ಶಹಾಬಾದ್ ತಾಲೂಕಿನ ಹೊನಗುಂಟ ಗ್ರಾಮಕ್ಕೆ ಸೂಕ್ತ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಶಹಬಾದ್ ಪಟ್ಟಣದ ನೆಹರು ವೃತ್ತದಲ್ಲಿ ಎಐಡಿಎಸ್‍ಒ ನೇತ್ರತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಐಡಿಎಸ್‍ಒ ಶಹಾಬಾದ್ ತಾಲೂಕು ಉಪಾಧ್ಯಕ್ಷ ದೇವರಾಜ್ ಎಸ್. ಮಾತನಾಡಿ, ʼಕಳೆದ ಹಲವು ವರ್ಷಗಳಿಂದ ಹೊನಗುಂಟಾ ಗ್ರಾಮಕ್ಕೆ ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಗ್ರಾಮದ ನೂರಾರು ವಿದ್ಯಾರ್ಥಿಗಳು ಪ್ರಯಾಣಿಸಲು ಪರದಾಡುತ್ತಿದ್ದಾರೆ. ಶಹಾಬಾದ, ಕಲಬುರಗಿ, ಜೇವರ್ಗಿ, ಚಿತ್ತಾಪೂರ ಸೇರಿದಂತೆ ವಿವಿಧೆಡೆ ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ಬಸ್ ಸಮಸ್ಯೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನೆವಾಗುತ್ತಿಲ್ಲʼ ಎಂದು ಅಸಮಧಾನ ವ್ಯಕ್ತಪಡಿಸಿದರು.
ಎಐಡಿಎಸ್‍ಓ ಜಿಲ್ಲಾ ಸಮಿತಿ ಸದಸ್ಯರಾದ ಸ್ಪೂರ್ತಿ ಅರ್.ಜಿ. ಮಾತನಾಡಿ, ʼಸೂಕ್ತ ಸಮಯಕ್ಕೆ ಬಸ್ ಬಾರದ ಕಾರಣ ವಿದ್ಯಾರ್ಥಿಗಳು ಹಣ ಕೊಟ್ಟು ಖಾಸಗಿ ವಾಹನಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ವಿದ್ಯಾರ್ಥಿಗಳ ಬಳಿ ಉಚಿತ ಬಸ್ ಪಾಸ್ ಇದ್ದರೂ ಹಣ ಖರ್ಚು ಮಾಡಬೇಕಾಗುತ್ತಿದೆ. ಅದರಲ್ಲಿ ಬಡ ವಿದ್ಯಾರ್ಥಿಗಳಿಗೆ ಹಣ ಕೊಟ್ಟು ಖಾಸಗಿ ವಾಹನಗಳಿಗೆ ತೆರಳಲು ಆಗುತ್ತಿಲ್ಲʼ ಎಂದರು.
ʼಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಹೊನಗುಂಟಾ ಗ್ರಾಮದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಹಂತದ ಹೋರಾಟಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆʼ ಎಂದು ಎಚ್ಚರಿಸಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಗದೀಶ್. ಚೌರ್ ಮನವಿ ಸ್ವೀಕರಿಸಿ ಬಸ್ ಘಟಕದ ನಿಯಂತ್ರಣಾಧಿಕಾರಿ ಜೊತೆ ಮಾತನಾಡಿ ನಾಳೆಯಿಂದಲೇ ಬಸ್ ಸೌಲಭ್ಯ ಒದಗಿಸಲಾಗುವುದುʼ ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಿಗ್ ಬ್ರೇಕಿಂಗ್: ಎಚ್‌ಡಿಕೆ ಪ್ರಾಸಿಕ್ಯೂಷನ್‌ಗೆ ಎಸ್‌ಐಟಿ ಮನವಿಯನ್ನು 10 ತಿಂಗಳಿಂದ ಬಚ್ಚಿಟ್ಟಿದ್ದ ರಾಜ್ಯಪಾಲ
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ, ಶಹಾಬಾದ್ ಕಾರ್ಯದರ್ಶಿ ಅಜಯ್ ಗುರುಜಾಲ್‌ಕರ್, ಸದಸ್ಯರಾದ ಸಿದ್ಧಾರ್ಥ, ಬಾಬುಪವಾರ್, ಚೇತನ್ ಹಾಗೂ ವಿದ್ಯಾರ್ಥಿಗಳಾದ ಮಿಲಿನ್, ಲಿಂಗರಾಜ್, ರೇಖಾ, ಸ್ನೇಹಾ, ಜ್ಯೋತಿ, ಸಂತೋಷ, ದ್ರಾವಿಡ್ ಸೇರಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.