10 ವರ್ಷದ ಬಳಿಕ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಅರ್ಹತೆ ಪಡೆದಿದ್ದು, ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಲೆಜೆಂಡರಿ ಕಪಿಲ್ ದೇವ್ ಅವರು ಟೀಂ ಇಂಡಿಯಾ ಮತ್ತು ನಾಯಕ ರೋಹಿತ್ ಶರ್ಮಾ ಅವರನ್ನು ಹೊಗಳಿದ್ದಾರೆ.
2007ರಲ್ಲಿ ಭಾರತ ತಂಡ ವಿಶ್ವಕಪ್ ವಿಜೇತವಾಗಿತ್ತು. ಇದೀಗ, ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ. ಒಟ್ಟಾರೆಯಾಗಿ ಮೂರನೇ ಸಲ ಫೈನಲ್ಗೇರಿದ ಸಾಧನೆ ಮಾಡಿದೆ. 2014ರಲ್ಲಿ ಭಾರತ ರನ್ನರ್ ಅಪ್ ಆಗಿತ್ತು.
ವೆಸ್ಟ್ಇಂಡೀಸ್ನ ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಜೂನ್ 27ರಂದು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು 68 ರನ್‌ಗಳಿಂದ ಭಾರತ ಸೋಲಿಸಿದೆ. ಟಾಸ್ ಸೋತರೂ ಭಾರತವು ಇಂಗ್ಲೆಂಡ್ ಅನ್ನು ಸಂಪೂರ್ಣವಾಗಿ ಆಲೌಟ್ ಮಾಡಿತು. 10 ವರ್ಷಗಳ ಬಳಿಕ ಇಂಡಿಯಾ ತಂಡ ಟಿ-20 ಫೈನಲ್ ತಲುಪಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ 1983ರಲ್ಲಿ ಭಾರತದ ಚೊಚ್ಚಲ ಏಕದಿನ ವಿಶ್ವಕಪ್ ವಿಜೇತ, ಮಾಜಿ ನಾಯಕ ಕಪಿಲ್ ದೇವ್ ‘ಅದ್ಭುತ‘ ಎಂದು ಕರೆದಿದ್ದಾರೆ. ಇದುವರೆಗಿನ ಪ್ರಯಾಣಕ್ಕಾಗಿ ಎಲ್ಲ ಆಟಗಾರರಿಗೆ ಶುಭಾಶಯಗಳು, ರೋಹಿತ್ ನಾಯಕತ್ವದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? T20 ವಿಶ್ವಕಪ್ | ಸ್ಪಿನ್ನರ್ಸ್‌ಗಳ ಮೋಡಿಗೆ ಇಂಗ್ಲೆಂಡ್ ‘ಬಲಿ’; 10 ವರ್ಷಗಳ ಬಳಿಕ ಫೈನಲ್‌ಗೆ ಟೀಮ್ ಇಂಡಿಯಾ
“ಸ್ಪರ್ಧೆಯಲ್ಲಿ ಭಾರತವು ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಇದು ಅದ್ಭುತವಾಗಿದೆ. ಯಾರಾದರೂ ಫೈನಲ್ಗೆ ಬಂದರೆ ಅವರು ಎಷ್ಟು ಅದ್ಭುತವಾಗಿ ಆಡಿದ್ದಾರೆ ಎಂದು ನೀವು ಹೇಳುತ್ತೀರಿ. ಆಗ ಒಬ್ಬರ ಹೆಸರಲ್ಲ ಇಡೀ ತಂಡ ತೆಗೆದುಕೊಳ್ಳುತ್ತೇವೆ. ನಾನು ಯಾವಾಗಲೂ ತಂಡವನ್ನು ನಂಬುತ್ತೇನೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಅದ್ಭುತವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ” ಎಂದು ಕಪಿಲ್ ದೇವ್ ತಿಳಿಸಿದ್ದಾರೆ.
“ರೋಹಿತ್ ಶರ್ಮಾ ಅವರು ಮೈದಾನದಲ್ಲಿ ಎಂತಹ ಸನ್ನಿವೇಶದಲ್ಲೂ ವಿರಾಟ್ ಕೊಹ್ಲಿ ರೀತಿ ಹುಚ್ಚೆದ್ದು ಕುಣಿಯುವುದಿಲ್ಲ. ಅವರು ತಮ್ಮ ಸ್ಥಿಮಿತವನ್ನು ತುಂಬಾ ಚೆನ್ನಾಗಿ ಅರಿತುಕೊಂಡಿದ್ದಾರೆ. ಅದಕ್ಕೆ ತಕ್ಕಂತೆಯೇ ಮೈದಾನದಲ್ಲಿ ವರ್ತಿಸುತ್ತಾರೆ. ಆತನಿಗಿಂತ ಉತ್ತಮ ಆಟಗಾರ ತಂಡದಲ್ಲಿ ಮತ್ತೊಬ್ಬರಿಲ್ಲ” ಎಂದಿದ್ದಾರೆ.
“ಅನೇಕ ದೊಡ್ಡ ಆಟಗಾರರು ಟೀಮ್ ಇಂಡಿಯಾಕ್ಕೆ ಬಂದಿದ್ದಾರೆ, ಅವರು ತಮ್ಮ ವೃತ್ತಿಜೀವನದ ಬಗ್ಗೆ ಕಾಳಜಿ ವಹಿಸಿದ್ದಾರೆ. ಅವರು ಅದೇ ದೃಷ್ಟಿಕೋನದಿಂದ ನಾಯಕತ್ವವನ್ನೂ ಮಾಡಿದ್ದಾರೆ. ಆದರೆ ರೋಹಿತ್ ಈ ವಿಷಯದಲ್ಲಿ ಎಲ್ಲರಿಗಿಂತಲೂ ಭಿನ್ನರಾಗಿದ್ದಾರೆ. ಏಕೆಂದರೆ ಅವರು ಇಡೀ ತಂಡವನ್ನು ಸಂತೋಷವಾಗಿರಿಸುತ್ತಾರೆ” ಎಂದಿದ್ದಾರೆ.
ಜೂನ್ 29ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯಲಿರುವ ಫೈನಲ್ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಭಾರತ ಮೂರನೇ ಬಾರಿಗೆ ಟಿ20 ವಿಶ್ವಕಪ್ನ ಫೈನಲ್ಗೆ ಅರ್ಹತೆ ಪಡೆದಿದ್ದರೆ, ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಅರ್ಹತೆ ಪಡೆದಿದೆ. ಈ ಬಾರಿ ಭಾರತ ತಂಡಕ್ಕೆ ಫೈನಲ್ನಲ್ಲಿ ದಾಖಲೆ ಸೃಷ್ಟಿಸುವ ಅವಕಾಶವಿದೆ.