ಹಿರಿಯೂರು ಕ್ಷೇತ್ರ | ಮೈಮರೆತ ಕಾಂಗ್ರೆಸ್‌, ಎಚ್ಚೆತ್ತ ಬಿಜೆಪಿ, ಚಿಗುರಿದ ಜೆಡಿಎಸ್

Date:

ಅನಾಯಾಸವಾಗಿ ಹಿರಿಯೂರು ಕ್ಷೇತ್ರವನ್ನು ತನ್ನತ್ತ ಮಾಡಿಕೊಳ್ಳುವ ಹಂತದಲ್ಲಿರುವ ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ಎಚ್ಚರ ತಪ್ಪುತ್ತಿದ್ದು, ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಲು ಸರ್ವ ರೀತಿಯ ಪ್ರಯತ್ನ ಮಾಡಿ ಎಚ್ಚರ ವಹಿಸುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ರವೀಂದ್ರ ಕ್ಷೇತ್ರಕ್ಕೆ ತಡವಾಗಿ ಆಗಮಿಸಿದ್ದರೂ ಮಿಂಚಿನ ಸಂಚಲನ ಸೃಷ್ಟಿಸಿ ಕಾರ್ಯಕರ್ತರಲ್ಲಿ ಗೆಲುವಿನ ಆಸೆ ಚಿಗುರಿಸಿದ್ದಾರೆ. ಇಡೀ ಕ್ಷೇತ್ರದ ಕದನ ರೋಚಕತೆ ಪಡೆದಿದೆ.

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲೇಬೇಕೆಂದು ಪಣ ತೊಟ್ಟರೆ, ಕೆಆರ್‌ಪಿಪಿ ಮತ್ತು ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳು ಇವರೆಲ್ಲರಿಗೂ ಸವಾಲೊಡ್ಡುವ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಡಿ ಮಂಜುನಾಥ್‌ ಹಾಗೂ ಕೆ ಹೆಚ್ ರಂಗನಾಥ್‌ ಅವರಂತಹ ಅತ್ಯಂತ ಸರಳ ಮತ್ತು ಸಜ್ಜನಿಕೆಯ ದಲಿತ ರಾಜಕಾರಣಿಗಳನ್ನು ಕೊಡುಗೆಯಾಗಿ ಕೊಟ್ಟ ಕ್ಷೇತ್ರವಾಗಿದ್ದು, ರಾಜಕಾರಣಿಗಳಿಗೆ ಅತ್ಯಂತ ಅದೃಷ್ಟದ ಕ್ಷೇತ್ರವೆಂದು ಚಿರಪರಿಚಿತವಾಗಿದೆ.

ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಸಚಿವ ಡಿ ಸುಧಾಕರ್‌ ಸೋತ ದಿನದಿಂದಲೂ ಕ್ಷೇತ್ರವನ್ನು ಮತ್ತೊಮ್ಮೆ ವಶಪಡಿಸಿಕೊಳ್ಳಬೇಕೆಂದು ತೀರ್ಮಾನಿಸಿ, ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದಾದ್ಯಂತ ಪರ್ಯಟನೆ ಮಾಡುತ್ತಾ ಪಕ್ಷಕ್ಕೆ ಬಲ ತುಂಬಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು, ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಜೆಡಿಎಸ್‌ ಕ್ಷೇತ್ರದಲ್ಲಿ ತನ್ನದೇ ಆದ ಓಟ್‌ ಬ್ಯಾಂಕ್‌ ಹೊಂದಿದ್ದರೂ, ಕಳೆದ 15 ವರ್ಷಗಳಿಂದ ಸೂಕ್ತ ಅಭ್ಯರ್ಥಿಗಳಿಲ್ಲದೇ ಸೊರಗಿ ಕೊನೆಗೆ ಲೋಕೋಪಯೋಗಿ ಇಲಾಖೆಯ ಮಾಜಿ ಅಧಿಕಾರಿ ಹಾಗೂ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಈ ಬಾರಿ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ.

ಈ ಸುದ್ದಿ ಓದಿದ್ದೀರಾ? : ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಶೇ 75ಕ್ಕೆ ಏರಿಸುತ್ತೇವೆ : ಸಿದ್ದರಾಮಯ್ಯ

ಮತ್ತೊಮ್ಮೆ ಆಯ್ಕೆ ಬಯಸಿದ ಕೆ ಪೂರ್ಣಿಮಾ ಶ್ರೀನಿವಾಸ್ ಹಲವು ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಆರಂಭದಲ್ಲಿ ತಮ್ಮ ಸಮುದಾಯದ ಗೊಲ್ಲರ ಹಟ್ಟಿಗಳಿಗೆ ಕಾಲಿಟ್ಟಾಗ ಸ್ವಜಾತಿಯವರೇ, “ಕಳೆದ ಚುನಾವಣೆಯಲ್ಲಿ ಗೆದ್ದು ಹೋದ ಮೇಲೆ, ಈಗ ಹಟ್ಟಿಗಳಿಗೆ ಕಾಲಿಟ್ಟಿದ್ದೀರಾ? ನಾವು ಈಗ ನೆನಪಾದವಾ…? ನಮ್ಮ ನಿರೀಕ್ಷೆ ಹುಸಿ ಮಾಡಿದ್ದೀರಿ” ಎಂಬ ಮಾತುಗಳನ್ನಾಡಿ ಹಟ್ಟಿಗೆ ಬಿಟ್ಟುಕೊಳ್ಳದೇ ಇವರನ್ನು ಹೊರ ಹಾಕಿದ್ದರು.

ಗೊಲ್ಲರು ಮಾತ್ರವಲ್ಲದೇ ಕಳೆದ ಚುನಾವಣೆಯಲ್ಲಿ ಪಕ್ಷಾತೀತವಾಗಿ ಪೂರ್ಣಿಮಾರನ್ನು ಬೆಂಬಲಿಸಿದ್ದ ದಲಿತರು, ಒಕ್ಕಲಿಗರು, ಲಿಂಗಾಯತರು, ನಾಯಕರು, ಉಪ್ಪಾರರು, ಕುರುಬರು, ಮುಸ್ಲಿಮರು ಸೇರಿದಂತೆ ಹಲವು ಹಿಂದುಳಿದ ಸಮುದಾಯಗಳು ಹಾಗೂ ಮುಖಂಡರು ಶಾಸಕರ ನಿರ್ಲಕ್ಷ್ಯ ಹಾಗೂ ಇನ್ನಿತರ ಹಲವು ಕಾರಣಗಳಿಂದ ತಂಡೋಪತಂಡವಾಗಿ ಪಕ್ಷ ತ್ಯಜಿಸಿ ಕಾಂಗ್ರೆಸ್‌ ಸೇರಿದ್ದರು.

ಮೂಲ ಬಿಜೆಪಿಗರು, ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರದವರು ಶಾಸಕಿ ಪೂರ್ಣಿಮಾ ಗೆದ್ದಾಗಿನಿಂದಲೂ ನಮ್ಮನ್ನು ಹತ್ತಿರಕ್ಕೆ ಕರೆಸಿಕೊಂಡಿಲ್ಲ. ತಮ್ಮ ಕೆಲಸಗಳು ಆಗುತ್ತಿಲ್ಲ. ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆಂಬ ಹಲವು ಆರೋಪಗಳಿಂದ ಮುನಿಸಿಕೊಂಡಿದ್ದರು.

ಕ್ಷೇತ್ರದ ಜನರಂತು ಶಾಸಕರು ಕೇವಲ ಅಭಿವೃದ್ಧಿ ಕಡೆಗಷ್ಟೇ ಗಮನ ಹರಿಸುತ್ತಾರೆ ವಿನಃ, ಜನಸಾಮಾನ್ಯರ ಕಷ್ಟವನ್ನು ಆಲಿಸುವುದಿಲ್ಲ. ಕೆಲವು ಬೆಂಬಲಿಗರ ಮಾತೇ ಅವರಿಗೆ ಅಂತಿಮ, ಜನರ ಕಷ್ಟ ಸುಖಕ್ಕೆ ಯಾವುದೇ ಸಹಾಯ ಮಾಡುವುದಿಲ್ಲ, ಯಾರನ್ನೂ ಬೆಳೆಸುವುದಿಲ್ಲ ಎಂಬ ಹಲವು ಆರೋಪಗಳನ್ನು ಮಾಡಿ, ಕಾಂಗ್ರೆಸ್‌ ಬೆಂಬಲಿಸಲು ನಿರ್ಧರಿಸಿದ್ದರು.

2018ರ ಚುನಾವಣೆಯಲ್ಲಿ ಹಲವು ಕಾರಣಗಳಿಂದ ಸೋತಿದ್ದ ಕಾಂಗ್ರೆಸ್‌ ಅಭ್ಯರ್ಥಿ ಡಿ ಸುಧಾಕರ್ ಕಳೆದ ಸಲ ಮಾಡಿದ್ದ ತಪ್ಪನ್ನು ತಿದ್ದಿಕೊಂಡು ಪಕ್ಷದ ಹಿರಿಯ, ಕಿರಿಯ ನಾಯಕರು ಹಾಗೂ ಪಕ್ಷ ತ್ಯಜಿಸಿದ್ದ ಎಲ್ಲರನ್ನು ವಾಪಸ್‌ ಪಕ್ಷಕ್ಕೆ ಸೇರಿಸಿಕೊಂಡು ಇನ್ನೇನು ಗೆದ್ದುಬಿಟ್ಟಿದ್ದೇನೆಂದು ಬೀಗುತ್ತಿದ್ದರು. ಒಂದು ಹಂತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪರ ಪ್ರಚಾರ ನಡೆಸಲು ನಾಯಕರೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಂಗ್ರೆಸ್‌ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲುತ್ತಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬಂದಿತ್ತು.

ಇದರಿಂದ ಎಚ್ಚೆತ್ತ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್‌ ಮತ್ತು ಪತಿ ಡಿ ಟಿ ಶ್ರೀನಿವಾಸ್ ತನ್ನ ಮಗನನ್ನು ಕರೆದುಕೊಂಡು ಕ್ಷೇತ್ರದ ಯುವಕರನ್ನು, ಮೂಲ ಬಿಜೆಪಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಧಾನ ನಡೆಸಿ, ತೇಪೆ ಹಚ್ಚುವ ಪ್ರಯತ್ನ ಮಾಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇನ್ನು ಕೊನೆ ಹಂತದವರೆಗೂ ಟಿಕೆಟ್‌ ಘೋಷಿಸದ ಜೆಡಿಎಸ್‌ ಒಕ್ಕಲಿಗ ಸಮುದಾಯದ ಸ್ಥಳೀಯ ಅಭ್ಯರ್ಥಿ ರವೀಂದ್ರಪ್ಪ ಎಂಬುವವರಿಗೆ ಟಿಕೆಟ್‌ ಘೊಷಿಸಿತ್ತು. ಇದರಿಂದ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಸ್ಥಳೀಯ ಮುಖಂಡರು ಅಸಮಾಧಾನಿತರಾಗಿದ್ದರು. ಆದರೆ, ಅಭ್ಯರ್ಥಿ ರವೀಂದ್ರಪ್ಪ ಎಲ್ಲರನ್ನೂ ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದರು.

ಚುನಾವಣೆ ಇನ್ನೇನು 10 ದಿನಗಳು ಬಾಕಿ ಇರುವ ಹೊತ್ತಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ ಸುಧಾಕರ್‌ ನಾನು ಗೆದ್ದೆ ಗೆಲ್ಲುತ್ತೇನೆ ಎನ್ನುವ ಅತಿ ಆತ್ಮವಿಶ್ವಾಸದಿಂದ ಬೀಗುತ್ತಿರುವುದು ಅವರಿಗೆ ಹಿನ್ನೆಡೆಯಾಗಬಹುದು ಎಂದು ಕೆಲ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದಲ್ಲಿ ತನ್ನದೇ ಪ್ರಾಬಲ್ಯ ಇಟ್ಟುಕೊಂಡಿರುವ ದಲಿತ ಎಡಗೈ ಸಮುದಾಯದ ಬಹುತೇಕರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ನಡೆಸುವವರು ಸದಾಶಿವ ಆಯೋಗ ವರದಿ ಜಾರಿಯಾಗಿದೆ ಎಂದು ಸುಳ್ಳು ಹೇಳಿ ದಲಿತರ ಮತ ಕದಿಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನ ಯಾವೊಬ್ಬ ನಾಯಕರು ಇದನ್ನು ಮಾದಿಗ ಸಮುದಾಯದ ಕೇರಿಗಳಿಗೆ ತಿಳಿಸುವ ಪ್ರಯತ್ನ ಮಾಡುತ್ತಿಲ್ಲ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? : ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಇನ್ನು ಹಲವು ವರ್ಷಗಳಿಂದ ಕಾಂಗ್ರೆಸ್‌, ಜೆಡಿಎಸ್‌ ಬೆಂಬಲಿಸಿಕೊಂಡು ಬಂದಿದ್ದ ಮುಸ್ಲಿಮರು ಕಳೆದ ಚುನಾವಣೆಯಲ್ಲಿ ದಿವಂಗತ ಎ ಕೃಷ್ಟಪ್ಪನವರ ಸಾವಿನ ಅನುಕಂಪದಿಂದ ಅಲ್ಪ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿಸಿದ್ದರು. ಆದರೆ, ರಾಜ್ಯ ಸರ್ಕಾರವು ಹಿಜಾಬ್‌, ಹಲಾಲ್‌ ಕಟ್‌, ಧರ್ಮ ದಂಗಲ್‌ ಹಾಗೂ ಮುಸ್ಲಿಂ ಮೀಸಲಾತಿ ರದ್ದು ಮಾಡಿರುವುದರಿಂದ ರೊಚ್ಚಿಗೆದ್ದಿದ್ದು, ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್‌ ಬೆಂಬಲಿಸಲು ನಿರ್ಧರಿಸಿತ್ತು.

ಆದರೆ, ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್‌ ಮುಸ್ಲಿಮರು ಸಂಪೂರ್ಣವಾಗಿ ನಮ್ಮ ಪಕ್ಷವನ್ನೇ ಬೆಂಬಲಿಸುತ್ತಾರೆ ಎಂಬ ಅಪಾರ ನಂಬಿಕೆಯಿಂದ ಮುಸ್ಲಿಮರ ಹಲವು ನಾಯಕರನ್ನು ಕಡೆಗಣಿಸಿದ್ದಾರೆ ಎಂಬ ಆರೋಪವನ್ನು ಹೆಸರೇಳಲಿಚ್ಛಿಸದ ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಜೆಡಿಎಸ್ ಇವರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಿದೆ ಎನ್ನಲಾಗಿದೆ.

ಜೆಡಿಎಸ್‌ ಅಭ್ಯರ್ಥಿ ರವೀಂದ್ರಗೆ ಟಿಕೆಟ್‌ ಘೊಷಣೆಯಾಗುತ್ತಿದ್ದಂತೆ ಎದ್ದಿದ್ದ ಬಂಡಾಯವನ್ನು ಸರಿಪಡಿಸಿಕೊಂಡು ಕ್ಷೇತ್ರದಾದ್ಯಂತ ಒಕ್ಕಲಿಗರ ಮತಬ್ಯಾಂಕ್‌ ಭದ್ರಪಡಿಸಿಕೊಂಡಿದ್ದು, ಇತರೆ ಸಮುದಾಯದ ಮತ ಪಡೆಯಲು ಸರ್ವ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ನಾಪಪತ್ರ ಸಲ್ಲಿಸುವ ವೇಳೆ ಸೇರಿಸಿದ್ದ ಜನಸ್ತೋಮಕ್ಕೆ ಎದುರಿದ್ದ ವಿರೋಧಿಗಳು ಇವರ ಮನೆ ಮೇಲೆ ಐಟಿ ರೈಡ್‌ ಕೂಡ ಮಾಡಿಸಿದ್ದಾರೆ ಎಂದು ಜೆಡಿಎಸ್‌ ಕಾರ್ಯಕರ್ತರು ಆರೋಪಿಸಿದ್ದಾರೆ.

ಇನ್ನು ಜನಾರ್ಧನ ರೆಡ್ಡಿ ಪಕ್ಷದಿಂದ ಸ್ಥಳೀಯ ಅಭ್ಯರ್ಥಿ ಲಿಂಗಾಯತ ಸಮುದಾಯದ ಮಹೇಶ್‌ ಕಳೆದ ಆರು ತಿಂಗಳಿನಿಂದ ಕ್ಷೇತ್ರದಾದ್ಯಂತ ಸಂಚರಿಸಿ ಮತ ಕೇಳುತ್ತಿದ್ದರೆ, ಮತೋರ್ವ ಸ್ಥಳೀಯ ಅಭ್ಯರ್ಥಿ ಗೊಲ್ಲ ಸಮುದಾಯದ ಆಮ್‌ ಆದ್ಮಿ ಪಕ್ಷದ ಕೆ ಟಿ ತಿಪ್ಪೇಸ್ವಾಮಿ ಅವರೂ ಕೂಡ ಮೂರು ಪಕ್ಷದ ಅಭ್ಯರ್ಥಿಗಳಿಗೆ ಸವಾಲು ಒಡ್ಡಿದ್ದಾರೆ.

ಒಟ್ಟಿನಲ್ಲಿ ಅನಾಯಾಸವಾಗಿ ಕ್ಷೇತ್ರವನ್ನು ತನ್ನತ್ತ ಮಾಡಿಕೊಳ್ಳುವ ಹಂತದಲ್ಲಿರುವ ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ಎಚ್ಚರ ತಪ್ಪುತ್ತಿದ್ದು, ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಲು ಸರ್ವ ರೀತಿಯ ಪ್ರಯತ್ನ ಮಾಡಿ ಎಚ್ಚರ ವಹಿಸುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ರವೀಂದ್ರ ಕ್ಷೇತ್ರಕ್ಕೆ ತಡವಾಗಿ ಆಗಮಿಸಿದ್ದರೂ ಮಿಂಚಿನ ಸಂಚಲನ ಸೃಷ್ಟಿಸಿ ಕಾರ್ಯಕರ್ತರಲ್ಲಿ ಗೆಲುವಿನ ಆಸೆ ಚಿಗುರಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀಟ್ ಪ್ರಕರಣ | ಶಿಕ್ಷಣ ಸಚಿವರು ತಮ್ಮನ್ನು ಹೊರತುಪಡಿಸಿ ಎಲ್ಲರನ್ನೂ ದೂಷಿಸಿದ್ದಾರೆ: ರಾಹುಲ್ ಗಾಂಧಿ

ನೀಟ್ ಪ್ರಕರಣದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮನ್ನು ಹೊರತುಪಡಿಸಿ...

ಅಧಿವೇಶನ | ಕುಮ್ಕಿ ಜಮೀನು ಮಂಜೂರಾತಿ ಸಾಧ್ಯವಿಲ್ಲ, ಬಡವರ ಮನೆಗಳ ತೆರವೂ ಇಲ್ಲ: ಕೃಷ್ಣ ಬೈರೇಗೌಡ

ಕಾನೂನಿನ ಪ್ರಕಾರ ಕುಮ್ಕಿ ಜಮೀನನ್ನು ಮಂಜೂರು ಮಾಡಲು ಸಾಧ್ಯವಿಲ್ಲ. ಆದ್ರೆ, ಕುಮ್ಕಿ...

ಮನೆ ಕಳೆದುಕೊಂಡವರಿಗೆ ಕಾಂಗ್ರೆಸ್ ಸರಕಾರ ಹೆಚ್ಚಿನ ಪರಿಹಾರ ಕೊಡಲಿ: ವಿಜಯೇಂದ್ರ ಆಗ್ರಹ

ನೆರೆಪೀಡಿತರು ಮತ್ತು ಮನೆ ಕಳೆದುಕೊಂಡವರಿಗೆ ಹಿಂದಿನ ಬಿಜೆಪಿ ಸರಕಾರ ಸ್ಪಂದಿಸಿದ ಮಾದರಿಯಲ್ಲಿ...