ಕಾಡುಗೊಲ್ಲ/ಹಟ್ಟಿಗೊಲ್ಲ/ಅಡವಿಗೊಲ್ಲರನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂದು 2015ರಲ್ಲಿಯೇ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಅನುಸರಿಸಬೇಕಾದ ಕುಲಶಾಸ್ತ್ರೀಯ ಅಧ್ಯಯನವಾಗಿರಲಿಲ್ಲ. ಆರ್‌ಜಿಐ ಪದೇ ಪದೆ ಸ್ಪಷ್ಟನೆ ಕೇಳಿದರೂ, ಇವತ್ತಿಗೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಸಣ್ಣ ಸಮುದಾಯಗಳನ್ನು ಸರ್ಕಾರ ನಿರ್ಲಕ್ಷಿಸುವುದೇಕೆ?
ಜುಲೈ 25ರಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಗೋವಿಂದ ಕಾರಜೋಳರು ಲೋಕಸಭೆಯಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಕುರಿತು ಪ್ರಶ್ನೆಯೊಂದನ್ನು ಕೇಳಿದರು. ಅದಕ್ಕೆ ಉತ್ತರಿಸಿದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುಯಲ್ ಓರಮ್, ‘ಕರ್ನಾಟಕದ ಕಾಡುಗೊಲ್ಲ/ಹಟ್ಟಿಗೊಲ್ಲ/ಅಡವಿಗೊಲ್ಲರನ್ನು ಪರಿಶಿಷ್ಟ ಪಂಗಡ(ಎಸ್‌ಟಿ)ದ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ(ಆರ್‌ಜಿಐ)ದಿಂದ ಸಹಮತಿ ಸಿಕ್ಕಿಲ್ಲ. ಕರ್ನಾಟಕ ಸರ್ಕಾರ ಅಗತ್ಯ ದಾಖಲೆಗಳನ್ನು ಸಲ್ಲಿಸದೆ ಇರುವುದು ಇದಕ್ಕೆ ಕಾರಣ’ ಎಂದರು.
ಅಲ್ಲಿಗೆ ಕೇಂದ್ರ ಮಂತ್ರಿಯ ಜವಾಬ್ದಾರಿ ಮುಗಿಯಿತು. ಬಿಜೆಪಿ ಸಂಸದ ಗೋವಿಂದ ಕಾರಜೋಳರ ಕಾಡುಗೊಲ್ಲರ ಮೇಲಿನ ಕಾಳಜಿಯೂ ಕೊನೆಯಾಯಿತು. ಅದನ್ನು ಅವರು ಒಂದೆರಡು ಪತ್ರಿಕೆಗಳಲ್ಲಿ ಸುದ್ದಿಯಾಗುವಂತೆ ನೋಡಿಕೊಂಡರೆ, ಅದು ಅವರ ಖಾತೆಗೆ ಜಮೆಯಾಗುತ್ತದೆ. ವಿರೋಧ ಪಕ್ಷವಾದ ಕಾಂಗ್ರೆಸ್ ಮೇಲೆ ಕಾರಿಕೊಳ್ಳುವುದಕ್ಕೆ ಒಂದು ಕಾರಣ ಸಿಗುತ್ತದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕರ್ನಾಟಕದ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸುಮಾರು ಐದು ಲಕ್ಷದಷ್ಟಿರುವ ಕಾಡುಗೊಲ್ಲ/ಹಟ್ಟಿಗೊಲ್ಲ/ಅಡವಿಗೊಲ್ಲರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಸ್ತಾವನೆ, ಅದು ಇವತ್ತಿನದಲ್ಲ. 2015ರ ಆಗಸ್ಟ್ 17ರಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಈ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು.
ಯಾವುದೇ ಸಮುದಾಯವನ್ನು ಪರಿಶಿಷ್ಟ ಪಂಗಡ ಅಥವಾ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವುದಕ್ಕೆ ಅಥವಾ ಕೈ ಬಿಡುವುದಕ್ಕೆ ಹಾಗೂ ಇತರ ಪರಿಷ್ಕರಣೆಗೆ ಕೇಂದ್ರ ಸರ್ಕಾರ 1999ರಲ್ಲೇ ಕಾರ್ಯವಿಧಾನ ರೂಪಿಸಿದೆ. ಶೂದ್ರ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕೆಂದರೆ ಕೆಲವು ಮಾನದಂಡಗಳನ್ನು ಪಾಲಿಸಬೇಕಿದೆ. ನಿವೃತ್ತ ನ್ಯಾಯಮೂರ್ತಿ ಲೋಕರೆ ಅವರ ನೇತೃತ್ವದ ಸಮಿತಿ ಆ ಐದು ಮಾನದಂಡಗಳನ್ನು ರೂಪಿಸಿದೆ. ಅದರ ಪ್ರಕಾರ, ಯಾವುದೇ ಪ್ರಸ್ತಾವನೆಯನ್ನು ಕುಲಶಾಸ್ತ್ರೀಯ ಅಧ್ಯಯನ ವರದಿಯೊಂದಿಗೆ ರಾಜ್ಯ ಸರ್ಕಾರ ಸಲ್ಲಿಸಬೇಕು. ಇದಕ್ಕೆ ಆರ್‌ಜಿಐ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಸಹಮತ ವ್ಯಕ್ತಪಡಿಸಬೇಕು. ಅದು ಸಚಿವಾಲಯಕ್ಕೆ ಹೋಗಿ, ಎರಡೂ ಸದನದಲ್ಲಿ ಮಂಡನೆಯಾಗಿ ಪಾಸ್ ಆದ ನಂತರ ರಾಷ್ಟ್ರಪತಿಗಳ ಅಂಕಿತಕ್ಕೆ ಹೋಗಬೇಕಾಗುತ್ತದೆ. ಇದು ನಿಯಮ.

ಆದರೆ 2015ರಲ್ಲಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಸಂಬಂಧಿಸಿದಂತೆ, ಕಾಡುಗೊಲ್ಲರ ಕುಲಶಾಸ್ತ್ರೀಯ ಅಧ್ಯಯನವಾಗಿರಲಿಲ್ಲ. ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಇದ್ದರೂ, ಅವರಿಗೆ ಆರ್‌ಜಿಐ ಕೇಳುವ ಮಾನದಂಡಗಳು ಗೊತ್ತಿದ್ದರೂ, ಅದನ್ನು ಮುಚ್ಚಿಟ್ಟು ಶಿಫಾರಸು ಮಾಡಲಾಗಿತ್ತು. ಹೀಗಾಗಿ ಆರ್‌ಜಿಐ, 2017ರ ಫೆಬ್ರುವರಿ, 2019ರ ಫೆಬ್ರುವರಿ, 2022ರ ಸೆಪ್ಟೆಂಬರ್ ಹಾಗೂ 2024ರ ಫೆಬ್ರುವರಿಯಲ್ಲಿ ಸಚಿವಾಲಯದಿಂದ ಸ್ಪಷ್ಟನೆ ಕೇಳಿದೆ. ಆದರೆ, ರಾಜ್ಯ ಸರ್ಕಾರದಿಂದ ಸ್ಪಷ್ಟ ಉತ್ತರ ಬಂದಿಲ್ಲ.
ಕುತೂಹಲಕರ ಸಂಗತಿ ಎಂದರೆ, 2015ರಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಿದಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದರು. ಮೊದಲಿಗೆ 2017ರಲ್ಲಿ ಆರ್‌ಜಿಐ ಸ್ಪಷ್ಟನೆ ಕೇಳಿತು. ಆಗಲೂ ಸಿದ್ದರಾಮಯ್ಯನವರ ಸರ್ಕಾರವೇ ಇತ್ತು. ಅಧಿಕಾರಿಗಳು ಸಿದ್ದರಾಮಯ್ಯನವರ ಗಮನಕ್ಕೆ ತಂದರೋ ಇಲ್ಲ, ಅವರೇ ನಿರ್ಲಕ್ಷ ವಹಿಸಿದರೋ, ಅಂತೂ ಆರ್‌ಜಿಐ ಕೇಳಿದ ಸ್ಪಷ್ಟನೆಯನ್ನು ನೀಡಲಿಲ್ಲ. ಮತ್ತೆ 2019ರಲ್ಲಿ ಬಂದಾಗ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳು. ನಂತರ 2022ರಲ್ಲಿ ಮತ್ತೊಂದು ಸಲ, ಆಗ ಬಿಜೆಪಿಯ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳು. ಆಗಲೂ ಕುಲಶಾಸ್ತ್ರೀಯ ಅಧ್ಯಯನದತ್ತ ರಾಜ್ಯ ಸರ್ಕಾರ ಗಮನ ಹರಿಸಲಿಲ್ಲ. ಕೊನೆಗೆ 2024ರ ಫೆಬ್ರುವರಿಯಲ್ಲಿ ಆರ್‌ಜಿಐನಿಂದ ಮತ್ತೊಮ್ಮೆ ಸ್ಪಷ್ಟನೆ ಕೇಳಿ ಬಂದಾಗ, ಶಿಫಾರಸು ಮಾಡಿದ ಸಿದ್ದರಾಮಯ್ಯನವರ ಸರ್ಕಾರವಿದ್ದರೂ, ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಂದರೆ, ಕಾಡುಗೊಲ್ಲರ ಕುರಿತು ರಾಜ್ಯ ಸರ್ಕಾರದ ಅಸೀಮ ಉದಾಸೀನತೆ ಉದ್ದಕ್ಕೂ ಎದ್ದು ಕಾಣುತ್ತದೆ. ಅದಕ್ಕೆ ಎಲ್ಲ ಪಕ್ಷಗಳು ಕೈಜೋಡಿಸಿವೆ.
ಕಾಡುಗೊಲ್ಲರ ವಿಷಯದಲ್ಲಿ ಬಹುದೊಡ್ಡ ದ್ರೋಹವೆಸಗಿದ ರಾಜ್ಯ ಸರ್ಕಾರ, ಅದೇ ಕುರುಬರನ್ನು ಎಸ್ಟಿಗೆ ಸೇರಿಸುವ ವಿಷಯಕ್ಕೆ ಬಂದಾಗ, ಆಗಿನ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಎದುರಾಗುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಕೇವಲ ಒಂದೂವರೆ ವರ್ಷದೊಳಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಕೇಂದ್ರಕ್ಕೆ ಶಿಫಾರಸು ಮಾಡಿದರು. ಅದು ಯಾವಾಗ, ಚುನಾವಣೆ ದಿನಾಂಕ ಪ್ರಕಟವಾದ ನಂತರ. ಚುನಾವಣೆ ಪ್ರಕಟವಾಗಿದ್ದು ಮಾರ್ಚ್ 28ಕ್ಕೆ, ಕ್ಯಾಬಿನೆಟ್ ನಲ್ಲಿಟ್ಟು ಪಾಸ್ ಮಾಡಿದ್ದು ಮಾ. 29ಕ್ಕೆ. ಆದರೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವಾಗ ದಿನಾಂಕ ದಾಖಲಿಸಿದ್ದು ಮಾ. 27 ಎಂದು. ಕುರುಬರು ಬಹುಸಂಖ್ಯಾತರು, ನಿರ್ಣಾಯಕ ಮತದಾರರು. ಆದರೆ ಕಾಡುಗೊಲ್ಲರನ್ನು ಕೇಳುವವರಾರು? ಹಾಗಾಗಿ ಅವರ ಕುಲಶಾಸ್ತ್ರೀಯ ಅಧ್ಯಯನ, ಇವತ್ತಿನವರೆಗೆ ಯಾರೂ ಮಾಡಲಿಲ್ಲ.
ಕಾಡಿನಲ್ಲಿ ವಾಸ ಮಾಡುವ, ನಾಗರಿಕ ಸಮಾಜದಿಂದ ಗಾವುದ ದೂರವುಳಿದಿರುವ ಕಾಡುಗೊಲ್ಲರು, ಹಟ್ಟಿಗೊಲ್ಲರು ಮತ್ತು ಅಡವಿಗೊಲ್ಲರತ್ತ ಮೊದಲು ಗಮನ ಹರಿಸಿದ್ದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಸಿ.ಎಸ್. ದ್ವಾರಕಾನಾಥ್ ಅವರು. ಈ ಬಗ್ಗೆ ಮಾತನಾಡಿದ ಅವರು, ‘ಸಣ್ಣ ಸಮುದಾಯಗಳ ಬಗ್ಗೆ ಯಾರಿಗೂ ಗಮನವಿಲ್ಲ. ಅವರೂ ಕೇಳುವುದಿಲ್ಲ. ಅಂತಹ ಕಾಡುಗೊಲ್ಲ ಸಮುದಾಯವನ್ನು ನಾನು ಅಧ್ಯಕ್ಷನಾಗಿದ್ದಾಗ, ಆ ಸಮುದಾಯವನ್ನು ಖುದ್ದು ಕಂಡು ಬಂದಿದ್ದೆ. ಆ ನಂತರ ಆ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ಸರ್ಕಾರದಿಂದ ಆದೇಶವಾಗಿತ್ತು. ಮೈಸೂರಿನ ಅಧ್ಯಯನ ಸಂಸ್ಥೆ ಆ ಬಗ್ಗೆ ಗಮನ ಹರಿಸಿ, ವರದಿ ತಯಾರಿಸಿ ಕೊಡಬೇಕಿತ್ತು, ಕೊಡಲಿಲ್ಲ. ಕಾರಣವೆಂದರೆ, ಅದು ಸಣ್ಣ ಸಮುದಾಯ. ಆ ಸಮುದಾಯದವರು ಪ್ರಬಲರು, ಪ್ರಭಾವಿಗಳು ಅಲ್ಲ. ಹಾಗಾಗಿ ನಿರ್ಲಕ್ಷಿಸಲಾಯಿತು. ಇನ್ನು ಕೇಂದ್ರದ ಆರ್‍ಐಜಿ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳುವುದು ಸಹಜ ಪ್ರಕ್ರಿಯೆ. ಆದರೆ, ಸರ್ಕಾರದ ಮಟ್ಟದಲ್ಲಿ ಇಂಥದ್ದನ್ನೆಲ್ಲ ಯಾರು ಮಾಡಬೇಕು ಅನ್ನುವುದಕ್ಕೆ ಸರಿಯಾದ ವ್ಯವಸ್ಥೆಯೇ ಇಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆನ್ನುವುದು ಕೂಡ ಅನುಮಾನವಿದೆ. ಆದರೆ ಪಕ್ಷಭೇದವಿಲ್ಲದೆ ಎಲ್ಲ ರಾಜಕೀಯ ನಾಯಕರು ಕಾಡುಗೊಲ್ಲರ ಮತಗಳಿಗೆ ಅವರ ಹಟ್ಟಿಗಳನ್ನು ಎಡತಾಕುತ್ತಾರೆ. ಮತ ಪಡೆದು ಮರೆಯುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಮೇಲ್ವರ್ಗದ ಮುಖ್ಯವಾಹಿನಿ ಸಮಾಜದಿಂದ ದೂರವೇ ಉಳಿದಿರುವ ಕಾಡುಗೊಲ್ಲರು ಇಂದಿಗೂ ಕಾಡುಗಳಲ್ಲಿ ಹಸು ಮೇಯಿಸಿಕೊಂಡು, ಹಟ್ಟಿ ಎಂದು ಕರೆಯಲಾಗುವ ತಮ್ಮದೇ ಪ್ರತ್ಯೇಕ ಭೌಗೋಳಿಕ ನೆಲೆಗಳಲ್ಲಿ ವಾಸಿಸುತ್ತಿದ್ದಾರೆ. ಇವರು ಈ ದೇಶದ ನಾಗರಿಕರು. ರಾಜಕೀಯ ಪಕ್ಷಗಳಿಗೆ ಇವರ ಮತಗಳು ಬೇಕು. ಆದರೆ ಇವರಿಗೆ ಸಲ್ಲಲೇಬೇಕಾದ ಸರ್ಕಾರಿ ಸವಲತ್ತುಗಳು ಮಾತ್ರ ಸಿಗುತ್ತಿಲ್ಲ. ಆ ಸಮುದಾಯವನ್ನು ಸಾಮಾಜಿಕವಾಗಿ ಮೇಲೆತ್ತುವ, ಶೈಕ್ಷಣಿಕವಾಗಿ ಶಕ್ತಿ ತುಂಬುವ, ನಾಗರಿಕ ಸಮಾಜದೊಂದಿಗೆ ಬೆಸೆಯುವ ಕೆಲಸ ಎಲ್ಲರಿಗೂ ಬೇಡವಾದ ಕೆಲಸವಾಗಿದೆ.
ಇದನ್ನು ಓದಿದ್ದೀರಾ?: ವಿಪಕ್ಷ ನಾಯಕರಾಗಿ ಛಲವಾದಿ ನಾರಾಯಣ ಸ್ವಾಮಿ ನೇಮಕ: ದಲಿತ ಸಮುದಾಯಕ್ಕೆ ಶಕ್ತಿ ತುಂಬಲಿದೆಯೇ?
ಲೋಕಸಭಾ ಚುನಾವಣೆಗೂ ಮುಂಚೆ, ಏಪ್ರಿಲ್ 23, 2024ರಂದು ಚಿತ್ರದುರ್ಗಕ್ಕೆ ಕಾಂಗ್ರೆಸ್ಸಿನ ಅಧಿನಾಯಕಿ ಪ್ರಿಯಾಂಕ ಗಾಂಧಿಯವರು ಭೇಟಿ ನೀಡಿದ್ದರು. ಅವರೊಂದಿಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಕಾಡುಗೊಲ್ಲ ಸಮುದಾಯವನ್ನು ST ಪಟ್ಟಿಗೆ ಸೇರಿಸಬೇಕು ಎನ್ನುವ ಬೇಡಿಕೆಗೆ ನಾವು ಸಂಪೂರ್ಣವಾಗಿ ಸ್ಪಂದಿಸಿದ್ದೇವೆ. ಈ ಬಗ್ಗೆ ಕೇಂದ್ರಕ್ಕೂ ಶಿಫಾರಸ್ಸು ಮಾಡಿದ್ದಾಗಿದೆ. ಆದರೆ ಈವರೆಗೂ ಇದಕ್ಕೆ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ’ ಎಂದು ಖಾರವಾಗಿ ಪ್ರಶ್ನಿಸಿದ್ದರು.
ಇದಕ್ಕೂ ಮುಂಚೆ, ಡಿಸೆಂಬರ್ 23, 2023ರಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಕೂಡ ಚಿತ್ರದುರ್ಗಕ್ಕೆ ಭೇಟಿ ನೀಡಿ, ‘ಈ ಬಾರಿ ನಮ್ಮದೇ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ನಾನೇ ಖುದ್ದಾಗಿ ಮುಂದೆ ನಿಂತು ಕಾಡುಗೊಲ್ಲರನ್ನು ಎಸ್ಟಿ ಪಂಗಡಗಳ ಪಟ್ಟಿಗೆ ಸೇರಿಸುತ್ತೇನೆ’ ಎಂದು ಭರವಸೆ ನೀಡಿದ್ದರು. ಗೌಡರ ಮಾತು ನಂಬಿದ ಕಾಡುಗೊಲ್ಲರು ಸಾರಾಸಗಟಾಗಿ ಬಿಜೆಪಿ ಬೆಂಬಲಿಸಿದ್ದರು. ಅದರ ಪರಿಣಾಮವಾಗಿ ಬಿಜೆಪಿಯ ಗೋವಿಂದ ಕಾರಜೋಳ ಗೆದ್ದು, ಕಾಂಗ್ರೆಸ್ಸಿನ ಚಂದ್ರಪ್ಪ ಸೋಲುವಂತಾಗಿತ್ತು.

ಈಗ ಕೇಂದ್ರದಲ್ಲಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. ಅವರ ಪುತ್ರ ಕುಮಾರಸ್ವಾಮಿ ಸಚಿವರಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಾತನ್ನು ಪ್ರಧಾನಿ ಮೋದಿಯವರು ಕೇಳುತ್ತಾರೆಂಬುದಕ್ಕೆ ಹಲವು ನಿದರ್ಶನಗಳಿವೆ. ಆದರೂ ಗೌಡರು ಕಾಡುಗೊಲ್ಲರ ಬಗ್ಗೆ ಕನಿಕರ ತೋರುತ್ತಿಲ್ಲ. ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ, ಚುನಾವಣೆ ಹತ್ತಿರವಾದಾಗ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಆದರೆ ಅನುದಾನ, ಅಭಿವೃದ್ಧಿ ಮರೆತರು.
ಕೊನೆ ಪಕ್ಷ, ರಾಜ್ಯ ಸರ್ಕಾರವಾದರೂ ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಅಭಿವೃದ್ದಿ ಪಡಿಸುವ ಯೋಜನೆಗಳನ್ನು ರೂಪಿಸಬೇಕಿದೆ. ಶಿಕ್ಷಣಕ್ಕೆ ಸುಸಜ್ಜಿತ ಶಾಲೆ, ಆರೋಗ್ಯ ಸೌಲಭ್ಯ, ಆರ್ಥಿಕ ಸಬಲೀಕರಣದ ಯೋಜನೆಗಳು, ರಾಜಕೀಯ ಪ್ರಾತಿನಿಧ್ಯ, ಸರ್ಕಾರ ಮತ್ತಿತರ ಸಾರ್ವಜನಿಕ ವಲಯಗಳ ನೌಕರಿ ಇನ್ನೂ ಮುಂತಾದ ಸೌಲಭ್ಯಗಳನ್ನು ಒದಗಿಸುವ ಅಗತ್ಯವಿದೆ. ಆಗ ಮಾತ್ರ ಇಂತಹ ತಬ್ಬಲಿ ಸಮುದಾಯಗಳ ಸುಧಾರಣೆ ಸಾಧ್ಯವಾಗುತ್ತದೆ.

ಲೇಖಕ, ಪತ್ರಕರ್ತ
ಉತ್ತಮ ಲೇಖನ/ವರದಿ. ಈ ಸಮುದಾಯದ ಏಳಿಗೆ ಹಾಗೂ ಅವರನ್ನು ಮಾರಕ ಮೂಢನಂಬಿಕೆ/ಸಂಪ್ರದಾಯಗಳಿಂದ ಬಿಡಿಸಲು ಆ ಸಮುದಾಯದ ವಿದ್ಯಾವಂತರೂ ಸೇರಿದಂತೆ ಅನೇಕರು ಪ್ರಯತ್ನಿಸುತ್ತಿದ್ದಾರೆ. ಆದರೆ, ಬಾಣಂತಿಯರನ್ನು ಅದೆಷ್ಟೋ ದಿನಗಳ ಕಾಲ ಮನೆಯಿಂದ ಹೊರಗೆ ತಾತ್ಕಾಲಿಕ ಶೆಡ್‌ನಲ್ಲಿ ಇರಿಸುವ ಪದ್ಧತಿ ಇನ್ನೂ ಜೀವಂತವಾಗಿರುವುದು ಬಹಳ ದುಃಖಕರ….