ಚಿಕ್ಕಬಳ್ಳಾಪುರದ ಜೆ ಪಿ ನಗರ (ಬೀಚಗಾನಹಳ್ಳಿ ಕ್ರಾಸ್) ಗ್ರಾಮದ ಗೋಪಾಲಪ್ಪ ಎಂಬುವವರ ಮೇಲೆ ದೌರ್ಜನ್ಯ ಎಸಗಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಸಂಸ ಗುಡಿಬಂಡೆ ತಾಲೂಕು ಘಟಕ ತೀವ್ರವಾಗಿ ಖಂಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಜೆ ಪಿ ನಗರ (ಬೀಚಗಾನಹಳ್ಳಿ ಕ್ರಾಸ್) ಗ್ರಾಮದ ಗೋಪಾಲಪ್ಪ ಎಂಬುವವರ ಮೇಲೆ ಚಿನ್ನಪ್ಪನಹಳ್ಳಿ ಗ್ರಾಮದ ಗ್ಯಾದಿ ವೆಂಕಟರಮಣಪ್ಪ ಮತ್ತು ಈತನ ಮಗ ಒಗ್ಗೂಡಿ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಕೊಲೆ ಬೆದರಿಕೆ ನೀಡಿದ್ದಾರೆಂದು ದಸಂಸ ಗುಡಿಬಂಡೆ ತಾಲೂಕು ಘಟಕ ತೀವ್ರವಾಗಿ ಆರೋಪಿಸಿದೆ.
ಆರೋಪಿಗಳನ್ನು ಕೂಡಲೇ ಬಂಧಿಸಿ ಸಂತ್ರಸ್ತ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು. ನಿದ್ದೆಯಲ್ಲಿರುವ ಜಿಲ್ಲಾಡಳಿತ ಸಂತ್ರಸ್ಥ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಿ ಮನೋಸ್ಥೈರ್ಯ ತುಂಬಬೇಕು. ಹತೆಗೆ ಈ ಪ್ರಕರಣಕ್ಕೆ ವಿಶೇಷ ಅಭಿಯೋಜಕರನ್ನು ನೇಮಿಸಿ ಆರೋಪಿಗಳನ್ನು ತೀವ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ದಸಂಸ ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ಗುಡಿಬಂಡೆ ಗಂಗಪ್ಪ ಒತ್ತಾಯಿಸಿದ್ದಾರೆ.
ಘಟನೆ ಹಿನ್ನೆಲೆ
ಗುಡಿಬಂಡೆ ಗಂಗಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗೋಪಾಲಪ್ಪ ಎಂಬುವವರ ಮಗ ವೆಂಕಟರಮಣಪ್ಪನ ಬಳಿ ಕೆಲಸ ಮಾಡುತ್ತಿದ್ದ. ಅವನಿಗೆ ಸಂಬಳವನ್ನು ಕೊಟ್ಟಿರಲಿಲ್ಲ. ಸಂಬಳ ಪಡೆಯುವ ಮುನ್ನವೇ ಗೋಪಾಲಪ್ಪನವರ ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಹಾಗಾಗಿ ಅವರ ತಂದೆ ಮಗನ ಸಂಬಳದ ಹಣವನ್ನು ಕೊಡುವಂತೆ ಕೇಳುತ್ತಿದ್ದರು. ಇದರಿಂದ ಕುಪಿತರಾದ ವೆಂಕಟರಮಣಪ್ಪ ಮತ್ತು ಈತನ ಮಗ ಕೈಯಲ್ಲಿದ್ದ ರಾಡ್‌ನಿಂದ ತಲೆಗೆ, ಎಡಗೈ ಮತ್ತು ಎಡ ಮೊಣಕಾಲಿಗೆ ಹೊಡೆದು ಗಾಯಪಡಿಸಿದ್ದು, “ಕೊಟ್ಟಿರುವ ಹಣ ಪದೇಪದೆ ಕೇಳುತ್ತೀಯ, ಕೊರಚ ನಾ ಕೊಡಕ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಸಾಯಿಸಿಬಿಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವುದರಿಂದ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರು ದಾಖಲಿಸಿದ್ದಾರೆ” ಎಂದರು.
“ಸೋಮೇನಹಳ್ಳಿ ಹೋಬಳಿಯ ಜೆ ಪಿ ನಗರ(ಬೀಚಗಾನಹಳ್ಳಿ ಕ್ರಾಸ್)ದಲ್ಲಿ ಘಟನೆ ನಡೆದಿದೆ.
ಜುಲೈ 15ರಂದು ಆರೋಪಿಯ ವಿರುದ್ಧ ಸಂತ್ರಸ್ತ ಗೋಪಾಲಪ್ಪ ನೀಡಿದ್ದ ದೂರಿನ ಮೇರೆಗೆ ವಿಚಾರಣೆ ನಡೆಸಲು ಬಂದ ಪೊಲೀಸರಿಗೆ ಆರೋಪಿಯು ಸ್ಪಂದಿಸದೇ ಅಸಡ್ಡೆಯಿಂದ ಪ್ರತಿಕ್ರಿಯಿಸಿದ್ದಾನೆ. ನಂತರ ಜು.16ರಂದು ಬೆಳಿಗ್ಗೆ ಗೋಪಾಲಪ್ಪ ಅವರ ಜೊತೆ ಮಾತನಾಡುವ ನೆಪದಲ್ಲಿ ಬೇರೆಯವರಿಂದ ಮನೆಯಿಂದ ಹೊರಗೆ ಕರೆಯಿಸಿದ ಆರೋಪಿಗಳು ಸಾರ್ವಜನಿಕ ಬೀದಿಯಲ್ಲಿ ಜಾತಿ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ” ಎಂದು ತಿಳಿಸಿದರು.
“ಗಾಯಾಳುವನ್ನು ಗುಡಿಬಂಡೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀವ್ರ ರಕ್ತಸ್ರಾವ ಆಗುತ್ತಿರುವುದನ್ನು ಗ್ರಹಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ವರ್ಗಾಯಿಸಿದ್ದಾರೆ. ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ತಲೆ ಹಾಗೂ ಎಡಭಾಗಗಳಿಗೆ ಹೊಡೆದು ತೀವ್ರ ಗಾಯವಾಗಿರುವ ಕಾರಣ 10 ಹೊಲಿಗೆ ಹಾಕಿರುತ್ತಾರೆ. ಎಡಗೈ ಮತ್ತು ಎಡಗಾಲು ಮೂಳೆಗಳು ಮುರಿದಿವೆ. ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯಾಧಿಕಾರಿಗಳು ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಇದೀಗ ಗೋಪಾಲಪ್ಪ ಚೇತರಿಸಿಕೊಳ್ಳುತ್ತಿದ್ದು, ನಂತರದ ದಿನಗಳಲ್ಲಿ ಹೆಚ್ಚಿನ ವಿಚಾರಗಳು ತಿಳಿಯಬಹುದು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೆ ಎಸ್ ವೈನ್ ಲ್ಯಾಂಡ್ ಸ್ಥಳಾಂತರಕ್ಕೆ ಒತ್ತಾಯ; ಜು.19ರಂದು ಪ್ರತಿಭಟನೆ
ಸಂತ್ರಸ್ತ ಗೋಪಾಲಪ್ಪನವರ ಇಬ್ಬರು ಗಂಡು ಮಕ್ಕಳು ಪರೋಕ್ಷವಾಗಿ ಇಂತಹ ದೌರ್ಜನ್ಯಗಳಿಗೆ ಬಲಿಯಾಗಿದ್ದು, ಈ ಹಲ್ಲೆಯಿಂದ ಇವರ ಕುಟುಂಬ ತೀವ್ರ ಆಘಾತಕ್ಕೆ ಗುರಿಯಾಗಿದೆ. ಪೊಲೀಸ್ ಇಲಾಖೆ ಈಗಲಾದರೂ ಎಚ್ಚೆತ್ತುಕೊಂಡು ಅನ್ಯಾಯದ ವಿರುದ್ಧ ಕ್ರಮ ಕೈಗೊಂಡು ಪ್ರಾಬಲ್ಯದ ಸೊಕ್ಕು ಅಡಿಗಿಸಿ, ಸಂತ್ರಸ್ತರಿಗೆ ನ್ಯಾಯ ದೊರಕಿಸುತ್ತಾರೋ ಅಥವಾ ದೌರ್ಜನ್ಯ ಮೆರೆಯುತ್ತಿರುವ ಪ್ರಾಬಲ್ಯವನ್ನು ಪೋಷಿಸುತ್ತಾರೋ ಕಾದು ನೋಡಬೇಕು” ಎಂದು ಸವಾಲು ಹಾಕಿದರು.
