ಭಾರತೀಪುರ ಕಿರು ಅರಣ್ಯ ಪ್ರದೇಶ ಒತ್ತುವರಿ ಮಾಡಿ ಅರಣ್ಯ ಕಾಯ್ದೆ ಉಲ್ಲಂಘಿಸಿರುವ ವಿಹಂಗಮ ಹಾಲಿಡೇ ರಿಟ್ರೀಟ್ ವಿರುದ್ಧ ಕ್ರಮ ಕೈಗೊಂಡು ಅಕ್ರಮ ಮಂಜೂರಾತಿ/ಪರವಾನಿಗೆ ರದ್ದುಗೊಳಿಸುವಂತೆ ಕೋರಿ ಶಿವಮೊಗ್ಗದ ಉಪ ವಿಭಾಗಾಧಿಕಾರಿ ಕಚೇರಿಗೆ ಕಡತ ಸಲ್ಲಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಡಾ. ಲೋಕೇಶ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ತಾಲೂಕಿನ ಭಾರತೀಪುರದ ತುಂಗಾ ನದಿಯ ದಡದಲ್ಲಿರುವ ವಿಹಂಗಮ ಹಾಲಿಡೇ ರೆಸಾರ್ಟ್ ಬಫರ್ ಝೋನ್ ಒಳಗೆ ಕಾರ್ಯಾಚರಿಸುತ್ತಿದ್ದು, ಕೃಷಿ ಚಟುವಟಿಕೆಗಳ ಒಳಗೊಂಡಿರುವ ರೆಸಾರ್ಟ್ ಜೊತೆಗೆ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆ ಅನುಮತಿ ನೀಡಿದವರು ಯಾರೆಂದು ನೈಜ ಹೋರಾಟಗಾರರ ವೇದಿಕೆಯು ಜಿಲ್ಲಾಡಳಿತವನ್ನು ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಜುಲೈ 25ರಂದು “ಶಿವಮೊಗ್ಗ | ಬಫರ್ ಝೋನ್ ವ್ಯಾಪ್ತಿಯಲ್ಲಿ ರೆಸಾರ್ಟ್; ನೈಜ ಹೋರಾಟಗಾರರ ವೇದಿಕೆಯಿಂದ ಜಿಲ್ಲಾಧಿಕಾರಿಗೆ ದೂರು” ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿಯನ್ನು ಗಮನಿಸಿದ ಬೆಜ್ಜವಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸ್ಥಳ ಪರಿಶೀಲಿಸಿ ಸಂಪೂರ್ಣ ವರದಿಯನ್ನು ಕಚೇರಿಗೆ ನೀಡಿದ್ದಾರೆ.
ಭಾರತೀಪುರ ಗ್ರಾಮದ ಸರ್ವೇ ನಂ. 81ರ ಭಾರತೀಪುರ ಕಿರು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ವಿಹಂಗಮ ಹಾಲಿಡೇ ರೆಸಾರ್ಟ್ ಇರುವುದನ್ನು ಕಂಡ ವಲಯ ಅರಣ್ಯಾಧಿಕಾರಿಗಳು ಸದರಿ ಜಾಗದ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಿದ್ದು, “ತೀರ್ಥಹಳ್ಳಿ ತಹಶೀಲ್ದಾರ್ ಮತ್ತು ಕುಡುಮಲ್ಲಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾರತೀಪುರ ಕಿರು ಅರಣ್ಯ ಪ್ರದೇಶದ ವ್ಯಾಪ್ತಿಯೊಳಗಡೆ ಅರಣ್ಯ (ಸಂರಕ್ಷಣಾ) ಕಾಯ್ದೆ 1980ರ ಅಡಿಯಲ್ಲಿ ಪೂರ್ವಾನುಮೋದನೆ ಪಡೆಯದೇ ʼವಿಹಂಗಮ ರೆಸಾರ್ಟ್ʼಗೆ ಅನುಮತಿ ನೀಡಿರುವ ಬಗ್ಗೆ ಪಂಚಾಯಿತಿಯಿಂದ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ದಾಖಲೆಗಳೊಂದಿಗೆ ತುರ್ತಾಗಿ ವರದಿ ಸಲ್ಲಿಸುವಂತೆ ಉಲ್ಲೇಖ(7) ಮತ್ತು (8)ರ ಈ ಕಚೇರಿ ಪತ್ರಗಳಲ್ಲಿ ಕೋರಲಾಗಿದೆ. ಸದರಿ ಕಚೇರಿಗಳಿಂದ ಅಗತ್ಯ ದಾಖಲೆಗಳನ್ನು ನೀಡಿದ ನಂತರ ಅಕ್ರಮ ಮಂಜೂರಾತಿ/ಪರವಾನಿಗೆ ರದ್ದುಗೊಳಿಸುವಂತೆ ಕೋರಿ ಶಿವಮೊಗ್ಗದ ಉಪ ವಿಭಾಗಾಧಿಕಾರಿ ಕಚೇರಿಗೆ ಕಡತ ಸಲ್ಲಿಸಲು ಅಗತ್ಯ ಕ್ರಮ ವಹಿಸಲಾಗುವುದು” ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ತೀರ್ಥಹಳ್ಳಿ ತಹಸೀಲ್ದಾರ್ ಅವರನ್ನು ಈ ಕುರಿತು ಈ ದಿನ.ಕಾಮ್ ಸಂಪರ್ಕಿಸಿತ್ತು. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಪ್ರತಿಕ್ರಿಯಿಸಿದ್ದು, “ಸರ್ವೆ ನಂ.81/2ರಲ್ಲಿ 13.00 ಎಕರೆ ಜಾಗವನ್ನು ಭಾರತೀಪುರ ಕಿರು ಅರಣ್ಯ ಪ್ರದೇಶದಿಂದ 1961ನೇ ಸಾಲಿನಲ್ಲಿ ಭದ್ರಾ ಜಲಾಶಯ ಯೋಜನೆಯಡಿಯಲ್ಲಿ ನರಸಿಂಹರಾಪುರ ತಾಲೂಕಿನ ನಂದಿಗಾವ ಗ್ರಾಮದಲ್ಲಿ ಮುಳುಗಡೆಯಾದ ಪ್ರದೇಶಕ್ಕೆ ಬದಲಾಗಿ ಪುನರ್‌ವಸತಿ ಮತ್ತು ನೀರಾವರಿ ಅಭಿವೃದ್ಧಿ ತುಂಗಾ, ಭದ್ರಾ ಮತ್ತು ಶರಾವತಿ ಯೋಜನೆಯ ವಿಶೇಷ ಅಧಿಕಾರಿ ಲಕ್ಷ್ಮಮ್ಮ ಕೋಂ ಲೇಟ್ ಕೃಷ್ಣಯ್ಯಶೆಟ್ಟಿಯವರಿಗೆ ಮಂಜೂರು ಮಾಡಿರುವುದು ತಿಳಿದುಬಂದಿದೆ” ಎಂದು ತಿಳಿಸಿದ್ದಾರೆ.
“ಸದರಿ ಸರ್ವೆ ನಂ.81/2 ಪಕ್ಕಾಪೋಡಿಯಾಗಿ ನಂಬರ್: ASLR 10/75-76/ TRPH 153/876 ರಂತೆ ಹೊಸದಾಗಿ ಸ.ನಂ.201ಆಗಿದ್ದು, 1979-80ನೇ ಸಾಲಿನಲ್ಲಿ ಕೆ ಆರ್ ದಯಾನಂದ ಬಿನ್ ರಾಮಪ್ಪಗೌಡ ಎಂಬುವವರಿಗೆ ಲಕ್ಷ್ಮಮ್ಮ ಕೋಂ ಲೇಟ್ ಕೃಷ್ಣಯ್ಯಶೆಟ್ಟಿ ಎಂಬುವವರು ಮಾರಾಟ ಮಾಡಿದ್ದಾರೆ. ಪ್ರಸ್ತುತ ಕೆ ಆರ್ ದಯಾನಂದ ಬಿನ್ ರಾಮಪ್ಪಗೌಡ ಅವರ ಮಗ ಕೆ ಆರ್ ಡಿ ಕಾನಿನ ಬಿನ್ ಕೆ ಆರ್ ದಯಾನಂದ ಎಂಬುವವರು ಸದರಿ ಸ.ನಂ201ರ ತಮ್ಮ ಖಾತೆ ಜಮೀನಿನಲ್ಲಿ ವಿಹಂಗಮ ಹಾಲಿಡೇ ರಿಟ್ರೇಟ್ ಎಂಬ ಹೋಂ ಸ್ಟೇ ನಡೆಸುತ್ತಿದ್ದು, ಕುಡುಮಲ್ಲಿಗೆ ಗ್ರಾಮ ಪಂಚಾಯಿತಿಯವರು ವಿಹಂಗಮ ಹಾಲಿಡೇ ರಿಟ್ರೇಟ್ ಪ್ರವಾಸೋದ್ಯಮ ನಡೆಸಲು ಪರವಾನಗಿ ನೀಡಿರುವುದು ಕಂಡುಬಂದಿದೆ” ಎಂದು ತಿಳಿಸಿದ್ದಾರೆ.
“ಸದರಿ ಸ್ಥಳವನ್ನು ಸರ್ವೆ ಮಾಡಿ, ಭಾರತೀಪುರ ಗ್ರಾಮ ನಕಾಶೆಯೊಂದಿಗೆ ಪರಿಶೀಲಿಸಿ, ತಾಳೆ ಮಾಡಿ ನೋಡಿದಾಗ, ಸದರಿ ಮಂಜೂರಾಗಿರುವ ಜಾಗ, ಪ್ರಸ್ತುತ ಸ್ಥಳದಲ್ಲಿರುವ ಜಾಗ ಹಾಗೂ ಗ್ರಾಮ ನಕಾಶೆಗೂ ಯಾವುದೇ ರೀತಿ ತಾಳೆಯಾಗುತ್ತಿಲ್ಲವೆಂಬ ಅಂಶವನ್ನು ಮನಗಂಡು ಪ್ರಸ್ತಾಪಿತ ಪ್ರದೇಶದ ಜಂಟಿ ಸರ್ವೆ ನಡೆಸಿ ಗಡಿ ಗುರುತುಗಳನ್ನು ಗುರುತಿಸಿಕೊಡಲು ತಹಶೀಲ್ದಾರ್‌ರವರಿಗೆ ಕೋರಲಾಗಿದೆ. ಭಾರತೀಪುರ ಗ್ರಾಮದ ಸ.ನಂ8ರ ಅಧಿಸೂಚಿತ ಅರಣ್ಯ ಪ್ರದೇಶ ಒಳಗಡೆ ಹೋಂ ಸ್ಟೇ ನಡೆಸಲು ಕುಡುಮಲ್ಲಿಗೆ ಗ್ರಾಮ ಪಂಚಾಯಿತಿಯಿಂದ ಪರವಾನಗಿ(ಲೈಸನ್ಸ್) ನೀಡಿರುವುದು ಅರಣ್ಯ(ಸಂರಕ್ಷಣಾ) ಕಾಯ್ದೆ 1980ರ ಉಲ್ಲಂಘನೆಯಾಗಿರುವುದರಿಂದ ಈ ಬಗ್ಗೆ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನಿಯಮಾನುಸಾರ ಕ್ರಮ ಕೈಗೊಂಡು ವರದಿ ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ” ಎಂದಿದ್ದಾರೆ.
“ಪ್ರಸ್ತಾಪಿತ ಭಾರತೀಪುರ ಗ್ರಾಮದ ಸರ್ವೆ ನಂ 81ರ ಭಾರತೀಪುರ ಕಿರು ಅರಣ್ಯ ಪ್ರದೇಶದ ತುಂಗಾ ನದಿಯ ಬಫರ್ ಜೋನ್‌ನಲ್ಲಿ ʼವಿಹಂಗಮ ಹಾಲಿಡೇ ರಿಟ್ರೇಟ್ʼ ಎಂಬ ಹೋಮ್ ಸ್ಟೇ ನಡೆಸಲು ಅನುಮತಿ ಪಡೆದಿದ್ದಾರೆಯೇ? ಕೃಷಿ ಚಟುವಟಿಕೆ ಒಳಗೊಂಡಿರುವ ರೆಸಾರ್ಟ್ ಇದಾಗಿದ್ದು, ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ಪಡೆದಿದ್ದಾರೆಯೇ? ಎಂಬುದಾಗಿ ಅರಣ್ಯ ಇಲಾಖೆಯ ಮೇಲಧಿಕಾರಿಗಳ ಕಚೇರಿಯಲ್ಲಿ ಗಂಭೀರ ಸ್ವರೂಪದ ದೂರು ದಾಖಲಾಗಿರುವುದರಿಂದ ಉಪವಲಯ ಅರಣ್ಯಾಧಿಕಾರಿ ಆಗಸ್ಟ್ 1ರಂದು ಸ್ಥಳ ಪರಿಶೀಲಿಸಿದ್ದಾರೆ”
“ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಗ್ರಾಮದ ಕೆ ಆರ್ ದಯಾನಂದ್ ಬಿನ್ ಕೆ ಎಸ್ ರಾಮಪ್ಪಗೌಡ ಮತ್ತು ಕಾನಿನ ಕಡಿದಾಳ್ ಬಿನ್ ಕೆ ಆರ್ ದಯಾನಂದ್ ಎಂಬುವವರು ಅಕ್ರಮವಾಗಿ ಕಲ್ಲುಕಂಬ ತಂತಿಬೇಲಿ ನಿರ್ಮಿಸಿ ಅಡಿಕೆ, ಕಾಫಿ ಮತ್ತು ಇತರ ಬೆಳೆ ಬೆಳೆದು, ಮನೆಯ ಜತೆಗೆ ಇತರ ಕಟ್ಟಡಗಳನ್ನು ನಿರ್ಮಿಸಿಕೊಂಡು ಒತ್ತುವರಿ ಮಾಡಿರುವುದು ಕಂಡುಬಂದಿದೆ. ಸದರಿ ಪ್ರದೇಶವು 1961ನೇ ಸಾಲಿನಲ್ಲಿ ಮಂಜೂರಾಗಿದ್ದು, ನಂತರ 1979-80ನೇ ಸಾಲಿನಲ್ಲಿ ಮಂಜೂರಾತಿದಾರರಿಂದ 13 ಎಕರೆ 20 ಗುಂಟೆ ಜಾಗವನ್ನು ಎl) ಕೆ ಆರ್ ದಯಾನಂದ ಬಿನ್ ಕೆ ಎಸ್ ರಾಮಪ್ಪಗೌಡ ಇವರು ಕ್ರಯಕ್ಕೆ ಪಡೆದುಕೊಂಡಿದ್ದು, ಪ್ರಸ್ತುತ ಸದರಿ ಜಾಗದಲ್ಲಿ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಕಾನಿನ ಕಡಿದಾಳ್ ಎಂಬಾತ ‘ವಿಹಂಗಮ ಹಾಲಿಡೇ ರಿಟ್ರೇಟ್ʼ ಹೊಂಸ್ಟೇ ನಡೆಸುತ್ತಿದ್ದಾರೆ. ಸದರಿ ಜಾಗಕ್ಕೆ ಸಂಬಂಧಿಸಿದಂತೆ ದಾಖಲಾತಿಗಳೂ ಇವೆ. ಸದರಿ ಜಾಗವನ್ನು ಪರಿಶೀಲಿಸಿದಾಗ ಭಾರತೀಪುರ ಸರ್ವೇ ನಂ 81ರ ಕಿರು ಅರಣ್ಯ ಪ್ರದೇಶವಾಗಿದ್ದು, ಜಿಪಿಎಸ್ ಸಹಾಯದಿಂದ ಅಳತೆ ಮಾಡಿ ನೋಡಲಾಗಿದೆ. ಆ ವೇಳೆ 17 ಎಕರೆ 06 ಗುಂಟೆ ಜಾಗವಿರುವುದು ಕಂಡುಬಂದಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರಾವಳಿಯಲ್ಲಿ ಭಾರೀ ಮಳೆ; ಅಪಾರ ಪ್ರಮಾಣದ ಹಾನಿಗೆ ತತ್ತರಿಸಿದ ಸ್ಥಳೀಯರು
“ಸದರಿಯವರ ವರದಿಯಂತೆ ಆಗಸ್ಟ್ 1ರಂದು ಸ್ಥಳ ಪರಿಶೀಲಿಸಿದ್ದು, ಭಾರತೀಪುರ ಸ.ನಂ.81ರ ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲುಕಂಬ ತಂತಿ ಬೇಲಿ ನಿರ್ಮಿಸಿ, ಅಡಿಕೆ, ಬಾಳೆ ಇತರೆ ಬೆಳೆಗಳನ್ನು ಬೆಳೆದು, ಮನೆ ಮತ್ತು ಇತರ ಕಟ್ಟಡಗಳನ್ನು ನಿರ್ಮಿಸಿ ಅಕ್ರಮ ಒತ್ತುವರಿ ಮಾಡಿರುವ ಆರೋಪಿ ಕೆ ಆರ್ ದಯಾನಂದ್ ಬಿನ್ ಕೆ ಎಸ್ ರಾಮಪ್ಪಗೌಡ ಮತ್ತು ಕಾನೀನ ಕಡಿದಾಳ್ ಬಿನ್ ಕೆ ಆರ್ ದಯಾನಂದ ವಿರುದ್ಧ ಉಲ್ಲೇಖ(6)ರಂತೆ ಅರಣ್ಯ ಮೊಕದ್ದಮೆ ಸಂಖ್ಯೆ:31/2024-25ರಂತೆ ಪ್ರಕರಣ ದಾಖಲಿಸಿ ಮಹಜರ್ ಪ್ರಕ್ರಿಯೆ ಜರುಗಿಸಲಾಗಿದ್ದು, ಪ್ರಸ್ತಾಪಿತ ಭಾರತೀಪುರ ಸ.ನಂ.81ರ ಪ್ರದೇಶದಲ್ಲಿ ಜಂಟಿ ಸರ್ವೆ ಕಾರ್ಯ ನಡೆಸಿ ಗಡಿ ಗುರುತು ಗುರುತಿಸಿಕೊಡುವಂತೆ ತಹಶೀಲ್ದಾರ್ ಅವರಿಗೆ ತಿಳಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
