ಕೇರಳ ಕಂಡ ಅತ್ಯಂತ ಭೀಕರ ಭೂ ಕುಸಿತವು ವಯನಾಡ್ ಜಿಲ್ಲೆಯಲ್ಲಿ ಕಳೆದ ಜುಲೈ 30ರ ಬೆಳ್ಳಂಬೆಳಗ್ಗೆ ಸಂಭವಿಸಿತ್ತು. ಅಲ್ಲಿನ ಪರಿಸ್ಥಿತಿಗಳ ಬಗ್ಗೆ ವರದಿ ಮಾಡಲು ಈ ದಿನ.ಕಾಮ್ ಪ್ರತಿನಿಧಿ ಮೋಹನ್ ಮೈಸೂರು ತೆರಳಿದ್ದಾರೆ.
ಹೆಜ್ಜೆ ಇಟ್ಟರೆ ಹುದುಗುವ ಪಾದಗಳು. ಯಾರ ದೇಹದ ಮೇಲೆ ಕಾಲಿಟ್ಟೆವೋ ಅನ್ನುವ ಪಾಪ ಪ್ರಜ್ಞೆ, ನೋವಿನ ದುಗುಡ, ಹೆಜ್ಜೆ ಹೆಜ್ಜೆಗೂ ಭೂ ಸಮಾಧಿಯಾದವರ ಹುಡುಕಾಟ.
ಹೌದು ಇದು. ವಯನಾಡ್‌ನ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಬಗ್ಗೆ ವರದಿ ಮಾಡಲು ತೆರಳಿದಾಗ ಆದ ಅನುಭವ.
ಈ ದಿನ.ಕಾಮ್‌ನ ಪ್ರತಿನಿಧಿಯಾಗಿ ವಯನಾಡ್‌ನ ಭೀಕರ ದುರಂತದ ಬಗ್ಗೆ ವರದಿ ಮಾಡಲೆಂದು ತೆರಳಿದ್ದೆ. ಭೂಕುಸಿತಕ್ಕೆ ಒಳಗಾಗಿದ್ದ ಅಟ್ಟಮಲ ಗ್ರಾಮದಲ್ಲಿ ವಿಡಿಯೋ ಮಾಡುತ್ತಿರುವಾಗ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿದ್ದ ಪೊಲೀಸರೊಬ್ಬರು ಕೈಸನ್ನೆ ಮೂಲಕ ಕೆಳಗೆ ನೋಡು ಅನ್ನುವ ಸಂಜ್ಞೆ ಮಾಡುತ್ತಾ ಇದ್ದರು. ನಾನು ಜೋಪಾನವಾಗಿ ನೋಡಿಕೊಂಡು ಸಾಗು ಅನ್ನುತ್ತಿರಬೇಕು ಎಂದು ಭಾವಿಸಿದೆ. ಆದರೆ, ಮತ್ತದೇ ಸಂಜ್ಞೆ ಮಾಡಿದಾಗ ಒಮ್ಮೆ ಕೆಳಗೆ ನೋಡಿದೆ. ನನ್ನ ಕಾಲಿನ ಪಕ್ಕದಲ್ಲಿ ಮಗುವಿನ ದೇಹ.
ಹೌದು. ಪುಟ್ಟ ಮಗುವಿನ ಮೃತದೇಹವೊಂದು ನನ್ನ ಕಾಲ ಬುಡದಲ್ಲಿತ್ತು. ಗುರುತಿಸಲು ಅಸಾಧ್ಯವಾದ ರೀತಿಯಲ್ಲಿ ಕೊಳೆತಿದೆ. ಕ್ಷಣಾರ್ಧದಲ್ಲೇ ಒಳಗಿನಿಂದಲೇ ಕುಸಿದು ಹೋದೆ, ನನಗೆ ಅರಿವಿಲ್ಲದೆ ಕಂಗಳಲ್ಲಿ ಹನಿ, ಕೈಕಾಲು ನಡುಗಿತು.
ಮರದ ಕೊಂಬೆಗಳ ನಡುವೆ ಸಿಲುಕಿಕೊಂಡಿದ್ದ ಪುಟ್ಟ ಮಗುವಿನ ಮೃತದೇಹವೊಂದು ಕಣ್ಣಿಗೆ ಬಿತ್ತು. ಅದರ ಸಮೀಪವೇ ಕ್ರಿಕೆಟ್ ಬಾಲ್. ಜೊತೆಗೆ ಪಕ್ಕದಲ್ಲೇ ಚಾಕಲೇಟ್ ಕೂಡ ಬಿದ್ದಿತ್ತು.
ವಯನಾಡ್ ಜಿಲ್ಲೆಯಲ್ಲಿ ಕಳೆದ ಜುಲೈ 30ರ ಬೆಳ್ಳಂಬೆಳಗ್ಗೆ ಭೀಕರ ಭೂಕುಸಿತ ಸಂಭವಿಸಿತ್ತು. ಅಲ್ಲಿನ ಪರಿಸ್ಥಿತಿಗಳನ್ನು ನೋಡಿದರೆ, ಬರೆಯಲು ಕೂಡ ಪದಗಳು ಸಿಗದು.
ವಯನಾಡು ಜಿಲ್ಲೆಯ ಕಲ್ಪೆಟ್ಟ ಮಂಡಲ, ಮೇಪ್ಪಾಡಿ ವ್ಯಾಪ್ತಿಯ ಮುಂಡಕೈ, ಚೋರಲ್‌ಮಲ, ಅಟ್ಟಮಲ, ಪುದುಮಲ, ಸೂಜಿಪಾರ ವ್ಯಾಪ್ತಿಯಲ್ಲಿ ಭೂ ಕುಸಿತ ದುರಂತ ಸಂಭವಿಸಿದೆ.
ಮೇಪ್ಪಾಡಿಯಿಂದ ಸರಿ ಸುಮಾರು 13 ಕಿಮೀ ದೂರ ಇರುವ ಪ್ರದೇಶ ಈ ಮುಂಡಕೈ. ಈಗೇನು ಭೂ ಕುಸಿತ ಆಗಿದೆ ಈ ಪ್ರದೇಶವೆಲ್ಲ ಪ್ರವಾಸೋದ್ಯಮ, ರೆಸಾರ್ಟ್, ಗ್ಲಾಸ್ ಬ್ರಿಡ್ಜ್, ಝಿಪ್ ವೈರ್, ಮೌಂಟೇನ್ ವ್ಯೂ ಹೀಗೆ ಪ್ರವಾಸಿಗರನ್ನು ಕೈಬೀಸಿ ಕರೆಯುವ ಸುಂದರ ತಾಣವಾಗಿತ್ತು. ಆದರೆ, ಪ್ರಕೃತಿ ಮುಂದೆ ನಾವೆಲ್ಲರೂ ನಗಣ್ಯ ಎಂಬುದನ್ನು ಈ ದುರಂತ ಸಾಕ್ಷಿಯಾಗಿದೆ.
ಸತತ ಮೂರು ವಾರಗಳಿಂದ ತೀವ್ರ ಮಳೆಗೆ ನಲುಗಿದ್ದ ಈ ಪ್ರದೇಶ ಭೂ ಕುಸಿತದಿಂದಾಗಿ ಅಷ್ಟು ಗ್ರಾಮಗಳು ಭೂ ಸಮಾಧಿಯಾಗಿದೆ. ಗ್ರಾಮಕ್ಕೆ ಗ್ರಾಮವೇ ಕೊಚ್ಚಿಕೊಂಡು ಹೋಗಿದೆ. ನೂರಾರು ಜನ ಕಣ್ಮರೆಯಾಗಿದ್ದಾರೆ.
ಮುಂಡಕೈ, ಅಟ್ಟಮಲ, ಪುದುಮಲ ಮಾರ್ಗವಾಗಿ ಬೆಟ್ಟ ಗುಡ್ಡಗಳಿಂದ, ಟೀ ಎಸ್ಟೇಟ್ ಮೂಲಕ ಪದಿನೊನ್ನಾಮ್ ಪಾಲಂ ಎಂಬ ಪುಟ್ಟ ಕಾಲುವೆ ಹರಿಯುತ್ತಾ ಇದ್ದಿದ್ದು, ಈಗ ದೊಡ್ಡ ನದಿಯಂತೆ ಮಾರ್ಪಾಡಾಗಿದೆ.
ಮುಂಡಕೈ ಗ್ರಾಮದಲ್ಲಿ ಸುಮಾರು 400 ಮನೆಗಳಿದ್ದವು ಎಂದು ಬದುಕಿ ಉಳಿದವರು ಮಾಹಿತಿ ನೀಡಿದ್ದಾರೆ. ಈಗ ಶೇ.90ರಷ್ಟು ಮನೆಗಳು ಉಳಿದಿಲ್ಲ. ನೂರಾರು ಜನ ಕೊಚ್ಚಿ ಹೋಗಿದ್ದಾರೆ, ಮಣ್ಣಿನಡಿ ಸಮಾಧಿಯಾಗಿ ಹೋಗಿದ್ದಾರೆ.
ಇನ್ನು ಅಟ್ಟಮಲ, ಪುದುಮಲ, ಚೋರಲ್ ಮಲ ಭಾಗದ ಎಸ್ಟೇಟ್ ಕೂಲಿ ಕೆಲಸಕ್ಕೆ ಬಂದಿದ್ದ ಅಸ್ಸಾಂ ಭಾಗದ ಕುಟುಂಬಗಳು ನಾಪತ್ತೆ, ಕನ್ನಡಿಗರ ಮನೆ, ಕುಟುಂಬಗಳು ಕಣ್ಮರೆಯಾಗಿವೆ. ರೆಸಾರ್ಟ್‌ನಲ್ಲಿ ಉಳಿದಿದ್ದವರು ಇಲ್ಲ. ಸಿಕ್ಕ ದೇಹಗಳಲ್ಲಿ ಗುರುತಿಸಿದ, ಗುರುತಿಸಲಾಗದ ದೇಹಗಳನ್ನಷ್ಟೇ ಹೇಳಲು ಸಾಧ್ಯ ಆಗಿದೆ ವಿನಃ ಇದುವರೆಗೆ ಕಣ್ಮರೆಯಾದವರ ಬಗ್ಗೆ ಹೇಳಲು ಸಾಧ್ಯವೇ ಆಗಿಲ್ಲ.
ತಮ್ಮ ಪ್ರಾಣ ಉಳಿಸಿಕೊಳ್ಳುವುದೇ ಕಷ್ಟ, ಬೇರೆಯವರ ಪ್ರಾಣ ಉಳಿಸಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಕೆಲವು ಕುಟುಂಬಗಳ ಪರಿಸ್ಥಿತಿಯಂತೂ ಕರುಣಾಜನಕ.
ಪ್ರವಾಸಿಗರ ಸ್ವರ್ಗವಾಗಿದ್ದ ವಯನಾಡು ಇದೀಗ ನರಕವಾಗಿದೆ. ಮತ್ತೆ ಪ್ರವಾಸೋದ್ಯಮ ಚೇತರಿಸಿಕೊಳ್ಳುವುದು ಕಷ್ಟದ ಮಾತು. ಸಹಜ ಸ್ಥಿತಿಗೆ ಮರಳಲು ಸಾಧ್ಯವೇ ಅನ್ನುವ ಪ್ರಶ್ನೆ ಈಗ ಸಂತ್ರಸ್ತರ ಮುಂದಿರುವುದು. ಹಲವಾರು ವರ್ಷಗಳಿಂದ ಕಟ್ಟಿಕೊಂಡಿದ್ದ ಬದುಕು ದಿಢೀರ್ ಭೂಕುಸಿತ ಉಂಟಾಗಿ, ನೀರಲ್ಲಿ ಕೊಚ್ಚಿ ಹೋಗಿದೆ. ನನ್ನೋರು, ತನ್ನೋರು ಯಾರಿಲ್ಲ. ಜನರ ಆರ್ತನಾದ ಕೇಳುಗರ ಕಿವಿ ಗುಯ್ ಅನ್ನದೆ ಬಿಡದು.
ಎಲ್ಲಿ ನೋಡಿದರಲ್ಲಿ ಮಡುಗಟ್ಟಿದ ದುಃಖ. ಮಾತಾಡಿದರೆ, ಮಾತಾಡಿಸಿದರೆ ನನ್ನವರು, ತನ್ನ ಕುಟುಂಬದವರ ಕಳೆದುಕೊಂಡ ಮಾತುಗಳು. ಪ್ರಕೃತಿ ಮುನಿದಾಗ ಅದರ ರುದ್ರ ತಾಂಡವದ ನರಕ ಸದೃಶ್ಯವೇ ವಯನಾಡಿನ ಭೂ ಕುಸಿತ.