ನವದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಬಿಹಾರ ಹಾಗೂ ಆಂಧ್ರ ಪ್ರದೇಶಗಳಿಗೆ ವಿಶೇಷ ಸ್ಥಾನಮಾನಕ್ಕಾಗಿ ಜೆಡಿಯು ಹಾಗೂ ವೈಎಸ್‌ಆರ್‌ಸಿಪಿ ಪಕ್ಷಗಳ ನಾಯಕರು ಬೇಡಿಕೆಯಿಟ್ಟಿದ್ದಾರೆ. ಆದರೆ ಟಿಡಿಪಿ ಈ ವಿಷಯದಲ್ಲಿ ಮೌನವಹಿಸಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಇಂದು ಸರ್ವಪಕ್ಷಗಳ ಸಭೆ ನಡೆಯಿತು.ಈ ಸಭೆಯಲ್ಲಿ ಜೆಡಿಯು ಮತ್ತು ವೈಎಸ್‌ಆರ್‌ಸಿಪಿ ಕ್ರಮವಾಗಿ ಬಿಹಾರ ಮತ್ತು ಆಂಧ್ರ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದವು. ಆದರೆ ಈ ವಿಷಯದಲ್ಲಿ ಟಿಡಿಪಿ ಮಾತ್ರ ಮೌನವಹಿಸಿತ್ತು” ಎಂದು ತಿಳಿಸಿದ್ದಾರೆ.
“ರಾಜಕೀಯ ವಾತಾವರಣ ಹೇಗೆ ಬದಲಾಗಿದೆ ಊಹಿಸಿ. ಸರ್ವಪಕ್ಷ ಸಭೆಯಲ್ಲಿ ಬಿಜೆಡಿ ನಾಯಕರು ಲೋಕಸಭೆ ಹಾಗೂ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆಯಂತೆ ಒಡಿಶಾ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಬಿಜೆಪಿ ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ ಭರವಸೆ ನೀಡಿದ್ದರು. ಇದನ್ನು ಈಡೇರಿಸುವಂತೆ ರಕ್ಷಣಾ ಸಚಿವರಿಗೆ ಬಿಜೆಡಿ ನಾಯಕರು ನೆನಪಿಸಿದರು” ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ‘ಭಗವಂತ’ನಿಗೇ ಎಚ್ಚರಿಕೆ ಕೊಟ್ಟರೆ ಭಾಗವತ್?

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಡಿ ನಾಯಕ ಸಸ್ಮಿತ್ ಪಾತ್ರ, ತಮ್ಮ ಪಕ್ಷ ವಿಶೇಷ ಸ್ಥಾನಮಾನಕ್ಕಾಗಿ ಒತ್ತಾಯಿಸಿದೆ ಎಂದು ತಿಳಿಸಿದರು.
ಎನ್‌ಡಿಎ ಪ್ರಮುಖ ಮಿತ್ರ ಪಕ್ಷವಾಗಿರುವ ಜೆಡಿಯು ಇತ್ತೀಚಿಗಷ್ಟೆ ತಮ್ಮ ರಾಜ್ಯದ ವಿಧಾನಸಭೆಯಲ್ಲಿ ಬಿಹಾರಕ್ಕೆ ವಿಶೇಷ ಸ್ಥಾನಮಾನ ಅಥವಾ ಪ್ಯಾಕೇಜ್ ನೀಡುವಂತೆ ನಿರ್ಣಯ ಅಂಗೀಕರಿಸಿತ್ತು.
ವೈಎಸ್‌ಆರ್‌ಸಿಪಿ ನಾಯಕರು ಕೂಡ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.