ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಪಾಲಿಕೆ ಎದುರು ಪೌರಕಾರ್ಮಿಕರ ಸಂಘವು ಜುಲೈ 19ರಿಂದ ಅನಿರ್ದಿಷ್ಟವಾಧಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಧರಣಿ ಸತ್ಯಾಗ್ರಹದ ಮೂರನೇ ದಿನವಾದ ಇಂದು(ಜುಲೈ 20) ಆಮರಣ ಉಪವಾಸ ಹೋರಾಟದ ಭಾಗವಾಗಿ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೌರಕಾರ್ಮಿಕರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಡಾ. ವಿಜಯ ಗುಂಟ್ರಾಳ ಮಾತನಾಡಿ, “ಪಾಲಿಕೆ ಆಯುಕ್ತರು ಸೌಜನ್ಯಕ್ಕೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ. ಅಲ್ಲದೇ, ಪೌರಕಾರ್ಮಿಕರ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ತಮ್ಮ ಜೀವದ ಹಂಗನ್ನು ತೊರೆದು ಅವಳಿ ನಗರ ಸ್ವಚ್ಛತೆ ಮಾಡುವ ಕಾರ್ಮಿಕರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನ, ರಾಜ್ಯ ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಆದೇಶಗಳನ್ನು ಧಿಕ್ಕರಿಸಿ ದಲಿತ ಪೌರಕಾರ್ಮಿಕರ ಮೇಲೆ ಶೋಷಣೆ ಹಾಗೂ ದೌರ್ಜನ್ಯ ಮಾಡುತ್ತಿದ್ದಾರೆ. ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳು ಸ್ಥಳೀಯ ರಾಜಕಾರಣಿಯ ಒತ್ತಡಕ್ಕೆ ಮಣಿದು ಪೌರ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದೆ ಹೋರಾಟ ನಿರತ ಪೌರಕಾರ್ಮಿಕರಿಗೆ ಆಗಬಹುದಾದ ಸಾವು-ನೋವುಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡುತ್ತೇವೆ” ಎಂದರು.
ಖಾಯಂ ಮಾಡಲು ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ 200 ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ. 100 ಕ್ಕೂ ಹೆಚ್ಚು ಪೌರಕಾರ್ಮಿಕರು ನಿವೃತ್ತಿ ಹೊಂದಿರುವ ಪರಿಣಾಮ, 300 ಪೌರಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗಿದ್ದಾವೆ. ಇದಕ್ಕೆ ಪಾಲಿಕೆಯ ದಲಿತ ವಿರೋಧಿ ನೀತಿ ಕಾರಣವಾಗಿದೆ ಮತ್ತು ರಾಜ್ಯ ಸರ್ಕಾರ ನೇರ ಪಾವತಿಗೆ ಅನುಮೋದನೆ ನೀಡದೆ ಕಳೆದ ಒಂಬತ್ತು ತಿಂಗಳಿನಿಂದ ಸತಾಯಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ ಅವರು, ಪೌರ ಕಾರ್ಮಿಕರ ಮೇಲೆ ಅಮಾನವೀಯ ಶೋಷಣೆ, ವಂಚನೆ ನಡೆದಿದೆ. ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಒತ್ತಾಯ ಮಾಡುತ್ತೇವೆ ಎಂದು ವಿಜಯ ಗುಂಟ್ರಾಳ ಹೇಳಿದರು.
ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ರಾಜಕಾರಣಿಗಳ ಕೈಗೊಂಬೆಯಾಗಿರುವ ಪಾಲಿಕೆ ಆಯುಕ್ತರ ವರ್ಗಾವಣೆಗೆ ಆಗ್ರಹಿಸಿ ಮುಖ್ಯಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ ಕೇಂದ್ರೀಯ ವಿವಿ ವಿವಾದ: ಆರ್‌ಎಸ್‌ಎಸ್‌ನ ಧ್ಯೇಯಗೀತೆ ಹಾಡಿದರು, ಬೆದರಿಕೆ ಒಡ್ಡಿದರು
ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ನೀಲವ್ವ ಬೆಳವಟಗಿ, ಪಾರವ್ವ ಹೊಸಮನಿ, ರಾಧಾ ಬಾಗಲಾಡ, ರಾಜು ನಾಗರಾಳ, ಪರಶುರಾಮ್ ಕಡಕೋಳ, ಕನಕಪ್ಪ ಕೋಟಬಾಗಿ, ಮದನ್ ಬೀಳಗಿ, ನಾಗೇಶ್ ಚುರಮುರಿ, ಸೋಮು ಮೊರಬದ, ರೇಣುಕಾ ಬೆಳ್ಳಾರಿ, ಶರಣಪ್ಪ ಅಮರಾವತಿ, ದತ್ತಪ್ಪ ಆಪುಸಪೇಟ್, ನಾಗರಾಜ್ ದೊಡ್ಡಮನಿ, ರೇಣುಕಾ ನಾಗರಾಳ, ತಾಯಪ್ಪ ಹಾಳಾಕೇರಿ, ಸುನಿಲ್ ದೊಡ್ಡಮನಿ, ಶರೀಫ್ ಮಸರಕಲ್, ತಾಯಪ್ಪ ಕಾಣೆಕಲ್, ವೆಂಕಟೇಶ್ ಪಾಲವಾಯಿ, ಶಾಂತವ್ವ ಚುರಮುರಿ, ನಾಗಮ್ಮ ಕರೆಪಾತ್, ದೇವಕ್ಕ ಕಟ್ಟಿಮನಿ, ಸುಮಿತ್ರಾ ಕೊಂಡಪಲ್ಲಿ ಮುಂತಾದ ಪೌರಕಾರ್ಮಿಕರು ಉಪಸ್ಥಿತರಿದ್ದರು.
