ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿದ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ 125 ಕೋಟಿ ರೂ.ಗಳ ಭಾರಿ ಬಹುಮಾನವನ್ನು ಘೋಷಿಸಿದೆ.
ಈ ಐತಿಹಾಸಿಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶುಭ ಕೋರಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಅಧಿಕೃತ ಟ್ವಿಟರ್ ಖಾತೆ ಮೂಲಕ ಬಿಸಿಸಿಐ ಬರೋಬ್ಬರಿ 125 ಕೋಟಿ ರೂ. ಬಹುಮಾನ ನೀಡಲು ಮುಂದಾಗಿದೆ ಎಂದು ಘೋಷಿಸಿದ್ದಾರೆ.
“2024ರ ಸಾಲಿನಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ.ಗಳ ಬಹುಮಾನ ನೀಡಲಿದೆ. ಈ ತಂಡ ಅಮೋಘ ಪ್ರತಿಭೆ ಅನಾವರಣಗೊಳಿಸಿ, ಬದ್ಧತೆಯಿಂದ ಹಾಗೂ ಅತ್ಯುತ್ತಮ ಕ್ರೀಡಾಮನೋಭಾವದೊಂದಿಗೆ ಸ್ಪರ್ಧಿಸಿ ಚಾಂಪಿಯನ್ಸ್ ಪಟ್ಟ ಪಡೆದಿದೆ. ತಂಡದ ಎಲ್ಲ ಆಟಗಾರರು, ಕೋಚ್‌ಗಳು ಮತ್ತು ಸಹಾಯಕ ಸಿಬ್ಬಂದಿಗೆ ಶುಭಾಶಯಗಳು. ಇದೊಂದು ಅಮೋಘ ಸಾಧನೆ ಆಗಿದೆ,” ಎಂದು ಬಿಸಿಸಿಐ ಎಕ್ಸ್‌ನಲ್ಲಿ ಜಯ್ ಶಾ ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ ಫೈನಲ್ | ರೋಚಕ ಹಣಾಹಣಿಯಲ್ಲಿ ಟೀಮ್ ಇಂಡಿಯಾ ‘ಚಾಂಪಿಯನ್’
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಚಾಂಪಿಯನ್ಸ್ ಭಾರತ ತಂಡಕ್ಕೆ ಬರೋಬ್ಬರಿ 20.42 ಕೋಟಿ ರೂ.ಗಳ ಬಹುಮಾನ ಮೊತ್ತ ನೀಡಿದೆ. ರನ್ನರ್ಸ್ ಅಪ್ ದಕ್ಷಿಣ ಆಫ್ರಿಕಾ ತಂಡಕ್ಕೆ 10.67 ಕೋಟಿ ರೂ. ಬಹುಮಾನ ಪಡೆದಿದೆ. ಇದಲ್ಲದೆ ಟೂರ್ನಿಯಲ್ಲಿ ಗೆದ್ದ ಪ್ರತಿ ಪಂದ್ಯಕ್ಕೆ 25.97 ಲಕ್ಷ ರೂ. ಕೂಡ ಪ್ರತಿ ತಂಡಗಳಿಗೆ ಸಿಗಲಿದೆ. ಹೀಗಾಗಿ ಭಾರತ ತಂಡ ಒಟ್ಟಾರೆ 22.63 ಕೋಟಿ ರೂ. ಜೇಬಿಗಿಳಿಸಿದೆ.
ವೆಸ್ಟ್ ಇಂಡೀಸ್‌ನ ಬಾರ್ಬೆಡೋಸ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ (76) ಬಾರಿಸಿದ ಜವಾಬ್ದಾರಿಯುತ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 176/7 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 47 ರನ್‌ಗಳನ್ನು ಸಿಡಿಸುವ ಮೂಲಕ ಕೊಹ್ಲಿಗೆ ಉತ್ತಮ ಸಾಥ್ ನೀಡಿದ್ದರು.
ಬಳಿಕ ಗುರಿ ಬೆನ್ನಟ್ಟಿದ ಹರಿಣ ಪಡೆ ಆರಂಭಿಕ ಆಘಾತ ಅನುಭವಿಸಿದರೂ, ಇನಿಂಗ್ಸ್ ಮಧ್ಯದಲ್ಲಿ ಕ್ವಿಂಟನ್ ಡಿ ಕಾಕ್ (39), ಟ್ರಿಸ್ಟನ್ ಸ್ಟಬ್ಸ್ (31), ಹೆನ್ರಿಚ್ ಕ್ಲಾಸೆನ್ (52) ಮತ್ತು ಡೇವಿಡ್ ಮಿಲ್ಲರ್ (21) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಗೆಲುವಿನತ್ತ ದಾಪುಗಾಲಿಟ್ಟಿತ್ತು. ಜಸ್‌ಪ್ರೀತ್ ಬುಮ್ರಾ (18ಕ್ಕೆ 2), ಹಾರ್ದಿಕ್ ಪಾಂಡ್ಯ (20ಕ್ಕೆ 3) ಮತ್ತು ಅರ್ಷದೀಪ್ ಸಿಂಗ್ (20ಕ್ಕೆ 2) ಕರಾರುವಾಕ್ ಬೌಲಿಂಗ್ ದಾಳಿ ಸಂಘಟಿಸಿದರ ಪರಿಣಮ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 169/8 ರನ್ ಗಳಿಸಲು ಶಕ್ತವಾಗಿ ಸೋಲು ಅನುಭವಿಸಿತು.
