ಮಹಾರಾಷ್ಟ್ರದ ಪುಣೆ ಮತ್ತು ಕೊಲ್ಹಾಪುರದಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆ ಸಂಬಂಧಿತ ಅವಘಡಗಳಿಂದ ನಾಲ್ವರು ಮೃತಪಟ್ಟಿದ್ದು, ವಿದ್ಯುತ್ ಸ್ಪರ್ಶದಿಂದ ಮೂವರು ಸಾವಿಗೀಡಾಗಿದ್ದಾರೆ.
ತಗ್ಗು ಪ್ರದೇಶದ ನೂರಾರು ಮನೆಗಳು ಜಲಾವೃತವಾಗಿವೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಹವಾಮಾನ ಇಲಾಖೆ ಪುಣೆಯಾದ್ಯಂತ ಮುಂದಿನ 24 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಮುನ್ನೆಚ್ಚರಿಕೆಯಿಂದ ಇರುವಂತೆ ನಾಗರಿಕರಿಗೆ ಸೂಚನೆ ನೀಡಿದೆ.
ಪುಣೆ ಸುತ್ತಮುತ್ತಲಿನ ತಾಲ್ಲೂಕುಗಳಲ್ಲಿರುವ ಅನೇಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ. ಖಡಕ್ವಾಸ್ಲಾ ಜಲಾಶಯದಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದ್ದು ಈಗಾಗಲೇ 35,000 ಕ್ಯುಸೆಕ್ಗಿಂತ ಹೆಚ್ಚು ನೀರು ಬಿಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿಜಕ್ಕೂ ಮೋದಿಯವರು ಕುರ್ಚಿ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದು
ಮಳೆಯಿಂದಾಗಿ ನೀರಿನ ಮಟ್ಟ ಇನ್ನಷ್ಟು ಹೆಚ್ಚಳವಾಗುತ್ತಿರುವ ಕಾರಣ ನದಿಗೆ ಬಿಡುವ ನೀರಿನ ಪ್ರಮಾಣ 45,000 ಕ್ಯೂಸೆಕ್ಗೆ ಹೆಚ್ಚಲಿದೆ. ಇದರಿಂದಾಗಿ ಇನ್ನಷ್ಟು ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದ್ದು, ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುಣೆ ಮಹಾನಗರ ಪಾಲಿಕೆ ಹೇಳಿದೆ.
ಮಳೆ ಹೆಚ್ಚಾಗಿರುವ ಕಾರಣ ಏರ್ ಇಂಡಿಯಾ ಮಾರ್ಗಸೂಚಿಯನ್ನು ಪ್ರಕಟಿಸಿದ್ದು,ಮುಂಬೈಗೆ ತೆರಳುವ ವಿಮಾನಗಳು ತಡವಾಗಬಹುದು. ಇಂದು ಪ್ರಯಾಣಿಸುವ ಪ್ರಯಾಣಿಕರಿಗೆ ವೇಳಾಪಟ್ಟಿ ಬದಲಾವಣೆ ಅಥವಾ ಹಣ ಮರುಪಾವತಿ ಆಯ್ಕೆಯನ್ನು ನೀಡಲಾಗಿರುವುದಾಗಿ ಪ್ರಯಾಣಿಕರಿಗೆ ತಿಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಇತರ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ಸ್ಪೇಸ್ಜೆಟ್ ಸೇರಿದಂತೆ ಹಲವು ಸಂಸ್ಥೆಗಳು ವಿಮಾನ ತಡವಾಗುವ ಬಗ್ಗೆ ಸೂಚನೆಗಳನ್ನು ನೀಡಿವೆ.
