ಉಕ್ರೇನಿಯನ್ ಪಡೆಗಳ ವಿರುದ್ಧ ಯುದ್ಧ ಮಾಡಲು ರಷ್ಯಾದ ಸೇನೆಯಿಂದ ಕಳುಹಿಸಲ್ಪಟ್ಟ 22 ವರ್ಷದ ಹರಿಯಾಣ ಮೂಲದ ಭಾರತೀಯ ಯುವಕ ಸಾವನ್ನಪ್ಪಿದ್ದು, ಬಲವಂತದಿಂದ ಸೇನೆಗೆ ನೇಮಕಾತಿ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.
ಹರಿಯಾಣದ ಕೈತಾಲ್ ಜಿಲ್ಲೆಯ ಮತ್ತೂರ್ ಗ್ರಾಮದ ಯುವಕ ರವಿಮೌನ್ ಸಾವನ್ನು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ ಎಂದು ರವಿಮೌನ್ ಸಹೋದರ ಅಜಯ್ ಮೌನ್ ಹೇಳಿದ್ದಾರೆ.
ರವಿ ಮೌನ್ ಜನವರಿ 13ರಂದು ಸಾರಿಗೆ ಕೆಲಸಕ್ಕಾಗಿ ನೇಮಕಗೊಂಡು ರಷ್ಯಾಕ್ಕೆ ಹೋಗಿದ್ದರು. ಆದರೆ ಅದಾದ ಬಳಿಕ ಬಲವಂತದಿಂದ ಮಿಲಿಟರಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಸಹೋದರ ಆರೋಪಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ನಾನು ಜುಲೈ 21ರಂದು ನನ್ನ ಸಹೋದರನ ಬಗ್ಗೆ ಮಾಹಿತಿ ಪಡೆಯಲು ರಾಯಭಾರ ಕಚೇರಿಗೆ ಪತ್ರ ಬರೆದೆ. ಆದರೆ ನನ್ನ ಸಹೋದರ ಸಾವನ್ನಪ್ಪಿದ್ದಾನೆ ಎಂದು ರಾಯಭಾರ ಕಚೇರಿ ನಮಗೆ ತಿಳಿಸಿದೆ. ಮೃತದೇಹವನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಯ ವರದಿಯನ್ನು ಕಳುಹಿಸುವಂತೆ ರಾಯಭಾರ ಕಚೇರಿಯು ರಷ್ಯಾಕ್ಕೆ ಮನವಿ ಮಾಡಿದೆ” ಎಂದು ಅಜಯ್ ಮೌನ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಉಕ್ರೇನ್ ಯುದ್ಧವನ್ನು ಪ್ರಧಾನಿ 2 ಗಂಟೆಗಳ ಕಾಲ ನಿಲ್ಲಿಸಿದ್ದರು: ಮಹಾರಾಷ್ಟ್ರ ಸಿಎಂ ಶಿಂದೆ
“ಸಾರಿಗೆ ಕೆಲಸಕ್ಕೆಂದು ಹೋಗಿದ್ದ ನನ್ನ ಸಹೋದರನನ್ನು ಉಕ್ರೇನ್ ಪಡೆಗಳ ವಿರುದ್ಧ ಹೋರಾಡಲು ಹೋಗುವಂತೆ ರಷ್ಯಾದ ಸೇನೆ ಹೇಳಿದೆ. ಉಕ್ರೇನ್ ವಿರುದ್ಧ ಯುದ್ಧ ಮಾಡದಿದ್ದರೆ ಹತ್ತು ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ರಷ್ಯಾ ಸೇನೆ ಬೆದರಿಸಿದೆ” ಎಂದು ಮೃತ ಯುವಕನ ಸಹೋದರ ಆರೋಪಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧವು 2022ರ ಫೆಬ್ರವರಿಯಿಂದ ನಡೆಯುತ್ತಿದೆ. ರಷ್ಯಾದ ಮಿಲಿಟರಿಗೆ ಸೇರ್ಪಡೆಗೊಂಡ ಭಾರತೀಯ ಪ್ರಜೆಗಳನ್ನು ಶೀಘ್ರ ಬಿಡುಗಡೆ ಮಾಡುವಂತೆ ಮತ್ತು ವಾಪಾಸ್ ಭಾರತಕ್ಕೆ ಕಳುಹಿಸುವ ಭಾರತದ ಬೇಡಿಕೆಯನ್ನು ರಷ್ಯಾ ಒಪ್ಪಿಕೊಂಡ ಕೆಲವು ದಿನಗಳ ನಂತರ ರಷ್ಯಾ ಸೇನೆಯಲ್ಲಿದ್ದ ಹರಿಯಾಣದ ಯುವಕ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ.