- 15 ವರ್ಷ ಶಿಕ್ಷೆಅನುಭವಿಸಿದ ಆನಂದ್ ಮೋಹನ್ ಸಿಂಗ್‌ನನ್ನು ಬಿಡುಗಡೆಗೊಳಿಸಲು ಆದೇಶಿರುವ ಬಿಹಾರ ಸರ್ಕಾರ
- 1994ರಲ್ಲಿ ಗೋಪಾಲ್ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಜಿ ಕೃಷ್ಣಯ್ಯ ಅವರ ಹತ್ಯೆ ಆರೋಪಿ ಆನಂದ್ ಮೋಹನ್
ದಲಿತ ಐಎಎಸ್ ಅಧಿಕಾರಿ ಜಿ ಕೃಷ್ಣಯ್ಯ ಅವರ ಹತ್ಯೆಯ ಪ್ರಮುಖ ಆರೋಪಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಂಸದ ಆನಂದ್ ಮೋಹನ್ ಸಿಂಗ್‌ನನ್ನು ಬಿಡುಗಡೆಗೊಳಿಸಲು ಆದೇಶಿರುವ ಬಿಹಾರ ಸರ್ಕಾರದ ಕ್ರಮವನ್ನು ಖಂಡಿಸಿ ಮೃತ ಅಧಿಕಾರಿಯ ಪತ್ನಿ ಉಮಾ ಕೃಷ್ಣಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಸರ್ಕಾರದ ಕ್ರಮಕ್ಕೆ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.
“ಆರೋಪಿ ಆನಂದ್ ಮೋಹನ್ ಸಿಂಗ್‌ಗೆ ಮರಣದಂಡನೆ ವಿಧಿಸಿದರೆ ಕ್ರೂರ ಅಪರಾಧವೆಸಗುವ ಅಪರಾಧಿಗಳಿಗೆ ತಕ್ಕ ಪಾಠವಾಗುತ್ತದೆ. ಮುಂದಿನ ದಿನಗಳಲ್ಲಿ ಅಪರಾಧಿಗಳು ಸಹ ಅಪರಾಧ ಮಾಡಲು ಹೆದರುತ್ತಾರೆ. ಬಿಹಾರ ಸರ್ಕಾರವು 15 ವರ್ಷಗಳ ಜೈಲು ಶಿಕ್ಷೆಅನುಭವಿಸಿದ ನಂತರ ಆರೋಪಿಯ ಬಿಡುಗಡೆಗೆ ಅನುಕೂಲವಾಗುವಂತೆ ಜೈಲು ನಿಯಮಗಳನ್ನು ತಿರುಚಿದೆ. ಸರ್ಕಾರದ ನಿರ್ಧಾರವು ಸಮಾಜದಲ್ಲಿ ತಪ್ಪಾದ ಸಂದೇಶಗಳನ್ನು ನೀಡುತ್ತದೆ. ಈ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಕ್ರಮ ವಹಿಸಬೇಕೆಂದು” ಉಮಾ ಕೃಷ್ಣಯ್ಯ ಮನವಿ ಮಾಡಿದ್ದಾರೆ.
“ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಪಟನಾ ಹೈಕೋರ್ಟ್ ಆದೇಶದ ನಿರ್ಧಾರದಿಂದ ನಮಗೆ ಸಂತೋಷವಾಗಿರಲಿಲ್ಲ. ಆದರೆ ಈಗ ಅಪರಾಧಿ ಬಿಡುಗಡೆಯಾಗಿ ರಾಜಕೀಯಕ್ಕೆ ಬರುತ್ತಿದ್ದಾರೆ. ಈ ಕ್ರಮವನ್ನು ನಾವು ಒಪ್ಪುವುದಿಲ್ಲ. ಅಪರಾಧವೆಸಗಿ ಸುಲಭವಾಗಿ ಬಿಡುಗಡೆಯಾಗಿ ರಾಜಕೀಯ ಪ್ರವೇಶಿಸಬಹುದು ಎಂಬ ರೀತಿಯಲ್ಲಿದೆ ಸರ್ಕಾರದ ಸಂದೇಶ” ಎಂದು ಉಮಾ ಕೃಷ್ಣಯ್ಯ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಭಾಗಿಯಾದ ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ
ಗೋಪಾಲ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಜಿ ಕೃಷ್ಣಯ್ಯ ಅವರನ್ನು ಆನಂದ್ ಮೋಹನ್ ಸಿಂಗ್ ಕುಮ್ಮಕ್ಕಿನಿಂದ ಗುಂಪೊಂದು 1994ರಲ್ಲಿ ಹತ್ಯೆ ಮಾಡಿತ್ತು. ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಆನಂದ್ ಮೋಹನ್ ಅವರನ್ನು ಬಿಹಾರದ ಕೆಳ ನ್ಯಾಯಾಲಯವು 2007ರಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಿತ್ತು. ಆದರೆ ಪಾಟ್ನಾ ಹೈಕೋರ್ಟ್ ಅದನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. 2012ರಲ್ಲಿ ಸುಪ್ರೀಂಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಈತ ಶೆಯೋಹರ್ ಕ್ಷೇತ್ರದಿಂದ 1996ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದ ಕೂಡ ಆಗಿದ್ದ.
ಜೈಲಿನಿಂದ ಪೆರೋಲ್ ಮೇಲೆ ಬಂದಿದ್ದ ವೇಳೆ ಸುದ್ದಿಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆನಂದ್ ಮೋಹನ್ ಸಿಂಗ್, ತಾನು ಮತ್ತೆ ಸಕ್ರಿಯ ರಾಜಕೀಯದ ಅಖಾಡಕ್ಕೆ ಜಿಗಿಯಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾನೆ.
ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಜೈಲು ನಿಯಮಗಳನ್ನು ತಿರುಚಿದ ನಂತರ ಬಿಡುಗಡೆ ಮಾಡಲು ಸಿದ್ಧವಾಗಿರುವ 27 ಕೈದಿಗಳಲ್ಲಿ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಶಾಸಕರಾಗಿರುವ ವ್ಯಕ್ತಿಯೊಬ್ಬರು ಸೇರಿದ್ದಾರೆ.
ಏನಿದು ಪ್ರಕರಣ?
ಆಂಧ್ರಪ್ರದೇಶ ಮೂಲದವರಾದ 1985ರ ಬ್ಯಾಚ್‌ನ ದಲಿತ ಸಮುದಾಯದ ಐಎಎಸ್ ಅಧಿಕಾರಿ ಜಿ ಕೃಷ್ಣಯ್ಯ ಅವರು 1994ರ ಡಿ. 5ರಂದು ಬಿಹಾರದ ಹಾಜಿಪುರದಲ್ಲಿ ಸಭೆ ಮುಗಿಸಿ ಗೋಪಾಲಗಂಜ್‌ಗೆ ಮರಳುತ್ತಿದ್ದಾಗ ಗುಂಪೊಂದು ದಾಳಿ ನಡೆಸಿ ಬರ್ಬರವಾಗಿ ಕೊಂದು ಹಾಕಿತ್ತು.
ಮುಜಫ್ಫರಪುರ ದಾಟಿ ಹೋಗುವಾಗ, ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿ ಛೋಟಾನ್ ಶುಕ್ಲಾನ ಅಂತ್ಯಸಂಸ್ಕಾರ ಮೆರವಣಿಗೆಯ ಗುಂಪು ಅವರ ಕಾರನ್ನು ಅಡ್ಡಗಟ್ಟಿತ್ತು. ಜೆಡಿಯು ಶಾಸಕ ಮುನ್ನಾ ಶುಕ್ಲಾನ ಅಣ್ಣನಾಗಿದ್ದ ಛೋಟಾನ್‌ನನ್ನು ಒಂದು ದಿನದ ಹಿಂದಷ್ಟೇ ಮುಜಫ್ಫರಪುರದಲ್ಲಿ ಆಗಿನ ಲಾಲು ಪ್ರಸಾದ್ ಯಾದವ್ ಸರ್ಕಾರದ ಆದೇಶದಂತೆ ಪೊಲೀಸರು ಎನ್‌ಕೌಂಟರ್ ಮಾಡಿದ್ದರು.
ಈ ಹತ್ಯೆಯಲ್ಲಿ ಮುಜಫ್ಫರಪುರ ಎಸ್‌ಪಿ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೈವಾಡ ಇದೆ ಎಂದು ಛೋಟಾನ್ ಬೆಂಬಲಿಗರು ಶಂಕಿಸಿದ್ದರು. ಆಗ ವೈಶಾಲಿ ಕ್ಷೇತ್ರದ ಪಕ್ಷೇತರ ಶಾಸಕನಾಗಿದ್ದ ಆನಂದ್ ಮೋಹನ್ ಮತ್ತು ಅವರ ಪತ್ನಿ ಲವ್ಲಿ, ಅಂತ್ಯಸಂಸ್ಕಾರ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಕೃಷ್ಣಯ್ಯ ಅವರ ಕಾರು ಕಂಡ ಗುಂಪು, ಅವರೇ ಮುಜಫ್ಫರಪುರ ಮ್ಯಾಜಿಸ್ಟ್ರೇಟ್ ಎಂದು ಭಾವಿಸಿ ಕಲ್ಲುತೂರಾಟ ನಡೆಸಿತ್ತು. ಕೃಷ್ಣಯ್ಯ ಅವರು ಕಾರಿನಿಂದ ಇಳಿದು, ತಾವು ಮುಜಫ್ಫರಪುರದ ಜಿಲ್ಲಾ ಮ್ಯಾಜಿಸ್ಟ್ರೇ ಅಲ್ಲ ಎಂದು ಎಷ್ಟೇ ಹೇಳಿದರೂ ಗುಂಪು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಮನಬಂದಂತೆ ಕಲ್ಲು ಎಸೆದು ಅವರನ್ನು ಕೊಂದು ಹಾಕಿತ್ತು. ಛೋಟಾನ್‌ನ ಕಿರಿಯ ತಮ್ಮ, ನಟೋರಿಯಸ್ ಕ್ರಿಮಿನಲ್ ಭುಟ್ಕುನ್, ನೆತ್ತರು ಮಡುವಿನಲ್ಲಿ ಬಿದ್ದಿದ್ದ ಕೃಷ್ಣಯ್ಯ ಅವರ ತಲೆಗೆ ಸಮೀಪದಿಂದ ಮೂರು ಬುಲೆಟ್‌ಗಳನ್ನು ಹಾರಿಸಿದ್ದ.