ವಿಕೆಟ್ ಕೀಪರ್ ರಿಚಾ ಘೋಷ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಸ್ಫೋಟಕ ಆಟಕ್ಕೆ ಯುಎಇ ಮುಗ್ಗರಿಸಿದೆ. ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನಲ್ಲಿ ಯುಎಇ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಭಾರತ 78 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ಈ ಗೆಲುವಿನೊಂದಿಗೆ ಸತತ ಎರಡನೇ ಜಯ ದಾಖಲಿಸಿರುವ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
ಶ್ರೀಲಂಕಾದ ದಂಬುಲಾದಲ್ಲಿ ನಡೆದ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ (ಅಜೇಯ 66) ಹಾಗೂ ರಿಚಾ ಘೋಷ್ (ಅಜೇಯ 64) ಬಿರುಸಿನ ಅರ್ಧಶತಕಗಳ ನೆರವಿನಿಂದ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಐದು ವಿಕೆಟ್ ನಷ್ಟಕ್ಕೆ 201 ರನ್‌ಗಳ ಬೃಹತ್ ಮೊತ್ತ ಗಳಿಸಿತು.
ಈ ಸವಾಲನ್ನು ಬೆನ್ನಟ್ಟಿದ ಯುಎಇ ಏಳು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಯುಎಇ ಪರ ಕವಿಶ ಈಗೋಡಗೆ ಅಜೇಯ 40 ಹಾಗೂ ನಾಯಕಿ ಈಶಾ ರೋಹಿತ್ ಒಝಾ 38 ರನ್ ಗಳಿಸಿದರು.
ಭಾರತದ ಪರ ದೀಪ್ತಿ ಶರ್ಮಾ ಎರಡು ವಿಕೆಟ್ ಕಬಳಿಸಿದರೆ , ಉಳಿದ ನಾಲ್ವರು ಬೌಲರ್‌ಗಳು ತಲಾ ಒಂದೊಂದು ವಿಕೆಟ್ ಕಿತ್ತರು.
ಈ ಸುದ್ದಿ ಓದಿದ್ದೀರಾ? ವಿಂಬಲ್ಡನ್ ಛಾಂಪಿಯನ್ ಕಾರ್ಲೋಸ್ ಅಲ್ಕರಾಜ್ – ವಿಶ್ವ ಟೆನಿಸ್ ಯುಗದ ಅದ್ಭುತ ಪ್ರತಿಭೆ
‘ಎ’ ಗುಂಪಿನಲ್ಲಿ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಭಾರತ ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಜುಲೈ 23ರಂದು ನೇಪಾಳದ ಸವಾಲನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಏಳು ವಿಕೆಟ್ ಅಂತರದ ಜಯಗಳಿಸಿತ್ತು.
ಟಾಸ್ ಗೆದ್ದ ಯುಎಇ ಭಾರತವನ್ನು ಬ್ಯಾಟಿಂಗ್ ಆಹ್ವಾನಿಸಿತು. ಆರಂಭದಲ್ಲಿ ಶಫಾಲಿ ವರ್ಮಾ 18 ಎಸೆತಗಳಲ್ಲಿ 37 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿ ಬಿರುಸಿನ ಆಟವಾಡಿದರು.
ಈ ಮಧ್ಯೆ ಸ್ಮೃತಿ ಮಂದಾನ (13) ಹಾಗೂ ದಯಾಲನ್ ಹೇಮಲತಾ (2) ನಿರಾಸೆ ಮೂಡಿಸಿದ ಕಾರಣ ಭಾರತ 52 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ತುಸು ಹಿನ್ನಡೆಗೊಳಗಾಯಿತು.
ಜೆಮಿಮಾ ರಾಡ್ರಿಗಸ್ ಸಹ 14 ರನ್ ಗಳಿಸಿ ಪೆವಿಲಿಯನ್‌ಗೆ ತೆರಳಿದರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ವಿಕೆಟ್ ಕೀಪರ್ ರಿಚಾ ಘೋಷ್ ಬಿರುಸಿನ ಆಟವಾಡುವ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು.
ಹರ್ಮನ್ ಪ್ರೀತ್ ಹಾಗೂ ರಿಚಾ ಅರ್ಧಶತಕಗಳ ಸಾಧನೆಯೊಂದಿಗೆ ಐದನೇ ವಿಕೆಟ್‌ಗೆ 75 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಹರ್ಮನ್‌ಪ್ರೀತ್ ಕೌರ್ 47 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದರು.
ಮತ್ತೊಂದೆಡೆ ಸ್ಪೋಟಕ ಆಟವಾಡಿದ ರಿಚಾ ಕೇವಲ 26 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕದ ಸಾಧನೆ ಮಾಡಿದರು. ಕೇವಲ 29 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್‌ನೊಂದಿಗೆ 64 ರನ್ ಗಳಿಸಿ ಔಟಾಗದೆ ಉಳಿದರು.