ಶನಿವಾರ ಜೂನ್ 29ರಂದು ಭಾರತ ಕ್ರಿಕೆಟ್ ತಂಡ ಬಾರ್ಬೊಡೋಸ್ನ ಕೆನ್ಸಿಂಗ್ಸ್ಟನ್ ಓವಲ್ನಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಹೊಸ ಅಧ್ಯಾಯ ಬರೆದಿದೆ. ಟೂರ್ನಿಯುದ್ದಕ್ಕೂ ಸೋಲನ್ನು ಕಾಣದಿದ್ದ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳಿಂದ ಮಣಿಸಿ ಎರಡನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡಿದೆ. 10 ವರ್ಷಗಳ ನಂತರ ಏಷ್ಯಾ ಖಂಡದ ತಂಡವೊಂದು ಐಸಿಸಿ ಟ್ರೋಫಿಯ ಬರವನ್ನು ನೀಗಿಸಿಕೊಂಡಿದೆ. 2014ರಲ್ಲಿ ಶ್ರೀಲಂಕಾ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ನಂತರ ಏಷ್ಯಾ ತಂಡಗಳ್ಯಾವು ಚಾಂಪಿಯನ್ ಆಗಿರಲಿಲ್ಲ.
27 ಎಸೆತಗಳಲ್ಲಿ 5 ಸಿಕ್ಸರ್, 2 ಬೌಂಡರಿಗಳೊಂದಿಗೆ 52 ರನ್ ಗಳಿಸಿ ಅಮೋಘ ಆಟವಾಡುತ್ತಾ ತಂಡವನ್ನು ಗೆಲುವಿನ ಕಡೆ ಕರೆದುಕೊಂಡು ಹೋಗುತ್ತಿದ್ದ ಹೆನ್ರಿಚ್ ಕ್ಲಾಸೆನ್, ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ 16.1ನೇ ಓವರ್ನಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ಗೆ ಕ್ಯಾಚ್ ನೀಡಿ ಔಟಾದ ನಂತರ ಪಂದ್ಯದ ಗತಿಯೇ ಬದಲಾಯಿತು.
ಆದರೂ ಮತ್ತೊಬ್ಬ ಸ್ಪೋಟಕ ಹಾಗೂ ಅನುಭವಿ ಆಟಗಾರ ಡೇವಿಡ್ ಮಿಲ್ಲರ್ ಕ್ರೀಸಿನಲ್ಲಿದ್ದಿದ್ದು ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವಿನ ಭರವಸೆಯಿತ್ತು. ಕೊನೆಯ ಓವರ್ನಲ್ಲಿ ಹರಿಣಗಳ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲು 16 ರನ್ಗಳು ಬೇಕಾಗಿತ್ತು. ಆಗ ಕ್ರೀಸಿನಲ್ಲಿದ್ದ ಮಿಲ್ಲರ್, ಹಾರ್ದಿಕ್ ಪಾಂಡ್ಯನ ಮೊದಲ ಎಸೆತವನ್ನು ಭರ್ಜರಿಯಾಗಿ ಲಾಂಗ್ ಆಫ್ ಕಡೆಗೆ ಬೀಸಿದರು. ಇನ್ನೇನು ಚಂಡು ಸಿಕ್ಸರ್ ಗೆರೆ ದಾಟಬೇಕೂ ಅನ್ನುವಷ್ಟರಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ 33 ವರ್ಷದ ಸೂರ್ಯ ಕುಮಾರ್ ಯಾದವ್ ಸಿಕ್ಸರ್ ಹೋಗುವ ಬಾಲನ್ನು ತಡೆದು ಅದ್ಭುತವಾಗಿ ಕ್ಯಾಚ್ ಹಿಡಿದರು. ಈ ಒಂದು ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಗಲು ವರದಾನವಾಯಿತು.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ ಫೈನಲ್ | ರೋಚಕ ಹಣಾಹಣಿಯಲ್ಲಿ ಟೀಮ್ ಇಂಡಿಯಾ ‘ಚಾಂಪಿಯನ್’
ಸೂರ್ಯ ಕುಮಾರ್ ರೀತಿಯಲ್ಲಿಯೇ 1983ರಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿದ ಸಂದರ್ಭದಲ್ಲಿ ಅಂದು ಭಾರತ ತಂಡದ ಸಾರಥ್ಯ ವಹಿಸಿದ್ದ ಕಪಿಲ್ ದೇವ್ ಕೂಡ ಅದ್ಭುತವಾಗಿ ಕ್ಯಾಚ್ ಹಿಡಿದು ಟೀಂ ಇಂಡಿಯಾಗೆ ಟ್ರೋಫಿ ತಂದುಕೊಡಲು ಪ್ರಮುಖ ಕಾರಣಕರ್ತರಾಗಿದ್ದರು. ಸೂರ್ಯ ಕುಮಾರ್ ಕ್ಯಾಚ್ ಕಪಿಲ್ ದೇವ್ ಅವರ ಕ್ಯಾಚ್ಅನ್ನು ನೆನಪಿಸಿದೆ.
1983ರ ಫೈನಲ್ನಲ್ಲಿ ಅಮೋಘವಾಗಿ ಕ್ಯಾಚ್ ಹಿಡಿದಿದ್ದ ಕಪಿಲ್ ದೇವ್
ಇಂಗ್ಲೆಂಡ್ನಲ್ಲಿ ನಡೆದ 1983ರ ಮೂರನೇ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಸತತ ಎರಡು ಬಾರಿ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಫೈನಲ್ನಲ್ಲಿ ಎದುರಾಳಿಯಾಗಿತ್ತು. ಟೀಂ ಇಂಡಿಯಾ ಕೂಡ ಅಮೋಘ ಆಟವಾಡಿ ಇಂಗ್ಲೆಂಡ್, ಪಾಕಿಸ್ತಾನ, ನ್ಯೂಜಿಲೆಂಡ್ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.
ಟಾಸ್ ಗೆದ್ದ ನಾಯಕ ಕ್ಲೈವ್ ಲಾಯ್ಡ್ ಭಾರತಕ್ಕೆ ಬ್ಯಾಟಿಂಗ್ ಆಹ್ವಾನಿಸಿದ್ದರು. 60 ಓವರ್ಗಳ ಪಂದ್ಯದಲ್ಲಿ ಟಿಂ ಇಂಡಿಯಾ 54.4 ಓವರ್ಗಳಲ್ಲಿ ವಿಂಡೀಸ್ ಬೌಲರ್ಗಳ ದಾಳಿಗೆ ಸಿಲುಕಿ 183 ರನ್ಗಳಿಗೆ ಆಲೌಟ್ ಆಗಿತ್ತು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ವೆಸ್ಟ್ ಇಂಡೀಸ್ಗೆ 184 ರನ್ಗಳು ದೊಡ್ಡ ಗುರಿಯಾಗಿರಲಿಲ್ಲ. ಕಪಿಲ್ ದೇವ್ ಬಳಗ ಸೋಲುತ್ತದೆ ಎಂದು ಕ್ರಿಕೆಟ್ ಪ್ರೇಮಿಗಳು ಭಾವಿಸಿದ್ದರು.
ಕಡಿಮೆ ರನ್ಗಳ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ 50 ರನ್ಗಳಾಗುವಷ್ಟರಲ್ಲಿಯೇ 2 ವಿಕೆಟ್ ಕಳೆದು ಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆಗ ತಂಡಕ್ಕೆ ಆಧಾರವಾಗಿ ಕೊಹ್ಲಿ, ರೋಹಿತ್ರಂತೆ ಸ್ಪೋಟಕ ಆಟವಾಡುತ್ತಿದ್ದ ವಿಶ್ವ ವಿಖ್ಯಾತ ದಿಗ್ಗಜ ಬ್ಯಾಟ್ಸ್ಮನ್ ವಿವಿಯನ್ ರಿಚರ್ಡ್ಸ್ ಕೇವಲ 28 ಚೆಂಡುಗಳಲ್ಲಿ 7 ಬೌಂಡರಿಗಳನ್ನು ಬಾರಿಸಿ 33 ರನ್ ಸಿಡಿಸಿದ್ದರು. ತಂಡವನ್ನು ಅಪಾಯದಿಂದ ಪಾರು ಮಾಡಬೇಕು ಎಂದುಕೊಳ್ಳುವಾಗ ಅಂದಿನ ಪಂದ್ಯದ ಗತಿಯನ್ನು ಬದಲಿಸಿದ್ದು ನಾಯಕ ಕಪಿಲ್ ದೇವ್.
ಮದನ್ ಲಾನ್ ಬೌಲಿಂಗ್ನಲ್ಲಿ ವಿವಿಯನ್ ರಿಚರ್ಡ್ಸ್ ಅಮೋಘವಾಗಿ ಬ್ಯಾಟ್ ಬೀಸಿದರು. ಚಂಡು ಸಿಕ್ಸರ್ ಗೆರೆ ದಾಟಬೇಕು ಅನ್ನುವಷ್ಟರಲ್ಲಿ ಸುಮಾರು ದೂರದಿಂದ ಓಡಿಬಂದ ಕಪಿಲ್ ದೇವ್ ಅದ್ಭುತವಾಗಿ ಕ್ಯಾಚ್ ಹಿಡಿದು ರಿಚರ್ಡ್ಸ್ ಅವರನ್ನು ಪೆವಿಲಿಯನ್ಗೆ ಕಳಿಸಿದರು. ಈ ಕ್ಯಾಚ್ ಕೂಡ ಅಂದಿನ ಪಂದ್ಯದ ದಿಕ್ಕನ್ನು ಬದಲಿಸಿತ್ತು. ಒಂದು ವೇಳೆ ಕಪಿಲ್ ಈ ಕ್ಯಾಚನ್ನು ಪಡೆದುಕೊಳ್ಳದಿದ್ದರೆ ಪಂದ್ಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿತ್ತು.
ಅದೇ ರೀತಿ ಮತ್ತೊಬ್ಬ ಸ್ಫೋಟಕ ಆಟಗಾರ, ನಾಯಕ ಕ್ಲೈವ್ ಲಾಯ್ಡ್ ಕ್ಯಾಚನ್ನು ಕಪಿಲ್ ಹಿಡಿದು ಪಂದ್ಯಕ್ಕೆ ಮತ್ತೊಮ್ಮೆ ಆಸರೆಯಾದರು. ಆಗ ಬೌಲಿಂಗ್ ಮಾಡಿದ್ದು ಕರ್ನಾಟಕದ ರೋಜರ್ ಬಿನ್ನಿ. ಇದೇ ರೋಜರ್ ಬಿನ್ನಿ ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ವಿಂಡೀಸ್ಗೆ 184 ರನ್ಗಳ ಸುಲಭ ಸವಾಲನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಭಾರತೀಯ ಬೌಲರ್ಗಳ ಕರಾರುವಕ್ ದಾಳಿಗೆ 52 ಓವರ್ಗಳಲ್ಲಿ 140 ರನ್ಗಳಿಗೆ ಆಲೌಟ್ ಆಗಿ 43 ರನ್ಗಳ ಅಂತರದಲ್ಲಿ ಸೋಲು ಅನುಭವಿಸಿತು. ಕ್ರಿಕೆಟ್ನಲ್ಲಿ ಅಂಬೆಗಾಲಿಡುತ್ತಿದ್ದ ಭಾರತ ಮೊಟ್ಟ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿತ್ತು.
ಮೊಹಿಂದರ್ ಅಮರ್ನಾಥ್, ಮದನ್ ಲಾಲ್ ತಲಾ 3 ವಿಕೆಟ್ ಕಬಳಿಸಿದರೆ, ಬಿಲ್ವಿಂದರ್ ಸಂಧು 2 ಹಾಗೂ ಕಪಿಲ್ ದೇವ್ ಹಾಗೂ ರೋಜರ್ ಬಿನ್ನಿ ತಲಾ ಒಂದು ವಿಕೆಟ್ ಕಿತ್ತು ಗೆಲುವಿನ ರುವಾರಿಗಳಾದರು. ಇನ್ನೊಂದು ಗಮನಾರ್ಹ ವಿಷಯವೆಂದರೆ ಭಾರತ 1983ರಲ್ಲಿ ಟ್ರೋಫಿ ಗೆದ್ದ ದಿನಾಂಕ ಜೂನ್ 25, 2024ರಲ್ಲಿ ಭಾರತ ಎರಡನೇ ಬಾರಿ ಟ್ರೋಫಿ ಗೆದ್ದಿದ್ದು ಜೂ. 29. ಎರಡೂ ಅವಿಸ್ಮರಣೀಯ ಘಟನೆಗಳು ಒಂದೇ ತಿಂಗಳಲ್ಲಿ ಸಂಭವಿಸಿವೆ.