ಜಗದೀಪ್ ಧನಕರ್ | ಅಂದು ಸಮಾಜವಾದಿ, ಇಂದು ಕೋಮುವಾದಿ

Date:

Advertisements
ಜಗದೀಪ್ ಧನಕರ್ ಸಂಸದೀಯ ಪಟುವಾಗಿ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯವಾಗಿದ್ದಾರೆ. ಉತ್ತರಪ್ರದೇಶದ ಧುರೀಣ ಚಂದ್ರಶೇಖರ್ ಅವರು ಸಮ್ಮಿಶ್ರ ಸರ್ಕಾರದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.

 

ಇತ್ತೀಚೆಗೆ ಸಂಸತ್ತಿನಲ್ಲಿ ನಡೆಯುತ್ತಿರುವ ಕಲಾಪಗಳಲ್ಲಿ ಸಭಾಧ್ಯಕ್ಷರ ಸರ್ವಾಧಿಕಾರಿ ಮನೋಧರ್ಮ, ರಾಜಕೀಯ ಪಕ್ಷಪಾತ, ಜನಾಂಗೀಯ ದ್ವೇಷ, ವರ್ಗನಿಷ್ಠೆ, ಜಾತಿನಿಷ್ಠೆ ಮೊದಲಾದವುಗಳು ಎದ್ದು ಕಾಣುತ್ತಿರುವುದು ದುರದೃಷ್ಟಕರ ಹಾಗೂ ಅಸಂಸದೀಯ ಪ್ರವೃತ್ತಿಯಾಗಿದೆ.

ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಅಧ್ಯಕ್ಷರಾದ ಜಗದೀಪ್ ಧನಕರ್ ಅವರು ತಮ್ಮ ದೇಹದಲ್ಲಿ ಹರಿಯುತ್ತಿರುವುದು ಮನುವಾದಿ ರಕ್ತ ಎಂಬುದನ್ನು ಆಗಿಂದಾಗ್ಗೆ ಅಭಿವ್ಯಕ್ತಗೊಳಿಸುತ್ತಿರುವುದು ಸಂಸದೀಯ ಸಂಸ್ಕೃತಿ ಮತ್ತು ಶಿಷ್ಟಾಚಾರಗಳಿಗೆ ಅಪಚಾರವೆಸಗಿದೆ. ಸಭಾಧ್ಯಕ್ಷರನ್ನು ಚುನಾಯಿಸುವುದು ಆಳುವ ಪಕ್ಷದ ಅಧಿಕಾರವೇ ಆಗಿದೆ. ಆದರೆ, ಸಭಾಧ್ಯಕ್ಷರಾಗಿ ಚುನಾಯಿತರಾದ ಕೂಡಲೇ ಸಂವಿಧಾನ ಆಶಯಗಳು, ಸದನದ ಸಂಸ್ಕೃತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಪೂರಕವಾಗಿ ಸದನದ ಕಲಾಪಗಳನ್ನು ನಿರ್ದೇಶಿಸುವ ಮತ್ತು ನಿರ್ವಹಿಸುವ ಘನತೆ, ಗಾಂಭೀರ್ಯ ಮತ್ತು ಜವಾಬ್ದಾರಿಗಳನ್ನು ಸಭಾಧ್ಯಕ್ಷರಾದವರು ಹೊಂದಿರಲೇಬೇಕು.

ಪಕ್ಷನಿಷ್ಠೆಗೆ ತಿಲಾಂಜಲಿ ಹೇಳಿ ರಾಷ್ಟ್ರನಿಷ್ಠೆಗೆ ಶರಣಾಗಿ ಸದನದಲ್ಲಿ ಕಲಾಪಗಳನ್ನು ಸುಗಮವಾಗಿ ನಡೆಸುವ ಜವಾಬ್ದಾರಿಯನ್ನು ಮರೆತು ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಇತ್ತೀಚೆಗೆ ಅನುಚಿತವಾಗಿ ನಡೆದುಕೊಳ್ಳುತ್ತಿರುವುದು ರಾಷ್ಟ್ರದ ಗಮನವನ್ನೇ ಸೆಳೆದಿದೆ.

Advertisements

ಜಗದೀಪ್ ಧನಕರ್ ದೇಶದಲ್ಲಿ ಹಿರಿಯ ರಾಜಕಾರಣಿ. ಸಂಸದೀಯ ಪಟುವಾಗಿ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯವಾಗಿದ್ದಾರೆ. ಇವರು ಇಂದಿರಾಜೀ ಅವರಿಂದ ಯಂಗ್‍ಟರ್ಕ್ ಎಂದು ಮನ್ನಣೆಗಳಿಸಿದ್ದ ಉತ್ತರಪ್ರದೇಶದ ಧುರೀಣ ಚಂದ್ರಶೇಖರ್ ಅವರು ಸಮ್ಮಿಶ್ರ ಸರ್ಕಾರದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಜನತಾದಳ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ರಾಜಕೀಯ ಮಾಡಿದ ಧನಕರ್ ಸಮಾಜವಾದಿ ಮತ್ತು ಜಾತ್ಯತೀತ ನಿಲುವುಗಳನ್ನು ಅಂದು ಮೈಗೂಡಿಸಿಕೊಂಡಿದ್ದರು.

ಪಶ್ಚಿಮ ಬಂಗಾಳದಲ್ಲಿ ಮೋದಿ ಸರ್ಕಾರದ ಕೃಪಾಕಟಾಕ್ಷದಿಂದ ಸೈದ್ಧಾಂತಿಕ ಹಾಗೂ ಸಂವಿಧಾನ ನಿಷ್ಠೆ ಬದಲಾವಣೆ ಕಾರಣದಿಂದ ರಾಜ್ಯಪಾಲರಾಗಿಯೂ ಧನಕರ್ ಕರ್ತವ್ಯ ನಿರ್ವಹಿಸಿದರು. ಜನಪರ ಚಿಂತನೆಗಳು ಮತ್ತು ಹೋರಾಟಗಳಿಂದ ಅತ್ಯಂತ ಪ್ರಭಾವಶಾಲಿ ಕಾಂಗ್ರೆಸ್ ಮತ್ತು ಕಮ್ಯುನಿಷ್ಟರನ್ನು ಪ್ರಜಾಸತ್ತಾತ್ಮಕವಾಗಿ ಮಣಿಸಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಸಮಕಾಲೀನ ರಾಜಕಾರಣದ ಸಿಂಹಿಣಿ ಎಂದೇ ಹೆಸರಾದ ಮಮತಾ ಬ್ಯಾನರ್ಜಿ ಸರ್ಕಾರವನ್ನು ಅಸ್ಥಿರಗೊಳಿಸಲು ಧನಕರ್ ನಡೆಸಿದ ಪ್ರಯತ್ನಗಳು ಇವರ ಬ್ರಾಹ್ಮಣಶಾಹಿ ಮನೋಧರ್ಮಕ್ಕೆ ಸಾಕ್ಷಿಯಾಗಿವೆ.

ಇವರ ಮೂಲಭೂತವಾದಿ ರಾಜಕಾರಣವನ್ನು ಮೆಚ್ಚಿದ ಕಳೆದ 10 ವರ್ಷಗಳಲ್ಲಿ ದೇಶದ ಪ್ರಜಾಸತ್ತೆಯನ್ನು ದಮನಗೊಳಿಸಿ ಕೋಮುವಾದಿ ರಾಜಕಾರಣವನ್ನು ಬಲಪಡಿಸಿದ ಮೋದಿ ಅವರು ಧನಕರ್ ರಾಜ್ಯಸಭೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು. ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಬಿಜೆಪಿ ಕೇಂದ್ರದಲ್ಲಿ ತನ್ನ ಹಿತಾಸಕ್ತಿಯನ್ನು ಗಟ್ಟಿಗೊಳಿಸುವ ಏಕೈಕ ದೃಷ್ಟಿಯಿಂದ ಧನಕರ್ ಅವರನ್ನು ರಾಜ್ಯಸಭಾಧ್ಯಕ್ಷರನ್ನಾಗಿ ನೇಮಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿತು. ಅಂದು ಸಮಾಜವಾದಿಯಾಗಿದ್ದು ಇಂದು ಕೋಮುವಾದಿಯಾಗಿ ಪರಿವರ್ತನೆಗೊಂಡಿರುವ ಧನಕರ್ ಮೂಲಭೂತವಾದಿಗಳ ಪ್ರಧಾನ ವಕ್ತಾರರಾಗಿ ಸಂಸದೀಯ ರಾಜಕಾರಣದಲ್ಲಿ ಅರಾಜಕತೆ ಬೆಳೆಯಲು ಕಾರಣರಾಗಿದ್ದಾರೆ.

ಧನಕರ್ ಅವರು ರಾಜ್ಯಸಭೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದುಕೊಳ್ಳುತ್ತಿರುವ ಪರಿ ಔಚಿತ್ಯಪೂರ್ಣವಾಗಿಲ್ಲ. ಇಂದಿರಾಗಾಂಧಿ, ದೇವರಾಜ ಅರಸು ಮೊದಲಾದ ಮುತ್ಸದ್ಧಿಗಳ ಮಾರ್ಗದರ್ಶನದಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಪ್ರಜಾಸತ್ತಾತ್ಮಕ ಮತ್ತು ಪ್ರಗತಿಪರ ನಾಯಕತ್ವವನ್ನು ಬೆಳೆಸಿಕೊಂಡಿದ್ದಾರೆ. ಸಮಾಜವಾದ, ಜಾತ್ಯಾತೀತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಗಳನ್ನು ಅತ್ಯಂತ ಪ್ರೀತಿ ಮತ್ತು ಬದ್ಧತೆಯಿಂದ ಮೈಗೂಡಿಸಿಕೊಂಡು ರಾಷ್ಟ್ರರಾಜಕಾರಣದಲ್ಲಿ ಘನತೆ ಹೊಂದಿರುವ ಖರ್ಗೆಯವರನ್ನು ಎಲ್ಲ ರಾಜಕೀಯ ಪಕ್ಷಗಳು ಗೌರವಿಸುತ್ತವೆ. ಇವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಮರುಹುಟ್ಟು ಪಡೆದು ಸಂವಿಧಾನ ಮತ್ತು ಪ್ರಜಾಸತ್ತೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಇವರು ರಾಜಕೀಯ ಮುತ್ಸದ್ಧಿ ಮತ್ತು ಚಾಣಕ್ಷನಾಗಿ ರಾಹುಲ್ ಗಾಂಧಿಯನ್ನು ಪ್ರಬುದ್ಧ ವಿರೋಧಪಕ್ಷದ ನಾಯಕನಾಗಿ ಲೋಕಸಭೆಯಲ್ಲಿ ಬೆಳೆಸುತ್ತಿರುವ ಪರಿ ಅನನ್ಯವಾಗಿದೆ. ಕೋಮುವಾದಿ ಧನಕರ್ ಮತ್ತು ರಾಷ್ಟ್ರೀಯವಾದಿ ಖರ್ಗೆ ಇವರು ವಿಭಿನ್ನ ಪಥಗಳಲ್ಲಿ ರಾಜಕಾರಣ ನಡೆಸುತ್ತಿದ್ದಾರೆ.

ಇತ್ತೀಚೆಗೆ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಉತ್ತರಿಸುವ ಸಂದರ್ಭದಲ್ಲಿ ಖರ್ಗೆಯವರು ಮೋದಿ ಸರ್ಕಾರದ ‘ಗರೀಭೋಂಕೊ ಹಠಾವೋ’ (ಬಡವರ ನಿರ್ಮೂಲನೆ) ನಿಲುವನ್ನು ಖಂಡತುಂಡವಾಗಿ ಖಂಡಿಸಿದ ಪರಿಯಿಂದ ಘಾಸಿಗೊಂಡ ಇವರು “ಜೈರಾಮ್ ರಮೇಶರೇ ನೀವು ಹೆಚ್ಚು ಸ್ಮಾರ್ಟ್ ಇದ್ದೀರಿ, ನೀವೇ ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗಿ” ಎಂದು ಅಸಂಬದ್ಧ ಮಾತುಗಳನ್ನಾಡಿ ಕಪ್ಪು ಜನರ ಮತ್ತು ದಮನಿತರ ಅಗ್ರಮಾನ್ಯ ನಾಯಕರಾಗಿ ರೂಪುಗೊಂಡಿರುವ ಖರ್ಗೆಯವರ ಮನಸ್ಸಿಗೆ ನೋವುಂಟು ಮಾಡಿರುವುದು ವಾಸ್ತವವಾಗಿ ಅಸಂಸದೀಯ ನಡವಳಿಕೆಯಾಗಿದೆ.

ಖರ್ಗೆ ಅವರನ್ನು ರಾಜ್ಯಸಭೆಯ ನಾಯಕರನ್ನಾಗಿ ವಿಶ್ವಾಸಪೂರ್ವಕವಾಗಿ ನೇಮಕ ಮಾಡಿರುವುದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವಿನಃ ಸಂವಿಧಾನ ವಿರೋಧಿ ಮನುವಾದಿಗಳಲ್ಲ. ಧನಕರ್ ಅವರ ಮಾತುಗಳಲ್ಲಿ ಜನಾಂಗ ದ್ವೇಷ ಮತ್ತು ಪ್ರಬಲ ಶಕ್ತಿಗಳ ದಲಿತ ವಿರೋಧಿ ಧೋರಣೆ ಪ್ರಧಾನವಾಗಿ ಎದ್ದು ಕಾಣುತ್ತದೆ. ಈ ಪ್ರವೃತ್ತಿಯಿಂದ ಧನಕರ್ ಅವರ ಘನತೆ ತಗ್ಗಿದ್ದು ಬಿಜೆಪಿಯವರ ಕೊನೆಯ ದರ್ಜೆ ಕೋಮುವಾದಿ ರಾಜಕಾರಣ ರಾಷ್ಟ್ರಮಟ್ಟದಲ್ಲಿ ಖಂಡನೆಗೆ ಗುರಿಯಾಗಿದೆ.

ಇದನ್ನೂ ಓದಿ ಮಡಿದ ಅಗ್ನಿವೀರನ ಮತ್ತು ಅವನ ಹಡೆದಮ್ಮನ ಪುತ್ರಶೋಕದ ದುರಂತ ಕತೆಯ ಕೇಳಿದಿರಾ?

ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣದಿಂದ ದೇಶದ ಸಮಗ್ರ ಉದ್ಧಾರವಾಗುತ್ತದೆ ಮತ್ತು ಅವರು ದೇವರ ಅಂಶದಿಂದ ಭೂಮಿ ಮೇಲೆ ಜನಿಸಿದವರು ಎಂದು ಹೇಳಿದ ಅವೈಚಾರಿಕ ಮತ್ತು ಅವೈಜ್ಞಾನಿಕ ವಿಚಾರಧಾರೆಗಳಿಗೆ ಇತ್ತೀಚೆಗೆ ಅಯೋಧ್ಯೆಯ ಪ್ರಬುದ್ಧ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದರ ಮೂಲಕ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮ-ಮೋದಿ ಜೋಡಿಯ ಹೀನಾಯ ಸೋಲಿನಿಂದ ಧನಕರ್ ಅವರಂತಹ ಮನುವಾದಿ ರಾಜಕಾರಣಿಗಳು ಸರಿಯಾದ ಪಾಠವನ್ನು ಕಲಿಯಬೇಕಿದೆ. ಮುಂದಿನ ದಿನಗಳಲ್ಲಿ ಭಾರತವನ್ನು ಆಳುವವರು ಸಮಾಜವಾದಿ, ಪ್ರಜಾಪ್ರಭುತ್ವವಾದಿ ಮತ್ತು ಸಂವಿಧಾನ ನಿಷ್ಠ ಜೈ ಭೀಮ್ ಬ್ರಿಗೇಡ್ ಮತ್ತು ಖರ್ಗೆ ಬಳಗ ಎಂಬುದನ್ನು ಕೋಮುವಾದಿಗಳು ಅರಿಯಬೇಕು. ಹಿಂದುತ್ವಕ್ಕಿಂತ ಬಂಧುತ್ವ, ಏಕತ್ವಕ್ಕಿಂತ ಬಹುತ್ವ, ವ್ಯಕ್ತಿಪೂಜೆಗಿಂತ ಸಂವಿಧಾನ ನಿಷ್ಠೆ ಬಹಳ ಮುಖ್ಯ ಎಂಬುದನ್ನು 2024ರ ಮಹಾಚುನಾವಣೆ ಫಲಿತಾಂಶ ದೃಢಪಡಿಸಿದೆ.

ಮಹೇಶ್‌ ಚಂದ್ರ ಗುರು
ಡಾ. ಮಹೇಶ್‌ ಚಂದ್ರ ಗುರು
+ posts

ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಮಹೇಶ್‌ ಚಂದ್ರ ಗುರು
ಡಾ. ಮಹೇಶ್‌ ಚಂದ್ರ ಗುರು
ನಿವೃತ್ತ ಪ್ರಾಧ್ಯಾಪಕ, ಮೈಸೂರು ವಿಶ್ವವಿದ್ಯಾಲಯ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X