ಕಮಲ್ ಹಾಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಇಂಡಿಯನ್ 2’ ಜುಲೈ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಇದೀಗ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 9ರಂದು ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ‘ಬಾಕ್ಸ್ ಆಫಿಸ್’ನಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿದೆ. ಪ್ರೇಕ್ಷಕರ ಕುತೂಹಲ ಕೆರಳಿಸುವಲ್ಲಿ ಎಡವಿದೆ. ಅದಾಗ್ಯೂ, ಸಿನಿಮಾವನ್ನು 200 ಕೋಟಿ ರೂ.ಗಳಿಗೆ ನೆಟ್‌ಫ್ಲಿಕ್ಸ್ ಖರೀದಿಸಿದೆ. ಆಗಸ್ಟ್ 9 ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಮೆಗಾ-ಬಜೆಟ್‌ನ ಸಿನಿಮಾವನ್ನು ಅಂಗೈನಲ್ಲಿ ವೀಕ್ಷಿಸಲು ಕಮಲ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಸಿನಿಮಾ ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.
ವರದಿಗಳ ಪ್ರಕಾರ, ‘ಇಂಡಿಯನ್ 2’ ಚಿತ್ರವು ಪ್ರಪಂಚದಾದ್ಯಂತ ಬಿಡುಗಡೆಯಾದರೂ, ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ಉಳಿಯಲಿಲ್ಲ. ಸಿನಿಮಾ ಜಾಗತಿಕವಾಗಿ ಗಲ್ಲಾಪೆಟ್ಟಿಗೆಯಲ್ಲಿ 150 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯಾಗಿದೆ.
ಶಂಕರ್ ನಿರ್ದೇಶಿಸಿದ ‘ಇಂಡಿಯನ್ 2’ ಸಿನಿಮಾದಲ್ಲಿ ಸಿದ್ಧಾರ್ಥ್, ರಾಕುಲ್ ಪ್ರೀತ್ ಸಿಂಗ್, ಬಾಬಿ ಸಿಂಹ, ವಿವೇಕ್, ನೆಡುಮುಡಿ ವೇಣು ಮತ್ತು ಪ್ರಿಯಾ ಭವಾನಿ ಶಂಕರ್ ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ರಚಿಸಿದ್ದು, ರವಿವರ್ಮನ್ ಛಾಯಾಗ್ರಹಣ ಮಾಡಿದ್ದಾರೆ.