ಆನ್ವರಿ ಶಾಲೆಯ ಮೇಲ್ಛಾವಣಿ ಕುಸಿತವಾದ ಬಗ್ಗೆ ಪ್ರಕರಣ ದಾಖಲಿಸಲು ಎಸ್ಎಫ್ಐ ಕಾರ್ಯಕರು ಒತ್ತಾಯಿಸಿ ರಾಯಚೂರು ಜಿಲ್ಲೆಯ ಲಿಂಗಸುಗೂರು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
“ಆನ್ವರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತಿಚೀನ ವರ್ಷಗಳಲ್ಲಿ ನಿರ್ಮಾಣಗೊಂಡ ಶಾಲಾ ಕೊಠಡಿಯ ಮೇಲ್ಛಾವಣಿ ಕುಸಿದು 1ನೇ ತರಗತಿಯ ವಿದ್ಯಾರ್ಥಿ ಅರುಣ್ ತೆಲೆಗೆ ಗಂಭೀರ ಪೆಟ್ಟಾಗಿದ್ದು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆನ್ವರಿಗೆ ದಾಖಲಿಸಲಾಗಿದ್ದು, 5 ಹೊಲಿಗೆಗಳು ಬಿದ್ದಿವೆ. ಇನ್ನೂ 2 ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಛತ್ತಿನ ಕುಸಿತಕ್ಕೆ ಭಾರೀ ಭ್ರಷ್ಟಾಚಾರವೇ ಕಾರಣ” ಎಂದು ಆರೋಪಿಸಿದ್ದಾರೆ.
“ನೂತನವಾಗಿ ನಿರ್ಮಾಣಗೊಂಡ ಕಟ್ಟಡ ಸಂಪೂರ್ಣವಾಗಿ ಕಳಪೆಯಾಗಿದ್ದು, ಈ ಘಟನೆಯ ಹೊಣೆಯನ್ನು ಕಟ್ಟಡ ನಿರ್ಮಾಣದ ಗುತ್ತಿಗೆದಾರರು, ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಕಾರಣ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಆಗಬೇಕು. ಕೆಕೆಆರ್‌ಡಿಬಿ ಅಧ್ಯಕ್ಷರನ್ನು ಒಳಗೊಂಡು ಸಂಪೂರ್ಣ ತನಿಖೆ ಮಾಡಿ ಈ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಗೊಂಡ ಅನುದಾನವನ್ನು ವಾಪಸ್ ಪಡೆದುಕೊಂಡು ಹೊಸ ಕಟ್ಟಡವನ್ನು ನಿರ್ಮಾಣ ಮಾಡಬೇಕು. ಕೆಕೆಆರ್‌ಡಿಬಿಯಿಂದ ಗುತ್ತಿಗೆದಾರನ ಲೈಸೆನ್ಸ್ ರದ್ದು ಮಾಡಬೇಕು” ಎಂದು ಎಸ್ಎಫ್ಐ ಒತ್ತಾಯಿಸಿದೆ.
“ಕೂಡಲೇ ಗಾಯಗೊಂಡ ವಿದ್ಯಾರ್ಥಿಯ ಸಂಪೂರ್ಣ ಆಸ್ಪತ್ರೆ ವೆಚ್ಚವನ್ನು ಸಂಬಂಧಪಟ್ಟ ಸರ್ಕಾರವೇ ಹೊರಬೇಕು. ಭವಿಷ್ಯದಲ್ಲಿ ಈ ಅಪಘಾತದಿಂದಾದ ಪೆಟ್ಟಿನಿಂದ ಯಾವುದೇ ಆರೋಗ್ಯ ಸಮಸ್ಯೆ ಆದಲ್ಲಿ ಸರ್ಕಾರವೇ ಅದಕ್ಕೆ ಹೊಣೆಯಾಗಬೇಕಗುತ್ತದೆ ಹಾಗೂ ಅರುಣ್ ಕುಟುಂಬಕ್ಕೆ 5-10 ಲಕ್ಷ ರೂ. ಪರಿಹಾರ ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಮಕ್ಕಳ ಆಯೋಗಕ್ಕೆ ದೂರು ನೀಡಲಾಗುವುದು. ಬಿಇಒ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಮತ್ತು ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು” ಎಂದು ಎಸ್ಎಫ್ಐ ಎಚ್ಚರಿಸಿದೆ.
ಈ ಸುದ್ದಿ ಓದಿದ್ದೀರಾ? ಶಾಸಕ ಭರತ್ ಶೆಟ್ಟಿಯವರು ಶಂಕರಾಚಾರ್ಯ ಪೀಠಾಧಿಪತಿಗಳ ಹೇಳಿಕೆ ಟೀಕೆ ಮಾಡುತ್ತಿದ್ದಾರೆಯೇ?: ರಕ್ಷಿತ್ ಶಿವರಾಂ
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಾಲೂಕು ಅಧ್ಯಕ್ಷ ವಿಶ್ವ ಅಂಗಡಿ, ವಿನಯ ಕುಮಾರ್ ಹಟ್ಟಿ, ಆಕಾಶ್, ಚೇತನ್, ವಿನೋದ್, ಕಿರಣ್ ಕುಮಾರ್ ಸೇರಿದಂತೆ ಅನೇಕರು ಇದ್ದರು.
