ಸಿಕ್ಕಿಂಗೆ ಪ್ರವೇಶಿಸುವ ಎಲ್ಲಾ ಪ್ರವಾಸಿ ವಾಹನಗಳು ಈಗ ಕಡ್ಡಾಯವಾಗಿ ದೊಡ್ಡ ಕಸದ ಚೀಲವನ್ನು ಕೊಂಡೊಯ್ಯಬೇಕು ಎಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಪರಿಸರದ ಸುಸ್ಥಿರತೆಗೆ ಎಲ್ಲರ ಸಹಭಾಗಿತ್ವ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ತ್ಯಾಜ್ಯ ವಿಲೇವಾರಿಗೆ ಕಸದ ಚೀಲಗಳನ್ನು ಬಳಸುವ ಬಗ್ಗೆ ಪ್ರಯಾಣಿಕರಿಗೆ ತಿಳಿಸುವುದು ಪ್ರವಾಸ ನಿರ್ವಾಹಕರು, ಟ್ರಾವೆಲ್ ಏಜೆನ್ಸಿಗಳು ಮತ್ತು ವಾಹನ ಚಾಲಕರ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಇದನ್ನು ಓದಿದ್ದೀರಾ? ಶಾಸಕ ಸ್ಥಾನಕ್ಕೆ ಸಿಕ್ಕಿಂ ಸಿಎಂ ಪತ್ನಿ ರಾಜೀನಾಮೆ: ಒಂದು ದಿನದ ಹಿಂದಷ್ಟೆ ಪ್ರೇಮ್ ಸಿಂಗ್ ಪ್ರಮಾಣವಚನ
ಈ ಆದೇಶವನ್ನು ಪಾಲಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರವಾಸಿ ವಾಹನಗಳ ಯಾದೃಚ್ಛಿಕ ತಪಾಸಣೆ ನಡೆಸಲಾಗುವುದು ಮತ್ತು ಆದೇಶವನ್ನು ಉಲ್ಲಂಘಿಸುವ ಯಾವುದೇ ವಾಹನ ಕಂಡುಬಂದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸುಸ್ಥಿರತೆಯ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸಲು ಸ್ವಚ್ಛತೆಯ ಬಗ್ಗೆ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 ಲಕ್ಷಕ್ಕೂ ಹೆಚ್ಚು ನಿವಾಸಿಗಳನ್ನು ಹೊಂದಿರುವ ಸಿಕ್ಕಿಂ ಭಾರತದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದ್ದು, ಅದರ ಸುಂದರವಾದ ಹಿಮಾಲಯ ತಾಣಗಳಿಗೆ ಪ್ರತಿ ವರ್ಷ 20 ಲಕ್ಷಕ್ಕೂ ಹೆಚ್ಚು ಸಂದರ್ಶಕರು ಬರುತ್ತಾರೆ ಎಂದು ಹೇಳಿದರು.