ನೇಕಾರ ನೀ ಸ್ವಾಭಿಮಾನದ ಛಲಗಾರ,
ಬೆವರಿನ ಹನಿಗಳ ಮೇಲೆ ಬಾಳಿನ ಸಂಚಾರ,
ಮಾನವನ ಮಾನ ಉಳಿಸುವ ಕಾಯಕವೇ ಕೈಲಾಸವೆಂದ ನೇತಾರ,
ಮರೆತು ಬಿಟ್ಟಿತೇ ನಿನ್ನ ಸರ್ಕಾರ
ರಾಜ್ಯದಲ್ಲಿ ಲಕ್ಷಾಂತರ ನೇಕಾರ ಕಾರ್ಮಿಕರರಿದ್ದಾರೆ. ಬೆಳಗಾವಿ ನಗರವೊಂದರಲ್ಲೇ 20,000ಕ್ಕಿಂತಲೂ ಅಧಿಕ ನೇಕಾರ ಕಾರ್ಮಿಕರು ಇದ್ದಾರೆ. ಆದರೆ ಅವರ ಬದುಕು ಮಾತ್ರ ಅತಂತ್ರವಾಗಿದೆ.
ನೇಕಾರ ಸಮುದಾಯವು ಹಗಲಿರುಳು ದುಡಿದರೂ ಅವರ ಬದುಕಿನ ಬುತ್ತಿಗೆ ಈ ದುಡಿಮೆ ಸಾಕಾಗುತ್ತಿಲ್ಲ. ಮುಂಜಾನೆ 7ರಿಂದ ರಾತ್ರಿ 8 ವರೆಗೂ ಮಗ್ಗದಲ್ಲಿ ದುಡಿದಾಗ ಸಿಗುವುದು ಕೇವಲ 400ರಿಂದ 500 ರೂಪಾಯಿಗಳು ಮಾತ್ರವೆ ಆಗಿದೆ. ಅಂದರೆ ತಿಂಗಳಲ್ಲಿ 10ರಿಂದ 12 ಸಾವಿರ ಗಳಿಸುವುದು ಸಹ ಕಷ್ಟವಾಗಿದೆ. ಇದುವರೆಗೂ ಸರ್ಕಾರದಿಂದ ಒಂದು ಸಣ್ಣ ಸಹಾಯವು ಇವರಿಗೆ ದೊರೆತಿಲ್ಲ.
ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನೇಕಾರರ ಸಾಲ ಮನ್ನಾ ಮಾಡಿದ್ದರು. ಆದರೆ ಇದರ ಲಾಭವಾಗಿದ್ದು ಮಾತ್ರ ಮಗ್ಗದ ಮಾಲೀಕರಿಗೇ ಹೊರತು ಕಷ್ಟಪಟ್ಟು ದುಡಿಯುವ ನೇಕಾರ ಕೂಲಿ ಕಾರ್ಮಿಕರಿಗಲ್ಲ.
ಕೂಲಿ ನೇಕಾರರ ಸಮಸ್ಯೆಗಳ ಬಗ್ಗೆ ಬೆಳಗಾವಿ ನಗರದ ಕೂಲಿ ನೇಕಾರರ ಮುಖಂಡರಾದ ರವಿ ಪಾಟೀಲ್ ಅವರು ಈ ದಿನ.ಕಾಮ್ ಜೊತೆ ಮಾತನಾಡಿ, “ಮುಂಜಾನೆಯಿಂದ ರಾತ್ರಿಯವರೆಗೂ ಕಷ್ಟಪಟ್ಟು ದುಡಿದರೂ ಕೂಲಿ ನೇಕಾರರ ಕಾರ್ಮಿಕರ ಹೊಟ್ಟೆ ತುಂಬುವುದಿಲ್ಲ. ಜೊತೆಗೆ ಮಕ್ಕಳ ಶಿಕ್ಷಣ, ಮನೆಯ ಖರ್ಚು ಯಾವುದಕ್ಕೂ ದುಡಿದ ದುಡ್ಡು ಸಾಲುವುದಿಲ್ಲ. ಅವರ ಬದುಕು ತುಂಬಾ ದುಸ್ಥರವಾಗಿದೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ನೇಕಾರರು ಸ್ವಂತ ಮನೆಯನ್ನು ಹೊಂದಿಲ್ಲ. ಈಗಿನ ದುಡಿಮೆಯಲ್ಲಿ ಮನೆಯ ಬಾಡಿಗೆ ಕಟ್ಟಿ ಜೀವನ ಸಾಗಿಸುವುದು ಕಷ್ಟವಾಗಿದೆ. ಸರ್ಕಾರದಿಂದ ಇದುವರೆಗೆ ಕೂಲಿ ನೇಕಾರರಿಗೆ ಯಾವುದೇ ಯೋಜನೆಯ ಲಾಭ ದೊರಕ್ಕಿಲ್ಲ. ಕೂಲಿ ನೇಕಾರರಿಗೆ ಯಾವುದೇ ಬ್ಯಾಂಕುಗಳು ಸಾಲವನ್ನು ಸಹ ಕೊಡುವುದಿಲ್ಲ ಮತ್ತು ಈ ಹಿಂದೆ ಸರ್ಕಾರವು ನೇಕಾರರ ಸಾಲವನ್ನು ಮಾಡಿದ್ದರಾದರೂ ಅದರಿಂದ ಕೂಲಿ ನೇಕಾರರಿಗೆ ಯಾವುದೇ ಪ್ರಯೋಜನವಾಗಿಲ್ಲ” ಎಂದು ತಿಳಿಸಿದರು.
“ನೇಕಾರ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಇಲ್ಲ. ಕಟ್ಟಡ ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ಕೂಲಿ ನೇಕಾರರಿಗೆ ಸಿಗುವಂತೆ ಸರ್ಕಾರವು ಮಾಡಬೇಕು. ಇಲ್ಲದಿದ್ದರೆ ನೇಕಾರರು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಾಜ್ಯದಲ್ಲಿ 52 ನೇಕಾರ ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಸರ್ಕಾರವು ಕೂಲಿ ನೇಕಾರರ ಸಹಾಯಕ್ಕೆ ಬರಬೇಕಿದೆ” ಎಂದು ರವಿ ಪಾಟೀಲ್ ನೇಕಾರ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಹೇಳಿಕೊಂಡರು.
ಕೂಲಿ ನೇಕಾರರ ಕಾರ್ಮಿಕರಾದ ಸೋಮು ಕವಡಿ ಮಾತನಾಡಿ, “ಸರ್ಕಾರದ ಸವಲತ್ತುಗಳು ನಮಗೆ ಯಾವುದೂ ದೊರೆಯುತ್ತಿಲ್ಲ. ಮಗ್ಗದ ಮಾಲೀಕರ ಜೊತೆಗೆ ಕಾರ್ಮಿಕರಿಗೂ ಸರ್ಕಾರವು ಸಹಾಯವನ್ನು ಮಾಡುವ ಮೂಲಕ ಸರ್ಕಾರ ಸ್ಪಂದಿಸಬೇಕು” ಎಂದು ತಿಳಿಸಿದರು.
“ಸರ್ಕಾರವು ನೇಕಾರ ಸಮುದಾಯದ ಸಾಲ ಮನ್ನಾ ಮಾಡುವ ವಿಷಯದಲ್ಲಾಗಲಿ ಅಥವಾ ಅವರಿಗೆ ವಿಶೇಷ ಸಾಲ ನೀಡುವ ವಿಷಯದಲ್ಲಾಗಲಿ ನೇಕಾರ ಕೂಲಿ ಕಾರ್ಮಿಕರನ್ನು ನಿರ್ಲಕ್ಷಿಸಿದೆ. ಕೇವಲ ಮಗ್ಗದ ಮಾಲೀಕರನ್ನು ಮಾತ್ರ ಇದುವರೆಗೂ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ಸರ್ಕಾರವು ಮಗ್ಗದ ಮಾಲಿಕರ ಜೊತೆಗೆ ನೇಕಾರ ಕೂಲಿ ಕಾರ್ಮಿಕರನ್ನು ಪರಿಗಣಿಸಬೇಕಿದೆ” ಎಂದು ಆಗ್ರಹಿಸಿದ್ದಾರೆ.
ಸರ್ಕಾರವು ವಸತಿ ಯೋಜನೆಗಳಲ್ಲಿ ನೇಕಾರ ಕೂಲಿ ಕಾರ್ಮಿಕರಿಗೆ ಮನೆಗಳನ್ನು ಮಿಸಲಿಡಬೇಕಿದೆ ಮತ್ತು ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಶಿಷ್ಯವೇತನ ನೀಡಬೇಕು. ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಬೇಕು. ಪಿ.ಎಫ್ ಯೋಜನೆ ಹಾಗೂ ಕಟ್ಟಡ ಕಾರ್ಮಿಕರಿಗೆ ನೀಡುವ ಸರ್ಕಾರದ ಯೋಜನೆಯ ಲಾಭಗಳನ್ನು ಕೂಲಿ ನೇಕಾರ ಕಾರ್ಮಿಕರಿಗೂ ಸಿಗುವಂತೆ ಮಾಡಬೇಕು ಎಂಬುದು ಇವರೆಲ್ಲರ ಆಗ್ರಹವಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಗ್ರೌಂಡ್ ರಿಪೋರ್ಟ್ | ವಯನಾಡ್; ಕೆಸರು ಮಣ್ಣು ಎಂದು ಕಾಲಿಟ್ಟಿದ್ದೆ, ಆದರೆ, ಅಲ್ಲಿ ಪುಟ್ಟ ಮಗುವಿನ ಮೃತದೇಹವಿತ್ತು!
ಸರ್ಕಾರದಿಂದ ನೆರವು ಸಿಕ್ಕಾಗ ಮಾತ್ರ ನೇಕಾರರು ಮತ್ತು ನೇಕಾರಿಕೆ ಉದ್ಯಮ ಉಳಿಯುತ್ತದೆ . ನೇಕಾರಿಕೆಯು ನಮ್ಮ ದೇಶದ ಸಾಂಪ್ರದಾಯಿಕ ಕೈಗಾರಿಕೆಗಳಲ್ಲಿ ಒಂದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇಕಾರ ಕಾರ್ಮಿಕರ ಸಹಾಯಕ್ಕೆ ಬರಲಿ ಎಂಬುದು ನಮ್ಮ ಆಶಯವಾಗಿದೆ ಎಂದು ನೇಕಾರ ಸಮುದಾಯ ತಿಳಿಸಿದೆ.
ದಶಕಗಳಿಂದ ದುಡಿಯುತ್ತಾ ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಿ, ಕಷ್ಟದಲ್ಲಿರುವ ನೇಕಾರರ ಕಲ್ಯಾಣಕ್ಕಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವ ಮೂಲಕ ಮಾನವೀಯತೆ ಮೆರೆಯಬೇಕಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು