ಹೊಸಪೇಟೆಯ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಮುರಿದು ಹೋಗಿರುವ ಮಧ್ಯೆಯೇ ಶಿವಮೊಗ್ಗ ಜಿಲ್ಲೆಯ ತುಂಗಾ ಮೇಲ್ದಂಡೆ ಜಲಾಶಯದಲ್ಲಿಯೂ ಕ್ರಸ್ಟ್ ಗೇಟಿನ ರೋಪ್ ಜಾಮ್ ಆಗಿರುವ ಸಂಗತಿ ಬೆಳಕಿಗೆ ಬಂದಿದೆ. ಒಂದು ವೇಳೆ ಅದನ್ನು ಬಲವಂತವಾಗಿ ಎತ್ತಲು ಮುಂದಾದರೆ ತುಂಡಾಗುವ ಭೀತಿ ಎದುರಾಗಿದೆ.
ತುಂಡಾಗುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕ್ರಸ್ಟ್ ಗೇಟ್ ತೆರೆಯದೇ ಬೇರೆ ಗೇಟುಗಳಿಂದ ಅಧಿಕಾರಿಗಳು ಜಲಾಶಯ ನಿರ್ವಹಣೆ ಮಾಡುತ್ತಿರುವ ವಿಚಾರ ಗೊತ್ತಾಗಿದೆ. ಒಂದು ವೇಳೆ ಜಾಮ್ ಆಗಿರುವ ಹಗ್ಗವು ತುಂಡಾಗಿ, ಅನಾಹುತವಾದಲ್ಲಿ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರಿದು ಹೋಗಿರುವ ಬೆನ್ನಲ್ಲೇ ಈ ವಿಚಾರ ಬೆಳಕಿಗೆ ಬಂದಿದ್ದು, ಗಾಜನೂರು ತುಂಗಾ ಡ್ಯಾಮ್‌ನ ಈವರೆಗೆ ಅಧಿಕಾರಿಗಳು ಮಳೆಗಾಲ ಆರಂಭಕ್ಕೂ ಮೊದಲು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಎದ್ದಿದೆ.
ಶಿವಮೊಗ್ಗ ಜಿಲ್ಲೆಯ ತುಂಗಾ ಮೇಲ್ದಂಡೆ ಜಲಾಶಯದಲ್ಲಿ ಜಲ ಹಾನಿ ತಪ್ಪಿದೆಯಾದರೂ, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.
ರಾಜ್ಯದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ತುಂಗಾ ಜಲಾಶಯದಲ್ಲೂ ಒಂದು ಕ್ರಸ್ಟ್ ಗೇಟ್ ಕೆಲಸ ಮಾಡುವುದು ನಿಂತಿದೆ. ಅಂದರೆ, ತುಂಗಾ ಜಲಾಶಯದ 22 ರೇಡಿಯಲ್ ಗೇಟ್‌ಗಳ ಪೈಕಿ ಒಂದು ಕ್ರಸ್ಟ್ ಗೇಟ್ ಅಂದರೆ 8ನೇ ಗೇಟ್ ಕೆಲಸ ಮಾಡುತ್ತಿಲ್ಲ ಎಂಬುದನ್ನು ಗಮನಿಸಿದ ಇಂಜಿನಿಯರ್‌ಗಳು ಆ ಗೇಟನ್ನು ತೆರೆಯುವುದನ್ನೇ ನಿಲ್ಲಿಸಿದ್ದಾರೆ.
ಒಂದು ವೇಳೆ ರೋಪ್ ಜಾಮ್‌ನಿಂದ ಉಂಟಾಗಿರುವ ಕ್ರಸ್ಟ್ ಗೇಟನ್ನು ಬಲವಂತವಾಗಿ ತೆರೆಯಲು ಮುಂದಾದರೆ ಅದು ಮುರಿದು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ, ಈ ಗೇಟನ್ನು ಯಾವುದೇ ಕಾರಣಕ್ಕೂ ತೆರೆಯದಿರಲು ಸೂಚನೆ ನೀಡಿದ್ದಾರೆ. ತುಂಗಾ ಜಲಾಶಯದ 22 ಗೇಟುಗಳ ಪೈಕಿ 8ನೇ ಕ್ರಸ್ಟ್ ಗೇಟು ಮಾತ್ರ ಕೆಲಸ ಮಾಡದೇ ಸ್ಥಗಿತಗೊಂಡಿದೆ.
ತುಂಗಾ ಜಲಾಶಯಕ್ಕೆ ಜುಲೈನಲ್ಲಿ 85 ಸಾವಿರ ಕ್ಯೂಸೆಕ್‌ಗೂ ಅಧಿಕ ಒಳಹರಿವು ಇದ್ದಾಗ ಜಲಾಶಯದ ಎಲ್ಲ 22 ಗೇಟ್‌ಗಳನ್ನು ತೆರೆಯಲೇಬೇಕಾಗುತ್ತದೆ. ಆದರೆ, ಈ ಬಾರಿ 8ನೇ ಗೇಟ್ ಅನ್ನು ಓಪನ್ ಮಾಡದೆ 21 ಗೇಟ್ ಮೂಲಕವೇ ಎಲ್ಲ ನೀರನ್ನು ಹೊರಬಿಟ್ಟಿದ್ದಾರೆ.
2019 ಮತ್ತು 20ರಲ್ಲಿ 1 ಲಕ್ಷ ಕ್ಯುಸೆಕ್ ಅಧಿಕ ನೀರು ಬಂದಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲ ಗೇಟ್ ಓಪನ್ ಮಾಡುವುದು ಅನಿವಾರ್ಯವಾಗಿತ್ತು. ಈ ಬಾರಿ 85 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದ ಕಾರಣ ಎಂಜಿನಿಯರ್‌ಗಳು ಅದನ್ನು ತೆರೆಯದೇ ಈ ರೀತಿಯಾಗಿ ನಿಭಾಯಿಸಿದ್ದಾರೆ.
ಈ ಬಗ್ಗೆ ಶಿವಮೊಗ್ಗ ನೀರಾವರಿ ಇಲಾಖೆಯ ಎಇಇ ತಿಪ್ಪ ನಾಯ್ಕ್ ಈ ದಿನ.ಕಾಮ್ ಜೊತೆಗೆ ಮಾತನಾಡಿದ್ದು, “ವಾರ್ಷಿಕ ಮೇಂಟೈನೆನ್ಸ್ ಮಾಡುವ ವೇಳೆಯಲ್ಲಿ ಗ್ರೀಸ್ ಕಾರಡಿಯಂ ಕಾಂಪೌಂಡ್ ಮಾಡುವಾಗ ರೋಪ್ ಜಾಮ್ ಆಗಿರುವುದನ್ನು ಗಮನಿಸಿದ್ದೇವೆ” ಎಂದು ತಿಳಿಸಿದರು.
ಈ ಬಗ್ಗೆ ಮೇಲಿನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ ಅವರು, “ಸಂಬಂಧಪಟ್ಟ ಅಧಿಕಾರಿಗಳು ಸದ್ಯ ಈ ರೀತಿಯ ಕ್ರಮ ಕೈಗೊಂಡಿದ್ದಾರೆ” ಎಂದಷ್ಟೇ ತಿಳಿಸಿದರು.
ಹೊಸಪೇಟೆ ತುಂಗಾಭದ್ರ ಡ್ಯಾಮ್ ರೀತಿ ಅವಘಡ ಸಂಭವ ಆಗಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದಾಗ, “ಆ ರೀತಿ ಆಗಲು ಅವಕಾಶ ಆಗದಂತೆ ನೋಡಿಕೊಳ್ಳುತ್ತೇವೆ. ಸದ್ಯ ಡ್ಯಾಮ್ ನೀರು ಕಡಿಮೆ ಆಗಬೇಕು. ಸದ್ಯದ ಮಟ್ಟಿಗೆ ಏನು ಮಾಡಲು ಆಗುವುದಿಲ್ಲ. ಆದಷ್ಟು ಶೀಘ್ರದಲ್ಲಿ ಸರಿಪಡಿಸುತ್ತೇವೆ” ಎಂದು ತಿಪ್ಪ ನಾಯ್ಕ್ ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.
ತುಂಗಾ ಜಲಾಶಯ
ತುಂಗಾ ಜಲಾಶಯದಿಂದ ನದಿಗೆ ನೀರು ಹರಿಸಿದ್ದಲ್ಲದೇ ಅಚ್ಚುಕಟ್ಟು ಪ್ರದೇಶಕ್ಕೆ, ಕೆರೆ ತುಂಬಿಸುವ ಯೋಜನೆಗಳಿಗೂ ನೀರು ಹರಿಯುತ್ತಿದೆ. ತುಂಗಭದ್ರಾ ಜಲಾಶಯ ತುಂಬಲು ಪ್ರಮುಖ ಆಸರೆಯೇ ತುಂಗಾ ಜಲಾಶಯ. 3.5 ಟಿಎಂಸಿ ಸಾಮರ್ಥ್ಯದ ಜಲಾಶಯ ಒಂದು ದೊಡ್ಡ ಮಳೆಗೆ ಭರ್ತಿಯಾಗುತ್ತದೆ. ನಂತರ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿಗೆ, ತುಂಗಭದ್ರಾ ಜಲಾಶಯಕ್ಕೆ, ಶಿವಮೊಗ್ಗ, ನ್ಯಾಮತಿ, ಹೊನ್ನಾಳಿವರೆಗಿನ ಸಾವಿರಾರು ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ, ತುಂಗಾ ಏತ ನೀರಾವರಿ ಮೂಲಕ ಹತ್ತಾರು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಜತೆಗೆ ಅದೇ ಸಮಯದಲ್ಲಿ ಉಳಿದ ಕಡೆಯೂ ನೀರು ಹರಿಸಬೇಕಾದ ಅನಿವಾರ್ಯತೆ ಇರುತ್ತದೆ. ನದಿಗೆ ಒಳಹರಿವು ಇಳಿಮುಖವಾದಾಗ ಕ್ರಸ್ಟ್ ಗೇಟ್ ಮೂಲಕ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ.
ನಕಲಿ ರಾಷ್ಟ್ರವಾದಿಗಳ ಸಂಸದನೊಬ್ಬ ತುಂಗಭದ್ರಾ ಡ್ಯಾಂ ಗೇಟ್ ಮುರಿದ ಬಗ್ಗೆ ಹೇಳಿಕೆ ಕೊಟ್ಟಿದ್ದಾನೆ,, ಗೇಟ್ ಮುರದಿರುವುದು ಸರ್ಕಾರಕ್ಕೆ ಅಪಶಕುನವಂತೆ,,ಅವನಿಗೂ ಈ ವಿಷಯ ತಿಳಿಸಿದರೆ ಇನ್ನೊಂದು ಇಂಥದ್ದೊಂದು ಭಯಂಕರ ಐಡಿಯಾ ಕೊಡಬಹುದು,, ಇಂಥವೆಲ್ಲ ಸಂಸತ್ ಭವನದಲ್ಲಿ ಕುಂತು ರಾಜ್ಯಕ್ಕೆ ಅದೇನು ಒಳ್ಳೆಯದು ಮಾಡುವರೋ,, ಚುನಾಯಿಸಿದ ಮತದಾರರ ಮರ್ಯಾದೆ ಹರಾಜು ಮಾಡುವರು