ವಯನಾಡ್‌ ಭೂಕುಸಿತ | ಸಂಸತ್‌ನಲ್ಲಿ ಸುಳ್ಳು ಹೇಳಿದ ಅಮಿತ್ ಶಾ

Date:

Advertisements

ಕಳೆದ ಜುಲೈ 16ರಂದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಉಂಟಾಗಿ 8 ಜನ ಸಾವನ್ನಪ್ಪಿದ್ದು, 3 ಜನ ನಾಪತ್ತೆಯಾಗಿದ್ದಾರೆ. ಈ ಘಟನೆ ಮಾಸುವ ಮುನ್ನವೇ, ಜುಲೈ 30ರ ಮುಂಜಾನೆ ಕೇರಳದ ವಯನಾಡು ಜಿಲ್ಲೆಯಲ್ಲಿ ಸರಣಿ ಭೂಕುಸಿತದಿಂದ 350ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 273 ಜನರು ಗಾಯಗೊಂಡಿದ್ದಾರೆ. ಹಲವು ಜನರು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಇನ್ನು ಭೂಕುಸಿತದಲ್ಲಿ ಬದುಕುಳಿದ ನೂರಾರು ಜನರ ಕನಸಿನ ಜತೆಗೆ ಅವರ ಬದುಕಿನ ಭರವಸೆಗಳು ಮಣ್ಣಾಗಿವೆ. ಭೂಕುಸಿತದಲ್ಲಿ ಬದುಕು ಕಳೆದುಕೊಂಡವರು, ಮುಂದಿನ ಜೀವನ ಹೇಗೆ ಎನ್ನುವ ಯಕ್ಷ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಕಂಗಾಲಾಗಿದ್ದಾರೆ. ಕೇರಳ ಸರ್ಕಾರ ಪರಿಹಾರ ಕಾರ್ಯಗಳನ್ನು ನಡೆಸುತ್ತಿದೆ. ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಸಂತ್ರಸ್ತರಿಗೆ ಊಟ, ಉಪಹಾರ, ತಾತ್ಕಾಲಿಕ ವಸತಿಯನ್ನು ಒದಗಿಸುತ್ತಿದೆ. ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ವಯನಾಡಿಗೆ ತೆರಳಿ ಸಂತ್ರಸ್ತರನ್ನು ಭೇಟಿ ಮಾಡಿ ಸಂತೈಸಿದ್ದಾರೆ. ‘ನನ್ನ ತಂದೆಯನ್ನು ಕಳೆದುಕೊಂಡಾಗ ಆಗಿದ್ದ ನೋವಿಗಿಂತ ಈಗ ಹೆಚ್ಚು ನೋವಾಗುತ್ತದೆ’ ಎಂದು ರಾಹುಲ್ ಗಾಂಧಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತರಿಗೆ ಸಹಾಯ ಮಾಡುವುದಾಗಿ ಹೇಳಿರುವ ರಾಹುಲ್‌ ಗಾಂಧಿ, ‘ವಯನಾಡ್‌ ಸಂತ್ರಸ್ತರಿಗಾಗಿ ಕಾಂಗ್ರೆಸ್‌ 100 ಮನೆಗಳನ್ನು ನಿರ್ಮಾಣ ಮಾಡಲಿದೆ’ ಎಂದು ಭರವಸೆ ನೀಡಿದ್ದಾರೆ. ಇತ್ತ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜ್ಯ ಸರ್ಕಾರವು ಅಲ್ಲಿನ ಸಂತ್ರಸ್ತರಿಗೆ 100 ಮನೆ ನಿರ್ಮಿಸಿಕೊಡಲಿದೆ ಎಂದಿದ್ದಾರೆ. ಆದರೆ, ಸರ್ವಾಧಿಕಾರ ಆಡಳಿತ ನಡೆಸುವುದೇ ತಮ್ಮ ಆಡಳಿತ ಎಂದಿರುವ ಬಿಜೆಪಿಯ ಕೇಂದ್ರ ಸರ್ಕಾರ ಈವರೆಗೂ ಸಂತ್ರಸ್ತರಿಗಾಗಿ ಮಿಡಿದಿಲ್ಲ. ವಿಶ್ವಗುರು ಎಂದು ಕರೆಸಿಕೊಳ್ಳುವ ಮೋದಿ ಅವರು ಇಲ್ಲಿಯವರೆಗೂ ವಯನಾಡ ಯಾವ ಮಗ್ಗಲಿನಲ್ಲಿ ಇದೆ ಎಂದು ತಿರುಗಿಯೂ ಕೂಡ ನೋಡಿಲ್ಲ.

Advertisements
ರಾಹುಲ್ ವಯನಾಡ್ ಭೂಕುಸಿತ

ನಿರಂತರ ಮಳೆಯಿಂದಾಗಿ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 350ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಕುಟುಂಬಗಳು ಸೂರು ಕಳೆದುಕೊಂಡು ನಿರಾಶ್ರಿತವಾಗಿದೆ. ಹಲವಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಜಿಲ್ಲಾಸ್ಪತ್ರೆಯಲ್ಲಿ ಇರುವ ಚಿಕ್ಕ ಜಾಗದಲ್ಲಿ ಸಾಲಾಗಿ ಇರಿಸಿದ ಮೃತದೇಹಗಳನ್ನು ನೋಡಿ, ಪ್ರೀತಿ ಪಾತ್ರರನ್ನು ಹುಡುಕುತ್ತ ಹತಾಶೆಯಲ್ಲಿ ಕುಟುಂಬ ಸದಸ್ಯರು ಓಡಾಡುವ ದೃಶ್ಯ ಮನಕಲಕುವಂತಿದೆ.

ಸಂತ್ರಸ್ತರೊಬ್ಬರು “ನನ್ನ ಸಹೋದರ ಮೃತಪಟ್ಟಿದ್ದಾನೆ” ಎಂದು ದುಃಖದಿಂದ ಹೇಳುವುದು ಒಂದು ಕಡೆಯಾದರೆ, “ತಾಯಿಯೊಬ್ಬರು ‘ನನ್ನ 12 ವರ್ಷದ ಮಗಳು ಸೇರಿ ಕುಟುಂಬದ ನಾಲ್ವರು ಸದಸ್ಯರು ಕಾಣೆಯಾಗಿದ್ದಾರೆ, ಸಾಧ್ಯವಾದರೆ ಹುಡುಕಿಕೊಡಿ” ಎಂದು ಕಣ್ಣೀರು ಹಾಕಿದ್ದಾರೆ. ಇದೇ ರೀತಿಯ ಹಲವು ಕಣ್ಣೀರ ಕತೆಗಳು ದುರಂತ ಸ್ಥಳದಿಂದ ಹೊರಬರುತ್ತಿವೆ. ಪ್ರವಾಹ, ಭೂಕುಸಿತದಲ್ಲಿ ಬದುಕುಳಿದವರ ಕಣ್ಮುಂದೆ ಭವಿಷ್ಯದ ಪ್ರಶ್ನೆ ದೊಡ್ಡದಾಗಿ ನಿಂತಿದೆ.

ಇನ್ನು, ಭೂಕುಸಿತದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು 1,300ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭೂಕುಸಿತ ಸಂಭವಿಸಿದ ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ ಬೃಹತ್ ಗಾತ್ರದ ಬಂಡೆಗಳು, ಮರದ ದಿಮ್ಮಿಗಳು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿವೆ. ಮಣ್ಣಿನಡಿ ಹೂತು ಹೋಗಿರುವ ಜನರನ್ನು ಪತ್ತೆ ಹಚ್ಚಲು ರಕ್ಷಣಾ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ ಎಂದು ತಿಳಿದು ಬಂದಿದೆ.

ಈ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಈಗ ಸಂಭವಿಸಿರುವ ದುರಂತವೇ ಜನರ ಬದುಕನ್ನು ನರಕವಾಗಿಸಿದೆ. ಇಂತಹ ಹೊತ್ತಿನಲ್ಲೇ, ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ನೀಡಿದ್ದು, “ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಲಾ ನಿನಾ ಮಾರುತ ರೂಪುಗೊಳ್ಳಲಿದೆ. ಇದು ಭಾರಿ ಮಳೆಯನ್ನೇ ತರಿಸಲಿದೆ. ಈ ಮಳೆಗೆ ಮತ್ತಷ್ಟು ಗುಡ್ಡಗಳು ಕುಸಿಯುವ ಸಾಧ್ಯತೆ ಇದೆ. ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಭೀಕರ ಭೂಕುಸಿತ, ಪ್ರವಾಹ ಉಂಟಾಗುವ ಸಾಧ್ಯತೆ ದಟ್ಟವಾಗಿದೆ” ಎಂದು ಹೇಳಿದೆ.

ಈ ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಂಸತ್ತಿನಲ್ಲಿ ಮಾತಾಡಿದ್ದಾರೆ. “ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಹವಾಮಾನ ವೈಪರೀತ್ಯ ಆಗಬಹುದು. ಇದು ಭೂಕುಸಿತ ಮತ್ತಿತರ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಬಹುದು ಎಂದು ಒಂದು ವಾರದ ಮೊದಲೇ ಕೇಂದ್ರ ಸರ್ಕಾರದಿಂದ ಕೇರಳ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಾಗಿತ್ತು. ಅಷ್ಟೇ ಅಲ್ಲ, ಕೇರಳದಲ್ಲಿ ಭಾರೀ ಮಳೆಯ ಮುನ್ಸೂಚನೆ ಸಿಗುತ್ತಿದಂತೆ ಮುಂಚಿತವಾಗಿಯೇ 9 NDRF ತಂಡವನ್ನು ಅಲ್ಲಿಗೆ ಕಳುಹಿಸಲಾಗಿದೆ. ಆದರೆ, ನಾವಿಷ್ಟು ಎಚ್ಚರಿಕೆ ನೀಡಿದರೂ ಕೇರಳ ಸರ್ಕಾರ ಗಮನ ಕೊಡಲಿಲ್ಲ. ಅಪಾಯಕಾರಿ ಸ್ಥಳದಲ್ಲಿ ಇದ್ದ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಮುಂದಾಗಲಿಲ್ಲ” ಎಂದು ಅಮಿತ್ ಶಾ ರಾಜ್ಯ ಸರ್ಕಾರವನ್ನು ದೂರಿದ್ದಾರೆ.

image 8 2

ವಯನಾಡ್‌ನಲ್ಲಿ ಭೂಕುಸಿತದ ಸಾಧ್ಯತೆ ಕುರಿತು ನೀಡಿದ್ದ ಎಚ್ಚರಿಕೆಯನ್ನು ಕೇರಳ ಸರ್ಕಾರ ಕಡೆಗಣಿಸಿದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದೆ.

ಕಾಂಗ್ರೆಸ್ ಸಂಸದ ಜೈರಾಂ ರಮೇಶ್ ಅವರು ಹಕ್ಕುಚ್ಯುತಿ ನೋಟಿಸ್ ನೀಡಿದ್ದು, ಅದರಲ್ಲಿ ಅಮಿತ್ ಶಾ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. “ಮೊದಲೇ ಎಚ್ಚರಿಕೆ ನೀಡಲಾಗಿತ್ತು ಎಂದು ಅಮಿತ್ ಶಾ ಅವರು ಸುಳ್ಳು ಹೇಳಿರುವುದು ಸ್ಪಷ್ಟವಾಗಿದೆ. ಸಚಿವರು ಅಥವಾ ಸದನದ ಸದಸ್ಯರು ಸುಳ್ಳು ಹೇಳಿ ಸದನದ ಹಾದಿತಪ್ಪಿಸುವುದು ವಿಶೇಷಾಧಿಕಾರದ ಉಲ್ಲಂಘನೆ ಮತ್ತು ಸದನಕ್ಕೆ ಮಾಡಿದ ನಿಂದನೆ ಎಂದು ಪರಿಗಣಿಸಲ್ಪಡುತ್ತದೆ” ಎಂದು ಹಕ್ಕುಚ್ಯುತಿ ನೋಟಿಸ್ನಲ್ಲಿ ಉಲ್ಲೇಖೀಸಲಾಗಿದೆ.

2018ರಲ್ಲಿಯೂ ಕೇರಳದಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. 489 ಜನ ಸಾವನ್ನಪ್ಪಿದ್ದರು. 15 ಜನ ನಾಪತ್ತೆಯಾಗಿದ್ದರು. 140 ಜನ ಗಂಭೀರವಾಗಿ ಗಾಯಗೊಂಡಿದ್ದರು. ಆಗ ಕೇರಳ ಸರ್ಕಾರ ಈ ಪ್ರದೇಶವನ್ನು ವಿಪತ್ತು ನಿರ್ವಹಣಾ ಕೇಂದ್ರ ಮಾಡಬೇಕೆಂದು ಕೋರಿತ್ತು. ಆದರೆ, ಆಗಲೂ ಕೇಂದ್ರ ಸರ್ಕಾರ ಇದಕ್ಕೆ ಸಮತ್ತಿ ಸೂಚಿಸಿರಲಿಲ್ಲ. ಇದೀಗ, ಕೇರಳದ ವಯನಾಡ್ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಎರಡು ಗ್ರಾಮಗಳು ನಾಮಾವಶೇಷವಾಗಿದೆ. 350ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಇನ್ನೂ ಕಾರ್ಯಾಚರಣೆ ಮುಂದುವರಿದಿದೆ.

ಭೂಕುಸಿತದಿಂದ ಉಂಟಾಗಿರುವ ಅಪಾರ ಜೀವ ಹಾನಿ ಮತ್ತು ಆಸ್ತಿ ನಷ್ಟವಾಗಿರುವುದರಿಂದ ಈ ದುರಂತವನ್ನು ರಾಷ್ಟ್ರೀಯ ವಿಪತ್ತು ಘೋಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೇರಳ ಸರ್ಕಾರ ಪತ್ರ ಬರೆದು ಮನವಿ ಮಾಡಿತ್ತು. ಆದರೆ, ಕೇಂದ್ರ ಸರ್ಕಾರವು ವಯನಾಡಿನ ಭೂಕುಸಿತ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ನಿರಾಕರಿಸಿದೆ. ಇದರ ಬೆನ್ನಲ್ಲೇ, ಮೇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ‘ವಿಪತ್ತು ಪೀಡಿತ’ ಪ್ರದೇಶ ಎಂದು ಘೋಷಿಸಿ ಕೇರಳ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

‘ರಾಷ್ಟ್ರೀಯ ವಿಪತ್ತು’ ಎಂದರೇನು?

ರಾಷ್ಟ್ರ ಮಟ್ಟದಲ್ಲಿ ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು (NDMA) ಸ್ಥಾಪಿಸಲಾಗಿದೆ ಮತ್ತು NDMA ತನ್ನ ಕಾರ್ಯಗಳ ನಿರ್ವಹಣೆಯಲ್ಲಿ ಸಹಾಯ ಮಾಡಲು ಕಾರ್ಯದರ್ಶಿಗಳ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (NEC) ರಚಿಸಲಾಗಿದೆ. ರಾಜ್ಯ ಮಟ್ಟದಲ್ಲಿ, ರಾಜ್ಯದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ರಚಿಸಲಾಗಿದೆ. ಇದಕ್ಕೆ ರಾಜ್ಯ ಕಾರ್ಯಕಾರಿ ಸಮಿತಿಯು ಸಹಾಯ ಮಾಡುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳನ್ನು ರಚಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿ ನೇತೃತ್ವ ವಹಿಸುತ್ತಾರೆ.

ಚೂರಲ್ಮಲಾ

ವಿಪತ್ತು ನಿರ್ವಹಣಾ ಕಾಯಿದೆ, 2005ರ ಪ್ರಕಾರ, “ವಿಪತ್ತು” ಎಂದರೆ ಯಾವುದೇ ಪ್ರದೇಶದಲ್ಲಿ ನೈಸರ್ಗಿಕವಾಗಿ ಅಥವಾ ಮಾನವ ನಿರ್ಮಿತ ಕಾರಣಗಳಿಂದ ಉಂಟಾಗುವ ದುರಂತ, ದುರ್ಘಟನೆ, ವಿಪತ್ತು, ಅಪಘಾತ, ಅಥವಾ ನಿರ್ಲಕ್ಷ್ಯದ ಕಾರಣದಿಂದಾಗಿ ಗಣನೀಯ ಪ್ರಮಾಣದ ಜೀವಹಾನಿಯಿಂದ ಮಾನವ ಸಂಕಟಕ್ಕೆ ಸಿಲಿಕಿಕೊಳ್ಳುವುದು ಆಗಿದೆ.

ಈ ವರದಿ ಓದಿದ್ದೀರಾ?: ಭೂಕುಸಿತ | ‘ಆಸೆಯ ದುಃಖ’: ವರ್ಷದ ಹಿಂದೆ ಬಾಲಕಿ ಬರೆದಿದ್ದ ಕಥೆಗೆ ವಯನಾಡ್ ಈಗ ಸಾಕ್ಷಿಯಾಗಿದೆ

1995-2000ರಲ್ಲಿ 10ನೇ ಹಣಕಾಸು ಆಯೋಗವು ಒಂದು ರಾಜ್ಯದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರ ಮೇಲೆ ಪರಿಣಾಮ ಬೀರಿದರೆ, ಅದನ್ನು “ಅಪರೂಪದ ತೀವ್ರತೆಯ ರಾಷ್ಟ್ರೀಯ ವಿಪತ್ತು” ಎಂದು ಕರೆಯುವ ಪ್ರಸ್ತಾಪವನ್ನು ಪರಿಶೀಲಿಸಿತು. ಈ ಸಮಿತಿಯು ‘ಅಪರೂಪದ ತೀವ್ರತೆಯ ವಿಪತ್ತು’ ಎಂದು ವ್ಯಾಖ್ಯಾನಿಸಿಲ್ಲ. ಆದರೆ, ಅಪರೂಪದ ತೀವ್ರತೆಯ ವಿಪತ್ತನ್ನು ಅವಶ್ಯವಾಗಿ ಕೇಸ್-ಟು-ಕೇಸ್ ಆಧಾರದ ಮೇಲೆ, ವಿಪತ್ತಿನ ತೀವ್ರತೆ ಮತ್ತು ಪ್ರಮಾಣವನ್ನು ಪರಿಗಣಿಸಿ ನಿರ್ಣಯಿಸಬೇಕಾಗುತ್ತದೆ ಎಂದು ಹೇಳಿದೆ. ಅಗತ್ಯವಿರುವ ಸಹಾಯದ ಮಟ್ಟ, ಸಮಸ್ಯೆಯನ್ನು ನಿಭಾಯಿಸಲು ರಾಜ್ಯದ ಸಾಮರ್ಥ್ಯ, ಸಹಾಯ ಮತ್ತು ಪರಿಹಾರವನ್ನು ಒದಗಿಸಲು ಯೋಜನೆಗಳಲ್ಲಿ ಲಭ್ಯವಿರುವ ಪರ್ಯಾಯಗಳು ಮತ್ತು ನಮ್ಯತೆ ಇತ್ಯಾದಿ. ವಿಪತ್ತು “ಅಪರೂಪದ ತೀವ್ರತೆ”/”ತೀವ್ರ ಸ್ವಭಾವ” ಎಂದು ಘೋಷಿಸಿದಾಗ, ರಾಜ್ಯ ಸರ್ಕಾರಕ್ಕೆ ರಾಷ್ಟ್ರ ಮಟ್ಟದಲ್ಲಿ ಬೆಂಬಲವನ್ನು ಒದಗಿಸಲಾಗುತ್ತದೆ. ಕೇಂದ್ರವು NDRF ನಿಂದ ಹೆಚ್ಚುವರಿ ಸಹಾಯವನ್ನು ಸಹ ಪರಿಗಣಿಸುತ್ತದೆ.

ಕೇರಳ ಭೂಕುಸಿತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕೆಂಬ ಬೇಡಿಕೆಗಳ ನಡುವೆ ಕೇರಳ ಭೂಕುಸಿತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಕಾಗದದ ಮೇಲೆ ಘೋಷಿಸುವುದರಿಂದ ಸಂಕಷ್ಟದಲ್ಲಿರುವ ಜನರಿಗೆ ಈಗಾಗಲೇ ವಿಸ್ತರಿಸಲಾಗುತ್ತಿರುವ ಸಹಾಯಕ್ಕಿಂತ ಹೆಚ್ಚಿನ ಸಹಾಯವಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಭಾರತದಲ್ಲಿ, ವಿಪತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ರಾಜ್ಯಗಳಿಗೆ ಸಹಾಯ ಮಾಡಲು ಸೇನೆ ಅಥವಾ NDRF ನಂತಹ ಕೇಂದ್ರೀಯ ಪಡೆಗಳನ್ನು ಸ್ಥಳಾಂತರಿಸಲು ಸರ್ಕಾರದ ಅಧಿಸೂಚನೆಯ ಅಗತ್ಯವಿಲ್ಲ. ರಾಜ್ಯವು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಕಳುಹಿಸಿದ ತಕ್ಷಣ, ಕೇಂದ್ರ ಪಡೆಗಳನ್ನು ರವಾನಿಸಲಾಗುತ್ತದೆ. ಅಲ್ಲದೇ, ನೈಸರ್ಗಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಯಾವುದೇ ನಿಬಂಧನೆ ಇಲ್ಲ ಎಂಬುದನ್ನು ಗಮನಿಸಬಹುದು.

ರಾಷ್ಟ್ರೀಯ ವಿಪತ್ತು ಎಂದು ಹೆಸರಿಸಲಿ ಅಥವಾ ಇಲ್ಲದಿರಲಿ ಆಡಳಿತಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ಈ ಜವಾಬ್ದಾರಿಯು ಕೇಂದ್ರ ಸರ್ಕಾರಕ್ಕೆ ಸೇರಿದೆ. ಕೇರಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಜೀವ ಮತ್ತು ಆಸ್ತಿಪಾಸ್ತಿ ಹಾನಿಯನ್ನು ನಿರ್ಣಯಿಸುವುದು ಮತ್ತು ವಯನಾಡ್‌ನ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವುದು ಅತ್ಯಗತ್ಯ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. Election gagi Mata Keloke Estu bari Odaduva Badavara Raktha Eruv Paksha Manaviyate Illade,Vayanadige Beti Kodalilla, Atava Madhyamagalli Santvan Helakku Agilla. Malathayi Dorane Anusarisuttiruva BJP ya Ellarigu Nanna Dikkara.
    Rajyaddallli Mysore Chalo Mado Badalu Vayanadige Hogi Alliruva Paristiti Nodi sahaya Madabekagittu aga Ivarella Gandsaru Anth Oppikollabahudu. Ivarige Nachike, Maana, Maryade Mooru Bittavaru, Hesige Agutte

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X