ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಾವಿರಾರು ವಿಡಿಯೋಗಳು ಲೋಕಸಭಾ ಚುನಾವಣೆ ವೇಳೆ ಹೊರಬಂದಿದ್ದವು. ಇದೀಗ, ಅವರ ಅಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ ಎಸಗಿರುವ ಲೈಂಗಿಕ ಕೃತ್ಯವೂ ಬೆಳಕಿಗೆ ಬಂದಿದ್ದು. ಇಬ್ಬರೂ ಬಂಧನದಲ್ಲಿದ್ದಾರೆ. ಅವರ ತಂದೆ ರೇವಣ್ಣ ವಿರುದ್ಧ ಕೂಡ ಅತ್ಯಾಚಾರ, ಅಪಹರಣ ಆರೋಪಗಳಿದ್ದು, ಜಾಮೀನಿನ ಮೇಲೆ ಹೊರಬಂದಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಈವರೆಗೆ ಸುಮಾರು 50 ಮಂದಿ ಸಂತ್ರಸ್ತರನ್ನು ಗುರುತಿಸಿದೆ. ಆರೋಪಿ ಪ್ರಜ್ವಲ್ ವಿರುದ್ಧ ಈವರೆಗೆ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ.
ಪ್ರಜ್ವಲ್ ಲೈಂಗಿಕ ದೌರ್ಜನ್ಯ ಹಗರಣ ಪ್ರಕರಣವು ರಾಜ್ಯ ಮಾತ್ರವಲ್ಲ, ದೇಶದ ಗಮನ ಸೆಳೆದಿದೆ. ದೇಶಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಮಾಧ್ಯಮಗಳು ಕೂಡ ಪ್ರಕರಣದ ಬಗ್ಗೆ ಹೆಚ್ಚು ಸುದ್ದಿ ಪ್ರಸಾರ ಮಾಡುತ್ತಿವೆ. ಆದರೆ, ಮಾಧ್ಯಮಗಳು ತಮ್ಮ ಸುದ್ದಿಗಳಲ್ಲಿ ಬಳಸಲಾದ ಭಾಷೆಯು ಅತ್ಯಂತ ಪ್ರಶ್ನಾರ್ಹವಾಗಿದೆ.
ಪ್ರಜ್ವಲ್ ಕೃತ್ಯಗಳು ಮತ್ತು ತನಿಖೆಗಳ ಬಗ್ಗೆ ವರದಿ ಮಾಡಿದ ಮಾಧ್ಯಮಗಳು, ಪ್ರಕರಣವನ್ನು ‘ಅಶ್ಲೀಲ ವಿಡಿಯೋ’ ಪ್ರಕರಣ, ‘ಪೆನ್‌ಡ್ರೈವ್’ ಪ್ರಕರಣ, ‘ಸೆಕ್ಸ್ ವಿಡಿಯೋ’ ಪ್ರಕರಣ, ‘ಸೆಕ್ಸ್ ಹಗರಣ’ ಎಂಬಿತ್ಯಾದಿ ಟ್ಯಾಗ್ ಜೊತೆ ಪ್ರಕಟಿಸುತ್ತಿವೆ. ಕೆಲವೇ ಕೆಲವು ಮಾಧ್ಯಮಗಳು ಇದನ್ನು ಅತ್ಯಾಚಾರ/ಲೈಂಗಿಕ ದೌರ್ಜನ್ಯ ಪ್ರಕರಣ ಎಂದು ಸರಿಯಾಗಿ ಉಲ್ಲೇಖಿಸಿವೆ.
ಹೆಚ್ಚು ಮಾಧ್ಯಮಗಳು ಬಳಸುವ ಭಾಷೆಯು ಈ ಪ್ರಕರಣದ ಗಂಭೀರ ಸ್ವರೂಪವನ್ನು ತಪ್ಪಾಗಿ ಚಿತ್ರಿಸುವುದಲ್ಲದೆ, ಪ್ರಜ್ವಲ್‌ನ ಅಪರಾಧಗಳನ್ನು ಸರಳೀಕರಿಸುವ ಹಾಗೂ ಅತನ ಕೃತ್ಯಗಳ ವ್ಯಾಪ್ತಿಯನ್ನು ಕಡಿಮೆ ಮಾಡವಂತೆ ಚಿತ್ರಿಸಿವೆ.
ಮಾಧ್ಯಮಗಳ ಮುಖ್ಯಾಂಶಗಳು ನೇರ ಮತ್ತು ಸ್ಪಷ್ಟವಾಗಿರಬೇಕು. ಸುದ್ದಿಗಳಿಗೆ ಸಂಬಂಧಿತ ಮಾಹಿತಿಯನ್ನು ಪಡೆಯಲು ಓದುಗರಿಗೆ ಅವಕಾಶ ನೀಡಬೇಕು. ಹೀಗಾಗಿಯೇ, ಲೈಂಗಿಕ ದೌರ್ಜನ್ಯದ ಹಲವಾರು ರೆಕಾರ್ಡಿಂಗ್‌ಗಳನ್ನು ‘ಸೆಕ್ಸ್ ವೀಡಿಯೊಗಳು’ ಎಂದು ಕರೆಯುವುದು ಅಸಮರ್ಪಕವಾದದ್ದು. ಯಾಕೆಂದರೆ, ಈ ರೀತಿಯ ಟ್ಯಗ್‌ಗಳು ನಿಜವಾಗಿಯೂ ಏನಾಯಿತು ಎಂಬುದನ್ನು ತಪ್ಪಾಗಿ ನಿರೂಪಿಸುತ್ತವೆ.
ಪ್ರಕರಣದ ಕುರಿತು ವರದಿ ಮಾಡಿದ ಕೆಲವು ಸುದ್ದಿ ವಾಹಿನಿಗಳು ಈ ವೀಡಿಯೊಗಳ ಭಾಗಗಳನ್ನು ಸಿನಿಮಾ ಹಾಡುಗಳೊಂದಿಗೆ ಪ್ರಸಾರ ಮಾಡಿದ್ದವೆಂದು TNM ವರದಿ ಮಾಡಿದೆ. ಈ ರೀತಿಯ ವರದಿಗಳು ಪ್ರಕರಣದ ಗಂಭೀರತೆಗೆ ಹಾನಿಕಾರಕವಾಗಿವೆ. ಲೈಂಗಿಕ ದೌರ್ಜನ್ಯದ ಚರ್ಚೆಗಳನ್ನು ಬಿಟ್ಟುಬಿಡುವ ಮಾಧ್ಯಮಗಳು ಪ್ರಜ್ವಲ್ ಅಪರಾಧಗಳನ್ನು ಕೇವಲ ಸಮ್ಮತಿ ಇಲ್ಲದ ವಿಡಿಯೋಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಬಿಂಬಿಸಲು ನೆರವಾಗುತ್ತವೆ.
ಅಶ್ಲೀಲ ವೀಡಿಯೊಗಳು ಅಥವಾ ಲೈಂಗಿಕ ವೀಡಿಯೊಗಳು ಎಂಬ ಟ್ಯಾಗ್‌ಗಳು ವೀಕ್ಷಕರಿಗೆ ಅಥವಾ ಓದುಗರಿಗೆ ಈ ವೀಡಿಯೊಗಳು ಸಮ್ಮತಿಯ ಲೈಂಗಿಕತೆ ಅಥವಾ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಯಾಕೆಂದರೆ, ಈ ಪದಗಳು ಲೈಂಗಿಕ ಹಿಂಸೆ ನಡೆದಿದೆ ಎಂಬುದನ್ನು ಸೂಚಿಸುವುದಿಲ್ಲ. ಅಲ್ಲದೆ, ಆ ವರದಿಗಳಲ್ಲಿ ವೀಡಿಯೊಗಳು ಮಾತ್ರವೇ ಸುದ್ದಿಯ ತಿರುಳಾಗಿರುತ್ತವೆಯೇ ಹೊರತು, ಹಲವಾರು ವರ್ಷಗಳಿಂದ ಮಹಿಳೆಯರ ಮೇಲೆ ಪ್ರಜ್ವಲ್ ನಡೆಸಿದ ಲೈಂಗಿಕ ದೌರ್ಜನ್ಯ ಮತ್ತು ಅಧಿಕಾರದ ಭಯಾನಕ ದುರುಪಯೋಗ ಕಂಡುಬರುವುದಿಲ್ಲ.
ಆತನ ಅಪರಾಧಗಳನ್ನು ತಪ್ಪಾಗಿ ನಿರೂಪಿಸುವುದು ಅಥವಾ ಮೃದು ಭಾಷೆ ಬಳಸುವುದು ಸಾರ್ವಜನಿಕರ ಗ್ರಹಿಕೆಯಲ್ಲಿ ಆತನ ಅಪರಾಧಗಳಿಗೆ ಜರಡಿ ಹಿಡಿದು, ಶುದ್ಧೀಕರಿಸುತ್ತದೆ. ಪ್ರಜ್ವಲ್‌ನ ಅಧಿಕಾರ ದುರುಪಯೋಗದ ನಿಜವಾದ ವ್ಯಾಪ್ತಿ ಹಾಗೂ ಸಂತ್ರಸ್ತರ ಮೇಲಿನ ಆತದ ದೌರ್ಜನ್ಯಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಕೃತ್ಯದ ವಿಡಿಯೋಗಳು ಹೊರಬಂದಾಗ, ಆ ವಿಡಿಯೋಗಳಲ್ಲಿದ್ದ ಸಂತ್ರಸ್ತರ ಗುರುತು ಬಹಿರಂಗಗೊಂಡ ನಂತರ, ಸಂತ್ರಸ್ತೆಯರು ಬಹಿಷ್ಕಾರ ಮತ್ತು ಅವಮಾನದ ಭಯದಿಂದ ಅನೇಕ ಸಂತ್ರಸ್ತೆಯರು ತಮ್ಮ ಮನೆ, ಊರುಗಳನ್ನು ತೊರೆಯಬೇಕಾಯಿತು. ಕೆಲವರು ಜಿಲ್ಲೆಯನ್ನೇ ತೊರೆದರು. ನಾಲ್ಕನೇ ದೂರುದಾರರು ಮಾಜಿ ಸಂಸದರ ವಿರುದ್ಧ ದಾಖಲಿಸಿದ ಎಫ್‌ಐಆರ್‌ನಲ್ಲಿ ತನಗೆ ಮತ್ತು ತನ್ನ ಕುಟುಂಬಕ್ಕಾದ ಸಾಮಾಜಿಕ ಅಪಮಾನಗಳನ್ನು ವಿವರಿಸಿದ್ದಾರೆ.
ಈ ಪಿತೃಪ್ರಭುತ್ವ ವ್ಯವಸ್ಥೆಯಲ್ಲಿ ಸಂತ್ರಸ್ತೆಯರೇ ಯಾವಾಗಲೂ ಅಪರಾಧದ ದೂಷಣೆಗೆ ಬಲಿಯಾಗುತ್ತಾರೆ. ಈಗಲೂ, ಪ್ರಜ್ವಲ್ ಲೈಂಗಿಕ ದೌರ್ಜನ್ಯಗಳಲ್ಲಿಯೂ ಅಪರಾಧಗಳಿಗೆ ಸಂತ್ರಸ್ತೆಯರನ್ನೇ ಜವಾಬ್ದಾರರನ್ನಾಗಿ ಮಾಡಲಾಗಿದೆ. ಅದಕ್ಕೆ ಪೂರಕವೆಂಬಂತೆ ಮಾಧ್ಯಮಗಳು ದೌರ್ಜನ್ಯಗಳಲ್ಲಿ ಪ್ರಜ್ವಲ್‌ನ ಪಾತ್ರಕ್ಕಿಂತ ಸಂತ್ರಸ್ತೆಯರ ಪಾತ್ರವೂ ಇದೆ ಎಂಬಂತೆ ಬಿಂಬಿಸುವ ‘ಟ್ಯಾಗ್ ಲೈನ್’ಗಳನ್ನು ಪ್ರಸಾರ ಮಾಡುತ್ತಿವೆ. ಮಾಧ್ಯಮಗಳ ಈ ಭಾಷೆಗಳು ಸಂತ್ರಸ್ತೆಯರ ಮೇಲಿನ ಕಳಂಕವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗುತ್ತಿವೆ. ಲೈಂಗಿಕ ದೌರ್ಜನ್ಯವನ್ನು ಲೈಂಗಿಕತೆ ಎಂದು ಉಲ್ಲೇಖಿಸುವುದು ಕೃತ್ಯಕ್ಕೆ ಸಂತ್ರಸ್ತೆಯರ ಒಪ್ಪಿಗೆಯನ್ನು ಸೂಚಿಸುತ್ತವೆ. ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಎಸಗಿದ ಅತ್ಯಾಚಾರವನ್ನು ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್‌ಗಾಗಿ ಬಳಸಿದ್ದನ್ನು ಸಹಜ ಲೈಂಗಿಕ ಕ್ರಿಯೆಯಂತೆ ಚಿತ್ರಿಸುತ್ತವೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ವರದಿ ಮಾಡುವಾಗ ಭಾರತೀಯ ಮಾಧ್ಯಮಗಳು ಸೂಕ್ತ ಶಬ್ದಕೋಶವನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ ಎಂಬುದನ್ನು ಈ ಪ್ರಕರಣವು ಎತ್ತಿ ತೋರಿಸುತ್ತದೆ. ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಲ್ಲೆಲ್ಲೂ ಅಸಮರ್ಪಕ ಮತ್ತು ಕ್ಷುಲ್ಲಕ ಭಾಷೆಯ ಬಳಕೆಯು ಹೆಚ್ಚು ತಿಳುವಳಿಕೆಯುಳ್ಳ ಮತ್ತು ಸೂಕ್ಷ್ಮವಾದ ವರದಿಯ ತುರ್ತು ಅಗತ್ಯವನ್ನು ಒತ್ತಿ ಹೇಳುತ್ತದೆ. ಮಾತ್ರವಲ್ಲ, ಮಾಧ್ಯಮಗಳ ಭಾಷೆಯನ್ನು ಕೇವಲ ಶಬ್ದಾರ್ಥ ಎಂದು ತಳ್ಳಿಹಾಕದಿರುವ ಮಹತ್ವವನ್ನು ಹೇಳುತ್ತದೆ.
ಪ್ರಜ್ವಲ್ ರೇವಣ್ಣನ ಅಪರಾಧಗಳ ಬಗೆಗಿನ ನಿರ್ದಾಕ್ಷಿಣ್ಯ ವರದಿಗಳು ಮಾತ್ರ, ಅತನ ಕೃತ್ಯಗಳು ಆತನಿಗಿದ್ದ ರಾಜಕೀಯ ಸವಲತ್ತುಗಳಿಂದ ಪ್ರಭಾವಿತವಾಗಿದೆಯೇ ಎಂಬುದನ್ನು ಲೆಕ್ಕಿಸದೆ, ಪ್ರಕರಣದ ಸತ್ಯ ಮತ್ತು ಅಧಿಕಾರ ದುರುಪಯೋಗದ ಘೋರ ಸ್ವರೂಪವನ್ನು ವಿರೂಪಗೊಳಿಸುವ ಮೂಲಕ ಸಾರ್ವಜನಿಕರಿಗೆ ದೌರ್ಜನ್ಯಗಳನ್ನು ಎಳೆ-ಎಳೆಯಾಗಿ ವಿವರಿಸುವ ಕೆಲಸ ಮಾಡಿವೆ.
ಈ ವರದಿ ಓದಿದ್ದೀರಾ?: ಇಂದಿರಾ ಗಾಂಧಿ ನಮ್ಮನ್ನು ಜೈಲಿಗೆ ಹಾಕಿದ್ದರು, ಆದರೆ ಯಾವತ್ತೂ ನಿಂದಿಸಲಿಲ್ಲ: ಲಾಲೂ ಯಾದವ್
ಜವಾಬ್ದಾರಿಯುತ ವರದಿಗಳು ಸಂತ್ರಸ್ತರ ಬಗೆಗಿನ ಜವಾಬ್ದಾರಿಯನ್ನು ಸಹ ಒಳಗೊಂಡಿದೆ. ಪ್ರಜ್ವಲ್ ರೇವಣ್ಣನ ದೌರ್ಜನ್ಯಗಳಲ್ಲಿ ಸಂತ್ರಸ್ತರ ಮೇಲಿನ ಕಳಂಕ, ಬಹಿಷ್ಕಾರ ಮತ್ತು ಶೋಷಣೆಗಳಂತಹ ಆಪಾದನೆಗಳನ್ನು ದೂರವಿಟ್ಟು, ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿವೆ. ಸಮಾಜವು ಸಂತ್ರಸ್ತರ ಪರವಾಗಿ ನಿಲ್ಲಬೇಕೆಂದು ಸಾರಿ ಹೇಳುತ್ತಿವೆ.
ಪ್ರಜ್ವಲ್ ರೇವಣ್ಣ ಓರ್ವ ಜೆಡಿಎಸ್ ನಾಯಕ ಮತ್ತು ಹಾಸನದ ಮಾಜಿ ಸಂಸದರಷ್ಟೇ ಅಲ್ಲ. ಅತ ಪ್ರಭಾವಿ ರಾಜಕೀಯ ಕುಟುಂಬದ ಕುಡಿಯೂ ಹೌದು. ಆತನ ಕುಟುಂಬ ಭಾರೀ ರಾಜಕೀಯ ಶಕ್ತಿ ಮತ್ತು ಪ್ರಭಾವವನ್ನು ಹೊಂದಿದೆ.ಆತ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮೊಮ್ಮಗ; ಕೇಂದ್ರ ಸಚಿವ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಅಣ್ಣನ ಮಗ; ಹಾಗೂ ರಾಜ್ಯದ ಮಾಜಿ ಸಚಿವ, ಶಾಸಕ ಎಚ್.ಡಿ ರೇವಣ್ಣ ಅವರ ಪುತ್ರ. ಪ್ರಜ್ವಲ್ ಈಗ ಜೈಲಿನಲ್ಲಿದ್ದಾನೆ. ಆತನ ವಿರುದ್ಧ ತನಿಖೆ ನಡೆಸಿ, ಆತನ ಕೃತ್ಯಗಳಿಗೆ ಶಿಕ್ಷೆ ಕೊಡಿಸುವುದು ಹಾಗೂ ಸಂತ್ರಸ್ತೆಯರನ್ನು ರಕ್ಷಿಸಿವುದು ಮತ್ತು ನ್ಯಾಯ ಒದಗಿಸುವುದು ಸರ್ಕಾರ ಮತ್ತು ಪೊಲೀಸ್ ಇಲಾಖೆ ಆದ್ಯ ಕರ್ತವ್ಯವಾಗಿದೆ. ಮಾಧ್ಯಮಗಳು ಕೂಡ ಸಂತ್ರಸ್ತೆಯರ ವಿಚಾರದಲ್ಲಿ ಸಂವೇದನಾಶೀಲತೆಯಿಂದ ವರ್ತಿಸುವುದುನ್ನು ಕಲಿಯಬೇಕಿದೆ. ಹೊತೆಗೆ, ಲೈಂಗಿಕ ದೌರ್ಜನ್ಯವನ್ನು ಅಶ್ಲೀಲ ವಿಡಿಯೋ ಪ್ರಕರಣವೆಂದು ಸಾಮಾನ್ಯೀಕರಿಸುವುದನ್ನು ಬಿಟ್ಟು, ದೌರ್ಜನ್ಯವನ್ನು ದೌರ್ಜನ್ಯವೆಂದೇ ಹೇಳುವುದನ್ನು ಕಲಿಯಬೇಕಿದೆ.