‘ಹಾವಳಿ’ ಕಾದಂಬರಿಯು ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ಕಾದಂಬರಿಯಾಗಿದೆ. ಆಳವಾದ ಅಧ್ಯಯನ ನಡೆಸಿ ‘ಹಾವಳಿ’ ಕಾದಂಬರಿಯನ್ನು ಪ್ರೊ ಮಲ್ಲಿಕಾರ್ಜುನ ಹಿರೇಮಠ್ ಅವರು ರಚಿಸಿದ್ದಾರೆ ಎಂದು ಪವಣಕುಮಾರ್ ಕೆ ಪಿ ಹೇಳಿದರು.
ಗದಗ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೊ ಮಲ್ಲಿಕಾರ್ಜುನ ಹಿರೇಮಠ ಅವರ ಹಾವಳಿ ಕಾದಂಬರಿಯ ಅವಲೋಕನ ಕಾರ್ಯಕ್ರಮವನ್ನು ಕಸಾಪ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹಾವಳಿ ಕಾದಂಬರಿಯ ಅವಲೋಕನ ಕುರಿತು ಪವನಕುಮಾರ್ ಕೆ ಪಿ ಉಪನ್ಯಾಸ ನೀಡಿ ಮಾತನಾಡಿ, ಹೈದರಾಬಾದ್ ವಿಮೋಚನಾ ಚಳುವಳಿಯ ಪ್ರಧಾನ ಅಂಶವೇ ಕಾದಂಬರಿ ಆಗಿರುತ್ತದೆ. ಈ ಪ್ರದೇಶದಲ್ಲಿ ಚಳುವಳಿಗಾರರನ್ನು ಭೇಟಿ ಮಾಡಿ, ಸುಮಾರು ವರ್ಷಗಳಿಂದ ಆಳವಾದ ಅಧ್ಯಯನ ನಡೆಸಿ ಹಾವಳಿ ಪ್ರೊ ಮಲ್ಲಿಕಾರ್ಜುನ ಹಿರೇಮಠ್ ಅವರು ರಚಿಸಿದ್ದಾರೆ. ಹಾವಳಿ ಕಾದಂಬರಿಯು ಗ್ರಾಮೀಣ ಭಾಷೆ ಹೊಂದಿದೆ” ಎಂದರು.
“ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಎರಡು ಭಾಷೆಗಳ ಸಮ್ಮಿಲನಗೊಳಿಸಿ, ಐತಿಹಾಸಿಕ ಸಂಗತಿಯನ್ನು ವಾಸ್ತವಿಕವಾಗಿ ಕಾದಂಬರಿಯನ್ನು ರಚಿಸಿದ್ದಾರೆ. ಗ್ರಾಮೀಣ ಚೌಕಟ್ಟಿನಲ್ಲಿ ಭವ್ಯ ಭಾರತೀಯ ಚಿಂತನೆಯನ್ನು ಕಾದಂಬರಿಯಲ್ಲಿ ಬಸಾಪುರ ಗ್ರಾಮದ ಮೂಲಕ ಕಟ್ಟಿಕೊಟ್ಟಿದ್ದಾರೆ. ಐತಿಹಾಸಿಕ ವ್ಯಕ್ತಿಗಳಾದ ಸುಭಾಸ್ ಚಂದ್ರಬೋಸ್, ಮಹಾತ್ಮಾ ಗಾಂಧೀಜಿ, ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ಪರೋಕ್ಷವಾಗಿ ಪಾತ್ರಗಳ ಮೂಲಕ ಕಾದಂಬರಿಯಲ್ಲಿ ಹೇಳುತ್ತಾ ಹೋಗುತ್ತಾರೆ” ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಗಳಲ್ಲಿ ಗದಗ, ಮುಂಡರಗಿ, ಗಜೇಂದ್ರಗಡ ಮುಖ್ಯ ಆಗುತ್ತವೆ. ಇಲ್ಲಿ ಅನೇಕ ಹೋರಾಟ ಮಾಡುವ ಯುವಕರಿಗೆ ಇಲ್ಲಿ ಶಿಬಿರಗಳನ್ನು ಏರ್ಪಡಿಸಿ ತರಬೇತಿಯನ್ನು ನೀಡಲಾಗುತ್ತಿತ್ತು. ಅಷ್ಟೇ ಅಲ್ಲದೇ ಕಪ್ಪತ್ತಗುಡ್ಡದ ಹಸಿರು ಸಿರಿಯನ್ನು ಕಾದಂಬರಿಯಲ್ಲಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಕಾದಂಬರಿಯಲ್ಲಿ ಹಲವು ಪಾತ್ರಗಳ ಮೂಲಕ ಸೂಕ್ಷ್ಮ ಸಂವೇದನೆಯನ್ನು ಹೇಳುತ್ತಾ ಹೋಗುತ್ತಾರೆ ಎಂದರು.
ವಾಸ್ತವದಲ್ಲಿ ಕೋಮುವಾದ ಆವರಿಸಿಕೊಂಡಿದ್ದು ಅನಕ್ಷರಸ್ಥರ ಪಾತ್ರಗಳ ಮೂಲಕ ಮಲ್ಲಿಕಾರ್ಜುನ ಹಿರೇಮಠ್ ಅವರು ನೈತಿಕತೆ ಪಾಠವನ್ನು ಕಟ್ಟಿಕೊಡುತ್ತಾರೆ ಎಂದು ಪವಣಕುಮರ್ ಕೆ ಪಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳು ಪ್ರೊ ಅನ್ನದಾನಿ ಹಿರೇಮಠ್ ಮಾತನಾಡಿ, “ಹಾವಳಿ ಕಾದಂಬರಿಯು ಓದುತ್ತಿರುವವರಿಗೆ ಐತಿಹಾಸಿಕ ಕಾದಂಬರಿ ಅನಿಸಬಹುದು. ಆದರೆ ನಮ್ಮ ಸುತ್ತ ಮುತ್ತ ನಡೆಯುವ ಕೌಟುಂಬಿಕ ಜೀವನವೇ ಆಗಿದ್ದು, ಸ್ವಾತಂತ್ರ್ಯ ಪೂರ್ವದ ಕಥೆಯಾಗಿದೆ” ಎಂದರು.
ಕಸಾಪ ಅಧ್ಯಕ್ಷರಾದ ವಿವೇಕಾನಂದ ಪಾಟೀಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಸಾಪ ಗೌರವ ಕೋಶಾಧ್ಯಕ್ಷ ಡಿ ಎಸ್ ಭಾಪುರಿ, ಕಿಶೋರ್ ಕುಮಾರ್ ನಗರಕಟ್ಟೆ, ಶಿವಾನಂದ ಗಿಡ್ನಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
