- ರೌಡಿಶೀಟರ್ ಮಣಿಕಂಠ ವಿರುದ್ಧ 40 ಪ್ರಕರಣಗಳು
- ಮೇ 6ರಂದು ರಾವೂರಿನಲ್ಲಿ ಪ್ರಧಾನಿ ಸಮಾವೇಶ
ದೇಶದ ಪ್ರಧಾನಿ ಹುದ್ದೆಗೆ ಇರಬೇಕಿದ್ದ ಎಲ್ಲ ಘನತೆಯನ್ನು ಬೀದಿಗೆ ತಂದ ಕುಖ್ಯಾತಿ ಚುನಾವಣಾ ಜೀವಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು ಎಂದು ಜೆಡಿಎಸ್ ಕಿಡಿಕಾರಿದೆ.
ಗಡಿಪಾರಾಗಿದ್ದ ರೌಡಿಶೀಟರ್, ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಪರವಾಗಿ ಪ್ರಧಾನಿ ಮೋದಿ ಮೇ 6ರಂದು ರಾವೂರಿನಲ್ಲಿ ಸಮಾವೇಶ ನಡೆಸಲಿದ್ದಾರೆ. ಈ ಕುರಿತು ಟೀಕಿಸಿ, ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ಮೋದಿ ವಿರುದ್ಧ ಹರಿಹಾಯ್ದಿದೆ.
“ದೇಶದ ಪ್ರಧಾನಿ ಹುದ್ದೆಗೆ ಇರಬೇಕಿದ್ದ ಎಲ್ಲ ಘನತೆಯನ್ನು ಬೀದಿಗೆ ತಂದ ಕುಖ್ಯಾತಿ ಚುನಾವಣಾ ಜೀವಿ ನರೇಂದ್ರ ಮೋದಿಗೆ ಸಲ್ಲಬೇಕು. ಬಡವರ ಅನ್ನವನ್ನು ಕದ್ದ, 40 ಪ್ರಕರಣಗಳಿರುವ ರೌಡಿಯ ಪರ ಪ್ರಚಾರ ಪ್ರಧಾನಿ ಮಾಡುವುದೆಂದರೆ ರಾಜ್ಯ ರಾಜಕೀಯದ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ” ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
“ಜೈಲಲ್ಲಿ ಇರಬೇಕಿದ್ದ ಆರೋಪಿಯನ್ನು ವಿಧಾನಸೌಧಕ್ಕೆ ಕಳುಹಿಸಲು ರಾಜ್ಯ ಬಿಜೆಪಿ ಟಿಕೆಟ್ ನೀಡಿದ್ದೆ ಪ್ರಜಾಪ್ರಭುತ್ವಕ್ಕೆ ಮಾಡಿರುವ ದ್ರೋಹ. ಬಿಜೆಪಿಯಲ್ಲಿ ಇರುವ ಎಲ್ಲ ನಾಯಕರು ಜನ ಕಂಟಕರು, ಇದೀಗ ಅವಕಾಶ ಕೊಟ್ಟ ಹೊಸ ಮುಖಗಳು ‘ನರಭಕ್ಷಕರು’. ಇಲ್ಲಿಗೆ, ‘ಉದಯವಾಯಿತು ಚೆಲುವ ಕನ್ನಡ ನಾಡು!’” ಎಂದು ವ್ಯಂಗ್ಯವಾಡಿದೆ.
“ಬಹುಶಃ ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ತಮ್ಮ ಹಳೆಯ ‘ಗುಜರಾತ್’ ದಿನಗಳು ನೆನಪಾಗಿ ಕರ್ನಾಟಕದಲ್ಲೂ ಪ್ರಯೋಗಿಸಲು ಹವಣಿಸುತ್ತಿದ್ದಾರೆ” ಎಂದು ಕಿಡಿಕಾರಿದೆ.
“ರೌಡಿಗಳು ಮತ್ತು ಕ್ರಿಮಿನಲ್‌ಗಳನ್ನು ಕನ್ನಡಿಗರು ಬೆಳೆಸುವುದಿಲ್ಲ ಎಂಬುವುದು ಈ ಚುನಾವಣೆಯಲ್ಲಿ ತಿಳಿಸಿಕೊಡಲಿದ್ದಾರೆ. ಏನು ಮಾಡಿದರೂ ನಡೆಯುತ್ತದೆ ಎಂಬ ನಿಮ್ಮ ಅಹಂಕಾರವನ್ನು ಇಳಿಸಲಿದ್ದಾರೆ” ಎಂದು ವಾಗ್ದಾಳಿ ನಡೆಸಿದೆ.
ಈ ಸುದ್ದಿ ಓದಿದ್ದೀರಾ? ಚಿತ್ತಾಪುರ | ರೌಡಿಶೀಟರ್ ಮಣಿಕಂಠ ಪರ ಪ್ರಧಾನಿ ಮೋದಿ ಪ್ರಚಾರ
ಪ್ರಧಾನಿ ಮೋದಿ ಪ್ರಚಾರಕ್ಕೆ ಬರುತ್ತಿರುವ ಬಿಜೆಪಿ ಅಭ್ಯರ್ಥಿಯ ಮೇಲೆ ರಾಜ್ಯದಲ್ಲಿ ಮಾತ್ರವಲ್ಲದೆ ತೆಲಂಗಾಣ ಮತ್ತು ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿವೆ.