- ಸಂತೋಷ್ ವಿರುದ್ದ ಮರಳಿ ವಾಗ್ದಾಳಿ ನಡೆಸಿದ ಜಗದೀಶ್ ಶೆಟ್ಟರ್
- ಯಾರು ಬಂದರೂ ನನ್ನ ಗೆಲುವು ತಡೆಯಲು ಸಾಧ್ಯವಿಲ್ಲ ಮಾಜಿ ಸಿಎಂ
ನನ್ನಂತೆಯೇ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರ ಟಿಕೆಟನ್ನೂ ತಪ್ಪಿಸಲಾಗಿದೆ. ಇದು ವಿಘ್ನ ಸಂತೋಷಿಗಳ ಕೃತ್ಯ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂತೋಷ್ ವಿರುದ್ಧ ನೇರ ಆರೋಪ ಮಾಡಿದರು.
ಇಂದು (ಏ.28) ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಬಿಜೆಪಿಯಲ್ಲಿದ್ದರೆ ನಂಬರ್ ಒನ್ ನಾಯಕನಾಗುತ್ತಿದ್ದೆ, ಪ್ರತಿಸ್ಪರ್ಧಿ ಆಗುತ್ತೇನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ಮಾಡಿದರು. ತೇಜಸ್ವಿನಿ ಅನಂತ್ ಕುಮಾರ್ ಅವರಿಗೂ ಟಿಕೆಟ್ ಕೈತಪ್ಪಲು ಬಿ.ಎಲ್ ಸಂತೋಷ್ ಕಾರಣ. ನನಗೆ ಆದ ಅನ್ಯಾಯ ತೇಜಸ್ವಿನಿ ಅನಂತಕುಮಾರ್ ಗೂ ಆಗಿದೆ ಎಂದವರು ಹೇಳಿದರು.
ಕೆಲವರಿಗೆ ಅಡ್ಡಿ ಆಗುತ್ತೇನೆ ಅಂತ ನನ್ನ ವಿರುದ್ಧ ನೆಗೆಟಿವ್ ಪ್ರಚಾರ ನಡೆಸಿದರು. ಕೆಲವರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದೆ. ಅವರೆಲ್ಲ ಸೇರಿಕೊಂಡು ನನ್ನ ಹಾದಿಗೆ ಕಲ್ಲು ಹಾಕಿದರು. ನನಗೆ ಟಿಕೆಟ್ ಸಿಗದಂತೆ ನೋಡಿಕೊಂಡರು ಎಂದು ಶೆಟ್ಟರ್ ಆಕ್ರೋಶ ಹೊರ ಹಾಕಿದರು.
ಬಿ ಎಲ್ ಸಂತೋಷ್ ಗೆ ಲಿಂಗಾಯತರ ಹೊರತಾಗಿ ಸರ್ಕಾರ ರಚನೆ ಮಾಡಬೇಕಿದೆ. ಇದಕ್ಕಾಗಿ ಲಿಂಗಾಯತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾನು ಬಿ.ಎಲ್ ಸಂತೋಷ್ ವಿರುದ್ಧ ಮಾತನಾಡಿದ್ದಕ್ಕೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ.
ಬಿಜೆಪಿ ಹೈಕಮಾಂಡ್ ನಾಯಕರುಗಳೇ ನನ್ನ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಎಲ್ಲರಿಗೂ ನಾನೇ ಟಾರ್ಗೆಟ್. ಅವರೇನೇ ಮಾಡಿದರೂ ನನ್ನ ಗೆಲುವು ತಡೆಯಲಾಗುವುದಿಲ್ಲ. ನನ್ನ ವಿರುದ್ಧ ಇಷ್ಟೆಲ್ಲ ಮಾಡುವ ಸಂತೋಷ್ ಹೀಗೆಲ್ಲ ಮಾಡುವ ಬದಲು ನೇರವಾಗಿ ನಿಂತು ಯುದ್ದ ಮಾಡಲಿ ಎಂದು ಶೆಟ್ಟರ್ ಸವಾಲೆಸೆದರು.
ಈ ಸುದ್ದಿ ಓದಿದ್ದೀರಾ?:ಸಮೀಪದ ಸ್ಪರ್ಧೆ ಕಾಣಲಿರುವ ಕರ್ನಾಟಕದ 70 ಸೀಟುಗಳಲ್ಲಿ ಗೆಲುವಿಗೆ ಕಾಂಗ್ರೆಸ್ ಒತ್ತು
ಏನು ಮಾಡಿದರು ಜಗದೀಶ ಶೆಟ್ಟರ್ ಸ್ವಲ್ಪ ಸಿಟ್ಟಾಗಿ ಸುಮ್ಮನಾಗಿ ಬಿಡುತ್ತಾರೆ ಎಂದು ಅವರು ಅಂದುಕೊಂಡಿದ್ದರು. ನನ್ನನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಹುನ್ನಾರ, ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದರಿಂದ ಬಿಜೆಪಿ ಬಿಟ್ಟು ಹೊರ ಬಂದೆ, ನಾನು ಕಾಂಗ್ರೆಸ್ ಸೇರಿರುವುದು ಬಿಜೆಪಿಯವರಿಗೆ ತಳಮಳ ಶುರುವಾಗಿದೆ ಎಂದರು.
ಒಬ್ಬ ಜಗದೀಶ ಶೆಟ್ಟರನನ್ನು ಸೋಲಿಸಲು ಕೇಂದ್ರ-ರಾಜ್ಯ ಸರಕಾರಗಳು, ಇಡೀ ಬಿಜೆಪಿಯೇ ಟೊಂಕ ಕಟ್ಟಿ ನಿಂತಂತಿದೆ. ಯಾರೇ ಬಂದರೂ ಕ್ಷೇತ್ರದ ಜನ ನನ್ನ ಕೈ ಬಿಡುವುದಿಲ್ಲ ಎಂದರು.
ಇತ್ತ ಸಂತೋಷ್ ವಿರುದ್ದ ಶೆಟ್ಟರ್ ನೀಡಿರುವ ಹೇಳಿಕೆಯೀಗ ಬಿಜೆಪಿ ಮನೆಯೊಳಗೆ ತಲ್ಲಣ ಸೃಷ್ಟಿಸಿದೆ.