ಕಲಬುರಗಿ ತಾಲೂಕಿನ ಇಟಗಾ (ಕೆ) ಗ್ರಾಮದ ವ್ಯಾಪ್ತಿಯಲ್ಲಿ ಬರುವ ತಾಂಡಾದ ರೈತರು ಸುಮಾರು 70 ವರ್ಷಗಳಿಂದ ಸಾಗುವಳಿ ಮಾಡುವ ಬಗರ್ ಹುಕುಂ ಜಮೀನಿನಲ್ಲಿ ಸ್ಮಶಾನ ಭೂಮಿ ಮಾಡಿರುವುದನ್ನು ಖಂಡಿಸಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ನೆತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ʼಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿರುವ ರೈತರು ಇದೇ ಭೂಮಿ ನಂಬಿ ಜೀವನ ಸಾಗಿಸುತ್ತಿದ್ದೇವೆ.
ಆದರೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಏಕಾಏಕಿ ಜಮೀನನಲ್ಲಿ 4 ಎಕರೆ ಸ್ಮಶಾನಕ್ಕಾಗಿ ಗೊತ್ತು ಮಾಡಿದ್ದಾರೆ. ಇದರಿಂದ ನಮಗೆ ಆತಂಕ ಎದುರಾಗಿದೆʼ ಎಂದರು.
ʼಜಮೀನಿನಲ್ಲಿ ಸಾಗುವಳಿ ನಡೆಯುತ್ತಿರುವುದರಿಂದ ಕೃಷಿ ಯೋಗ್ಯ ಭೂಮಿಯನ್ನು ಹೊರತುಪಡಿಸಿ ಅನುಪಯುಕ್ತ ಭೂಮಿಯಲ್ಲಿ ಸ್ಮಶಾನಕ್ಕೆ ಜಮೀನು ಗುರುತಿಸಿ, ಸದರಿ ಭೂಮಿ ರೈತರಿಗೆ ಸಾಗುವಳಿಗೆ ಅವಕಾಶ ನೀಡಬೇಕುʼ ಎಂದು ಪ್ರತಿಭಟನಾಕಾರರು ಅಗ್ರಹಿಸಿದರು.
ʼಬಗರ್ ಹುಕುಂ ಭೂಮಿಗಾಗಿ ಗ್ರಾಮಸ್ಥರು ಸಲ್ಲಿಸಿರುವ ಫಾರ್ಮ್ ನಂ.57 ಅರ್ಜಿಯನ್ನು ಕೂಡಲೇ ಪರಿಶೀಲಿಸಿ, ಸೂಕ್ತ ಸಮೀಕ್ಷೆ ನಡೆಸಿ 70 ವರ್ಷಗಳಿಂದಲೂ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಜನಾಂದೋಲನ ಸಭೆ | ನನ್ನ ನಾಯಕತ್ವಕ್ಕೆ 135 ಸೀಟು, ಎಚ್‌ಡಿಕೆ ನಾಯಕತ್ವಕ್ಕೆ 19 ಸೀಟು: ಡಿಕೆಶಿ ತಿರುಗೇಟು
ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಬಿ, ತಾಲೂಕು ಅಧ್ಯಕ್ಷ ವಿಶ್ವನಾಥ್ ಸಿಂಘೇ, ಸದಸ್ಯರಾದ ಭೀಮಾಶಂಕರ ಆಂದೋಲಾ, ಅಮೃತ್ ಚವ್ಹಾಣ, ಗುಂಡು ಬಾಬು ಚವ್ವಾಣ, ಶಿವರಾಂ ರಾಠೋಡ, ರಾಜು ರಾಠೋಡ, ಶಾಂತಾಬಾಯಿ ರಾಠೋಡ, , ಪಾಂಡು ರಾಠೋಡ, , ರವಿ ರಾಠೋಡ, , ಸಂತೋಷ್ ರಾಠೋಡ, , ಶಿವಕುಮಾರ್ ರಾಠೋಡ ಸೇರಿದಂತೆ ಇತರರಿದ್ದರು.