ಮಹಾರಾಜ್ | ಸಾಮಾಜಿಕ ಕ್ರಾಂತಿಯ ಕಥನವೂ, ಚಿತ್ರರಂಗದ ಕರ್ಮ ಸಿದ್ಧಾಂತದ ಗುರಾಣಿಯೂ

Date:

Advertisements
ಮಹಾರಾಜ್ ಸಿನಿಮಾ, “ಧರ್ಮವನ್ನು ಅಪವ್ಯಾಖ್ಯಾನ ಮಾಡಲಾಗಿದೆ. ಧರ್ಮಗ್ರಂಥಗಳಲ್ಲಿ ಇಲ್ಲದ ಅನಾಚಾರಗಳನ್ನೆಲ್ಲ ಜಾರಿಗೆ ತರಲಾಗಿದೆ” ಎಂದು ಪ್ರತಿಪಾದಿಸುತ್ತಲೇ, ಗೀತೆಯು ಹೇಳುವ ಕರ್ಮಸಿದ್ಧಾಂತದ ನಿಜ ಸ್ವರೂಪವನ್ನು ಮರೆಮಾಚುತ್ತದೆ ಮತ್ತು ಧಾರ್ಮಿಕ ಮೂಲಭೂತವಾದಿಗಳನ್ನು ಮೆಚ್ಚಿಸಲು ಅಪವ್ಯಾಖ್ಯಾನವನ್ನೇ ನಿಜಪ್ರತಿಪಾದನೆ ಎಂಬಂತೆ ಉದ್ಧರಿಸುತ್ತದೆ.

1862ರಲ್ಲಿ ಗುಜರಾತ್‌ನಲ್ಲಿ ನಡೆದ ಸಾಮಾಜಿಕ ಕ್ರಾಂತಿಯೊಂದರ ಕಥನವನ್ನು ಒಳಗೊಂಡ ‘ಮಹಾರಾಜ್’ ಹಿಂದಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಚರ್ಚೆಯನ್ನು ಹುಟ್ಟುಹಾಕಿದೆ. ಹವೇಲಿಯಲ್ಲಿ ವಾಸವಿರುವ ರಾಜ ಯದುನಾಥ (ಜೆಜೆ) ತನ್ನನ್ನು ದೇವರ ಅಪರಾವತಾರ ಎಂದು ಬಿಂಬಿಸಿಕೊಳ್ಳುತ್ತಾ, ಚರಣ ಸೇವೆಯ ಹೆಸರಲ್ಲಿ, ಕುರುಡು ನಂಬಿಕೆಯ ಒಪ್ಪಿತ ಅತ್ಯಾಚಾರ ನಡೆಸುತ್ತಾ ಹೋಗುತ್ತಾನೆ. ಇದನ್ನು ಜನರೂ ತಮ್ಮ ಸಂಪ್ರದಾಯವಾಗಿಸಿಕೊಂಡು ಅನಾಚಾರವನ್ನೇ ಸಹಜವಾಗಿಸಿಕೊಂಡು ಬದುಕುತ್ತಿರುವ ಸಮಾಜದಲ್ಲಿ ಪ್ರಜ್ಞಾವಂತಿಕೆ, ಪ್ರಶ್ನಿಸುವ ಮನೋಭಾವ ಬೆಳೆದಾಗ ಅನಿಷ್ಟ ಅರಿವಾಗುತ್ತವೆ.

ಕರ್ಸನ್ ದಾಸ್ ಮೂಲ್ಜಿ ಬಾಲ್ಯದಿಂದಲೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು, ಕ್ರಾಂತಿಕಾರಿಕ ಆಲೋಚನೆಗಳನ್ನು ಮೈಗೂಡಿಸಿಕೊಂಡ ಹುಡುಗ, ವಿದ್ಯಾವಂತ. ತಾನು ಪ್ರೇಮಿಸಿದವಳೇ ಕುರುಡು ನಂಬಿಕೆಯ ಭಾಗವಾಗಿ ಚರಣಸೇವೆಗೆ ಬಲಿಯಾದ ಬಳಿಕ ಕರ್ಸನ್ ದಾಸ್ ಸಿಡಿದೇಳುವ ಕಥನವೇ ‘ಮಹಾರಾಜ್’. ‘ಸತ್ಯಪ್ರಕಾಶ’ ಎಂಬ ಪತ್ರಿಕೆಯನ್ನು ಆರಂಭಿಸಿ ಮಹಾರಾಜನ ವಿರುದ್ಧ ಬರೆದು, ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ ಮೂಲ್ಜಿ. ಯದುನಾಥನು ಪತ್ರಿಕೆಯ ವಿರುದ್ಧ ಹೂಡಿದ ಮಾನನಷ್ಟ ಮೊಕದ್ದಮೆ ಮತ್ತು ಕರ್ಸನ್ ದಾಸ್ ಅವರು ಬಾಂಬೆ ಸರ್ವೋಚ್ಚ ನ್ಯಾಯಾಲಯದಲ್ಲಿ ಗೆದ್ದು ಬರುವ ಇತಿಹಾಸದ ಸಿನಿಮಾ ರೂಪವೇ ‘ಮಹಾರಾಜ್’.

ಸಿದ್ಧಾರ್ಥ ಮಲ್ಹೋತ್ರ ನಿರ್ದೇಶನದ ಈ ಸಿನಿಮಾದ ಮೂಲಕ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಘನವಾದ ಪಾತ್ರವನ್ನು (ಕರ್ಸನ್ ದಾಸ್) ನಿರ್ವಹಿಸಿದ್ದಾರೆ. ಧರ್ಮದ ಹೆಸರಲ್ಲಿ ನಡೆಯುತ್ತಿದ್ದ ಕರಾಳ ಚರಣಸೇವೆಯ ಚಿತ್ರಣವನ್ನು ಕಟ್ಟಿಕೊಡುತ್ತಲೇ ದೇವರು ಮತ್ತು ಭಕ್ತರ ನಡುವಿನ ಬಾಂಧವ್ಯ ವೈಯಕ್ತಿಕವಾದದ್ದು, ಅದಕ್ಕೆ ಮೀಡಿಯೇಟರ್ (ಧರ್ಮಗುರು) ಬೇಕಾಗಿಲ್ಲ; ದೇವರ ರೂಪಗಳೆಂದು ಹೇಳಿಕೊಳ್ಳುವ ಬೂದಿ ಬಾಬಾಗಳ ಬಗ್ಗೆ ಎಚ್ಚರಗೊಳ್ಳಿರಿ ಎಂಬ ಸಂದೇಶವನ್ನು ಸಿನಿಮಾ ನೀಡುತ್ತದೆ.

Advertisements

WhatsApp Image 2024 07 10 at 6.15.25 PM 1

ವೈಯಕ್ತಿಕ, ಸಾಮಾಜಿಕ ಸಂಗತಿಗಳಿಂದ ಹಿಡಿದು ರಾಜಕೀಯದವರೆಗೂ ಧರ್ಮಗುರುಗಳ ಅಟಾಟೋಪಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ‘ಮಹಾರಾಜ್’ ಮೂಡಿಬಂದಿರುವುದಕ್ಕೆ ಮತ್ತು ಅದು ಎತ್ತಿಕೊಂಡಿರುವ ವಿಷಯಕ್ಕೆ ಮೆಚ್ಚುಗೆ ಹೇಳಲೇಬೇಕು. ಆದರೆ, ಮಹಾರಾಜ ಸಿನಿಮಾವು ಕೊನೆಯಲ್ಲಿ ಕರ್ಮ ಸಿದ್ಧಾಂತದ ಪ್ರತಿಪಾದನೆಗೆ ಗಂಟು ಬಿದ್ದು ಮುಗಿಯುವುದು ಅನೇಕ ವಿಚಾರವಂತರ ಆಕ್ಷೇಪಗಳಿಗೆ ಕಾರಣವಾಗಿದೆ. ಸಾಮಾಜಿಕ, ಧಾರ್ಮಿಕ ವಿಷಯಗಳನ್ನು ಇಟ್ಟುಕೊಂಡು ಬರುವ ಸಮಕಾಲೀನ ಹಲವು ಸಿನಿಮಾಗಳಲ್ಲಿ ಕರ್ಮಸಿದ್ಧಾಂತವು ಒಂದು ರೀತಿಯ ರಕ್ಷಣಾತ್ಮಕ ಅಸ್ತ್ರದಂತೆ ಬಳಕೆಯಾಗುತ್ತಿದೆ ಎನಿಸತೊಡಗಿದೆ.

ಮಹಾರಾಜ್ ಸಿನಿಮಾ ಬಿಡುಗಡೆಗೂ ಮುನ್ನ ಗುಜರಾತಿನ ವೈಷ್ಣವ ಸಮಾಜದ ಪಂಗಡವೊಂದು ಹೈಕೋರ್ಟ್ ಮೆಟ್ಟಿಲೇರಿತ್ತು. ಸಿನಿಮಾದಲ್ಲಿ ವೈಷ್ಣವರ ಭಾವನೆಗಳನ್ನು ನೋಯಿಸಲಾಗಿದೆ ಎಂಬ ವಾದವನ್ನು ಹೂಡಲಾಗಿತ್ತು. ಇಂತಹ ಸಿನಿಮಾಗಳು ಬಂದಾಗ ಧಾರ್ಮಿಕ ಪರಿಸರವು ಭಾವನಾತ್ಮಕತೆಯ ದಾಳ ಉರುಳಿಸುವುದನ್ನು ನಾವು ಕಾಣುತ್ತಾ ಬಂದಿದ್ದೇವೆ. ಸಂದಿಗ್ಧತೆಯನ್ನು ಎದುರಿಸಬೇಕಾದ ಇಕ್ಕಟ್ಟು ಇರುವುದರಿಂದಲೇ ಸಿನಿಮಾ ನಿರ್ಮಾತೃಗಳು ಧರ್ಮ ಮತ್ತು ಅದಕ್ಕೆ ಅಂಟಿರುವ ಸಾಮಾಜಿಕ ಕ್ಷೋಭೆಗಳನ್ನು ಬೇರ್ಪಡಿಸಿ ನೋಡುವ ಎರಡು ಆಯಾಮಗಳನ್ನು ಸಿನಿಮಾದೊಳಗೆ ತರುವ ಕಸರತ್ತು ಮಾಡುತ್ತಾರೆ.

ಇದನ್ನು ಓದಿದ್ದೀರಾ?: ಈ ದಿನ ವಿಶೇಷ | ಭಾರತೀಯ ಸಮಾಜವು ಮೂಢನಂಬಿಕೆಯತ್ತ, ಬಾಬಾಗಳತ್ತ ವಾಲುತ್ತಿರುವುದೇಕೆ?

ನಂಬಿಕೆಗಳನ್ನು ಅಪಮಾನಿಸಿದರೆಂಬ ಅಪವಾದಕ್ಕೆ ಗುರಿಯಾಗಬಾರದೆಂಬ ಕಾರಣದಿಂದ ಕೆಲವೊಂದು ಸಂಗತಿಗಳನ್ನು ಕಥನದಾಚೆಗೆ ಹೆಣೆಯುತ್ತಾರೆ ಅನಿಸುತ್ತದೆ. ಮಹಾರಾಜ್ ಸಿನಿಮಾದ ಕೊನೆಯಲ್ಲೂ ಇಂತಹದ್ದೇ ಕುರುಹುಗಳು ಕಾಣುತ್ತವೆ. ಅಗತ್ಯವೇ ಇಲ್ಲದಿದ್ದರೂ ‘ನಾನು ಹುಟ್ಟಿನಿಂದ ವೈಷ್ಣವ, ಕರ್ಮದಿಂದ ಬ್ರಾಹ್ಮಣ, ಉತ್ಸಾಹದ ಕಾರಣಕ್ಕೆ ಕ್ಷತ್ರಿಯ, ಶೂದ್ರರ ರೀತಿಯ ವಿನಯವಂತನಾಗಲು ಭಯಸುತ್ತೇನೆ’ ಎನ್ನುವ ಮಾತನ್ನು ಕರ್ಸನ್ ದಾಸ್ ಪಾತ್ರ ಆಡುತ್ತದೆ. ಮುಂದುವರಿದು, ‘ಯಾವ ಧರ್ಮ ಗುರುವೂ ನಿಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯರು. ನಿಮ್ಮ ಕರ್ಮ ನಿಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯುತ್ತದೆ’ ಎನ್ನುತ್ತದೆ ಆ ಪಾತ್ರ. ಕೊನೆಯಲ್ಲಿ ವೈಷ್ಣವ ಸಂಸ್ಕೃತಿಯು ಭಾರತೀಯ ನರನಾಡಿಗಳಲ್ಲಿ ಇದೆ ಎಂದು ಪ್ರತಿಪಾದಿಸುವ ಮೂಲಕ ಸಿನಿಮಾ ಮುಗಿಯುತ್ತದೆ.‌

ಇದೆಲ್ಲವೂ ರಕ್ಷಣಾತ್ಮಕ ಪಟ್ಟಿನ ಎಳೆಯೆಂದು ಅನಿಸತೊಡಗುತ್ತದೆ. ದರ್ಶನ್ ಅಭಿನಯದ ʼಕಾಟೇರʼ ಸಿನಿಮಾದಲ್ಲಿಯೂ ಹೀಗೆಯೇ ಆಗುತ್ತದೆ. ಬ್ರಾಹ್ಮಣ ಖಳನಾಯಕ ಪಾತ್ರದ ತಲೆ ಕಡಿಯುವುದು ಮತ್ತು ಆ ಸಂದರ್ಭದಲ್ಲಿ ಕರ್ಮ ಸಿದ್ಧಾಂತದಿಂದ ಪ್ರಣೀತವಾದ ಸಂಭಾಷಣೆಯನ್ನು ಕಾಟೇರ ಆಡುವುದು ಏತಕ್ಕೆ? ಅಂದರೆ ಯಾವುದೋ ಒಂದು ಭಯದಿಂದ ಸಿನಿಮಾ ಕಲಾಕೃತಿಗಳು ‘ನಿರೀಕ್ಷಣಾ ಜಾಮೀನು’ ಪಡೆದುಕೊಂಡಂತೆ ಕರ್ಮ ಸಿದ್ಧಾಂತದ ಪ್ರತಿಪಾದನೆ ಆಗುತ್ತಿದೆಯೇ?

WhatsApp Image 2024 07 10 at 6.15.26 PM

ಕರ್ಮಸಿದ್ಧಾಂತದ ಅಪವ್ಯಾಖ್ಯಾನದ ಕುರಿತು ಹೇಳಲೇಬೇಕು. ಬೌದ್ಧಧರ್ಮವು ತಂದ ಸಾಮಾಜಿಕ ಚಲನೆಯನ್ನು ಹತ್ತಿಕ್ಕಲು ಪುಷ್ಯಶುಂಗನ ನೇತೃತ್ವದಲ್ಲಿ ನಡೆದ ಬ್ರಾಹ್ಮಣೀಯ ಸಂಸ್ಕೃತಿಯ ಪ್ರತಿಕ್ರಾಂತಿಯ ಕರಾಳತೆಗಳು ಗೀತೆಯ ಮೂಲಕವೂ ಹೇಗೆ ಮರುಚಾಲನೆ ಪಡೆದವು ಎಂಬುದನ್ನು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ‘ಫಿಲಾಸಫಿ ಆಫ್ ಹಿಂದೂಯಿಸಂ’, ‘ರೆವಲ್ಯೂಷನ್ ಅಂಡ್ ಕೌಂಟರ್ ರೆವಲ್ಯೂಷನ್ ಇನ್ ಏನ್ಷಿಯಂಟ್ ಇಂಡಿಯಾ’ ಕೃತಿಗಳಲ್ಲಿ ಬಿಚ್ಚಿಟ್ಟಿದ್ದಾರೆ.

‘ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣ-ಕರ್ಮ ವಿಭಾಗಶಃ’ ಎನ್ನುತ್ತದೆ ಗೀತೆ. “ಚಾತುರ್ವರ್ಣಗಳನ್ನು (ಬಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ) ನಾನೇ ಸೃಷ್ಟಿಸಿದವನು. ಅವರ ಜಾಯಮಾನಕ್ಕೆ ತಕ್ಕಂತೆ ಕಸುಬುಗಳನ್ನು ವಹಿಸಿದ್ದೇನೆʼʼ ಎಂದು ಕೃಷ್ಣನ ಮೂಲಕ ಹೇಳಿಸಲಾಗಿದೆ (ಗೀತೆ ಅಧ್ಯಾಯ IV. ಶ್ಲೋಕ ೧೩).

ಚಾತುರ್ವರ್ಣವು ಗುಣಧರ್ಮವನ್ನು ಅವಲಂಭಿಸಿದ್ದೇ ಹೊರತು, ಅದು ವ್ಯಕ್ತಿಯ ಜಾತಿಯಿಂದ ನಿರ್ಧರಿತವಾಗಲ್ಲ. ಯಾರು ಬೇಕಾದರೂ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರನಾಗಬಹುದು ಎಂದು ಬೊಗಳೆ ಬಿಡುವ ಮಂದಿಗೆ ಬಾಬಾ ಸಾಹೇಬರು ಮತ್ತೊಂದು ಶ್ಲೋಕವನ್ನು ಉದ್ಧರಿಸಿ ಸವಾಲು ಎಸೆಯುತ್ತಾರೆ. ‘ಸ್ವಧರ್ಮೇ ನಿಧನಂ ಶ್ರೇಯಃ’ (ತಮ್ಮ ತಮ್ಮ ಧರ್ಮವನ್ನು ಅನುಸರಿಸುತ್ತಾ ಸಾಯುವುದೇ ಲೇಸು, ಅಧ್ಯಾಯ-III, ಶ್ಲೋಕ ೩೫) ಎನ್ನುತ್ತದೆ ಗೀತೆ. “ಯಾರೂ ಬೇಕಾದರೂ ಗುಣಗಳನ್ನು ಆಧರಿಸಿ ಯಾವ ವರ್ಣಕ್ಕಾದರೂ ಸೇರಬಹುದು ಎಂಬ ಮಾತನ್ನು ಗೀತೆ ಹೇಳುತ್ತಲೇ ನಿನ್ನ ಧರ್ಮವನ್ನು ಅರ್ಥಾತ್ ನಿನ್ನ ವರ್ಣವನ್ನು ಅನುಸರಿಸುವುದೇ ಲೇಸು ಎನ್ನುತ್ತಿರುವುದೇಕೆ?” ಎಂಬುದು ಅಂಬೇಡ್ಕರ್ ಅವರ ಪ್ರಶ್ನೆಯಾಗಿತ್ತು. ಅಂದರೆ ಶ್ರೇಣೀಕರಣದ ಯಥಾಸ್ಥಿತಿಯನ್ನು ಕರ್ಮಸಿದ್ಧಾಂತ ಪ್ರತಿಪಾದಿಸುತ್ತಿದೆ ಎಂಬುದು ಸ್ಪಷ್ಟ.

ಈ ವರದಿ ಓದಿದ್ದೀರಾ?: ಸೆಲೆಬ್ರಿಟಿಗಳ ಸುದ್ದಿಗಳು, ಮಾಧ್ಯಮಗಳು ಮತ್ತು ಜನಸಾಮಾನ್ಯರು

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ- ಫಲಾಫಲಗಳ ಅಪೇಕ್ಷೆಯಿಲ್ಲದೆ ನಿನ್ನ ಧರ್ಮ ಹೇಳುವ ಕರ್ಮ ಮಾಡು ಎನ್ನುವುದೂ ಕೂಡ ಯಥಾಸ್ಥಿತಿಯ ಗೂಟಕ್ಕೆ ಕಟ್ಟಿ ಹಾಕುವ ಬೌದ್ಧಿಕ ವಂಚನೆ.

ಗೀತೆಯ ಕುರಿತು ಬಂದ ಟೀಕೆಗಳ ಫಲವಾಗಿ ಕರ್ಮಸಿದ್ಧಾಂತದ ನಿಜ ಸ್ವರೂಪಕ್ಕೆ ನಾನಾ ರೂಪುಗಳನ್ನು ನೀಡಲಾಗಿದೆ. ಈ ಅಪವ್ಯಾಖ್ಯಾನಗಳನ್ನೇ ಈ ಧಾರ್ಮಿಕ ಸೂಕ್ಷ್ಮ ಕಾಲಘಟ್ಟದ ನಿರ್ದೇಶಕರು ಬಳಸಿಕೊಂಡು ಧಾರ್ಮಿಕ ಮೂಲಭೂತವಾದಿಗಳ ಮನಸ್ಸಿಗೆ ಅಲ್ಪ ಸಮಾಧಾನಗಳನ್ನು ಹೇಳಿ ಪಾರಾಗುವ ಚಾಣಾಕ್ಷತನ ತೋರುತ್ತಿದ್ದಾರೆ. ಮಹಾರಾಜ್ ಸಿನಿಮಾ, “ಧರ್ಮವನ್ನು ಅಪವ್ಯಾಖ್ಯಾನ ಮಾಡಲಾಗಿದೆ. ಧರ್ಮಗ್ರಂಥಗಳಲ್ಲಿ ಇಲ್ಲದ ಅನಾಚಾರಗಳನ್ನೆಲ್ಲ ಜಾರಿಗೆ ತರಲಾಗಿದೆ” ಎಂದು ಪ್ರತಿಪಾದಿಸುತ್ತಲೇ, ಗೀತೆಯು ಹೇಳುವ ಕರ್ಮಸಿದ್ಧಾಂತದ ನಿಜ ಸ್ವರೂಪವನ್ನು ಮರೆಮಾಚುತ್ತದೆ ಮತ್ತು ಧಾರ್ಮಿಕ ಮೂಲಭೂತವಾದಿಗಳನ್ನು ಮೆಚ್ಚಿಸಲು ಅಪವ್ಯಾಖ್ಯಾನವನ್ನೇ ನಿಜಪ್ರತಿಪಾದನೆ ಎಂಬಂತೆ ಉದ್ಧರಿಸುತ್ತದೆ. ಇದು ಮಹಾರಾಜ್ ಸಿನಿಮಾವೊಂದಕ್ಕೆ ಸೀಮಿತವಾದ ಸಂಗತಿಯಂತೆ ತೋರುತ್ತಿಲ್ಲ. ಇಂತಹ ಕಥನಗಳನ್ನು ಒಳಗೊಂಡಿರುವ ಸಿನಿಮಾಗಳಲ್ಲೆಲ್ಲ ಇದೇ ರಾಚುತ್ತದೆ. ನಿರ್ದೇಶಕ ಮತ್ತು ನಿರ್ಮಾಪಕರ ಭಯ ದೂರವಾಗಿ ಕರ್ಮಸಿದ್ಧಾಂತಕ್ಕೆ ಜೋತು ಬೀಳದಂತಹ ‘ಅಚ್ಛೇದಿನ’ಗಳು ಬರಲಿ ಎಂದು ಆಶಿಸೋಣ.

– ಪಿಪೀಲಿಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ನಿಧನ

3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ಅವರು ಆಗಸ್ಟ್...

ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಆರೋಪಗಳಿಗೆ ಉತ್ತರ ಕೊಟ್ಟಿತೆ? ಉಳಿದಿರುವ ಪ್ರಶ್ನೆಗಳೇನು?

ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಯೋಗದ ಈ ನಡೆಯನ್ನು "ಸಂವಿಧಾನಕ್ಕೆ ಅಪಮಾನ"...

ದರೋಡೆ ಮಾಡಿ ಕೊಡುಗೆ ನೀಡುವ ಮಾಡರ್ನ್ ರಾಬಿನ್ ಹುಡ್- ಮೋದಿ!

ಇಂಗ್ಲೆಂಡಿನ ಜನಪದ ಕಳ್ಳ ರಾಬಿನ್ ಹುಡ್ ಶ್ರೀಮಂತರ ಬಂಗಲೆಗಳನ್ನು ದರೋಡೆ ಮಾಡಿ...

ಕೇರಳ | ಟ್ರಕ್‌ಗೆ ಕಾರು ಡಿಕ್ಕಿ; ಮಲಯಾಳಂ ನಟನಿಗೆ ಗಾಯ

ಮಲಯಾಳಂ ನಟ ಬಿಜು ಕುಟ್ಟನ್‌ ಅವರು ಇಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ...

Download Eedina App Android / iOS

X