ಎಸ್‌ಸಿಪಿ/ಟಿಎಸ್‌ಪಿ ಹಣ ದುರ್ಬಳಕೆ ಮಾಡಿರುವ ಕರ್ನಾಟಕ ಸರ್ಕಾರದ ನಡೆ ಖಂಡನೀಯ. ಜತೆಗೆ ಈ ಅನುದಾನವನ್ನು ಸದ್ಬಳಕೆ ಮಾಡದೆ ದುರ್ಬಳಕೆ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಕಲಬುರಗಿ ಜಿಲ್ಲಾ ಸಂಚಾಲಕ ವಿನೋದ್ ಕುಮಾರ ಎಸ್ ಕಾಂಬಳೆ ಆಗ್ರಹಿಸಿದರು.
ಕಲಬುರಗಿ ನಗರದ ಪತ್ರಿಕಾ ಭಾವನದಲ್ಲಿ ನಡೆಸಿದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, “ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣವನ್ನು ಅನುಸೂಚಿತ ಜನಾಂಗದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳದೇ ಅನ್ಯಕಾರ್ಯಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕರ್ನಾಟಕ ಸರ್ಕಾರದ ನಡೆ ಖಂಡನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಅನುಸೂಚಿತ ಜಾತಿ ಮತ್ತು ಜನಾಂಗದ ಆರ್ಥಿಕ ಸಭಲೀಕರಣಕ್ಕಾಗಿ ಬಳಕೆ ಮಾಡಬೇಕಾಗಿರುವ ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣವನ್ನು ಸರ್ಕಾರದ ಘೋಷಣೆಯ 5 ಗ್ಯಾರಂಟಿ ಕಾರ್ಯಕ್ರಮಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕರ್ನಾಟಕ ಸರ್ಕಾರದ ನಡೆ ಖಂಡನೀಯ” ಎಂದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಚುಣಾವಣಾ ಪೂರ್ವದಲ್ಲಿ ಅನುಸೂಚಿತ ಜಾತಿ ಜನಾಂಗಕ್ಕೆ ಅಭಿವೃದ್ಧಿಗಾಗಿ ಕಂಕಣ ಬದ್ಧರಾಗಿರುವುದಾಗಿ ಅಪರಿಮಿತ ಭರವಸೆಗಳನ್ನು ನೀಡಿ, ಇಂದು ಅದೇ ಜನಾಂಗದ ಬದುಕಿನ ಭದ್ರಬುನಾದಿಗೆ ಆಸರೆಯಾಗಿರುವ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನಕ್ಕೆ ಕೊಳ್ಳಿ ಇಟ್ಟು ತನ್ನ 5 ಗ್ಯಾರಂಟಿ ಎಂಬ ಪೊಳ್ಳು ಭರವಸೆಗಳ ಅನಷ್ಠಾನಕ್ಕಾಗಿ ಹವಣಿಸುತ್ತಿದೆ” ಎಂದು ಆರೋಪಿಸಿದರು.
“ಈ ಹವಣಿಕೆಗೆ ವಿಶೇಷ ಅನುದಾನ ಅಥವಾ ಸಾಮಾನ್ಯ ಅನುದಾನದ ಬಳಕೆ ಮಾಡಿಕೊಂಡರೆ ನಮ್ಮದೇನೂ ತಕರಾರು ಇರಲಿಲ್ಲ. ಆದರೆ ಅನುಸೂಚಿತ ಜಾತಿ ಮತ್ತು ಜನಾಂಗದ ಆರ್ಥಿಕ ಅಭಿವೃದ್ಧಿಗಾಗಿ ಮೀಸಲಿಡಬೇಕಾಗಿದ್ದ ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣವನ್ನು ದುರ್ಬಳಕೆ ಮಾಡಿಕೊಂಡು ಈ ಕೃತ್ಯವನ್ನು ಸರಿಪಡಿಸಿಕೊಳ್ಳದೆ ಅದನ್ನೇ ಸಮರ್ಥನೆ ಮಾಡಿಕೊಳ್ಳುವುದು ಖೇದಕರ” ಎಂದರು.
“ಈ ಸಂಬಂಧವಾಗಿ ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾದ ಶಾಸಕ, ಸಚಿವರು ಕರ್ನಾಟಕ ಸರ್ಕಾರದ ಈ ನಡೆಯನ್ನು ಬಲವಾಗಿ ಖಂಡಿಸದೆ ಅವರೂ ಕೂಡ ಸಮರ್ಥನೆ ಮಾಡಿಕೊಳ್ಳುತ್ತಿದ್ದು, ಇನ್ನೂ ಕೆಲವರು ಬಾಲಿಷತನದ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಪರಿಶಿಷ್ಟ ಕಲ್ಯಾಣ ನಿಧಿಯವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿರುವ ಕರ್ನಾಟಕ ರಾಜ್ಯ ಸರ್ಕಾರದ ನಡೆಗೆ ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ” ಎಂದರು.
“ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿಗಳ ಲಾಭವನ್ನು ಕೇವಲ ದಲಿತರು ಪಡೆದುಕೊಳ್ಳುತ್ತಿಲ್ಲ. ಬದಲಾಗಿ ಎಲ್ಲ ವರ್ಗದ ಜನರೂ ಪಡೆದುಕೊಳ್ಳುತ್ತಿದ್ದಾರೆ. ಆದರೆ ಸರ್ಕಾರವು ಪರಿಶಿಷ್ಟರ ಕಲ್ಯಾಣ ನಿಧಿಯ ₹25.396 ಕೋಟಿ ಅನುದಾನವನ್ನು 5 ಗ್ಯಾರಂಟಿಗಳಿಗೆ ದುರ್ಬಳಕೆ ಮಾಡಿಕೊಂಡಿರುವುದನ್ನು ಸಾಮಾನ್ಯ ವಿವೇಚನೆಯಿರುವಂತಹ ಯಾರೂ ಒಪ್ಪುವುದಿಲ್ಲ. ಅಷ್ಟೇ ಅಲ್ಲದೆ 2015ರಲ್ಲಿ ತಾವೇ ಜಾರಿ ಮಾಡಿದ್ದ ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾಯ್ದೆಯ ಉದ್ದೇಶಕ್ಕೆ ರಚಿಸಲಾದ 7 ‘ಸಿ’ ಹಾಗೂ 7 ‘ಡಿ’ ಕಾಯ್ದೆಗಳಲ್ಲಿ 7 ‘ಡಿ’ ರದ್ದು ಮಾಡಿದ ರೀತಿಯಲ್ಲಿ 7 ‘ಸಿ’ ಕೂಡ ರದ್ದು ಮಾಡಬೇಕು” ಎಂದು ಆಗ್ರಹಿಸಿದರು.
“ಆ ಮೂಲಕ ಅನುಸೂಚಿತ ಜಾತಿ, ಜನಾಂಗದ ಅಭಿವೃದ್ಧಿಗಾಗಿ ಎಂದು ಪರಿಭಾವಸಿದ್ದ ಚರಂಡಿ, ನೀರು, ರಸ್ತೆ, ನಿರ್ಮಾಣ ಮಾಡುವ ಹಣ ಬಳಸುವ ಮತ್ತು ‘ಡಿ’ ಕಾಯ್ದೆಯನ್ನು ರದ್ದು ಮಾಡಿದ್ದೀರಿ. ಆದರೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಸರ್ಕಾರವು ತನಗೆ ಬೇಕಾದಾಗ ಎಲ್ಲ ವರ್ಗದ ಜನರ ಅಭಿವೃದ್ಧಿ ಹಣ ಬಳಸುವ 7 ‘ಸಿ’ ಕಾಯ್ದೆಯನ್ನು ಮಾತ್ರ ರದ್ದು ಮಾಡಿಲ್ಲ, ಯಾಕೆ?. ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಹುನ್ನಾರ ಕಾಯ್ದೆ 7 ‘ಸಿ’ಯಲ್ಲಿ ಅಡಗಿಸಿಟ್ಟಿರುವುದು ದುರಂತದ ಸಂಗತಿಯಾಗಿದೆ” ಎಂದರು.
“ಸರ್ಕಾರದ ಈ ದ್ವಂದ್ವ ನೀತಿಯ ಕಾಯ್ದೆ 7 ‘ಸಿ’ಯನ್ನು ಮುಂದುವರೆಸುವುದು ಫಲಾನುಭವಿಗಳಾದ ನಾವುಗಳು ಒಪ್ಪುವಂಥದಲ್ಲ. ಆದ್ದರಿಂದ ಕಾಯ್ದೆ 7 ‘ಡಿ’ ಮಾಡಿದ ರೀತಿಯಲ್ಲಿ 7 ‘ಸಿ’ ಕಾಯ್ದೆಯನ್ನು ರದ್ದು ಮಾಡಲೇಬೇಕು” ಎಂದು ಒತ್ತಾಯಿಸಿದರು.
“ಅನುಸೂಚಿತ ಜಾತಿ ಮತ್ತು ಜನಾಂಗದ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆ ಮಾಡುವ ಸಂದರ್ಭದಲ್ಲಿ ನಮ್ಮ ಸಮಾಜದ ಗುತ್ತಿಗೆದಾರರಿಗೆ ನೀಡದೆ ಅದನ್ನು ಬಂಡವಾಳ ಶಾಹಿಗಳಿಗೆ ನೀಡುವ ಮೂಲಕ ನಮ್ಮ ಸಮಾಜದ ಗುತ್ತಿಗೆದಾರರ ಕತ್ತು ಹಿಸುಕುತ್ತಿದ್ದಾರೆ. ಆ ಮೂಲಕ ಬಂಡವಾಳಶಾಹಿ ಗುತ್ತಿಗೆದಾರರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ” ಎಂದು ಆರೋಪಿಸಿದರು.
“ದಲಿತಪರ ಸಂಘಟನೆಗಳ ಒತ್ತಾಯದ ಮೇರೆಗೆ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯನ್ನು ಜಾರಿ ಮಾಡಿದ್ದರು. ಆದರೆ ಈ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿಗಳ ಗುತ್ತಿಗೆಯನ್ನು ಯಾವೊಬ್ಬ ದಲಿತರಿಗೂ ಕೊಟ್ಟಿಲ್ಲ. ಬದಲಾಗಿ ಬಂಡವಾಳ ಶಾಹಿಗಳಿಗೆ ಕೊಡುವ ಕಾರ್ಯವನ್ನು ಮಾಡಲಾಗಿದೆ” ಎಂದು ದೂರಿದರು.
“ಈ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹಾದೇವಪ್ಪನವರು ತುಟಿ ಬಿಚ್ಚದಿರುವುದು ಸರಿಯಾದ ನಡೆಯಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಇಂತಹ ನೀಚ ಧೋರಣೆ ತೋರುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಕಂಡು ಕಾಣದಂತೆ ಕಪಟ ನಾಟಕವಾಡುತ್ತಿರುವ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಅನುಸೂಚಿತ ಜಾತಿ ಜನಾಂಗದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಕೊಡಮಾಡಲಾಗುತ್ತಿದ್ದ ಶಿಷ್ಯ ವೇತನವನ್ನು ಯಥಾವತ್ತಾಗಿ ಮುಂದುವರೆಸಬೇಕು. ಶೇ.79ಕ್ಕಿಂತ ಹೆಚ್ಚಿಗೆ ಅಂಕ ಪಡೆದವರಿಗೆ ಮಾತ್ರ ಮೆರಿಟ್ ಶಿಷ್ಯವೇತನ ಎಂಬ ಅಪಾರದರ್ಶಕ ನಿಯಮವನ್ನು ರದ್ದುಪಡಿಸಿ ಈ ಮುಂಚೆ ಶೇ.60ಕ್ಕಿಂತ ಹೆಚ್ಚಿನ ಅಂಕದೊಂದಿಗೆ ಮೆಟ್ರಿಕ್ ಪಾಸಾದ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದ್ದ ಮೆರಿಟ್ ಶಿಷ್ಯವೇತನವನ್ನು ಯಥಾರೀತಿ ಮುಂದುವರೆಸಬೇಕು” ಎಂದು ಒತ್ತಾಯಿಸಿದರು.
“ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಅನುಸೂಚಿತ ಜಾತಿ, ಜನಾಂಗದ ಶಿಕ್ಷಣ, ಆರೋಗ್ಯ, ಸೂರು, (ಮನೆ) ಕೃಷಿಭೂಮಿ ಮತ್ತು ಸ್ಮಶಾನಭೂಮಿಗಾಗಿ ಮಾತ್ರ ಬಳಕೆ ಮಾಡಬೇಕು. ಅನುಸೂಚಿತ ಜಾತಿ ಜನಾಂಗದ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಸಮಯಕ್ಕೆ ಸರಿಯಾಗಿ ಸಂದಾಯ ಮಾಡಬೇಕು. ಪದವೀಧರ ನಿರುದ್ಯೋಗ ಅನುಸೂಚಿತ ಜಾತಿ, ಜನಾಂಗದ ವಿದ್ಯಾರ್ಥಿಗಳಿಗೆ ನಿರುದ್ಯೋಗ ಭತ್ಯೆಯನ್ನು ಕೊಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಡೆಂಘೀ ಸೊಳ್ಳೆಗಳ ಹಾಟ್‌ಸ್ಪಾಟ್ ಆದ ತುಮಕೂರು ಸ್ಮಾರ್ಟ್ ಸಿಟಿ: ದುರ್ವಾಸನೆಯಲ್ಲೇ ಊಟೋಪಚಾರ!
“ಎಸ್‌ಸಿಪಿ ಮತ್ತು ಟಿಎಎಸ್‌ಪಿ ಅನುದಾನವನ್ನು ಸದ್ಬಳಕೆ ಮಾಡದ ಮತ್ತು ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳ ಮೇಲೆ ಪಿಸಿಆರ್ ಕಾಯ್ದೆ 1989-95ರನ್ವಯ ‘ಎಸ್/ಎಸ್‌ಟಿ ಜಾತಿ ದೌರ್ಜನ್ಯ ತಡೆ ಕಾಯ್ದೆ’ ಅನ್ವಯ ಶಿಸ್ತು ಕ್ರಮಕ್ಕೆ ಒಳಪಡುವ ಕಾಯ್ದೆ ಈ ಮುಂಚೆ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಿತ್ತು. ಆ ಮಸೂದೆಯನ್ನು ಪುನಃ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಸತೀಶ್ ಬಿ ಸಾಗನೂರ್, ಹಣಮಂತ ತೆಳಕೇರಿ, ಅನಿಲಕುಮಾರ್ ವಳಕೇರಿ ಇದ್ದರು.