ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಬೃಂದಾವನ ಉದ್ಯಾನವನ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲೆಯ ನಾಯಕರು ಹಾಗೂ ಇಲಾಖೆ ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆ ನಡೆಸಿದರು.
ನಂತರ ಕೆಆರ್ಎಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೃಂದಾವನ ಉದ್ಯಾನ ಮೇಲ್ದರ್ಜೆಗೆ ಏರಿಸಲು ಈಗ ಇರುವ 200 ಎಕರೆ ಜಾಗದಲ್ಲಿ ಯೋಜನೆ ಆರಂಭಿಸುತ್ತೇವೆ. ಅಣೆಕಟ್ಟಿನ ರಕ್ಷಣೆಗೆ ಅಗತ್ಯವಿರುವ ಜಾಗವನ್ನು ಬಿಟ್ಟು ಇತರೆ ಜಾಗದಲ್ಲಿ ನಾವು ಯೋಜನೆ ರೂಪಿಸುತ್ತಿದ್ದೇವೆ. ಎರಡು ಮೂರು ಪಂಚಾಯ್ತಿ ಸೇರಿ ಇದಕ್ಕೆ ಯೋಜನಾ ಪ್ರದೇಶ ರೂಪಿಸುತ್ತೇವೆ” ಎಂದರು.
“ಹತ್ತಾರು ಸಾವಿರ ಉದ್ಯೋಗ ಸೃಷ್ಟಿಯಾಗಿ ಹೆಚ್ಚಿನ ಜನ ಆಗಮಿಸುವ ನಿರೀಕ್ಷೆಯಿಂದ ರಸ್ತೆ ಅಗಲೀಕರಣ ಸೇರಿದಂತೆ, ಈ ಭಾಗದ ಪ್ರವೇಶ ಹಾಗೂ ನಿರ್ಗಮನದಲ್ಲಿ ನಾಲ್ಕು ಸಾಲಿನ ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ ಮಾಡಲಾಗುವುದು. ಬೃಂದಾವನ ಹಾಗೂ ರಂಗನತಿಟ್ಟು ಸೇರಿದಂತೆ ಪ್ರವಾಸೋದ್ಯಮ ಉತ್ತೇಜನ ನೀಡಲು ಯೋಜನೆ ರೂಪಿಸಲಾಗುತ್ತಿದೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

“ನಮ್ಮ ಪರಂಪರೆ ಉಳಿಸಿಕೊಂಡು, ಹಳೆಯ ಮಾದರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗೆ ನಾವು 2 ಸಾವಿರ ಕೋಟಿ ಅನುದಾನ ಇಟ್ಟುಕೊಂಡಿದ್ದು, ಉದ್ಯಾನವನ ಮೇಲ್ದರ್ಜೆಗೆ ಮಾಡುವವರು ಯಾವ ರೀತಿ ಮಾಡಬೇಕು ಎಂದು ಕೆಲವು ಮಾರ್ಗಸೂಚಿಯನ್ನು ನಿಗದಿಪಡಿಸಿದ್ದೇವೆ” ಎಂದರು.
ಅಣೆಕಟ್ಟಿಗೆ ಯಾವುದೇ ತೊಂದರೆಯಾಗದಂತೆ ಅಣೆಕಟ್ಟಿನ ಘನತೆ ಹೆಚ್ಚಿಸಿ ಹಣಕಾಸು ಏಳಿಗೆಗೆ ಯೋಜನೆ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಶಾಸಕ ಕೆ.ಎಂ.ಉದಯ್ಗೌಡ, ಪಿ.ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
