅದನ್ನು ಕಮಲಾಹಂಪನಾ ಅವರು ಉಗ್ರವಾಗಿ ಖಂಡಿಸಿ ತಮ್ಮ ಸಂಶೋಧನಾತ್ಮಕ ಅಧ್ಯಯನಗಳ ನೆರವಿನಿಂದ ಅಂತಹ ಮಹಿಳೆಯರಿಗೆ ನ್ಯಾಯಸಮ್ಮತವಾದ ಸ್ಥಾನ ದೊರಕಿಸಿದ್ದಾರೆ ಎಂಬುದನ್ನೂ ಸಹ ಇಲ್ಲಿ ನಾವು ಸ್ಮರಿಸಬೇಕಾಗಿದೆ. ಕಮಲಾ ಹಂಪನಾ ಅವರ ಪ್ರಯತ್ನದಿಂದಾಗಿಯೇ ಕರ್ನಾಟಕ ಸರ್ಕಾರವು ಲೇಖಕಿಯರಿಗಾಗಿ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ಪ್ರಾರಂಭಿಸಿತು. ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಅವರು ನಿರಂತರ ಹೋರಾಟ ನಡೆಸಿ ಯಶಸ್ವಿಯಾದರು. ವಿಸ್ಮೃತಿಗೆ ಈಡಾಗಿದ್ದ ಕಡಲ ತೀರದ ರಾಣಿ ಅಬ್ಬಕ್ಕದೇವಿಯ ಕೊಡುಗೆಗಳನ್ನು ಕನ್ನಡದ ಜನತೆಗೆ ಮತ್ತೆ ನೆನಪಿಸಿ ಪ್ರತಿ ವರ್ಷವೂ ಆಕೆಯ ಉತ್ಸವ ನಡೆಸುವುದಕ್ಕೆ, ಸ್ಮಾರಕ ಸ್ಥಾಪನೆಗೆ, ಇತಿಹಾಸದ ಪುನಾರಚನೆಗೆ ಅವರು ಕಾರಣರಾದರು. ನಾಡು ನುಡಿಗೆ ಸಂಬಂಧಿಸಿದ ಇಂತಹ ನೂರಾರು ಹೋರಾಟಗಳನ್ನು ನಡೆಸಿದ ಅನನ್ಯ ವ್ಯಕ್ತಿಯಾಗಿ ಅವರ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.
ಬಯಲು ಸೀಮೆಯಲ್ಲಿ ನಾಯಕರು(ಬೇಡರು) ಎಂದು ಕರೆಯಲಾಗುವ ಬುಡಕಟ್ಟು ಸಮುದಾಯದಲ್ಲಿ ಹುಟ್ಟಿ ಬೆಳೆದ ಕಮಲಾ ಹಂಪನಾರವರು ಪ್ರತಿಭೆ ಎಂಬುದು ಯಾವುದೇ ಜಾತಿ ಧರ್ಮದ ಸ್ವತ್ತಲ್ಲ ಎಂಬುದನ್ನು ಸಾಬೀತುಮಾಡಿದರು. ನನ್ನ ಓದು ನನ್ನ ಗುರಿ ಎಂಬ ಧ್ಯೇಯದೊಂದಿಗೆ ಮುನ್ನಡೆದ ಅವರು ಎಂದಿಗೂ ತಮ್ಮ ಗುರಿಯಿಂದ ವಿಮುಖರಾಗಲಿಲ್ಲ. ಹುಟ್ಟಿದ ಸಮಾಜವನ್ನು, ಜೀವಕೊಟ್ಟ ಧರ್ಮವನ್ನು ಎಂದಿಗೂ ಮರೆಯಬಾರದು. ನನ್ನನ್ನು ಹೆತ್ತ ಧರ್ಮ ಕಾಪಾಡಿದ ಧರ್ಮ ಒಂದು ಕಡೆ, ನನ್ನನ್ನು ಬೆಳೆಸಿದ್ದ ಧರ್ಮ ಇನ್ನೊಂದು ಕಡೆ ಎಂದು ಹೇಳುತ್ತಿದ್ದ ಕಮಲಾ ಮಾನವ ಜಾತಿ ತಾನೊಂದೆ ವಲಂ ಎಂಬ ಪಂಪನ ನುಡಿಯನ್ನು ಹಾಗೂ ಕುವೆಂಪುರವರ ವಿಶ್ವ ಮಾನವ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಬೆಳೆದವರು.
ನನ್ನ ಭಾಷೆ ಕನ್ನಡ, ಕನ್ನಡದಲ್ಲಿ ನಾನು ಜೀವಿಸುತ್ತೇನೆ, ಇದು ನನ್ನ ಜೀವನದ ಬದ್ಧತೆ ನನ್ನ ಅಂತಿಮ ಗುರಿ ಎಂದು ಪ್ರತಿಯೊಂದು ವೇದಿಕೆಯಲ್ಲೂ ತಮ್ಮ ಕಂಚಿನ ಕಂಠದಿಂದ, ನಿರರ್ಗಳವಾದ ಮಾತಿನಿಂದ ಸಭಿಕರ ಮನವನ್ನು ಸೂರೆಗೈಯುತ್ತಿದ್ದರು. ಕಮಲಾ ಅವರು ಚಿಕ್ಕವರು ದೊಡ್ಡವರು ಎಂದು ಭೇದವೆಣಿಸದೆ ಪ್ರತಿಯೊಬ್ಬರನ್ನು ಆತ್ಮೀಯತೆಯಿಂದ ಮಾತಾಡಿಸುತ್ತಿದ್ದರು. 88ರ ವಯಸ್ಸು ಎಂದಿಗೂ ಅವರ ನಡೆನುಡಿಯಲ್ಲಿ ಇಣುಕಿದ್ದು ಕಂಡಿಲ್ಲ.
ಲೇಖಕಿ, ಅಧ್ಯಾಪಕಿ, ಸಂಶೋಧಕಿ, ನಾಡುನುಡಿ ಹಾಗೂ ಮಹಿಳಾಪರ ಹೋರಾಟಗಾರ್ತಿಯಾಗಿ ಕಮಲಾ ತಾವು ಒಪ್ಪಿಕೊಂಡ ಪ್ರತಿಯೊಂದು ಕೆಲಸವನ್ನು ಸಮಾನ ಆಸಕ್ತಿ, ಉತ್ಸಾಹ, ಶ್ರದ್ಧೆ, ಪರಿಶ್ರಮಗಳಿಂದ ನಿರ್ವಹಿಸಿ ಈ ಬದುಕಿಗೆ ವಿದಾಯ ಹೇಳಿದ್ದಾರೆ. ಈ ಅನನ್ಯ ಚೇತನಕ್ಕೆ ಅಂತಿಮ ನಮನಗಳು.

ಡಾ ಕೆ ಆರ್ ಸಂಧ್ಯಾ ರೆಡ್ಡಿ
ಹಿರಿಯ ಲೇಖಕಿ, ಅನುವಾದಕಿ