ಪ್ಯಾರಿಸ್ ಒಲಿಂಪಿಕ್ಸ್ 2024ರ ಎರಡನೇ ದಿನದಲ್ಲಿ ಭಾರತ ಉತ್ತಮ ಶುಭಾರಂಭ ಮಾಡಿದ್ದು, ಪಿ ವಿ ಸಿಂಧು ಸೇರಿ ಆರು ಕ್ರೀಡಾಪಟುಗಳು ಮೊದಲ ಗೆಲುವು ದಾಖಲಿಸಿ ಪದಕದ ಭರವಸೆ ಮೂಡಿಸಿದ್ದಾರೆ.
ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಈಗಾಗಲೇ ಎರಡು ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ಪಿ ವಿ ಸಿಂಧು ಮೊದಲ ಸುತ್ತಿನಲ್ಲಿ ಮಾಲ್ಡೀವ್ಸ್‌ನ ಫಾತಿಮತ್ ಅಬ್ದುಲ್ ರಝಾಕ್ ವಿರುದ್ಧ 21-9, 21-6 ಅಂತರದಲ್ಲಿ ಗೆಲುವು ದಾಖಲಿಸಿದರು.
ಕೇವಲ 29 ನಿಮಿಷಗಳಲ್ಲಿ ಆಟ ಮುಗಿಸಿದ ಪಿ ವಿ ಸಿಂಧು ಎರಡನೇ ಸುತ್ತಿಗೆ ಅರ್ಹತೆ ಪಡೆದರು. ಜುಲೈ 29ರಂದು ಎಸ್ಟೋನಿಯಾದ ವಿಶ್ವದ 75ನೇ ಶ್ರೇಯಾಂಕದ ಕ್ರಿಸ್ತಿನ್ ಕೂಬಾ ಅವರನ್ನು ಎದುರಿಸಲಿದ್ದಾರೆ. ಸಿಂಧು ಅವರು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ 2021ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಪದಕ ಗೆದ್ದಿದ್ದರು.
ಪುರುಷರ ಬ್ಯಾಡ್ಮಿಂಟನ್
ಪುರುಷರ ಬ್ಯಾಡ್ಮಿಂಟನ್ ವಿಭಾಗದ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಭಾರತದ ಆಟಗಾರರು ಗೆಲುವು ಸಾಧಿಸಿದ್ದಾರೆ. ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಗ್ಯಾಟೆಮಾಲಾದ ಕೆವಿನ್ ಕೋರ್ಡನ್ ಅವರನ್ನು 21-8,22-10 ಅಂತರದ ಮೂಲಕ ಪರಾಭವಗೊಳಿಸಿ ಎರಡನೇ ಸುತ್ತಿಗೆ ಪ್ರವೇಶ ಪಡೆದರು. ಡಬಲ್ಸ್‌ನಲ್ಲಿ ಸಾತ್ವಿಕ್ ಶ್ರೀರಾಜ್ ಹಾಗೂ ಚಿರಾಗ್ ಶೆಟ್ಟಿ ಫ್ರಾನ್ಸನ ಲೂಕಸ್ ಕೋರ್ವಿ, ರೋನನ್ ಲಬರ್ ಅವರನ್ನು ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದರು.
ರೋಯಿಂಗ್
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಭಾರತದ ಏಕೈಕ ರೋಯಿಂಗ್ ಆಟಗಾರ ಬಲರಾಜ್ ಪನ್ವಾರ್, ಪುರುಷರ ಸಿಂಗಲ್ ರೋಯಿಂಗ್ ಈವೆಂಟ್‌ನ ಮೊದಲ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿ ರಿಪಿಚೇಜ್ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. 25 ವರ್ಷದ ಬಾಲರಾಜ್ 7:7.11 ನಿಮಿಷಗಳಲ್ಲಿ ಗುರಿ ತಲುಪಿದರು.
ಬಾಲರಾಜ್ ಈಗ ರಿಪಿಚೇಜ್ ಸುತ್ತಿನಲ್ಲಿ ಪಾಲ್ಗೊಳ್ಳಲಿದ್ದು, ಅವರು ಈ ಸುತ್ತಿನ ಮೂಲಕ ಸೆಮಿಫೈನಲ್ ಅಥವಾ ಫೈನಲ್‌ಗೆ ಪ್ರವೇಶಿಸಲು ಎರಡನೇ ಅವಕಾಶವನ್ನು ಪಡೆಯಲಿದ್ದಾರೆ. ಬಾಲರಾಜ್ ಅವರು 2022ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು ಮತ್ತು ಕೊರಿಯಾದಲ್ಲಿ ನಡೆದ ಏಷ್ಯನ್ ಮತ್ತು ಓಷಿಯಾನಿಯಾ ಒಲಿಂಪಿಕ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ ಅವರಿಗೆ ಎರಡನೇ ಅವಕಾಶವಿದ್ದು ಸೆಮಿ ಅಥವಾ ಫೈನಲ್ ಪ್ರವೇಶ ಪಡೆಯುವ ಅವಕಾಶವಿದೆ.
ಏರ್ ರೈಫಲ್
ಮಹಿಳೆಯರ ಏರ್ ರೈಫಲ್ ವಿಭಾಗದ 10 ಮೀಟರ್ ಸ್ಪರ್ಧೆಯಲ್ಲಿ ಭಾರತದ ರಮಿತಾ ಜಿಂದಾಲ್ ಫೈನಲ್ ಪ್ರವೇಶಿಸಿದ್ದಾರೆ. ಇದೇ ವಿಭಾಗದ ಮತ್ತೊಂದು ಸ್ಪರ್ಧೆಯಲ್ಲಿ ನಮ್ಮ ದೇಶದವರೆ ಆದ ಎಲವೆನಿಲ್ ವಲರಿವನ್ ಮೊದಲ ಸುತ್ತಿನಲ್ಲಿ ಗೆಲುವು ಪಡೆದರೂ 2ನೇ ಸುತ್ತಿನಲ್ಲಿ ಸೋಲು ಕಂಡರು.
