ಕೇಂದ್ರ ಬಿಜೆಪಿ ಸರಕಾರ ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ಬೆನ್ನಲ್ಲೇ ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯು ವಕ್ಫ್ ಆಸ್ತಿಗಳ ಪರಿಶೀಲನೆಗೆ ಮುಂದಾಗಿದೆ.
ಬಾಗೇಪಲ್ಲಿ ತಾಲೂಕಿನ ಜೂಳಪಾಳ್ಯ ಸೇರಿದಂತೆ ವಿವಿಧ ಹಳ್ಳಿಗಳಿಗೆ ಬುಧವಾರ ಭೇಟಿ ನೀಡಿದ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಸುಹೇಲ್ ಅಹಮದ್ ನೇತೃತ್ವದ ತಂಡವು, ಮಸೀದಿ ಹಾಗೂ ಉರ್ದು ಶಾಲೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ಆಸ್ತಿ ವಿವರಗಳ ಕುರಿತು ಮಾಹಿತಿ ಕಲೆಹಾಕಿತು.
ಈ ವೇಳೆ ಮಾತನಾಡಿದ ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಸುಹೇಲ್ ಅಹಮದ್, ವಕ್ಫ್ ಆಸ್ತಿಗಳನ್ನು ರಕ್ಷಿಸುವ ಸಲುವಾಗಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ವಕ್ಫ್ ಆಸ್ತಿಗಳ ಪರಿಶೀಲನೆ ನಡೆಸಲಾಗಿದೆ. ವಕ್ಫ್ ಆಸ್ತಿ ದೇವರ ಸ್ವತ್ತು. ಇದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಜಿಲ್ಲೆಯ ವಿವಿಧೆಡೆ ಮುಚ್ಚಿರುವ ಉರ್ದು ಶಾಲೆಗಳನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ‘ನಮ್ಮ ಭೂಮಿ ಕೊಡಲು ನಾವು ಸಿದ್ಧ’ ಎಂದ ಗ್ರಾಮಸ್ಥರು; ಭೂ ಮಾಲೀಕರಿಂದ ಅಡ್ಡಿ?
ಈ ಸಂದರ್ಭದಲ್ಲಿ ವಕ್ಫ್ ಸಲಹಾ ಸಮಿತಿಯ ಸದಸ್ಯರಾದ ವಕೀಲ ಸಿ.ಎಂ.ಇಬ್ರಾಹಿಂ,ಬಾಬಾ ಫಕ್ರುದ್ದಿನ್, ಗೌಸ್, ಅಮಾನುಲ್ಲ, ಫಯಾಜ್ ಪಾಷಾ, ಮೊಹಮ್ಮದ್ ಶರೀಫ್, ನವಾಜ್, ಕೆ.ಆರ್.ಮಹೀರ್ ಪಾಷಾ ಸೇರಿದಂತೆ ಮತ್ತಿತರರು ಹಾಜರಿದ್ದರು.
