ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಪಂಚಾಯಿತಿ ಮುಂಭಾಗ ಮಸಣ ಕಾರ್ಮಿಕರು ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಸಂಘದ ಪದಾಧಿಕಾರಿಗಳು, “ಮಸಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಉದ್ಯೋಗ ಭದ್ರತೆ, ನಿಗದಿತ ವೇತನವೂ ಇಲ್ಲದೆ ಮಸಣ ಕಾರ್ಮಿಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಮಸಣ ಕಾರ್ಮಿಕರನ್ನು ಸರಕಾರ ನಿರ್ಲಕ್ಷಿಸುತ್ತಿದೆ” ಎಂದು ದೂರಿದರು.
“ಹೆಣಗಳನ್ನು ಹೂಳುವ ಕೆಲಸದಲ್ಲಿ ತೊಡಗಿರುವ ನಾವು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ. ಆದ್ದರಿಂದ ಸರಕಾರ ಮಸಣ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸುವ ನಿಟ್ಟಿನಲ್ಲಿ, ಪ್ರತಿ ಮಸಣಕ್ಕೆ ಒಬ್ಬ ಮಸಣ ನಿರ್ವಾಹಕರನ್ನು ನೇಮಿಸಬೇಕು. ಸ್ಥಳೀಯ ಸಂಸ್ಥೆಗಳ ಮೂಲಕ ಕಾರ್ಮಿಕರಿಗೆ ಅಗತ್ಯವಿರುವ ಗುದ್ದಲಿ, ಪಿಕ್ಕಾಶಿ, ಸಲಾಕೆ ಇತ್ಯಾದಿ ಸಲಕರಣೆಗಳನ್ನು ವಿತರಿಸುವ ಕೆಲಸಕ್ಕೆ ಮುಂದಾಗಬೇಕು. ಮಸಣ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು, ಸೇವೆಯನ್ನು ಪರಿಗಣಿಸಿ ನಿವೇಶನಗಳನ್ನು ಹಂಚಿಕೆ ಮಾಡಬೇಕು” ಎಂದು ಒತ್ತಾಯಿಸಿದರು.
ಮಸಣ ಕಾರ್ಮಿಕರ ಸಂಘ ಮತ್ತು ತಮಟೆ ಕಲಾವಿದರ ಸಂಘದ ಜಿಲ್ಲಾ ಸಂಚಾಲಕ ಮುನಿಯಪ್ಪ ಕೆ ಮಾತನಾಡಿ, “ಮಸಣ ಕಾರ್ಮಿಕರ ಕೆಲಸವನ್ನು ಉದ್ಯೋಗ ಖಾತರಿ ಯೋಜನೆಯಡಿ ಪರಿಗಣಿಸಿ, ಗುಂಡಿ ತೋಡುವ ಕೆಲಸಕ್ಕೆ ಕನಿಷ್ಠ ವೇತನ ನಿಗದಿಪಡಿಸಬೇಕು. ತಮಟೆ ಕಲಾವಿದರು ಸಹ ಸಂಕಷ್ಟದಲ್ಲಿದ್ದು, ಅವರಿಗೂ ಸ್ಥಳೀಯ ಆಡಳಿತ ವತಿಯಿಂದ ತಮಟೆ ವಿತರಣೆ ಮಾಡಬೇಕು” ಎಂದು ಆಗ್ರಹಿಸಿದರು.
ಇದೇ ವೇಳೆ ಬಾಗೇಪಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಧರಣಿಯಲ್ಲಿ ದಲಿತ ಹಕ್ಕುಗಳ ಜಿಲ್ಲಾ ಅಧ್ಯಕ್ಷ ಕೆ.ನಾಗರಾಜು, ತಾಲೂಕು ಅಧ್ಯಕ್ಷ ಜಿ.ಕೃಷ್ಣಪ್ಪ ಚಂಚರಾನಪಲ್ಲಿ, ನಗರ ಸಂಚಾಲಕ ಅಶ್ವತ್ಥನಾರಾಯಣ, ದಲಿತ ಮುಖಂಡರಾದ ಚನ್ನರಾಯಪ್ಪ ಹಾಗೂ ಸಿಐಟಿಯು ತಾಲೂಕು ಕಾರ್ಯದರ್ಶಿ ಮುಸ್ತಫಾ, ನಾರಾಯಣ ಸ್ವಾಮಿ, ರಾಮಾಂಜಿ ಮತ್ತು ಮಸಣ ಕಾರ್ಮಿಕರ ಮುಖಂಡರಾದ ಆದಿ ನಾರಾಯಣಪ್ಪ, ಕೃಷ್ಣಪ್ಪ, ಅಶ್ವತ್ಥಪ್ಪ, ಮೂರ್ತಿ, ನರಸಿಂಹಪ್ಪ, ವೆಂಕಟರಮಣ, ಸುಬ್ಬರಾಯಪ್ಪ ಸೇರಿದಂತೆ ಇತರೆ ಮಸಣ ಕಾರ್ಮಿಕರು ಹಾಗೂ ತಮಟೆ ಕಲಾವಿದರು ಭಾಗವಹಿಸಿದ್ದರು.
