ಬಾಂಗ್ಲಾದೇಶ ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಬಾಂಗ್ಲಾದೇಶದಿಂದ ಸುಮಾರು ಒಂದು ಸಾವಿರ ಭಾರತೀಯ ವಿದ್ಯಾರ್ಥಿಗಳು ತವರೂರಿಗೆ ವಾಪಸ್ ಬಂದಿದ್ದಾರೆ. ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಭಾರತೀಯ ವಿದ್ಯಾರ್ಥಿಗಳಿಗೆ ಭಾರತ-ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಸುರಕ್ಷಿತವಾಗಿ ಭಾರತಕ್ಕೆ ಬರಲು ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಈವೆರೆಗೆ ಸುಮಾರು 778 ಭಾರತೀಯ ವಿದ್ಯಾರ್ಥಿಗಳು ವಿವಿಧ ಭೂ ಬಂದರುಗಳ ಮೂಲಕ ಯಶಸ್ವಿಯಾಗಿ ಭಾರತಕ್ಕೆ ಮರಳಿದ್ದಾರೆ. ಹೆಚ್ಚುವರಿಯಾಗಿ, ಸುಮಾರು 200 ವಿದ್ಯಾರ್ಥಿಗಳು ಢಾಕಾ ಮತ್ತು ಚಿತ್ತಗಾಂಗ್ ವಿಮಾನ ನಿಲ್ದಾಣಗಳ ಮೂಲಕ ಮನೆಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶದಾದ್ಯಂತ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಇನ್ನೂ 4,000 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಹೈಕಮಿಷನ್ ನಿಯಮಿತ ಸಂಪರ್ಕದಲ್ಲಿದೆ. ಕೋರಿಕೆಯ ಮೇರೆಗೆ ನೇಪಾಳ ಮತ್ತು ಭೂತಾನ್‌ನ ವಿದ್ಯಾರ್ಥಿಗಳಿಗೆ ಭಾರತಕ್ಕೆ ದಾಟಲು ಸಹಾಯ ಮಾಡಲಾಗಿದೆ.
“ಹಲವು ವಿದ್ಯಾರ್ಥಿಗಳು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು. ಆದರೆ ಸ್ಥಳದಲ್ಲಿ ಕರ್ಫ್ಯೂ ಇರುವುದರಿಂದ ಅವರು ವಿಮಾನ ನಿಲ್ದಾಣಕ್ಕೆ ಬರಲು ಸಾಧ್ಯವಾಗಲಿಲ್ಲ. ಹಲವಾರು ವಿಮಾನಗಳನ್ನು ಸಹ ರದ್ದುಗೊಳಿಸಲಾಗಿದೆ. ಇನ್ನೂ ಅನೇಕ ಭಾರತೀಯ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳ ಹಾಸ್ಟೆಲ್‌ಗಳಲ್ಲಿದ್ದಾರೆ, ಅಲ್ಲಿ ವಾತಾವರಣ ಇನ್ನೂ ಶಾಂತಿಯುತವಾಗಿದೆ” ಎಂದು ಎನ್‌ಡಿಟಿವಿಗೆ ಬಾಂಗ್ಲಾದೇಶದಿಂದ ಹಿಂದಿರುಗಿದ ಭಾರತೀಯ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬಾಂಗ್ಲಾದೇಶ | ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; 105 ಮಂದಿ ಸಾವು, ಕರ್ಫ್ಯೂ ಘೋಷಣೆ
ಕಳೆದ ತಿಂಗಳ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆ ಆರಂಭವಾಗಿದ್ದು, ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 115 ಮಂದಿ ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ಬಾಂಗ್ಲಾದೇಶದ ಅಧಿಕಾರಿಗಳು ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಿದ್ದಾರೆ.
1971ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಜನರ ಕುಟುಂಬಗಳಿಗೆ ಶೇಕಡ 30ರಷ್ಟು ಸರ್ಕಾರಿ ಉದ್ಯೋಗ ಮೀಸಲಾತಿಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವ್ಯವಸ್ಥೆಯು ತಾರತಮ್ಯದಿಂದ ಕೂಡಿದೆ ಮತ್ತು ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಅಸಮಾನವಾಗಿ ಪ್ರಯೋಜನವನ್ನು ನೀಡುತ್ತದೆ ಎಂಬುದು ಪ್ರತಿಭಟನಾಕಾರರ ವಾದವಾಗಿದೆ.
Nearly 1000 students return to India amid violent protest in Bangladesh @NewIndianXpress @MEAIndia @ihcdhaka https://t.co/ZQnKnk0D4c
— Yeshi Seli (@YeshiSeli) July 20, 2024