ಟೀಂ ಇಂಡಿಯಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಕ್ತರ್ ಭಾರತ ತಂಡವನ್ನು ಶ್ಲಾಘಿಸಿದ್ದಾರೆ.
ತಮ್ಮದೇ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿರುವ ಅಕ್ತರ್, ಭಾರತದ ಸ್ಪಿನ್ನರ್‌ಗಳ ವಿರುದ್ಧ ಆಡುವುದು ಅಷ್ಟು ಸುಲಭವಲ್ಲ. ಅಷ್ಟಕ್ಕೂ ಇಂಗ್ಲೆಂಡ್ ಆಟಗಾರರಿಗೆ ಸ್ಪಿನ್ ಆಡುವುದಕ್ಕೇ ಬರುವುದಿಲ್ಲ. ಆದರೆ, ಭಾರತೀಯ ಆಟಗಾರರು ಎದುರಾಳಿ ತಂಡದ ಸ್ಪಿನ್ ಅನ್ನು ಎದುರಿಸಲು ಸಮರ್ಥರಿದ್ದಾರೆ. ರೋಹಿತ್ ಶರ್ಮಾ ಕೂಡ ಸಮರ್ಥರು. ಇವರು ಅದಿಲ್ ರಶೀದ್ ಬೌಲಿಂಗ್‌ನಲ್ಲಿ ಲೀಲಾಜಾಲವಾಗಿ ಆಡುತ್ತಾರೆ. ಗಯಾನದ ಪಿಚ್ ವೇಗಿಗಳಿಗೆ ಉಪಯುಕ್ತವಲ್ಲ. ಹೆಚ್ಚು ಬೌನ್ಸ್ ಆಗುತ್ತಿತ್ತು. ತುಂಬ ತೇವವಿದ್ದ ಕಾರಣ ವೇಗಿಗಳಿಗೆ ಕಷ್ಟವಾಗುತ್ತಿತ್ತು ಎಂದಿದ್ದಾರೆ.
ನೀವು ಮೊದಲು ಬ್ಯಾಟ್ ಮಾಡಿ 150 ರನ್ ಸ್ಕೋರ್ ಮಾಡಿದ್ದರೆ ಭಾರತ ತಂಡವನ್ನು ಒತ್ತಡಕ್ಕೆ ಸಿಲುಕಿಸಬಹುದಿತ್ತು. ಪಿಚ್ ಕೆಲವೊಂದು ಬಾರಿ ಹೊಂದಾಣಿಕೆಯಾಗಬಹುದು. ಆದರೆ ಬೌಲಿಂಗ್ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರು ಅಚಲವಾಗಿದ್ದರು ಎಂದು ಶೋಯಬ್ ತಿಳಿಸಿದ್ದಾರೆ.
“ಭಾರತ ಈ ಬಾರಿ ಟಿ20 ವಿಶ್ವಕಪ್ ಎತ್ತಿಹಿಡಿಯಲು ಅರ್ಹವಾಗಿದೆ. ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋತಿದ್ದಕ್ಕೆ ನನಗೆ ಬೇಸರವಾಗಿತ್ತು. ಅವರು ಸೋತರೂ ಗೆಲ್ಲುವುದಕ್ಕೆ ಅರ್ಹವಾಗಿದ್ದರು” ಎಂದು ಶೋಯಬ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಿರಿಯ ಕ್ರಿಕೆಟಿಗ ಜಿ ಆರ್ ವಿಶ್ವನಾಥ್‌ಗೆ ಗೌರವ ಡಾಕ್ಟರೇಟ್
“ರೋಹಿತ್ ಶರ್ಮಾ ಒಬ್ಬ ಅತ್ಯುತ್ತಮ ಆಟಗಾರ. ಈತನ ಕ್ರಿಕೆಟ್ ವೃತ್ತಿ ಉತ್ತಮವಾಗಿ ಅಂತ್ಯವಾಗಲಿದೆ. ಆದರೆ ಕಳೆದ ವರ್ಷ ಕೊನೇ ಕ್ಷಣದಲ್ಲಿ ಏಕದಿನ ವಿಶ್ವಕಪ್ ಎತ್ತಿ ಹಿಡಿಯಲು ಸಾಧ್ಯವಾಗಿದ್ದರೆ ಎರಡು ಕಪ್ ಎತ್ತಿ ಹಿಡಿದ ಶ್ರೇಯ ಅವರದಾಗುತ್ತಿತ್ತು” ಎಂದು ಅಕ್ತರ್ ತಿಳಿಸಿದರು.
ಜೂನ್ 27 ರಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು 68 ರನ್‌ಗಳ ಭಾರಿ ಅಂತರದಿಂದ ಸೋಲಿಸಿತ್ತು. ಟೀಂ ಇಂಡಿಯಾ ನೀಡಿದ 171 ರನ್‌ಗಳ ಸವಾಲನ್ನು ಬೆನ್ನಟ್ಟಿದ ಆಂಗ್ಲರು 103 ರನ್‌ಗಳಿಗೆ ಆಲೌಟ್ ಆದರು. ಸ್ಪಿನ್ನರ್‌ಗಳಾದ ಅಕ್ಸರ್ ಪಟೇಲ್ ಹಾಗೂ ಕುಲ್‌ದೀಪ್ ಯಾದವ್ ತಲಾ 3 ಮೂರು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಜೂನ್ 29 ರಂದು ಶನಿವಾರ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
