ಮಣ್ಣಿನ ಗುಣ ಅರಿವಿಗೆ ದಕ್ಕಬೇಕೆಂದರೆ ಅದರ ಭೌತ ಗುಣ, ಜೈವಿಕ ಗುಣ, ರಾಸಾಯನಿಕ ಗುಣ ಈ ಎಲ್ಲವುಗಳ ಸಹಸಾಂಗತ್ಯದಿಂದಲೇ ಕಾಣಬೇಕು. ಒಂದು ದೊಡ್ಡ ಬೆಟ್ಟದ ಪೂರ್ಣ ಆಕಾರ ಕಣ್ಣೋಟಕ್ಕೆ ದಕ್ಕಬೇಕೆಂದರೆ ಯಾವ ರೀತಿ ಅದನ್ನು ಎಲ್ಲ ಮಗ್ಗುಲುಗಳಿಂದಲೂ ಕಾಣಬೇಕೊ ಹಾಗೆ…
ಮಣ್ಣಿನಲ್ಲಿ ಘಟಿಸುವ ಕ್ರಿಯೆಗಳನ್ನ “ಇದು ರಾಸಾಯನಿಕ ಕ್ರಿಯೆ, ಇದು ಜೈವಿಕ ಕ್ರಿಯೆ” ಅಂತಾ ವಿಘಟನೆ ಮಾಡಿ ನೋಡಲು ಸಾಧ್ಯವಿಲ್ಲ.
ಉದಾಹರಣೆಗೆ ಮಣ್ಣನ್ನು ಫಲವತ್ತುಗೊಳಿಸಲು ಅದರ ಮೇಲೆ ಮರದ ಚೂರು(wood chips) ಹೊದಿಸುವ ಇಲ್ಲವೇ ಒಣ ಎಲೆಗಳನ್ನು ಹರಹುವ ಪದ್ದತಿಯೊಂದಿದೆ. ಮಣ್ಣಿನ ಮೇಲೆ ಹರಹುವ ಮರದ ಚೂರು ಮತ್ತು ತರಗು ಲಿಗ್ನಿನ್ ಇಲ್ಲವೇ ಲಿಗ್ನೊ ಪ್ರೊಟೀನ್ ಭೌತ ಪದಾರ್ಥ, ಈ ಲಿಗ್ನೊಪ್ರೊಟೀನ್ ಮಣ್ಣಿನ ಜೊತೆಗೆ ಬೆರೆಯಬೇಕೆಂದರೆ ಮೊದಲು ಅದು ಮೆದುವಾಗಬೇಕು. ಮಣ್ಣಿನಲ್ಲಿರುವ ಆಕ್ಟಿನೊಮೈಸೆಟೆಸ್ ಎಂಬ ಹೆಸರಿನ ಶಿಲೀಂಧ್ರ(fungi) ಮರದ ಚೂರುಗಳ ಮೇಲೆ ಬೆಳವಣಿಗೆಯಾಗಿ ‘ಪೆಟ್ರಿಚೊರ್’ ಎಂಬ ಹೆಸರಿನ ರಾಸಾಯನಿಕವನ್ನು ಸ್ರವಿಸುತ್ತದೆ. ಈ ಪೆಟ್ರಿಚೊರ್ ರಾಸಾಯನಿಕವು ಮರದ ಚೂರುಗಳ ಲಿಗ್ನೊಪ್ರೊಟೀನನ್ನು ಮೆದುಗೊಳಿಸುತ್ತದೆ, ಮೆದುಗೊಂಡ ಈ ಲಿಗ್ನೊ ಪ್ರೊಟೀನನ್ನು ‘ಆರ್ಥ್ರೊಪೊಡ್’ ಎಂಬ ಹೆಸರಿನ ಸೂಕ್ಷ್ಮಾಣು ಜೀವಿಗಳು ಪುಡಿ ಮಾಡುತ್ತವೆ. ಪುಡಿಯಾದ ಲಿಗ್ನೊಪ್ರೊಟೀನ್ ಸುತ್ತಲೂ ಮತ್ತಷ್ಟು ಆಕ್ಟಿನೊಮೈಸೆಟೆಸ್ ಶಿಲೀಂಧ್ರಗಳ ಬೆಳವಣಿಗೆಯಾಗಿ ಮತ್ತಷ್ಟು ಮೆದುವಾದ ಮೇಲೆ ಎರೆಹುಳುಗಳು ತಿಂದು ಹಿಕ್ಕೆ ಹಾಕುತ್ತವೆ.
ಏಕಕಾಲಕ್ಕೆ ಮಣ್ಣಿನ ಈ ಫಲವಂತಿಕೆ ಕ್ರಿಯಾ ಸರಪಳಿ ಜೈವಿಕ ಕ್ರಿಯೆಯೂ, ರಾಸಾಯನಿಕ ಕ್ರಿಯೆಯೂ ಆಗಿರುತ್ತದೆ. ಈ ಕ್ರಿಯಾ ಸರಪಳಿ ಒಂದನ್ನು ಬಿಟ್ಟು ಇನ್ನೊಂದಿಲ್ಲದಂತೆ ಪರಸ್ಪರ ಪೂರಕವಾಗಿರುತ್ತದೆ. ಈ ತರದ ವಿವಿಧ ಪೋಷಕ ಸಂಯೋಜನ ಹಂತ(trophique levels)ಗಳ ನಂತರ ಸಸ್ಯ ಜೀವಗಳಿಗೆ ಬೆಳವಣಿಗೆ, ಹೊಸ ಚಿಗುರಿಕ್ಕುವ, ಹೂಗಟ್ಟುವ, ಫಲಗಟ್ಟುವ ಕ್ರಿಯೆಗಳಿಗೆ ಬೇಕಾಗುವ ಮಣ್ಣಿನ ಸೇಂದ್ರಿಯ ಜೀವದ್ರವ್ಯ(Humus) ಉತ್ಪಾದನೆಯಾಗುತ್ತದೆ. ಈ ಜೀವದ್ರವ್ಯಕ್ಕೆ ‘ಪ್ಲಾಸ್ಮ’ ಎಂಬ ವೈಜ್ಞಾನಿಕ ಹೆಸರಿದೆ. ಪ್ರಾಣಿಗಳು ಮತ್ತು ಮನುಷ್ಯರ ರಕ್ತದಲ್ಲಿಯೂ ಪ್ಲಾಸ್ಮ ಇರುತ್ತದೆ. ಈ ಪ್ಲಾಸ್ಮ ಜೀವದ್ರವ್ಯವು ಮನುಷ್ಯರ ರಕ್ತಪ್ರವಾಹದಲ್ಲಿ ಹಿಮೊಗ್ಲೋಬಿನ್, ಬಿಳಿ ರಕ್ತಕಣ, ಕೆಂಪು ರಕ್ತಕಣಗಳನ್ನು ಒಳಗೊಂಡಿರುವಂತೆ ಮಣ್ಣಿನ ಜೀವದ್ರವ್ಯವಾದ ಪ್ಲಾಸ್ಮ ರೂಪದ ಸೇಂದ್ರಿಯ ಪದಾರ್ಥ(humus)ವು ತನ್ನೊಳಗೆ ಸಾರಜನಕ, ರಂಜಕ, ಪೊಟಾಶ್, ಮೆಗ್ನೀಷಿಯಂ, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಕ್ಲೋರಿನ್, ಗಂಧಕ ಮುಂತಾದ ಮಾಧ್ಯಮಿಕ ಪೋಷಕಗಳನ್ನೂ, ಬೊರಾನ್, ಮಾಲಿಬ್ಡಿನಂನಂಥ ಧಾತುಗಳನ್ನೂ ಒಳಗೊಂಡಿರುತ್ತದೆ.
ಅಂಟು ದ್ರವ ರೂಪದಲ್ಲಿರುವ ಪ್ಲಾಸ್ಮ ಜೀವದ್ರವ್ಯದ ರಾಸಾಯನಿಕ ಗುಣವು ಈಗ ಇರುವಂತೆ ಇನ್ನೊಂದು ಗಂಟೆ ಕಳೆದ ನಂತರ ಇರುವುದಿಲ್ಲ. ಅದು ಸದಾಕಾಲವೂ ರಾಸಾಯನಿಕವಾಗಿ ಬದಲಾಗುತ್ತಲೇ ಇರುತ್ತದೆ. ಮಣ್ಣಿನ ಪೋಷಕಗಳ ಬಹುಪಟಲ(broad spectrum)ವನ್ನು ಮೊಟ್ಟ ಮೊದಲಿಗೆ ಪ್ರಕಟಿಸಿದ ಅಮೆರಿಕದ ಮಿಸ್ಸೋರಿ ಯೂನಿವರ್ಸಿಟಿಯ ಮಣ್ಣು ವಿಜ್ಞಾನಿ ಡಾ. ವಿಲಿಯಮ್ ಆಲ್ಬ್ರೆಕ್ಟ್ ಹೇಳಿರುವಂತೆ ಮಣ್ಣಿನ ನಿರಂತರ ಸೇಂದ್ರಿಯ ಗುಣವನ್ನು ಇದು ಹೀಗೇ, ಇದಿಷ್ಟೇ ಅಂತ ಹೇಳಲಾಗುವುದಿಲ್ಲ.
ಇದನ್ನು ಓದಿದ್ದೀರಾ?: ಸಾವಯವ ಕೃಷಿಗೆ ಹೆಸರುವಾಸಿಯಾದ ಪದ್ಮಶ್ರೀ ಪುರಸ್ಕೃತೆ ಕಮಲಾ ಪೂಜಾರಿ ನಿಧನ
ಮಣ್ಣಿನ ನಿರಂತರ ಸೇಂದ್ರಿಯ ಗುಣವನ್ನು ಇದು ಹೀಗೇ, ಇದಿಷ್ಟೇ ಅಂತ ಹೇಳುವುದು ನಿಮ್ಮ ಮನೆಯಲ್ಲಿರುವ ನಾಯಿಯನ್ನು ನಾಯಿ ಅಂತ ಅಷ್ಟೇ ಹೇಳಿದಂತೆ; ಅದು ಯಾವ ನಾಯಿ, ಮುಧೋಳ ತಳಿಯದೊ, ಜರ್ಮನ್ ಷೆಫರ್ಡ್ ತಳಿಯೊ, ರಾಜಾಪಾಳಯ ತಳಿಯದೊ, ಅಲ್ಷೇಷನ್ ತಳಿಯೋ, ಗೋಲ್ಡನ್ ರಿಟ್ರೈವರ್ ತಳಿಯೋ ಅಂತ ನಿರ್ದಿಷ್ಟವಾಗಿ ಹೇಳುವುದನ್ನು ಬಯಸುತ್ತದೆ.
ಹಾಗೆಯೇ ಮಣ್ಣಿನಲ್ಲಿ ಘಟಿಸುವ ನಿರಂತರ ಸೇಂದ್ರಿಯತೆ(Colloidal status)ಯನ್ನು ಕೇವಲ ಜೈವಿಕ(biological) ಎಂದಾಗಲಿ, ಕೇವಲ ರಾಸಾಯನಿಕ(chemical) ಎಂದಾಗಲಿ ಹೇಳಲಾಗುವುದಿಲ್ಲ; ಮಣ್ಣು ಈ ಎಲ್ಲವನ್ನೂ ಒಳಗೊಂಡ ನಿರಂತರ ಘಟಿಸುವಿಕೆ, ಘಟನೆ. ಒಂದು ಅಧ್ಯಯನ ಶಿಸ್ತನ್ನು ಹಿಡಿದು ಹೊರಟರೆ ಮಣ್ಣು ಅದರ ಬಹುಪಟಲದಲ್ಲಿ ನಮಗೆ ದಕ್ಕಲಾರದು.
ಒಂದು ದೊಡ್ಡ ಬೆಟ್ಟದ ಪೂರ್ಣ ಆಕಾರ ಕಣ್ಣೋಟಕ್ಕೆ ದಕ್ಕಬೇಕೆಂದರೆ ಯಾವ ರೀತಿ ಅದನ್ನು ಎಲ್ಲ ಮಗ್ಗುಲುಗಳಿಂದಲೂ ಕಾಣಬೇಕೊ ಹಾಗೆ ಮಣ್ಣಿನ ಗುಣ ಅರಿವಿಗೆ ದಕ್ಕಬೇಕೆಂದರೆ ಅದರ ಭೌತ ಗುಣ, ಜೈವಿಕ ಗುಣ, ರಾಸಾಯನಿಕ ಗುಣ ಈ ಎಲ್ಲವುಗಳ ಸಹಸಾಂಗತ್ಯದಿಂದಲೇ ಕಾಣಬೇಕು. ಮಣ್ಣಿನ ಅಧ್ಯಯನ ಅಂತರ್ ಶಿಸ್ತೀಯ ಅಧ್ಯಯನ.
-ಎಲ್ಸಿ ನಾಗರಾಜ್, ಕವಿ, ಕೃಷಿಕ