ಬಾಲಿವುಟ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು, ‘ತಾವು ಪ್ರತಿನಿಧಿಸುವ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಜನರು ತಮ್ಮನ್ನು ಭೇಟಿ ಮಾಡಲು ಬಯಸಿದರೆ, ತಮ್ಮ ಆಧಾರ್ ಕಾರ್ಡ್‌ಗಳನ್ನು ತರಬೇಕು’ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕಂಗನಾ ಮತ್ತು ಬಿಜೆಪಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ, “ಕ್ಷೇತ್ರದ ಜನರು ತಮ್ಮನ್ನು ಭೇಟಿ ಮಾಡಲು ಆಧಾರ್ ಕಾರ್ಡ್‌ಅನ್ನು ಜೊತೆಗೆ ತರಬೇಕು. ಮಾತ್ರವಲ್ಲದೆ, ತಮ್ಮ ಸಮಸ್ಯೆ ಆಥವಾ ಭೇಟಿಯ ಉದ್ದೇಶವನ್ನು ಪತ್ರದ ಮೂಲಕ ತಿಳಿಸಬೇಕು” ಎಂದು ಹೇಳಿದ್ದಾರೆ.
“ಹಿಮಾಚಲ ಪ್ರದೇಶವು ಹೆಚ್ಚು ಪ್ರವಾಸಿಗರು ಬರುವ ಸ್ಥಳವಾಗಿದೆ. ಆದ್ದರಿಂದ, ಮಂಡಿ ಪ್ರದೇಶದಿಂದ ಆಧಾರ್ ಕಾರ್ಡ್ ಇಟ್ಟುಕೊಳ್ಳುವುದು ಅವಶ್ಯಕವಾಗಿದೆ. ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ, ಕಲಸಗಳ ಬಗ್ಗೆ ಪತ್ರದಲ್ಲಿ ಬರೆದು ಕೊಡಬೇಕು” ಎಂದು ಹೇಳಿದ್ದಾರೆ.
“ಹಿಮಾಚಲದ ಉತ್ತರ ಭಾಗದ ಜನರು ತನ್ನನ್ನು ಭೇಟಿಯಾಗಲು ಬಯಸಿದರೆ, ಅವರು ಮನಾಲಿಯಲ್ಲಿರುವ ತಮ್ಮ ಮನೆಗೆ ಭೇಟಿ ನೀಡಬಹುದು. ಮಂಡಿಯಲ್ಲಿರುವ ಜನರು ನಗರದ ತಮ್ಮ ಕಚೇರಿಗೆ ಬರಬಹುದು” ಎಂದು ಅವರು ಹೇಳಿದ್ದಾರೆ.
ಕಂಗನಾ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಂಗನಾ ರಣಾವತ್ ವಿರುದ್ಧ ಸ್ಪರ್ಧಿಸಿ, ಸೋತಿದ್ದ ಕಾಂಗ್ರೆಸ್ ನಾಯಕ, ಹಿಮಾಚಲದ ಹಾಲಿ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು, ಕಂಗನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಕ್ಷೇತ್ರದ ಜನರು ಅವರನ್ನು ಭೇಟಿ ಮಾಡಲು ಬಯಸಿದರೆ, ಆಧಾರ್ ಕಾರ್ಡ್ ತರುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
“ನಾವು ಜನಪ್ರತಿನಿಧಿಗಳು. ಹಾಗಾಗಿ ರಾಜ್ಯದ ಪ್ರತಿಯೊಂದು ವರ್ಗದ ಜನರನ್ನು ಭೇಟಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಅದು ಸಣ್ಣ ಕೆಲಸವಾಗಲಿ, ದೊಡ್ಡ ಕೆಲಸವಾಗಲಿ, ನೀತಿ ವಿಷಯವಾಗಲಿ ಅಥವಾ ವೈಯಕ್ತಿಕ ಕೆಲಸವಾಗಲಿ – ಭೇಟಿಗೆ ಯಾವುದೇ ಗುರುತಿನ ಚೀಟಿಯ ಅಗತ್ಯವಿಲ್ಲ. ಒಬ್ಬ ವ್ಯಕ್ತಿ ಸಾರ್ವಜನಿಕ ಪ್ರತಿನಿಧಿಯ ಬಳಿಗೆ ಬರುತ್ತಿದ್ದಾರೆ ಎಂದರೆ, ಅವರು ಯಾವುದೋ ಕೆಲಸಕ್ಕಾಗಿ ಬರುತ್ತಿದ್ದಾರೆ ಎಂದೇ ಅರ್ಥ. ಭೇಟಿಗೆ ಬರುವವರು ಪತ್ರ ಬರೆದುಕೊಂಡು ಬರಬೇಕೆಂದು ಕೇಳುವುದು ಸರಿಯಲ್ಲ” ಎಂದು ಹೇಳಿದ್ದಾರೆ.