ಕುಸ್ತಿಪಟುಗಳಾದ ವಿನೇಶಾ ಪೋಗಟ್, ಸಾಕ್ಷಿ ಮಲ್ಲಿಕ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಷನ್ ಅಧ್ಯಕ್ಷ, ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದ್ದರೆ ಪಿ ಟಿ ಉಷಾ ನಿಜಕ್ಕೂ ಶ್ಲಾಘನೆಗೆ ಪಾತ್ರರಾಗುತ್ತಿದ್ದರು
ತಮಗೆ ಲೈಂಗಿಕ ಕಿರುಕುಳ ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ದೆಹಲಿಯಲ್ಲಿ ಮಹಿಳಾ ಕುಸ್ತಿ ಪಟುಗಳು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ನಡವಳಿಕೆಯನ್ನು ʼಅಶಿಸ್ತುʼಎಂದೇ ಪರಿಗಣಿಸಲಾಗುವುದು ಮತ್ತು ʼಇದರಿಂದ ದೇಶದ ವರ್ಚಸ್ಸು ಹಾಳಾಗುತ್ತದೆʼಎಂಬ ಪಿ.ಟಿ. ಉಷಾ ಹೇಳಿಕೆ ಅತ್ಯಂತ ನಿರಾಶಾದಾಯಕ.
ಚಿನ್ನದ ಹುಡುಗಿ ಎಂದೇ ಹೆಸರಾಗಿದ್ದ ಉಷಾ ಒಲಿಂಪಿಕ್ ಚಿನ್ನದ ಪದಕ ವಿಜೇತೆ, ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯೆ ಹಾಗೂ ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ. ಇಂತಹ ಸ್ತ್ರೀದ್ವೇಷಿ ಹೇಳಿಕೆಯ ಮೂಲಕ ಬಿಜೆಪಿಯ ಕಡು ಸಾಂಪ್ರದಾಯಿಕ ಮನಸ್ಥಿತಿಗೆ ತಾವು ಒಗ್ಗಿಕೊಂಡಿರುವುದನ್ನು ಉಷಾ ಸಾರಿ ಹೇಳಿದ್ದಾರೆ. ನಾಲ್ಕು ದಶಕಗಳಿಂದ ಆಕೆಯನ್ನು ಗೌರವಿಸುತ್ತಿದ್ದ ಕೋಟ್ಯಂತರ ಅಭಿಮಾನಿಗಳ ಎದೆಗೆ ಚೂರಿಯಿಂದ ಇರಿದಂತಾಗಿದೆ. ಅವರ ಈ ಹೇಳಿಕೆಗೆ ದೇಶದಾದ್ಯಂತ ವ್ಯಾಪಕ ಖಂಡನೆ ಮತ್ತು ಟೀಕೆ ವ್ಯಕ್ತವಾಗಿದೆ.
ಉಷಾ ಅವರು ಮೂಲಭೂತವಾಗಿ ಒಬ್ಬ ಮಹಿಳೆಯಾಗಿ ಮತ್ತು ಜವಾಬ್ದಾರಿಯುತ ಕ್ರೀಡಾಳುವಾಗಿ ಮಾತನಾಡಿಲ್ಲ, ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆಯಾಗಿಯೂ ಅಲ್ಲ. ಕೇವಲ ಒಂದು ಸಂಪ್ರದಾಯವಾದಿ ಪಕ್ಷದ ಪ್ರತಿನಿಧಿಯಾಗಿ ಆಪಾದಿತನ ರಕ್ಷಣೆಗೆ ನಿಂತಂತೆ ಭಾಸವಾಗುತ್ತಿದೆ. ಇದು ವಾಸ್ತವವೇ ಆಗಿದ್ದರೆ ಇದಕ್ಕಿಂತ ದೊಡ್ಡ ದುರಂತ ಬೇರೆಯಿಲ್ಲ. ಸ್ತ್ರೀ ಪೀಡಕ ದುಷ್ಟನೊಬ್ಬನ ರಕ್ಷಣೆಗೆ ನಿಂತ ಕಳಂಕವನ್ನು ʼಪಯ್ಯೋಳಿ ಎಕ್ಸ್‌ಪ್ರೆಸ್ʼ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿದ್ದ ಉಷಾ ಶಾಶ್ವತವಾಗಿ ಅಂಟಿಸಿಕೊಂಡಂತಾಗುತ್ತದೆ.
ಒಬ್ಬ ಕ್ರೀಡಾಳುವಾಗಿ, ಹೆಣ್ಣಾಗಿ ತಮ್ಮ ಮಕ್ಕಳ ಸಮಾನರಾದವರಿಗೆ ಅನ್ಯಾಯವಾದಾಗ ಅವರ ಪರ ನಿಲ್ಲಲಾರದಂತಹ ಕಡು ಕಷ್ಟದ ಸಂದಿಗ್ದವಾದರೂ ಉಷಾ ಅವರಿಗೆ ಏನಿತ್ತು? ಕ್ರೀಡಾ ಸಾಧನೆಗೆಗಾಗಿ ನಾಲ್ಕು ದಶಕಗಳಿಂದ ಉಷಾ ಪಡೆದ ಸಮ್ಮಾನಗಳಿಗೆ ಲೆಕ್ಕವಿಲ್ಲ. ಕೇರಳದ ಈ ಹುಡುಗಿ 1986 ರಲ್ಲಿ ಸಿಯೊಲ್ ನಲ್ಲಿ ನಡೆದ 10 ನೆಯ ಏಷಿಯನ್ ಗೇಮ್ಸ್ ಸ್ಪರ್ಧೆಗಳಲ್ಲಿ 4 ಚಿನ್ನ1 ರಜತ ಪದಕಗಳನ್ನು ಗೆದ್ದವರು. ದೇಶದ ಸಹಸ್ರಾರು ಹೆಣ್ಣುಮಕ್ಕಳಲ್ಲಿ ಪದಕ ಗಳಿಸುವ ಕನಸು ಬಿತ್ತಿದವರು. ಸ್ವಂತ ಅಕಾಡೆಮಿ ಸ್ಥಾಪಿಸಿ ಹೆಣ್ಣುಮಕ್ಕಳಿಗೆ ಓಟದ ತರಬೇತಿ ಕೊಟ್ಟವರು. ಈಗ ಮಕ್ಕಳ ಸಮಾನರಾದ ವಿನೇಶಾ ಪೋಗಟ್, ಸಾಕ್ಷಿ ಮಲ್ಲಿಕ್ ಅವರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಫೆಡರೇಷನ್ ಅಧ್ಯಕ್ಷ, ಸಂಸದನ ಮೇಲೆ ಗಂಭೀರ ಆರೋಪ ಬಂದಿರುವಾಗ ಆ ಮಕ್ಕಳನ್ನು ತಬ್ಬಿ ಸಂತೈಸಿ, ತನ್ನ ಸ್ಥಾನದ ಅಧಿಕಾರ ಚಲಾಯಿಸಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಪ್ರಯತ್ನಿಸಿದ್ದರೆ ಉಷಾ ನಿಜಕ್ಕೂ ಶ್ಲಾಘನೆಗೆ ಪಾತ್ರರಾಗುತ್ತಿದ್ದರು. ಆದರೆ ಅವರ ಈ ಕೀಳು ಹೇಳಿಕೆ ದೇಶದ ಕ್ರೀಡಾಪಟುಗಳ ಅದರಲ್ಲೂ ಬಡ ಕುಟುಂಬಗಳಿಂದ ಬರುತ್ತಿರುವ ಮಹಿಳಾ ಕ್ರೀಡಾಪಟುಗಳ ನೈತಿಕ ಸ್ಥೈರ್ಯಕ್ಕೆ ಕೊಡಲಿ ಪೆಟ್ಟು ಹಾಕಿದೆ.
ಒಲಿಂಪಿಕ್ ಅಸೋಸಿಯೇಷನ್ ನ ಅಧ್ಯಕ್ಷೆಯೇ ಒಲಿಂಪಿಕ್‌ನಲ್ಲಿ ಸಾಧನೆಗೈದು ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳ ಅಪಮಾನ, ನೋವು, ಸಂಕಟ, ಹತಾಶೆಗೆ ಕಿವಿಯಾಗುವುದಿಲ್ಲ ಎಂದರೆ ಏನರ್ಥ? ತಮಗೆ ಲೈಂಗಿಕ ಕಿರುಕುಳ ನೀಡಿದ್ದ ಕುಸ್ತಿ ಫೆಡರೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಖ್ಯಾತ ಕುಸ್ತಿಪಟುಗಳಾದ ವಿನೇಶಾ ಪೋಗಟ್, ಸಾಕ್ಷಿ ಮಲ್ಲಿಕ್ ಕಳೆದ ಜನವರಿಯಲ್ಲೇ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಕುಳಿತಿದ್ದರು. ಭಜರಂಗ್ ಪೂನಿಯಾ ಸೇರಿದಂತೆ ಹಲವಾರು ಹೆಸರಾಂತ ಪುರುಷ ಕುಸ್ತಿಪಟುಗಳೂ ಬೆಂಬಲಿಸಿದ್ದರು. ಆ ಸಮಯದಲ್ಲಿ ಒಲಿಂಪಿಕ್ ಅಸೋಸಿಯೇಷನ್ ಮತ್ತು ಕ್ರೀಡಾ ಸಚಿವರು ನ್ಯಾಯ ಸಲ್ಲಿಸುವ ಭರವಸೆಗಳನ್ನು ನೀಡಿ ಪ್ರತಿಭಟನೆ ಕೈಬಿಡುವಂತೆ ಕುಸ್ತಿಪಟುಗಳ ಮನವೊಲಿಸಿದ್ದರು. ಆದರೆ, ಬ್ರಿಜ್‌ಭೂಷಣ್ ಸಿಂಗ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಇದುವರೆಗೆ ಕೆಳಗಿಳಿಸಿಲ್ಲ. ಆರೋಪಿಯ ಆರೋಪಿಯ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಖೂಳನ ಕೂದಲೂ ಕೊಂಕಿಲ್ಲ. ಬದಲಾಗಿ ಸಂತ್ರಸ್ತೆಯರಿಗೆ ಜೀವಬೆದರಿಕೆ ಹಾಕಲಾಗುತ್ತಿದೆ ಎಂಬ ಗಂಭೀರ ಆರೋಪಗಳೊಂದಿಗೆ ಧರಣಿ ಕುಳಿತು ಐದು ದಿನಗಳೇ ಉರುಳಿವೆ.
ಕೇರಳದ ಕುಗ್ರಾಮ ಪಯ್ಯೋಳಿಯ ಹುಡುಗಿ ಉಷಾ ಒಂದು ಕಾಲದ “ಚಿನ್ನದ ಹುಡುಗಿ”. ಅಂತಾರಾಷ್ಟ್ರೀಯ ಅಥ್ಲೆಟಿಕ್
ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ಗಳಿಸಿದಾಕೆ. ಕೇರಳದಲ್ಲಿ ತಮ್ಮದೇ ಆದ ಕ್ರೀಡಾ ಅಕಾಡೆಮಿ ಸ್ಥಾಪಿಸಿ ಹಲವು ಕ್ರೀಡಾಳುಗಳನ್ನು ತಯಾರು ಮಾಡಿದಾಕೆ. ಕ್ರೀಡಾ ಸಾಧನೆಯ ವೇಳೆ ಈಕೆಗೂ ಲೈಂಗಿಕ ಕಿರುಕುಳದ ಅನುಭವ ಆಗಿರಬಹುದು. ಆಗಿಲ್ಲದಿದ್ದರೆ ಆಕೆ ಅದೃಷ್ಟವಂತೆ. ಹಾಗಂತ ತಮ್ಮ ಮೇಲೆ ಲೈಂಗಿಕ ಕಿರುಕುಳ ಆಗಿದೆ ಎಂದು ಪ್ರತಿಭಟಿಸುವುದು ನ್ಯಾಯ ಕೇಳುವುದು ದೇಶಕ್ಕೆ ಕಳಂಕ ತರುವ ಕೆಲಸವೇ? ದೇಶಕ್ಕೆ ಕೀರ್ತಿ ತಂದ ಹೆಣ್ಣುಮಕ್ಕಳ ಮೇಲೆ ಒಬ್ಬ ಸಂಸದ ಅಷ್ಟೇ ಅಲ್ಲ ಕುಸ್ತಿ ಫೆಡರೇಷನ್ ಅಧ್ಯಕ್ಷ ಲೈಂಗಿಕ ಕಿರುಕುಳ ನೀಡುವುದು ದೇಶಕ್ಕೆ ಗೌರವ ತರುವ ಕೆಲಸವೇ? ಅಥವಾ ಕಳಂಕಪ್ರಾಯವೇ ಎಂಬುದನ್ನು ಯೋಚಿಸದಷ್ಟು ಮುಗ್ಧರೇ ಪಿ.ಟಿ.ಉಷಾ?
2020ರಲ್ಲಿ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಕುಸ್ತಿಪಟು ವಿನೇಶಾ ಪೋಗಟ್ ಅವರಿಗೆ ಪ್ರಧಾನಿ ಮೋದಿ ಮನೆಗೆ ಕರೆದು ಕಾಫಿ ಕೊಟ್ಟು ಧೈರ್ಯ ತುಂಬಿದ್ದರು. ಮಗಳೇ… ಎಂದು ಕರೆದಿದ್ದರು. ಇದೀಗ ಮನ್ ಕಿ ಬಾತ್ ನ ನೂರನೇ ಸಂಚಿಕೆಯ ಸಂಭ್ರಮಾಚರಣೆಗೆ ಸಿದ್ದರಾಗಿರುವ ಪ್ರಧಾನಿ ಮೋದಿ ಅವರಿಗೆ ಈ ಮಗಳ ನೋವಿನ ಆಕ್ರಂದನ ಇನ್ನೂ ಕೇಳಿಸದಿರುವುದು ವಿಪರ್ಯಾಸವೇ ಸರಿ. ಮೋದಿಯವರ ʼಬೇಟಿ ಬಚಾವೋ, ಬೇಟಿ ಪಢಾವೊʼಜನಪ್ರಿಯ ಘೋಷಣೆ ದಿನ ದಿನವೂ ನಗೆಪಾಟಲಿಗೀಡಾಗುತ್ತಿದೆ.
ಸ್ವಪಕ್ಷೀಯರು ನಡೆಸುವ ಅನಾಚಾರ, ಅತ್ಯಾಚಾರಗಳ ಬಗ್ಗೆ ತುಟಿ ಬಿಚ್ಚದ ಬಿಜೆಪಿ ನಾಯಕಿಯರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್, ಮನೇಕಾ ಗಾಂಧಿ, ಹೇಮಾ ಮಾಲಿನಿ, ಶೋಭಾ ಕರಂದ್ಲಾಜೆ ಸಾಲಿಗೆ ಇದೀಗ ಪಿ ಟಿ ಉಷಾ ಅವರೂ ಸೇರ್ಪಡೆಯಾಗಿದ್ದಾರೆ. ಇದು ದೇಶದ ಮಹಿಳೆಯರ ಅಸ್ಮಿತೆಯ ಮೇಲಿನ ಅತ್ಯಾಚಾರವೇ ಸರಿ. ಈ ನಿಟ್ಟಿನಲ್ಲಿ ವಿನೇಶಾ ಪೋಗಟ್, ಸಾಕ್ಷಿ ಮಲ್ಲಿಕ್ ಮತ್ತವರ ತಂಡದ ದಿಟ್ಟತನ, ದೃಢಸಂಕಲ್ಪ ಮೆಚ್ಚುವಂತಹದ್ದು. ಈ ಸಮಯದಲ್ಲಿ ಧರಣಿ ನಡೆಸುತ್ತಿರುವ ಕ್ರೀಡಾಪಟುಗಳು ಮಾತ್ರವಲ್ಲ, ಲೈಂಗಿಕ ಶೋಷಣೆಗೊಳಗಾಗುವ ಪ್ರತಿ ಹೆಣ್ಣುಮಗುವಿನ ರಕ್ಷಣೆಗೆ ನಿಲ್ಲುವುದು, ಅವರಿಗೆ ಸ್ಥೈರ್ಯ ತುಂಬುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ.
