ಶಿಕಾರಿಪುರ ತಾಲೂಕು ಉಪನೋಂದಣಾಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಅಗತ್ಯ ದಾಖಲಾತಿಗಳನ್ನು ಪಡೆಯದೇ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಇನಾಂ ಭೂಮಿಯನ್ನು ಮೂರನೇ ವ್ಯಕ್ತಿಗಳಿಗೆ ನೋಂದಣಿ ಮಾಡಿರುವುದುನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ವೇಳೆ ಸಚಿವರಿಗೆ ಮನವಿ ಸಲ್ಲಿಸಿದ ದಸಂಸ ಕಾರ್ಯಕರ್ತರು, ನಕಲಿ ದಾಖಲೆ ಸೃಷ್ಟಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
“ಶಿಕಾರಿಪುರ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಸರ್ವೆ ನಂ. 134ರ 4-6 ಗುಂಟೆ ಜಾಗಕ್ಕೆ ಸಂಬಂಧಿಸಿದಂತೆ ಸದರಿ ಜಮೀನು ಗೌಡ ಇನಾಂ ಭೂಮಿಯಾಗಿದ್ದು, ಸದರಿ ಭೂಮಿಯನ್ನು ಗ್ರಾಮದ ಮೂರು ಕುಟುಂಬದವರು ಉಳಿಮೆ ಮಾಡುತ್ತಿದ್ದಾರೆ” ಎಂದರು.
“ಗೌಡ ಇನಾಂ ಭೂಮಿಯ ಪಹಣಿ ಕಾಲಂ 9ರಲ್ಲಿ ಗೌರಮ್ಮ ಕೋಂ ಕೊಟ್ರಪ್ಪ ಎಂದು ನಮೂದಾಗಿದ್ದು, ಸದರಿ ಗೌರಮ್ಮ ಸುಮಾರು 30 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಆದರೆ ಮಲ್ಲೇನಹಳ್ಳಿ ಗ್ರಾಮದ ಶಿವಪುತ್ರಪ್ಪ ಬಾರ್ಕಿ ಬಿನ್ ನಿಂಗಪ್ಪ ಹಾಗೂ ಶಿಕಾರಿಪುರದ ಉಪ ನೋಂದಣಾಧಿಕಾರಿ ದಿವ್ಯಶ್ರೀ ಒಗ್ಗೂಡಿ ತಾಳಗುಂದ ಹೋಬಳಿ ಚಿಕ್ಕಮಾಗಡಿ ಗ್ರಾಮದ ಗೌರಮ್ಮ ಕೋಂ ಕೊಟ್ರಪ್ಪ ಯಾನೆ ಕೊಟ್ರಪ್ಪ ಗೌಡ ಎಂಬ ನಕಲು ವ್ಯಕ್ತಿಯನ್ನು ಸೃಷ್ಟಿಸಿ ಸದರಿ ಜಮೀನಿಗೆ ಸಂಬಂಧಿಸಿದ ಎನ್‌ಟಿಸಿ, ಆರ್‌ಆರ್-5&6 ಮತ್ತು ವಂಶವೃಕ್ಷ ದಾಖಲೆಗಳನ್ನು ಪಡೆಯದೇ ಸದರಿ ಜಮೀನನ್ನು ಕಬಳಿಸುವ ಉದ್ದೇಶದಿಂದ ಎಸ್‌ಆರ್ ನಂ. ಎಸ್‌ಪಿ ಬುಕ್ ನಂ. 01-1928/2022-23ರ 2023ರ ಜುಲೈ 12ರಂದು ಕ್ರಯಪತ್ರ ನೋಂದಣಿ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿದೆ” ಎಂದು ಆರೋಪಿಸಿದರು.
“ನೋಂದಣಿ ನಂತರ ಶಿಕಾರಿಪುರ ತಹಶೀಲ್ದಾರ್ ಮಲ್ಲೇಶ ಪೂಜಾರ್, ರಾಜಸ್ವ ನಿರೀಕ್ಷಕ ಮೇಘರಾಜ್, ಗ್ರಾಮ ಆಡಳಿತಾಧಿಕಾರಿ ನಾಗರಾಜ ಹಾಗೂ ಶ್ರೀಧರ, ಗ್ರಾಮ ಸಹಾಯಕ ನಾಗರಾಜ ಮತ್ತು ಬಸವರಾಜ ಸೇರಿದಂತೆ ಇತರರು ಹಣದ ಆಮಿಷಕ್ಕೆ ಒಳಗಾಗಿ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಸರ್ಕಾರದ ಗೌಡ ಇನಾಂ ಭೂಮಿಯನ್ನು ಕಾನೂನಿಗೆ ವಿರುದ್ಧವಾಗಿ ಉಳುಮೆ ಮಾಡುತ್ತಿರುವ ರೈತರನ್ನು ಹೊರತುಪಡಿಸಿ ಶಿವಪುತ್ರಪ್ಪ ಬಿನ್ ನಿಂಗಪ್ಪ ಎಂಬುವರ ಹೆಸರಿಗೆ ಖಾತೆ ಪಹಣಿಯನ್ನು ದಾಖಲು ಮಾಡಿದ್ದಾರೆ. ಆದ್ದರಿಂದ ತಾವುಗಳು ಈ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಿ ಸದರಿ ಸರ್ವೇ ನಂಬರಿನ ಎಮ್‌ಆರ್ ನಂ ಹೆಚ್ 02/2023-24 ಮತ್ತು ಎಸ್‌ಆರ್ ನಂ. ಎಸ್‌ಪಿ ಬುಕ್ ನಂ. 01-1928/2022-23ರ ಜುಲೈ 12ರಂದು ನೋಂದಣಿಯಾದ ಕ್ರಯಪತ್ರವನ್ನು ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಹಾಡಹಗಲೇ ದರೋಡೆ; ಮನೆಯಲ್ಲಿದ್ದ 45 ಗ್ರಾಂ ಚಿನ್ನ, ನಗದು ಕಳ್ಳತನ
ರಾಜ್ಯ ವಿಭಾಗೀಯ ಸಂಚಾಲಕ ಜಿ ಗುರುರಾಜ್ ಸೊರಬ ಸೇರಿದಂತೆ ಬಹುತೇಕ ಕಾರ್ಯಕರ್ತರು ಇದ್ದರು.
