ದೇಶಾದ್ಯಂತ ಜಾತಿ ದೌರ್ಜ್ಯನದ ಘಟನೆಗಳು ಹೆಚ್ಚುತ್ತಲೇ ಇವೆ. ಇತ್ತೀಚಿನ ಘಟನೆಯೊಂದರಲ್ಲಿ, ಪೇಟ ಮತ್ತು ಸನ್ ಗ್ಲಾಸ್ ಧರಿಸಿ, ಇನ್‌ಸ್ಟಾಗ್ರಾಂನಲ್ಲಿ ಫೋಟೋ ಅಪ್‌ಲೋಡ್ ಮಾಡಿದ್ದಕ್ಕೆ ದಲಿತ ಯುವಕನ ಮೇಲೆ ಪ್ರಬಲ ಜಾತಿಯ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಸಯೆಬಾಪುರ ಗ್ರಾಮದಲ್ಲಿ ಜುಲೈ 17ರಂದು ಘಟನೆ ನಡೆದಿದೆ. ಹಲ್ಲೆಗೊಳಗಾದ ದಲಿತ ಯುವಕ ಅಜಯ್ ಪರ್ಮಾರ್ ಅವರು ಹಿಮಂತ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ಪ್ರಬಲ ಜಾತಿಯ ಕ್ಷತ್ರಿಯರೆಂದು ಪರಿಗಣಿಸುವ ದರ್ಬಾರ್ ಸಮುದಾಯಕ್ಕೆ ಸೇರಿದ ನಾಲ್ವರು ತನ್ನನ್ನ ಥಳಿಸಿದ್ದಾರೆ. ಆರೋಪಿಗಳನ್ನು ನನ್ನನ್ನು ನವನಗರ ಬಸ್ ನಿಲ್ದಾಣದ ಬಳಿ, ಸುತ್ತುವರೆದು ದಾಳಿ ನಡೆಸಿದ್ದಾರೆ. ‘ದರ್ಬಾರ್ ಸಮುದಾಯದ ಜನರು ಮಾತ್ರ ಸಫಾ ಮತ್ತು ಸನ್ ಗ್ಲಾಸ್ ಧರಿಸಬೇಕು. ಬೇರೆ ಯಾರೂ ಅವುಗಳನ್ನು ಧರಿಸಬಾರದು’ ಎಂದು ಆರೋಪಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಪರ್ಮಾರ್ ಆರೋಪಿಸಿದ್ದಾರೆ.
ಎಫ್‌ಐಆರ್‌ನಲ್ಲಿ ನಾಲ್ವರು ಆರೋಪಿಗಳನ್ನು ಹೆಸರಿಸಲಾಗಿದೆ – ಕಿರ್ಪಾಲ್‌ಸಿನ್ಹ್ ರಾಥೋಡ್, ಮನುಸಿನ್ ರಾಥೋಡ್ ಮತ್ತು ಅವರ ಪುತ್ರರಾದ ಹಿತೇಂದ್ರಸಿನ್ಹ್ ರಾಥೋಡ್ ಮತ್ತು ಶುಕಲ್‌ಸಿನ್ಹ್ ರಾಥೋಡ್ ಹಲ್ಲೆಗೈದಿರುವ ಆರೋಪಿಗಳು.
ಗುಜರಾತ್‌ನಲ್ಲಿ ಸನ್ ಗ್ಲಾಸ್ ಧರಿಸಿದ್ದಕ್ಕಾಗಿ ದಲಿತನೊಬ್ಬನನ್ನು ಥಳಿಸಿರುವುದು ಇದೇ ಮೊದಲಲ್ಲ. 2023ರ ಜೂನ್‌ನಲ್ಲಿ, ಪಾಲಂಪುರದ ಮೋಟಾ ಗ್ರಾಮದಲ್ಲಿ 21 ವರ್ಷ ವಯಸ್ಸಿನ ದಲಿತ ಯುವಕ ಮತ್ತು ಆತನ ಕುಟುಂಬದ ಮೇಲೆ ಪ್ರಬಲ ಜಾತಿ ರಜಪೂತ ಸಮುದಾಯದ ಗುಂಪೊಂದು ಸನ್ ಗ್ಲಾಸ್ ಮತ್ತು ಒಳ್ಳೆಯ ಬಟ್ಟೆ ಧರಿಸಿದ್ದಕ್ಕಾಗಿ ಹಲ್ಲೆ ಮಾಡಿತ್ತು.
2023ರ ನವೆಂಬರ್‌ನಲ್ಲಿ 21 ವರ್ಷದ ದಲಿತ ಯುವಕ ತನ್ನ ಉದ್ಯೋಗದಾತನ ಬಳಿ ತನ್ನ ಸಂಬಳ ಕೇಳಿದ್ದಕ್ಕಾಗಿ ಹಲ್ಲೆ ನಡೆಸಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ, ಗಾಂಧಿನಗರ ಜಿಲ್ಲೆಯಲ್ಲಿ ವಧುವಿನ ಮನೆಗೆ ಕುದುರೆ ಮೇಲೆ ಸವಾರಿ ಮೂಲಕ ತೆರಳಿದ್ದಕ್ಕೆ, ದಲಿತ ವರನ ಮೇಲೆ ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿದ್ದರು.