ವಿರೋಧ ಪಕ್ಷದವರ ಹಗರಣಗಳು ಬಹಳಷ್ಟಿವೆ. ಈಗ ಎಲ್ಲವನ್ನೂ ಬಿಚ್ಚಿಡುತ್ತೇವೆ. ಯಾರೆಲ್ಲ ತಪ್ಪಿತಸ್ಥರು ಇದ್ದಾರೆಯೋ ಅವರೆಲ್ಲರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ನನಗೆ ಮಸಿ ಬಳಿಯಲು ವಿರೋಧ ಪಕ್ಷದವರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ರಾಜ್ಯದ ಜನರ ಆಶೀರ್ವಾದದಿಂದ ಬಂದ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ನನಗೆ ಮಸಿ ಬಳಿದರೆ ರಾಜಕೀಯವಾಗಿ ಅನುಕೂಲ ಆಗುತ್ತದೆ ಎನ್ನುವ ಭ್ರಮೆಯಲ್ಲಿ ವಿರೋಧ ಪಕ್ಷದವರು ಇದ್ದಾರೆ” ಎಂದರು.
“ನನ್ನ ವಿರುದ್ಧದ ಆರೋಪಗಳನ್ನು ಎದುರಿಸಲು ಸನ್ನದ್ಧನಾಗಿದ್ದೇನೆ. ರಾಜಕೀಯ ಹಾಗೂ ಕಾನೂನಿನ ಮೂಲಕ ಪ್ರತ್ಯುತ್ತರ ಕೊಡುತ್ತೇನೆ. ಶುಕ್ರವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಹಲವು ವಿಚಾರ ಬಿಚ್ಚಿಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳನ್ನು ಜನರ ಮುಂದೆ ಇಡುತ್ತೇನೆ” ಎಂದು ಹೇಳಿದರು.
“ಬಿ.ವೈ.ವಿಜಯೇಂದ್ರ, ಬಿ.ಎಸ್. ಯಡಿಯೂರಪ್ಪ , ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ್ ಏನೇನು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಈಗಾಗಲೇ ಕೆಲವು ಹಗರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಆ ಬಗ್ಗೆ ಹೆಚ್ಚು ಮಾತನಾಡುತ್ತೇನೆ. ಇನ್ನೂ ಕೆಲವು ಹಗರಣಗಳು ಬಾಕಿ ಇವೆ ಎಂದರು.
“ಬಿಜೆಪಿ- ಜೆಡಿಎಸ್ ನಾಯಕರ ಆರೋಪಗಳನ್ನು ಎದುರಿಸಲು ಸಿದ್ಧನಿದ್ದೇನೆ. ಬಿಜೆಪಿ- ಜೆಡಿಎಸ್‌ನವರು ಪಾದಯಾತ್ರೆ ಮಾಡಿದ್ದಕ್ಕೆ ನಾವು ಜನಾಂದೋಲನ ಸಮಾವೇಶ ಮಾಡಿದೆವು. ಅವರು ಮಾಡುತ್ತಿರುವ ಆರೋಪ ಸುಳ್ಳು ಎಂದು ತಿಳಿಸಲು ಜನಾಂದೋಲನ ಸಮಾವೇಶ ನಡೆಸಿದೆವು” ಎಂದು ತಿಳಿಸಿದರು.